7

ಜನವರಿ 1ಕ್ಕೆ ‘ಇಂದಿರಾ ಕ್ಯಾಂಟಿನ್‌’ ಅನಿಶ್ಚಿತ

Published:
Updated:
ಜನವರಿ 1ಕ್ಕೆ ‘ಇಂದಿರಾ ಕ್ಯಾಂಟಿನ್‌’ ಅನಿಶ್ಚಿತ

ಕಲಬುರ್ಗಿ: ನಗರದಲ್ಲಿ ‘ಇಂದಿರಾ ಕ್ಯಾಂಟಿನ್‌’ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಆದರೆ ಪೂರ್ವ ನಿಗದಿಯಂತೆ ಜನವರಿ 1ರಂದು ಕ್ಯಾಂಟಿನ್‌ ಆರಂಭವಾಗುವ ನಿರೀಕ್ಷೆ ಇಲ್ಲ. ನಗರದ ಜನತೆ ಕನಿಷ್ಠ ತಿಂಗಳಾದರೂ ಕಾಯಬೇಕಾಗಿದೆ.

ನಗರದ ಏಳು ಕಡೆ ಇಂದಿರಾ ಕ್ಯಾಂಟಿನ್‌ ಆರಂಭಿಸಲಾಗುತ್ತಿದೆ. ಇದರಲ್ಲಿ ಈಗಾಗಲೇ 6 ಸ್ಥಳಗಳನ್ನು ಗುರುತಿಸಲಾಗಿದೆ. ನಗರದ ಕೇಂದ್ರ ಬಸ್‌ ನಿಲ್ದಾಣ, ಸೂಪರ್‌ ಮಾರ್ಕೆಟ್‌ ಸಮೀಪದ ನಗರ ಬಸ್‌ ನಿಲ್ದಾಣ, ಮಹಾ ನಗರಪಾಲಿಕೆ ಆವರಣ, ರೈಲ್ವೆ ನಿಲ್ದಾಣ ಸಮೀಪದ ಲೋಕೋಪಯೋಗಿ ಇಲಾಖೆ ಅತಿಥಿಗೃಹದ ಆವರಣ, ಎಪಿಎಂಸಿ ಆವರಣ ಮತ್ತು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಮತ್ತೊಂದು ಸ್ಥಳವನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಗ್ರಾಮೀಣ ಜನತೆ ಮತ್ತು ಕೂಲಿಕಾರ್ಮಿಕರು ಹೆಚ್ಚಾಗಿ ಬಂದು ಹೋಗುವ ಸ್ಥಳಗಳನ್ನು ಕ್ಯಾಂಟಿನ್‌ ನಿರ್ಮಾಣಕ್ಕೆ ಆಯ್ಕೆ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರದಿಂದ ಕ್ಯಾಂಟಿನ್‌ ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ನೀಡಲಾಗಿದೆ. ಪ್ರತಿ ಕ್ಯಾಂಟಿನ್‌ ಕಟ್ಟಡ ನಿರ್ಮಾಣಕ್ಕೆ ₹12 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಕಾರ್ಖಾನೆಯಲ್ಲಿ ನಿರ್ಮಿಸಿರುವ ಗೋಡೆ ಮತ್ತಿತರ ಸಾಮಗ್ರಿಗಳನ್ನು ಸ್ಥಳಕ್ಕೆ ತಂದು ಜೋಡಿಸಬೇಕಾಗಿದೆ. ಆದರೆ ಆ ಕೆಲಸ ಇನ್ನೂ ಆರಂಭವಾಗಿಲ್ಲ. ಕಟ್ಟಡ ನಿರ್ಮಾಣದ ಕೆಲಸ ಮುಗಿಯುವರೆಗೆ ಬಾಕಿ ಯಾವುದೇ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಕ್ಯಾಂಟಿನ್‌ ಆರಂಭವಾಗುವುದು ತಡವಾಗಲಿದೆ.

ನಿಗದಿತ ಸ್ಥಳಗಳಲ್ಲಿ ಕಟ್ಟಡ ಕಾಮಗಾರಿ ಮುಗಿದ ನಂತರ ಮಹಾನಗರ ಪಾಲಿಕೆಯಿಂದ ಮೂಲಸೌಕರ್ಯ ಕಲ್ಪಿಸಬೇಕಾಗಿದೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುತ್‌ ಸಂಪರ್ಕ, ಸಿ.ಸಿ.ಟಿ.ವಿ. ಸೌಲಭ್ಯ ಕಲ್ಪಿಸಬೇಕು. ಇದರ ವೆಚ್ಚವನ್ನು ನಗರಪಾಲಿಕೆಯೇ ಭರಿಸುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ನಗರದ ಜಿಲ್ಲಾಸ್ಪತ್ರೆ ಆವರಣದ ಜಯದೇವ ಆಸ್ಪತ್ರೆ ಸಮೀಪ ‘ಇಂದಿರಾ ಕ್ಯಾಂಟಿನ್‌’ ಅಡುಗೆ ಮನೆ ನಿರ್ಮಿಸಲಾಗುತ್ತದೆ. ಎಲ್ಲ 7 ಕ್ಯಾಂಟಿನ್‌ಗಳಿಗೂ ಇಲ್ಲಿಂದಲೇ ಪ್ರತಿನಿತ್ಯ ಮೂರು ಹೊತ್ತು ಊಟ– ತಿಂಡಿ ಸರಬರಾಜು ಮಾಡಲಾಗುತ್ತದೆ. ಆದರೆ ಇನ್ನೂ ಅಡುಗೆ ನಿರ್ಮಾಣ ಕೆಲಸವೂ ಆರಂಭವಾಗಿಲ್ಲ.

ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣದ ವೆಚ್ಚ ಭರಿಸಿದರೂ ಉಳಿದ ನಿರ್ವಹಣೆ ಹೊಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾಗಿದೆ. ನಗರದ ಕ್ಯಾಂಟಿನ್‌ಗಳ ನಿರ್ವಹಣೆಯನ್ನು ಮಹಾನಗರಪಾಲಿಕೆ ನೋಡಿಕೊಳ್ಳಬೇಕು. ಪ್ರತಿನಿತ್ಯ ಆಹಾರದ ವೆಚ್ಚವನ್ನು ನಗರಪಾಲಿಕೆಯೇ ನಿಭಾಯಿಸಬೇಕಾಗಿದೆ. ವಾರ್ಷಿಕ ಸುಮಾರು ₹6 ಕೋಟಿ ವೆಚ್ಚ ಬರಬಹುದು ಎಂದು ನಗರಪಾಲಿಕೆ ಅಂದಾಜು ಮಾಡಿದೆ.

ಇಂದಿರಾ ಕ್ಯಾಂಟಿನ್‌ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಟೆಂಡರ್‌ ನೀಡಿದ್ದು, ಕಾಮಗಾರಿ ಮುಗಿದ ನಂತರ ಮಹಾನಗರ ಪಾಲಿಕೆಯಿಂದ ತಕ್ಷಣವೇ ಮೂಲಸೌಲಭ್ಯ ಕಲ್ಪಿಸಲಾಗುವುದು. ಆನಂತರ ಕ್ಯಾಂಟಿನ್‌ಗಳು ಆರಂಭವಾಗಲಿವೆ ಎಂದು ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಪಿ.ಜಾದವ್‌ ತಿಳಿಸಿದ್ದಾರೆ.

ಆಹಾರ ಪೂರೈಕೆಗೆ ಟೆಂಡರ್‌ ಆಗಿಲ್ಲ

ನಗರದಲ್ಲಿ ನಿರ್ಮಿಸಿರುವ 7 ಇಂದಿರಾ ಕ್ಯಾಂಟಿನ್‌ಗಳಿಗೆ ಆಹಾರ ಪೂರೈಸಲು ಗುತ್ತಿಗೆ ನೀಡಬೇಕಾಗಿದೆ. ಆದರೆ ಜಿಲ್ಲಾಡಳಿತ ಇನ್ನೂ ಟೆಂಡರ್‌ ಕರೆದಿಲ್ಲ. ಇದರಿಂದ ಕ್ಯಾಂಟಿನ್‌ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಒಂದೇ ಕಡೆ ಆಹಾರ ತಯಾರಿಸಲು ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಜಿಲ್ಲಾಡಳಿತ ಪೂರೈಸಬೇಕು. ಆಹಾರ ತಯಾರಿಕೆ ಮತ್ತು ಸಾಗಾಣಿಕೆಯ ನಿರ್ವಹಣೆಯನ್ನು ಗುತ್ತಿಗೆ ಪಡೆದ ಸಂಸ್ಥೆಗೆ ವಹಿಸಲಾಗುತ್ತದೆ.

* * 

ಇಂದಿರಾ ಕ್ಯಾಂಟಿನ್‌ ಕಟ್ಟಡ ಕಾಮಗಾರಿ ಮುಗಿದ ನಂತರ ಮೂಲಸೌಲಭ್ಯ ಕಲ್ಪಸಲಾಗುತ್ತದೆ. ಆಹಾರ ಪೂರೈಕೆಗೆ ಟೆಂಡರ್‌ ಕರೆದು, ಗುತ್ತಿಗೆದಾರರಿಗೆ ವಹಿಸಲಾಗುತ್ತದೆ.

ಆರ್‌.ಪಿ.ಜಾದವ್‌,

ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry