7

ಮುಸುಕು ಹೊದ್ದು ಮಲಗಿದ ರಾಗಿಮಾಕಲಹಳ್ಳಿ

Published:
Updated:
ಮುಸುಕು ಹೊದ್ದು ಮಲಗಿದ ರಾಗಿಮಾಕಲಹಳ್ಳಿ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೋಶೆಟ್ಟ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗಿಮಾಕಲಹಳ್ಳಿಯಲ್ಲಿ ಸುಮಾರು 20 ದಿನಗಳಿಂದ ಸಾಂಕ್ರಾಮಿಕ ಕಾಯಿಲೆ ಉಲ್ಭಣಗೊಂಡಿದೆ. ಹಾಸಿಗೆ ಹಿಡಿದಿರುವ ಬಹುಪಾಲು ಜನರಿಗೆ ಆಸ್ಪತ್ರೆಗೆ ಅಲೆದಾಡುವುದೇ ನಿತ್ಯಕರ್ಮವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೇ ಹೆಚ್ಚಾಗಿ ವಾಸಿಸುವ ಈ ಊರಿನಲ್ಲಿ ಬಹುತೇಕರು ಕೂಲಿ ನಾಲಿ ಮಾಡಿಯೇ ಹೊಟ್ಟೆ ಹೊರೆಯುತ್ತಾರೆ. ಬೆಳಿಗ್ಗೆ ಎದ್ದು ಬುತ್ತಿ ಕಟ್ಟಿಕೊಂಡು ಕೂಲಿ ಕೆಲಸಕ್ಕೆ ಓಡುತ್ತಿದ್ದವರೆಲ್ಲ ತಿಂಗಳಿಂದ ಈಚೆಗೆ ಮೈಕೈ ನೋವು, ಜ್ವರ, ಭೇದಿಯ ಬಾಧೆಯಿಂದ ಹಾಸಿಗೆ ಹಿಡಿದು ನೋವಿನಿಂದ ನರಳಾಡುತ್ತಿದ್ದಾರೆ.

ಸುಮಾರು 75 ಮನೆಗಳು, 400 ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ ಶೇ 75 ರಷ್ಟು ಜನರು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿದ್ದಾರೆ. ಸದ್ಯ ಈ ಹಳ್ಳಿಯವರಿಗೆ ನಿತ್ಯ ಬೆಳಿಗ್ಗೆ ಎದ್ದರೆ ಮಂಚೇನಹಳ್ಳಿ, ಚಿಕ್ಕಬಳ್ಳಾಪುರ ಆಸ್ಪತ್ರೆಗಳಿಗೆ ಎಡತಾಕುತ್ತ ಯಾವಾಗ ಗುಣವಾಗುತ್ತೋ ಎಂದು ಔಷಧಿ, ಮಾತ್ರೆ ನುಂಗುವುದೇ ಕೆಲಸವಾಗಿದೆ.

ಊರಿನಲ್ಲಿ ಕಾಯಿಲೆ ಉಲ್ಭಣಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿಯವರು ಗುರುವಾರ ಗ್ರಾಮದಲ್ಲಿ ಮಡುಗಟ್ಟಿ ನಿಂತಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್‌ ಪೌಡರ್‌ ಸಿಂಪಡಿಸುವ ಕೆಲಸ ಮಾಡಿಸಿದ್ದಾರೆ.

ಊರ ತುಂಬಾ ಕಾಯಿಲೆ ಹರಡಲು ಏನು ಕಾರಣ ಇರಬಹುದು ಎಂದು ಗ್ರಾಮಸ್ಥರನ್ನು ವಿಚಾರಿಸಿದರೆ, ಕುಡಿಯುವ ನೀರು, ಮಡುಗಟ್ಟಿ ನಿಂತ ಚರಂಡಿ, ಊರು ಸಮೀಪದಲ್ಲಿಯೇ ಇರುವ ಕೋಳಿ ಫಾರಂ ಸೃಷ್ಟಿಸುವ ನೋಣಗಳ ಸಮೂಹ.. ಈ ಮೂರರ ಪೈಕಿ ಯಾವುದರಿಂದ ಕಾಯಿಲೆ ಕಾಣಿಸಿಕೊಂಡಿದೆ ಎನ್ನುವುದು ನಮಗೆ ನಿಖರವಾಗಿ ತಿಳಿಯುತ್ತಿಲ್ಲ. ವೈದ್ಯರೇ ಬಂದು ಪತ್ತೆ ಹಚ್ಚಬೇಕು ಎನ್ನುತ್ತಾರೆ.

‘ನಾವು ಕೂಲಿ ಕೆಲಸ ಮಾಡಿ ಬದುಕೋರು. ಕಾಲು–ಕೀಲು ನೋವು, ಜ್ವರದಿಂದ 15 ದಿನಗಳಿಂದ ಕೆಲಸಕ್ಕೆ ಹೋಗಿಲ್ಲ. ಊಟ ಮಾಡಲು ಸಹ ಆಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಂಡು ಬಂದರೂ ಏನೂ ಸುಧಾರಿಸಿಲ್ಲ. ನಮ್ಮ ಮನೆಯಲ್ಲಿ 7 ಜನರಿದ್ದೇವೆ. ಎಲ್ಲರೂ ಹಾಸಿಗೆ ಹಿಡಿದ್ದಿದ್ದೇವೆ’ ಎಂದು ಗ್ರಾಮದ ನಿವಾಸಿ ಕಮಲಮ್ಮ ತಿಳಿಸಿದರು.

‘ಕಾಲುನೋವು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಕಾಲುಗಳಲ್ಲಿ ಬಾವು ಕಾಣಿಸಿಕೊಂಡು ನಡೆದಾಡಲು ಆಗುವುದಿಲ್ಲ. ನಾಲ್ಕೈದು ದಿನಗಳ ಕಾಲವಂತೂ ವಿಪರೀತ ನೋವು ಬಾಧಿಸುತ್ತದೆ. ಇತ್ತೀಚೆಗೆ ಈ ಕಾಯಿಲೆ ಅಕ್ಕ ಪಕ್ಕದ ಊರುಗಳಿಗೂ ಹರಡುತ್ತಿದೆ. ಪೋಶೆಟ್ಟಹಳ್ಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತಂದು ಕುಡಿದವರಿಗೂ ಸಹ ಕಾಯಿಲೆ ಕಾಣಿಸಿಕೊಳ್ಳುತ್ತಿದೆ’ ಎಂದು ನಾಗೇಂದ್ರ ಬಾಬು ಹೇಳಿದರು.

ಗ್ರಾಮದ ನಿವಾಸಿ ಮುರುಳಿ, ‘ನಮ್ಮ ಮನೆ ಊರಿನಿಂದ ಆಚೆ ಇದೆ. ಆದರೂ ಕಾಯಿಲೆ ಬಂದಿದೆ. ಮನೆಯಲ್ಲಿ 14 ಜನರಿದ್ದೇವೆ. ಆ ಪೈಕಿ 13 ಜನರು ಹಾಸಿಗೆ ಹಿಡಿದಿದ್ದಾರೆ. ಕೂಲಿ ಮಾಡುವವರೆಲ್ಲ ಮಲಗಿಕೊಂಡಿದ್ದೇವೆ. ನನಗೆ ಒಂದು ತಿಂಗಳಿಂದ ಕಾಯಿಲೆ ಬಿಟ್ಟಿಲ್ಲ. ಆಸ್ಪತ್ರೆಗೆ ಹೋಗಿ ಬಂದಾಗ ಸ್ವಲ್ಪ ನಿಲ್ಲುತ್ತದೆ. ಮತ್ತೇ ನೋವು ಹೆಚ್ಚಾಗುತ್ತದೆ’ ಎಂದರು.

‘ಊರಿನಲ್ಲಿ ತುಂಬಾ ಜನರಿಗೆ ಸಮಸ್ಯೆಯಾಗಿದೆ. ಕಾಲು ಬಾವು, ಕತ್ತು ನೋವಿನಿಂದ ನಡೆದಾಡಲು ಆಗುತ್ತಿಲ್ಲ. ಜತೆಗೆ ಭೇದಿ ಬೇರೆ ಕಾಣಿಸಿಕೊಂಡು ವಿಪರೀತ ಹೈರಾಣಾಗಿದ್ದೇವೆ. ಮನೆಯಲ್ಲಿರುವ ಮೂರು ಜನರಿಗೂ ಕಾಯಿಲೆಯಾಗಿದೆ. ಎಂಟು ದಿನಗಳಿಂದ ಆಸ್ಪತ್ರೆಗೆ ತಿರುಗಾಡುತ್ತಿದ್ದೇವೆ. ಈವರೆಗೆ ಗುಣವಾಗಿಲ್ಲ’ ಎಂದು ಲಕ್ಷ್ಮಯ್ಯ ಅಳಲು ತೋಡಿಕೊಂಡರು.

ಈ ಕುರಿತು ಪೋಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ರಾಗಿಮಾಕಲಹಳ್ಳಿ ನಿವಾಸಿ ಅಶ್ವತ್ಥಪ್ಪ ಅವರನ್ನು ಪ್ರಶ್ನಿಸಿದರೆ, ‘ಯಾವ ಕಾರಣಕ್ಕೆ ಊರಿನಲ್ಲಿ ಕಾಯಿಲೆ ಉಲ್ಭಣಗೊಂಡಿದೆಯೋ ಗೊತ್ತಾಗುತ್ತಿಲ್ಲ. ಅದಕ್ಕಾಗಿ ಚರಂಡಿ ಸ್ವಚ್ಛಗೊಳಿಸಿದ್ದೇವೆ. ಜಿಲ್ಲಾ ಆರೋಗ್ಯಾಧಿಕಾರಿ ಅವರ ಜತೆ ಕೂಡ ಮಾತನಾಡುತ್ತಿರುವೆ. ನಾಳೆ ವೈದ್ಯರನ್ನು ಕಳುಹಿಸುತ್ತೇನೆ ಎಂದಿದ್ದಾರೆ’ ಎಂದು ಹೇಳಿದರು.

* * 

ಗ್ರಾಮದ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಂದ ಕೂಡಲೇ ತನಿಖೆ ಮಾಡಿಸಿ ವರದಿ ಪಡೆಯುತ್ತೇನೆ. ಶಿಬಿರ ನಡೆಸುತ್ತೇವೆ.

ಡಾ.ರಮೇಶ್‌ ಬಾಬು,

ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry