7

ಕೊನೆಯ ಭಾಗದ ರೈತರಿಗೆ ತಲುಪುವುದೇ ನೀರು?

Published:
Updated:
ಕೊನೆಯ ಭಾಗದ ರೈತರಿಗೆ ತಲುಪುವುದೇ ನೀರು?

ಆಲಮಟ್ಟಿ/ಮುದ್ದೇಬಿಹಾಳ: ಈ ಭಾಗದ ಬಹುದಿನದ ಬೇಡಿಕೆಯಾಗಿದ್ದ ಆಲಮಟ್ಟಿ ಎಡದಂಡೆ ಕಾಲುವೆಯ ಆಧುನೀಕರಣ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ 14 ಗ್ರಾಮಗಳಿಗೆ ನೀರೊದಗಿಸುವ ‘ನಾಗರಬೆಟ್ಟ ಏತ ನೀರಾವರಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.20 ರಂದು ಮುದ್ದೇಬಿಹಾಳದಲ್ಲಿ ಚಾಲನೆ ನೀಡಲಿದ್ದಾರೆ.

ನಾಗರಬೆಟ್ಟ ಏತ ನೀರಾವರಿ ಯೋಜನೆ: ಆಲಮಟ್ಟಿ ಎಡದಂಡೆ ಕಾಲುವೆ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮಧ್ಯಭಾಗದಲ್ಲಿ ಬರುವ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಹತ್ತಿರ ಎತ್ತರ ಪ್ರದೇಶದಲ್ಲಿ ವಿತರಣಾ ತೊಟ್ಟಿ ನಿರ್ಮಿಸಿ ಆ ಭಾಗದ ಸುಮಾರು 14 ಗ್ರಾಮಗಳ 3200 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವ ನಾಗರಬೆಟ್ಟ ಏತ ನೀರಾವರಿ ಯೋಜನೆ ಇದಾಗಿದೆ.

ನಾರಾಯಣಪುರ ಜಲಾಶಯದ ಹಿನ್ನೀರಿನ ಕಪನೂರ–-ಬಂಗಾರಗುಂಡ ಗ್ರಾಮದ ಹತ್ತಿರ ಜಾಕವೆಲ್ ನಿರ್ಮಿಸಿ 11.5 ಕಿ.ಮೀ ಉದ್ದದ 0.97 ಮೀ ವ್ಯಾಸದ ಪೈಪ್‌ಲೈನ್‌ ಮೂಲಕ ನಾಗರಬೆಟ್ಟ ಗುಡ್ಡದ ಹತ್ತಿರ ಅರಸನಾಳ ಗ್ರಾಮದ ಬಳಿ ವಿತರಣಾ ತೊಟ್ಟಿಗೆ ನೀರನ್ನು ಪಂಪ್ ಮಾಡಿ ಕಾಲುವೆ ಜಾಲಕ್ಕೆ ಪೂರೈಸಲಾಗುತ್ತದೆ.

ಅದಕ್ಕಾಗಿ 880 ಮೀಟರ್ ಇನ್‌ಟೇಕ್ ಕಾಲುವೆ, ಜಾಕವೆಲ್ ಪಂಪ್ ಹೌಸ್ ನಿರ್ಮಾಣ ಮತ್ತು ಪಂಪಿಂಗ್ ಸಾಮಗ್ರಿ ಅಳವಡಿಕೆ, ಪೈಪ್‌ಲೈನ್‌ ನಿರ್ಮಾಣ ಹಾಗೂ ಅರಸನಾಳ ಗ್ರಾಮದ ಹತ್ತಿರ ವಿತರಣಾ ತೊಟ್ಟಿ ನಿರ್ಮಿಸಲು ₹ 60 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ. ಆರು ಕಿ.ಮೀ ಉದ್ದದ ಪೂರ್ವ ಹಾಗೂ 7 ಕಿ.ಮೀ ಉದ್ದದ ಪಶ್ಚಿಮ ಕಾಲುವೆ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಈ ಯೋಜನೆಗೆ ರಾಜ್ಯ ಸರ್ಕಾರ ₹ 170 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೊಡಮನಿ ತಿಳಿಸಿದರು.

ಎಡದಂಡೆ ಕಾಲುವೆಯ ಆಧುನೀಕರಣ: ಜಲಾಶಯದ ಮೊಟ್ಟ ಮೊದಲ ನೀರಾವರಿ ಯೋಜನೆಯಾಗಿರುವ ಎಡದಂಡೆ ಕಾಲುವೆಯ ಜಾಕವೆಲ್ ಹಾಗೂ ಕಾಲುವೆಗಳ ಜಾಲ 1994 ರಲ್ಲಿ ಆರಂಭಗೊಂಡು 2001 ರಲ್ಲಿ ಪೂರ್ಣಗೊಂಡಿದೆ.

ಮುಖ್ಯ ಕಾಲುವೆಗಳ ಜಾಲ 2002 ರಲ್ಲಿ ಪೂರ್ಣಗೊಂಡು 2002–-03ನೇ ಸಾಲಿನಿಂದ ಈ ಕಾಲುವೆಗಳ ಜಾಲಕ್ಕೆ ಆಲಮಟ್ಟಿಯಿಂದ ನೀರನ್ನು ಹರಿಸಲಾಗುತ್ತಿದ್ದು, ಅದರ ಮೂಲಕ 16,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತಿದೆ. ಕಳೆದ 15 ವರ್ಷಗಳಿಂದ ಈ ಕಾಲುವೆಗಳಿಗೆ ನೀರು ಹರಿಬಿಟ್ಟಿದ್ದರಿಂದ ನಾನಾ ಕಡೆ ಕಾಲುವೆಯ ಲೈನಿಂಗ್ ಕಿತ್ತುಹೋಗಿ ಬಹಳಷ್ಟು ಕಡೆ ಬೋಂಗಾ ಬಿದ್ದಿದೆ. ಇದರಿಂದ ಕಾಲುವೆಯ ಎಲ್ಲ ಭಾಗದ ರೈತರಿಗೆ ನಿಗದಿತ ಪ್ರಮಾಣದ ನೀರು ಟೇಲ್ ಎಂಡ್‌ಗೆ ತಲುಪುತ್ತಿಲ್ಲ.

ಕಾಲುವೆಯ ಹೊರಭಾಗದ ಇಳಿಜಾರುವಿನಲ್ಲಿ ಕೊರೆತ ಉಂಟಾಗಿ ಕಾಲುವೆಯಲ್ಲಿ ಲೀಕೇಜ್ ಕಂಡು ಬಂದಿದೆ. ಈ ಬಗ್ಗೆ ಸಾಕಷ್ಟು ಬಾರಿ ಹೋರಾಟ ನಡೆದಿತ್ತು. ಆಲಮಟ್ಟಿ ಎಡದಂಡೆ ಕಾಲುವೆಯ 12 ಕಿ.ಮೀ ಬಳಿ ಸಂಯುಕ್ತ ಕಾಲುವೆಯ ಮೂಲಕ ಚಿಮ್ಮಲಗಿ ಮುಖ್ಯಸ್ಥಾವರಕ್ಕೂ ಇದೇ ಕಾಲುವೆಯಿಂದ ನೀರು ಹರಿದಿದೆ. ಹೀಗಾಗಿ ಕಾಲುವೆಯ ಆಧುನೀಕರಣ ಅಗತ್ಯವಾಗಿತ್ತು.

13 ಕಿ.ಮೀದಿಂದ 68.24 ಕಿ.ಮೀ ವರೆಗಿನ ಮುಖ್ಯ ಕಾಲುವೆಯ ಆಯ್ದ ಭಾಗಗಳಲ್ಲಿ (20 ಕಿ.ಮೀ) ಲೈನಿಂಗ್ ಸಹಿತ, ಏರಿ ನಿರ್ಮಾಣ, ಸೇವಾ ರಸ್ತೆ, ಕಟ್ಟಡಗಳ ದುರಸ್ತಿ, ಅಗತ್ಯ ಇರುವೆಡೆ ಸಿಡಿ ನಿರ್ಮಾಣ, ತೊಟ್ಟಿ ನಿರ್ಮಾಣ ಸೇರಿ ಇನ್ನೀತರ ಕಾಮಗಾರಿ ₹ 69 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಆಲಮಟ್ಟಿ ಎಡದಂಡೆ ಕಾಲುವೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಚ್. ನಾಯ್ಕೋಡಿ ಹೇಳಿದರು.

ಒಟ್ಟಾರೇ ಈ ಯೋಜನೆಗೆ ₹ 112.46 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ರಾಜ್ಯ ಸರ್ಕಾರ ನೀಡಿದೆ. 0 ದಿಂದ 27ನೇ ವಿತರಣಾ ಕಾಲುವೆ, 80 ಕಿ.ಮೀ ಉದ್ದದ ತೂಬು ಕಾಲುವೆಯ ಸಂಪೂರ್ಣ ಆಧು ನೀಕರಣಕ್ಕೆ ₹ 43.46 ಕೋಟಿಗೆ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು. ಒಟ್ಟಾರೇ ಈ ಯೋಜನೆಯಡಿ 200 ಕಿ.ಮೀ ನಷ್ಟು ಕಾಲುವೆಗಳ ಜಾಲ ಆಧುನೀಕರಣಗೊಳ್ಳಲಿದೆ ಬರುವ ಮಾರ್ಚ್‌ 2018 ರೊಳಗೆ ಪೂರ್ಣಗೊಳ್ಳಲಿದೆ ಎಂದರು

ಪ್ರಯೋಜನ ಪಡೆಯುವ ಹಳ್ಳಿಗಳು

ನಾಲತವಾಡ, ಕವಡಿಮಟ್ಟಿ, ಅರೆಮುರಾಳ, ಜಂಗಮುರಾಳ, ಮಲಗಲದಿನ್ನಿ, ಬೂದಿಹಾಳ, ಮಾವಿನಬಾವಿ, ನಾಗರಬೆಟ್ಟ, ಜೈನಾಪುರ, ಅರಸನಾಳ, ನೆರಬೆಂಚಿ, ಸರೂರ, ಹಿರೇಮುರಾಳ, ಕಿಲಾರಹಟ್ಟಿ, ಒಟ್ಟಾರೇ ನೀರಾವರಿ ಪ್ರದೇಶ: 7900 ಎಕರೆ, ವಾರ್ಷಿಕ ಬಳಕೆಯಾಗುವ ನೀರು: 0.597 ಟಿಎಂಸಿ ಅಡಿ.

* * 

ನಾಗರಬೆಟ್ಟ ಏತ ನೀರಾವರಿ ಯೋಜನಗೆ ರಾಜ್ಯ ಸರ್ಕಾರ ₹ 170 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಶೀಘ್ರ ಟೆಂಡರ್‌ ಕರೆಯಲಾಗುವುದು

ದೊಡಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

ಮಹಾಬಳೇಶ ಗಡೇದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry