7

ಮಕ್ಕಳನ್ನು ಮಾದಕ ವಸ್ತುಗಳಿಂದ ರಕ್ಷಿಸಿ

Published:
Updated:

ಘಟನೆ 1: ಅದು ಬೆಂಗಳೂರು ನಗರದ ಹೊರವಲಯದಲ್ಲಿರುವ ಪ್ರೌಢಶಾಲೆ. ಪೋಷಕರನ್ನು ಕಳೆದುಕೊಂಡು, ಸಂಬಂಧಿಗಳ ಆಶ್ರಯದಲ್ಲಿರುವ ಆ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಭೇಟಿಯಾಗಲು ಅವನ ಸ್ನೇಹಿತರೆಂದು ಹೇಳಿಕೊಂಡ 10 ರಿಂದ 14 ವರ್ಷದ ಮೂವರು ಬಾಲಕರು ಬಂದಿದ್ದರು. ಅವರು ಶಾಲೆಯ ಸುತ್ತ ಅನುಮಾನಾಸ್ಪದವಾಗಿ ತಿರುಗುತ್ತಿರುವುದನ್ನು ಗಮನಿಸಿದ ಶಾಲಾ ಸಿಬ್ಬಂದಿ, ಅವರನ್ನು ಕರೆದು ವಿಚಾರಣೆ ನಡೆಸಿದರು. ಅವರನ್ನು ಶೋಧಿಸಿದಾಗ ವೈಟ್ನರ್ ಹಾಗೂ ದಾರದ ಉಂಡೆಗಳು ದೊರೆತವು. ಆ ವೈಟ್ನರ್ ಮಾಮೂಲಿನಂತಿರದೆ ಯಾವುದೋ ರಾಸಾಯನಿಕ ದ್ರವ ಅದರಲ್ಲಿದ್ದಂತೆ ತೋರುತ್ತಿತ್ತು. ದಾರದ ಉಂಡೆಗೆ ಆ ದ್ರವವನ್ನು ಲೇಪಿಸಿಕೊಂಡು, ವಾಸನೆಯನ್ನು ಸೇವಿಸಿ, ಆ ಬಾಲಕರು ಅಮಲೇರಿಸಿಕೊಂಡಿದ್ದರು. ಈ ಬಾಲಕರು ವಿಘಟಿತ ಕುಟುಂಬಗಳಿಂದ ಬಂದಿದ್ದು, ಕೊಳೆಗೇರಿ ನಿವಾಸಿಗಳು.

ಘಟನೆ 2: ಬೆಂಗಳೂರು ನಗರದ ಪ್ರಮುಖ ಬಡಾವಣೆಯೊಂದಲ್ಲಿರುವ ಖಾಸಗಿ ಶಾಲೆ. ಆ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಯಾವುದೋ ಪುಡಿಯಂಥ ಪದಾರ್ಥವನ್ನು ಕೊಟ್ಟು, ಸೇವಿಸಲು ತಿಳಿಸಿದ್ದನು. ಅದನ್ನು ಸೇವಿಸಿದ ಅವಳು ಅಮಲೇರಿದಂತಾಗಿ ತರಗತಿಯ ಡೆಸ್ಕ್ ಮೇಲೆ ತಲೆಯಿಟ್ಟು ನಿದ್ರೆಗೆ ಜಾರಿದ್ದಾಳೆ. ಇವಳಿಂದ ಪ್ರೇರಿತರಾದ ತರಗತಿಯ ಇತರೆ ವಿದ್ಯಾರ್ಥಿನಿಯರು, ತಮಗೂ ಆ ಪದಾರ್ಥವನ್ನು ಕೊಡುವಂತೆ ಆ ವಿದ್ಯಾರ್ಥಿಗೆ ದುಂಬಾಲು ಬಿದ್ದಿದ್ದಾರೆ. ಹೀಗೆ ಒಟ್ಟು ಏಳೆಂಟು ವಿದ್ಯಾರ್ಥಿನಿಯರು ಪದಾರ್ಥ ತಿಂದು ತರಗತಿಯ ಮೂಲೆಯೊಂದರಲ್ಲಿ ನಿದ್ರೆಗೆ ಜಾರಿದ್ದಾರೆ. ಅವರಲ್ಲಿ ಒಬ್ಬಾಕೆ ವಾಂತಿ ಮಾಡಿಕೊಂಡಾಗ ಶಿಕ್ಷಕರ ಗಮನಕ್ಕೆ ಬಂದು, ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಶಾಲೆಯ ಸಿಬ್ಬಂದಿ ಮಕ್ಕಳಿಗೆ ಆಪ್ತ ಸಲಹೆ ನೀಡಿ, ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಮೇಲಿನ ಎರಡು ನೈಜ ಘಟನೆಗಳು ಉದಾಹರಣೆಗಳಷ್ಟೇ. ಬೆಂಗಳೂರು ನಗರದ ಅನೇಕ ಶಾಲೆ, ಕಾಲೇಜುಗಳ ಕೆಲವು ಮಕ್ಕಳು ಸಿಗರೇಟು, ಮದ್ಯ, ಗುಟ್ಕಾ, ಪಂಕ್ಚರ್ ಹಾಕುವ ಅಂಟಿನ ಪದಾರ್ಥ (ಸಲ್ಯೂಶನ್), ಗಾಂಜಾದಂಥ ಪದಾರ್ಥಗಳ ಸೇವನೆಯ ಚಟಕ್ಕೆ ಬಿದ್ದಿರುವುದು ಸುಳ್ಳಲ್ಲ. ಬೆಂಗಳೂರು ನಗರದಂತೆ ರಾಜ್ಯದ ಇತರ ನಗರ, ಪಟ್ಟಣ ಪ್ರದೇಶ ಹಾಗೂ ಗ್ರಾಮಗಳಲ್ಲಿಯೂ ಇಂತಹ ಚಟ ಅಂಟಿಸಿಕೊಂಡವರು ಇದ್ದಿರಬಹುದು. ಈ ವಿಷಯವು ಸಮಾಜದ ಗಮನಕ್ಕೆ ಬಾರದೆ ಗುಪ್ತವಾಗಿ ನಡೆಯುತ್ತಿರುವ ಸಾಧ್ಯತೆಯಿದೆ. ಇಷ್ಟೇ ಅಲ್ಲದೇ ಕೆಲವು ಪ್ರಸಂಗಗಳಲ್ಲಿ ಮಾದಕ ವಸ್ತುಗಳ ಸಾಗಾಟಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆಯೆಂಬ ಅನುಮಾನಗಳೂ ಇವೆ. ಮಕ್ಕಳನ್ನು ಹಿಡಿದು, ಶಿಕ್ಷಿಸುವುದು ಕಠಿಣವೆಂಬ ಕಾರಣಕ್ಕೆ ಈ ರೀತಿ ಮಕ್ಕಳನ್ನು ಬಳಸಿಕೊಳ್ಳುತ್ತಿರಬಹುದು.

ಬೆಂಗಳೂರು ನಗರದಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ತೀವ್ರವಾಗಿರುವ ಕುರಿತಂತೆ ಇತ್ತೀಚೆಗೆ ಜರುಗಿದ ಮಹಾನಗರಪಾಲಿಕೆಯ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆತಂಕ ವ್ಯಕ್ತಪಡಿಸಿರುವುದು, ವ್ಯಕ್ತಿಯೊಬ್ಬ ಗ್ಯಾಸ್ ಸಿಲಿಂಡರ್ ಮೂಲಕ ಗಾಂಜಾ ಕಳ್ಳಸಾಗಣೆಗೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಮತ್ತು ಮಾದಕ ವಸ್ತುಗಳ ಅಂತರ್‌ರಾಜ್ಯ ಕಳ್ಳಸಾಗಣೆದಾರರನ್ನು ₹ 10 ಕೋಟಿ ಮೌಲ್ಯದ ಮಾದಕ ವಸ್ತುವಿನ ಸಮೇತ ಪೋಲಿಸರು ಸೆರೆ ಹಿಡಿದಿರುವ ವಿಷಯಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿವೆ.

ತಂದೆ-ತಾಯಿಗಳ ಆರೈಕೆ, ಪೋಷಣೆಯಿಲ್ಲದ ಅನಾಥ ಬೀದಿ ಮಕ್ಕಳು ಇಂತಹ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆಂಬ ಅಂಶ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸಂಸ್ಥೆ ಮತ್ತು ಬೆಂಗಳೂರು ಫೋರಂ ಫಾರ್ ಸ್ಟ್ರೀಟ್ ಅಂಡ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಗಳು 1998ರಲ್ಲಿ ಕೈಗೊಂಡ ಅಧ್ಯಯನದಿಂದ ತಿಳಿದುಬಂದಿತ್ತು. ಈ ಸಂಸ್ಥೆಗಳು ನಗರದ 321 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿದ್ದವು. ಈ ಮಕ್ಕಳಲ್ಲಿ ಕೆಲವರು ರಸ್ತೆ ಬದಿಯಲ್ಲೇ ಜನಿಸಿದ್ದರೆ ಇನ್ನೂ ಕೆಲವರು ಹುಟ್ಟಿದ ನಂತರ ಬೀದಿಗೆ ಬಿದ್ದಿದ್ದರು. ಬಡತನದಿಂದಾಗಿ ಕೆಲವರು ಉದ್ಯೋಗ ಅರಸಿ ನಗರಗಳಿಗೆ ಬಂದವರು. ಇನ್ನು ಕೆಲವರು ಪೋಷಕರ ಸಾವಿನಿಂದ ಅನಾಥರಾಗಿ ಬೀದಿಗೆ ಬಿದ್ದವರು. ತಂದೆ ಅಥವಾ ತಾಯಿ ಬೇರೊಂದು ವಿವಾಹವಾದ ಅಥವಾ ಅಕ್ರಮ ಸಂಬಂಧ ಹೊಂದಿದ ಕಾರಣದಿಂದ ಕುಟುಂಬದ ನೆಲೆ ಕಳೆದುಕೊಂಡ ಮಕ್ಕಳೂ ಇದ್ದಾರೆ. ಕೆಲವೊಮ್ಮೆ ಪೋಷಕರೇ ಮಾದಕ ವ್ಯಸನಿಗಳಾದ ಕಾರಣಕ್ಕೆ ಮಕ್ಕಳು ಅದೇ ಚಟಕ್ಕೆ ಬೀಳುತ್ತಾರೆ. ಇಂತಹ ಬೀದಿ ಮಕ್ಕಳು ಸಮಾಜದಿಂದ ಯಾವ ರೀತಿ ನಿರ್ಲಕ್ಷ್ಯಕ್ಕೊಳಗಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆಂಬುದನ್ನು ಅಧ್ಯಯನವು ತರೆದಿಟ್ಟಿದೆ.

ಹದಿಹರೆಯದಲ್ಲಿ ಸಹಜ ಕುತೂಹಲ ಅಥವಾ ಸಾಹಸ ಪ್ರವೃತ್ತಿ ಮೆರೆದು ಗುರುತಿಸಿಕೊಳ್ಳಬೇಕೆಂಬ ಕಾರಣಕ್ಕೂ ಮಾದಕ ವಸ್ತು ಸೇವನೆಯ ಚಟಕ್ಕೆ ಕೆಲವು ಮಕ್ಕಳು ಬೀಳುತ್ತಾರೆ. ಹಲವರು ಓರಗೆಯವರ ಒತ್ತಡದಿಂದ ಅಥವಾ ಕುಟುಂಬದಲ್ಲಿರಬಹುದಾದ ನೋವನ್ನು ಮರೆಯಲು ಈ ವ್ಯಸನಕ್ಕೆ ಬೀಳುತ್ತಾರೆ. ತಂದೆ-ತಾಯಿಯರ ಕಣ್ಗಾವಲು ಇಲ್ಲದಿರುವ ಮಕ್ಕಳು ಇಂತಹ ವ್ಯಸನಗಳಿಗೆ ಬಲಿಯಾಗುವ ಅಪಾಯ ಹೆಚ್ಚು. ಅದರ ಜೊತೆ ಕುಟುಂಬದ ಆಸರೆ ಇದ್ದಾಗಲೂ ಮಕ್ಕಳನ್ನು ಗಮನಿಸಿಕೊಳ್ಳಲು ಮತ್ತು ಅವರಿಗಾಗಿ ಸಮಯ ಮೀಸಲಿಡದ ಪೋಷಕರ ಕಾರಣಗಳಿಂದಲೂ ಮಾದಕ ವಸ್ತು ಸೇವನೆಯ ಚಟಕ್ಕೆ ಮಕ್ಕಳು ಬೀಳುವ ಸಾಧ್ಯತೆ ಇದೆ.

ಶಾಲೆ ಮತ್ತು ಕಾಲೇಜುಗಳಲ್ಲಿ ಮಕ್ಕಳು ಸಿಗರೇಟು, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯ ಚಟಗಳಿಗೆ ಬೀಳದಂತೆ ತಡೆಗಟ್ಟಬೇಕಾದ ಹೊಣೆ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರದ್ದಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಂತೆ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕು.

ಮಕ್ಕಳ ಬಾಯಿಯಿಂದ ವಾಸನೆ ಬರುವುದು, ಯಾವಾಗಲೂ ನಿದ್ರೆಯಲ್ಲಿರುವಂತೆ ತೋರುವುದು, ಹಸಿವಾಗದಿರುವುದು, ದೇಹ ಕೃಷವಾಗುವುದು, ಶಾಲೆಗೆ ಪದೇ ಪದೇ ಗೈರುಹಾಜರಾಗುವುದು, ಅನಪೇಕ್ಷಿತ ಬಾಹ್ಯ ವ್ಯಕ್ತಿಗಳೊಡನೆ ಸಂಪರ್ಕ ಹೊಂದಿರುವುದು, ಅಗತ್ಯಕ್ಕಿಂತ ಹೆಚ್ಚು ಹಣ ಹೊಂದಿರುವುದು... ಇತ್ಯಾದಿ ಲಕ್ಷಣಗಳು ಮಕ್ಕಳಲ್ಲಿವೆಯೇ ಎಂದು ಆಗಾಗ ಪರಿಶೀಲಿಸಬೇಕು. ಅನುಮಾನ ಬಂದಲ್ಲಿ ಮಕ್ಕಳ ಸಹಾಯವಾಣಿ (1098), ಪೊಲೀಸ್ ಠಾಣೆ, ಮಕ್ಕಳ ಹಕ್ಕುಗಳ ಆಯೋಗಗಳಿಗೆ ದೂರು ನೀಡುವ ಮೂಲಕ ನಮ್ಮ ಭವಿಷ್ಯದ ಪ್ರಜೆಗಳನ್ನು ರಕ್ಷಿಸುವ ಹೊಣೆಯನ್ನು ಎಲ್ಲರೂ ಹೊರಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry