ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ತೆರಿಗೆ ಸೋರಿಕೆ ತಡೆಗೆ ಕ್ರಮ

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಸಂಗ್ರಹವು ಕಡಿಮೆಯಾಗಿರುವುದು ಕೇಂದ್ರ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಮೊದಲ ಮೂರು ತಿಂಗಳುಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ₹ 12 ಸಾವಿರ ಕೋಟಿಗಳಷ್ಟು ಕುಸಿತ ಕಂಡು ಬಂದಿದೆ. ಮೊದಲ ನಾಲ್ಕು ತಿಂಗಳಲ್ಲಿ ಸಂಗ್ರಹವಾಗಲಿದೆ ಎಂದು ಅಂದಾಜಿಸಿದ್ದ ಒಟ್ಟು ತೆರಿಗೆ ಸಂಗ್ರಹದಲ್ಲಿ ₹ 36 ಸಾವಿರ ಕೋಟಿ ಕೊರತೆಯಾಗಿದೆ.

ಇದಕ್ಕೆ ಹಲವಾರು ಕಾರಣಗಳಿವೆ. ರಿಟರ್ನ್ಸ್‌ಗಳ ಹೋಲಿಕೆ, ಇ–ವೇ ಬಿಲ್‌ (electronic way bill), ರಿವರ್ಸ್‌ ಚಾರ್ಜ್‌ ವ್ಯವಸ್ಥೆ ಜಾರಿ ಮುಂದೂಡಿರುವುದರಿಂದ ವಹಿವಾಟುದಾರರು ತೆರಿಗೆ ಪಾವತಿ ತಪ್ಪಿಸಿಕೊಳ್ಳಲು ಹೊಸ ಹೊಸ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ. ಬಹುಸಂಖ್ಯಾತ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಇ), ಜಿಎಸ್‌ಟಿಎನ್‌ ತಾಣದಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಇದನ್ನೆಲ್ಲ ನೋಡಿಕೊಂಡು ಕೇಂದ್ರ ಸರ್ಕಾರ ಸುಮ್ಮನೆ ಕುಳಿತುಕೊಂಡಿಲ್ಲ. ತೆರಿಗೆ ಸೋರಿಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ತೆರಿಗೆ ಪಾವತಿಸದವರಿಗೆ ನೋಟಿಸ್‌ ಜಾರಿ ಮಾಡುತ್ತಿದೆ. ಮುಂದೂಡಲಾಗಿದ್ದ ಇ–ವೇ ಬಿಲ್‌ ವ್ಯವಸ್ಥೆಯನ್ನು 2018ರ ಜೂನ್‌ನಿಂದ ದೇಶದಾದ್ಯಂತ ಏಕರೂಪದಲ್ಲಿ ಜಾರಿಗೆ ತರುವ ನಿರ್ಧಾರಕ್ಕೆ ಬಂದಿದೆ. ಇದರ ವೇಳಾಪಟ್ಟಿ ನಿಗದಿಪಡಿಸಲಾಗಿದೆ.  ಇದು ತೆರಿಗೆ ಸಂಗ್ರಹ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯವೊಂದರ ಗಡಿ ಒಳಗಿನ ಸರಕುಗಳ ಚಲನವಲನ ಮತ್ತು ಬೇರೆ, ಬೇರೆ ರಾಜ್ಯಗಳ ಮಧ್ಯೆ ನಡೆಯುವ ಸರಕುಗಳ ಸಾಗಾಣಿಕೆಯನ್ನು ತೆರಿಗೆ ಉದ್ದೇಶಕ್ಕೆ  ಸಮರ್ಪಕಗೊಳಿಸಿ ಅವುಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಇದಾಗಿದೆ.

ಸರಕು / ಬೆಲೆ ಪಟ್ಟಿ ಹೋಲಿಕೆಯಾಗುವುದೂ ತೆರಿಗೆ ಸಂಗ್ರಹಕ್ಕೆ ಇನ್ನೊಂದು ಅಡಚಣೆಯಾಗಿದೆ. ತೆರಿಗೆಗೆ ಒಳಪಡುವ ಪುರೈಕೆಯಾದ ಪ್ರತಿಯೊಂದು ಸರಕು ಮತ್ತು ಪೂರೈಕೆಯಾದ ಸರಕು ಸ್ವೀಕರಿಸಿದ  ಬೆಲೆ ಪಟ್ಟಿ ಹೋಲಿಕೆ ಆಗುವುದನ್ನು ಸ್ಥಗಿತಗೊಳಿಸಲಾಗಿತ್ತು. ಆರಂಭಿಕ ದಿನಗಳಲ್ಲಿ ತೆರಿಗೆ ಪಾವತಿ ಸುಗಮವಾಗಲಿ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು.

‘ರಾಜಕೀಯ ಪ್ರೇರಿತ ನಿರ್ಧಾರವನ್ನು ಜಿದ್ದಾಜಿದ್ದಿಗೆ ಬಿದ್ದು ಆತುರದಿಂದ ಜಾರಿಗೆ ತರಲಾಗಿತ್ತು.  ತೆರಿಗೆ ದರ ನಿಗದಿಪಡಿಸುವಲ್ಲಿ ಬರೀ ಗಣಿತದ ಸೂತ್ರಗಳನ್ನು ಅನುಸರಿಸಲಾಯಿತೇ ಹೊರತು, ಬಳಕೆದಾರರ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಅಪಾರವಾದ ಮಾಹಿತಿ ಪರಿಷ್ಕರಿಸಿ ಸಮರ್ಪಕ ನಿರ್ಣಯಕ್ಕೆ ಬರಲಿಲ್ಲ.  ಕೆಲ ಉತ್ಪನ್ನಗಳನ್ನು ಬ್ರ್ಯಾಂಡೆಡ್‌ ಮತ್ತು ಅನ್‌ಬ್ರ್ಯಾಂಡೆಡ್‌ ಎಂದು ವರ್ಗೀಕರಿಸಲಾಯಿತು. ಇದರಿಂದ ವ್ಯವಸ್ಥೆಯಲ್ಲಿ ಹೊಸ ಬಗೆಯ ಉತ್ಪನ್ನಕ್ಕೆ (ಬ್ರ್ಯಾಂಡ್‌ರಹಿತ) ಅವಕಾಶ ಮಾಡಿಕೊಡಲಾಯಿತು. ತಯಾರಕರು ಶುದ್ಧ, ಸಮರ್ಪಕ ಅಳತೆಯ ಸರಕನ್ನು ಕೂಡ ಬ್ರ್ಯಾಂಡ್‌ರಹಿತ ಎನ್ನುವ ಹೆಸರಿನಲ್ಲಿ ಮಾರಾಟ ಮಾಡಿ ತೆರಿಗೆ ಉಳಿಸಲು ಮುಂದಾಗಿದ್ದಾರೆ’ ಎಂದು ತೆರಿಗೆ ಸಲಹೆಗಾರ ಆರ್‌. ಜಿ. ಮುರಳೀಧರ ಅವರು ವಿಶ್ಲೇಷಿಸುತ್ತಾರೆ.

‘ಹೋಟೆಲ್‌ಗಳ ತೆರಿಗೆ ವಿಧಿಸುವುದರಲ್ಲಿಯೂ ಜಿಎಸ್‌ಟಿ ಮಂಡಳಿಯು ತಪ್ಪು ಮಾಡಿತು. ಒಟ್ಟಾರೆ ತೆರಿಗೆ ಹೊರೆ ಆಗಿರುವುದು ಗ್ರಾಹಕರಿಗೆ ಮಾತ್ರ. ನಾನು ಹೇಳಿದಂತೆ ಮಾಡಬೇಕು ಎನ್ನುವ ಧೋರಣೆಯನ್ನೇ ಸರ್ಕಾರ ಅನುಸರಿಸಿಕೊಂಡು ಬಂದಿದೆ. ತೆರಿಗೆ ಮಾಪನ, ಲೆಕ್ಕಪತ್ರ ಸರಳಗೊಂಡಿರಬೇಕು. ಅದರ ಬದಲಿಗೆ ಸಂಕೀರ್ಣಗೊಳಿಸಲಾಗಿತ್ತು. ಆರಂಭಿಕ ದಿನಗಳಲ್ಲಿಯೇ ಅದು ಗೊಂದಲಗಳನ್ನು ಮೂಡಿಸಿತು. ಮೇಲಿಂದ ಮೇಲೆ ಬದಲಿಸಿದ ನಿರ್ಧಾರಗಳು ಇನ್ನಷ್ಟು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿತು. ತಪ್ಪುಗಳನ್ನು ಸರಿಪಡಿಸಲು, ತೆರಿಗೆ ದರ ಪರಿಷ್ಕರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿರುವುದರಿಂದ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಹೋಟೆಲ್‌, ರೆಸ್ಟೊರೆಂಟ್ಸ್‌ಗಳನ್ನು ವರ್ಗೀಕರಿಸಿ ವಿಭಿನ್ನ ತೆರಿಗೆ ದರ ವಿಧಿಸಿದ್ದೂ ತಪ್ಪಾಗಿತ್ತು. ತೆರಿಗೆ ದರ ನಿಗದಿಯಲ್ಲಿ ಸರ್ಕಾರ  ದೊಡ್ಡಸ್ಥಿಕೆ ಮತ್ತು ಒತ್ತಾಯದ ಧೋರಣೆಯಿಂದಲೇ ವರ್ತಿಸುತ್ತಿದೆ.

‘ವ್ಯಾಪಾರಸ್ಥರು ತೆರಿಗೆ ವಾಹಕರಷ್ಟೆ. ಅವರು ತೆರಿಗೆ ಉತ್ಪಾದಕರಲ್ಲ ಎನ್ನುವ ಮೂಲ ತತ್ವವನ್ನೇ ಜಿಎಸ್‌ಟಿ ಮಂಡಳಿಯು ಮರೆತಿತ್ತು. ವರ್ತಕ ಸಮುದಾಯಕ್ಕೆ ನಿಯಮಗಳ ನೆಪದಲ್ಲಿ ಕಿರುಕುಳ ಕೊಟ್ಟರೆ ನಿರೀಕ್ಷಿಸಿದ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುವುದಿಲ್ಲ ಎನ್ನುವ ಕಟು ವಾಸ್ತವವನ್ನೂ ನಿರ್ಲಕ್ಷಿಸಿತ್ತು. ನಂತರದ ದಿನಗಳಲ್ಲಿ ಹೋಟೆಲ್‌ಗಳ ಮೇಲಿನ ದರ ಕಡಿತ ಮಾಡಿದ್ದನ್ನು ಮಾಲೀಕರು ವಿರೋಧಿಸಿಲ್ಲ ಮತ್ತು ಪೂರ್ತಿಯಾಗಿ ಸಮರ್ಪಕವಾಗಿ ಜಾರಿಗೂ ತಂದಿಲ್ಲ. ಅವರೆಲ್ಲ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿ ತೆರಿಗೆಯನ್ನು ಗ್ರಾಹಕರಿಗೇ ವರ್ಗಾಯಿಸುತ್ತಿದ್ದಾರೆ. ಸರ್ಕಾರ ವರ್ತಕರ ತಲೆ ಸವರಿದೆಯಷ್ಟೆ. ಬಟ್ಟೆ, ಸಿದ್ಧಉಡುಪು ಮೇಲಿನ ತೆರಿಗೆಯೂ ವಸ್ತ್ರೋದ್ಯಮಕ್ಕೆ ಹೊರೆಯಾಗಿ ಪರಿಣಮಿಸಿದೆ. ಕಡಿಮೆ ತೆರಿಗೆ ದರ ವಿಧಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ತೆರಿಗೆ ಸಂಗ್ರಹ ಹೆಚ್ಚುತ್ತದೆ.

‘ಜಿಎಸ್‌ಟಿಎನ್‌ ತಂತ್ರಜ್ಞಾನವು ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವುದರ ಬದಲಿಗೆ ತಲೆನೋವು ಹೆಚ್ಚಿಸಿದೆ. ನೋಂದಾಯಿತ ತೆರಿಗೆದಾರರ ಪೈಕಿ ಶೇ 32 ರಷ್ಟು ಜನ ಇನ್ನೂ ರಿಟರ್ನ್ಸ್‌ಗಳನ್ನೇ ಫೈಲ್‌ ಮಾಡಿಲ್ಲ.  ಸರಕು ಮಾರಾಟದ ಒಂದೇ ಅಂಗಡಿಯಲ್ಲಿ ಎರಡು ಬಗೆಯ (ಅಧಿಕೃತ ಮತ್ತು ಅನಧಿಕೃತ) ವ್ಯಾಪಾರ ನಡೆಯಲೂ ಜಿಎಸ್‌ಟಿ ಅವಕಾಶ ಮಾಡಿಕೊಟ್ಟಿದೆ. ಹೊಸ ತೆರಿಗೆ ವ್ಯವಸ್ಥೆಯ  ಕುರೂಪ ಮುಖವೂ ಇದೇ ಆಗಿದೆ. ಗ್ರಾಹಕರ ಸರಕು ಮತ್ತು ಸೇವೆಗಳ ಕೊಳ್ಳುವ ಸಾಮರ್ಥ್ಯ ಜಾಸ್ತಿ ಆದಾಗ ತೆರಿಗೆ ಪಾವತಿಸಲು ಅವರು ಹಿಂದೇಟು ಹಾಕುವುದಿಲ್ಲ.

‘ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ಜನಪ್ರಿಯಗೊಳಿಸಲು ವಾರ್ಷಿಕ ವಹಿವಾಟಿನ ಮಿತಿಯನ್ನು ₹ 1.50 ಕೋಟಿಗೆ ಹೆಚ್ಚಿಸಲಾಗಿದೆ. ಈ ಘೋಷಣೆ ಹೊರ ಬಿದ್ದು, ಎರಡು ತಿಂಗಳಾದರೂ ಅದಿನ್ನೂ ಜಾರಿಗೆ ಬಂದಿಲ್ಲ’ ಎನ್ನುವುದರತ್ತ ಅವರು ಗಮನ ಸೆಳೆಯುತ್ತಾರೆ.

‘ಪರೋಕ್ಷ ತೆರಿಗೆಯು ನಿಜಕ್ಕೂ ಅದ್ಭುತ ವ್ಯವಸ್ಥೆ. ತೆರಿಗೆ ಸಂಗ್ರಹ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲು ಇದರಿಂದ ನೆರವಾಗಲಿದೆ. ಒಂದು ನೂರು ಜನರು ಇರುವ ಸಮಾಜದಲ್ಲಿ 100 ಜನರೂ ಸರಿಯಾಗಿ ತೆರಿಗೆ ಕಟ್ಟಿದರೆ ಎಲ್ಲವೂ ಸರಿಯಾಗಿರುತ್ತದೆ.
ಅದು ಆಗ್ತಾ ಇಲ್ಲ. 100 ಜನರ ಬದಲಿಗೆ 20 ಜನರಿಂದ ಮಾತ್ರ ತೆರಿಗೆ ವಸೂಲಿ ಆಗ್ತಾ ಇದೆ. ಜತೆಗೆ ಅಸಮರ್ಪಕ ತೆರಿಗೆ ವ್ಯವಸ್ಥೆಯೂ ತೆರಿಗೆ ಸಂಗ್ರಹಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ತೆರಿಗೆ ತಪ್ಪಿಸಲು ವಹಿವಾಟುದಾರರು ಇ–ವೇ ಬಿಲ್‌ ಮುಚ್ಚಿಡುತ್ತಿದ್ದಾರೆ. ಇದರಿಂದ ತೆರಿಗೆ ಒಳಹರಿವು ಕಡಿಮೆ ಆಗುತ್ತಿದೆ.

‘ತೆರಿಗೆ ಶಿಸ್ತು ಎನ್ನುವುದು ಸ್ವಇಚ್ಛೆಯಿಂದ ಜಾರಿಗೆ ಇರಬೇಕು. ಜಿಎಸ್‌ಟಿ ಮುಂಚೆ ತೆರಿಗೆ ಪಾವತಿ ಶಿಸ್ತು ಇದ್ದರೂ, ಬೇಜವಾಬ್ದಾರಿ ಇತ್ತು. ಈಗ  ಜಿಎಸ್‌ಟಿ ಪಾವತಿಸುವ ಪ್ರತಿಯೊಬ್ಬರೂ ಸ್ವತಃ ತಾವೇ ಲೆಕ್ಕಪತ್ರ ಸಲ್ಲಿಸಬಹುದು. ತಾಂತ್ರಿಕ ಲೋಪದಿಂದಾಗಿ ಕೆಲವರಿಂದ ಎರಡೆರಡು ಬಾರಿ ತೆರಿಗೆ ವಸೂಲಿ ಮಾಡಿದ ನಿದರ್ಶನಗಳಿವೆ. ಹೆಚ್ಚುವರಿಯಾಗಿ ಕಟ್ಟಿಸಿಕೊಂಡ ಹಣ ಇಂದಲ್ಲ ನಾಳೆ ವಾಪಸ್‌ ಬರುತ್ತದೆ. ಆದರೆ, ಬ್ಯಾಂಕ್‌ನಲ್ಲಿ ಪಾವತಿಯ ಕೊನೆಯ ದಿನ ಹಣ ಕಟ್ಟಿದರೆ ಅದು ಮರುದಿನ ಜಮೆಯಾಗುವುದರಿಂದ ದಂಡ ವಿಧಿಸಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.

‘ಇ–ವೇ ಬಿಲ್‌ ವ್ಯವಸ್ಥೆ ಜಾರಿಯಿಂದ ಯಾವ ಸರಕು ಎಲ್ಲಿಂದ ಯಾವ ಪ್ರಮಾಣದಲ್ಲಿ ಬಂದಿತು. ಯಾರು ಬಳಸಿದರು.ಎಲ್ಲಿ ಬೇಡಿಕೆ ಹೆಚ್ಚಿಗೆ ಇದೆ ಎನ್ನುವ ಖಚಿತ ಮಾಹಿತಿ ದೊರೆಯಲಿದೆ. ಇಂತಹ ಮಾಹಿತಿಯನ್ನು ಕರಾರುವಾಕ್ಕಾಗಿ ಪರಿಷ್ಕರಿಸಿ ಅದನ್ನು ತೆರಿಗೆ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ಮುಂಬರುವ ವರ್ಷಗಳಲ್ಲಿ ಆದಾಯ ತೆರಿಗೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ತೆರಿಗೆ ಹರವು ಜಾಸ್ತಿಯಾದಷ್ಟೂ ಹೊರೆ ಕಡಿಮೆಯಾಗಲಿದೆ. ಇ–ವೇ ಬಿಲ್‌ ಇದೊಂದು ಗಮ್ಯ ಆಧರಿಸಿದ ತೆರಿಗೆ ವ್ಯವಸ್ಥೆ. ಪೂರೈಕೆಯಾದ ಸರಕು ಸ್ವೀಕರಿಸಿದ ರಾಜ್ಯಕ್ಕೆ ತೆರಿಗೆ ಪಾವತಿಯಾಗುತ್ತದೆ. ಅಂದರೆ ಸರಕು ಮಾರಾಟ ಮಾಡಿದ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಸೇರ್ಪಡೆಯಾಗುತ್ತದೆ’ ಎಂದು ಮುರಳೀಧರ ಅವರು ಹೇಳುತ್ತಾರೆ.
***

ಏನಿದು ಇ–ವೇ ಬಿಲ್‌?

ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. ಪೂರೈಕೆದಾರ ಮತ್ತು ಸರಕು ಸಾಗಣೆದಾರರು ಸರಕಿನ ವಿವರಗಳನ್ನು ಜಿಎಸ್‌ಟಿಎನ್‌ ತಾಣದಲ್ಲಿ ಭರ್ತಿ ಮಾಡಬೇಕು. ಇ–ವೇ ಬಿಲ್‌ ಸಂಖ್ಯೆಯನ್ನು ಪೂರೈಕೆದಾರ, ಸಾಗಾಣಿಕೆದಾರ ಮತ್ತು ಸರಕು ಸ್ವೀಕರಿಸುವವರಿಗೆ ರವಾನೆಯಾಗುತ್ತದೆ. ಇಂತಹ ಬಿಲ್‌ಗಳಿಗೆ ಸರಕು ಸಾಗುವ ದೂರ ಆಧರಿಸಿ ನಿರ್ದಿಷ್ಟ ದಿನಗಳವರೆಗೆ ಮಾತ್ರ ಅದು ಚಾಲ್ತಿಯಲ್ಲಿ ಇರಲಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಬಿಲ್‌ ಸಿಂಧುತ್ವ ಅವಧಿ

ಅಂತರ – ದಿನಗಳು

100 ಕಿ.ಮೀ  ಒಂದು ದಿನ

100 ರಿಂದ 300 ಕಿ.ಮೀ  3 ದಿನ

500 ರಿಂದ 1,000 ಕಿ.ಮೀ  10 ದಿನ

1,000 ಕ್ಕಿಂತ ಹೆಚ್ಚು ಕಿ.ಮೀ 20 ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT