6

ಮಿಡಲ್ ಕ್ಲಾಸ್ ಅಬ್ಬಾಯಿ(ಎಂಸಿಎ): ಮಧ್ಯಮ ವರ್ಗದ ಜನರ ಜೀವನದ ಕತೆ

Published:
Updated:
ಮಿಡಲ್ ಕ್ಲಾಸ್ ಅಬ್ಬಾಯಿ(ಎಂಸಿಎ): ಮಧ್ಯಮ ವರ್ಗದ ಜನರ ಜೀವನದ ಕತೆ

ಚಿತ್ರ: ಮಿಡಲ್ ಕ್ಲಾಸ್ ಅಬ್ಬಾಯಿ (ಎಂಸಿಎ)

ನಿರ್ದೇಶನ: ವೇಣು ಶ್ರೀ ರಾಮ್ 

ನಿರ್ಮಾಪಕ: ದಿಲ್‌ರಾಜು

ತಾರಾಗಣ: ನಾನಿ, ಸಾಯಿಪಲ್ಲವಿ, ಭೂಮಿಕಾ ಚಾವ್ಲಾ, ರಾಜೀವ್ ಕಣಕಾಲಾ

ಮಧ್ಯಮ ವರ್ಗದ ಜನರ ಜೀವನದ ಕತೆಯನ್ನು ಹೇಳುವ ಚಿತ್ರ ಮಿಡ್ಲ್‌ ಕ್ಲಾಸ್ ಅಬ್ಬಾಯಿ(ಎಂಸಿಎ). ನಾಯಕ ನಾನಿ ಮಧ್ಯಮ ವರ್ಗದ ಹುಡುಗ. ಅಮ್ಮ–ಅಪ್ಪ ಇಲ್ಲದ ಅವನ ಬಾಳಿನಲ್ಲಿ ಅಣ್ಣನೇ ಸರ್ವಸ್ವ. ಅಣ್ಣ–ತಮ್ಮರ ಸುಂದರ ಸಂಸಾರದಲ್ಲಿ ಅತ್ತಿಗೆ (ಭೂಮಿಕಾ ಚಾವ್ಲಾ) ಬಂದಾಗ ಅಣ್ಣನ ಪ್ರೀತಿ ಅತ್ತಿಗೆಯತ್ತ ವಾಲುತ್ತದೆ. ಉಂಡಾಡಿಗುಂಡನಂತೆ ಶುಕ್ರವಾರ ಸಿನಿಮಾ, ಭಾನುವಾರ ಸಂಜೆ ಗುಂಡಿನೊಂದಿಗೆ ತಿರುಗಾಡಿಕೊಂಡಿದ್ದ ನಾನಿಗೆ ಅತ್ತಿಗೆ ಬಂದ ಜೀವನ ಚಿತ್ರಣವೇ ಬದಲಾಗುತ್ತದೆ. ಮನೆಯಲ್ಲಿ ಅತ್ತಿಗೆಗೆ ಸಿಗುವ ಪ್ರಾಶಸ್ತ್ಯ ನೋಡಿ ನೊಂದುಕೊಂಡು ಚಿಕ್ಕಮ್ಮನ ಮನೆ ಸೇರುತ್ತಾನೆ. ಇದು ಚಿತ್ರದ ಮೊದಲಾರ್ಧ.

ದ್ವಿತಿಯಾರ್ಧದಲ್ಲಿ ಕತೆಯ ಸ್ವರೂಪವೇ ಬದಲಾಗುತ್ತದೆ. ಚಿಕ್ಕಮ್ಮನ ಮನೆಯಲ್ಲಿದ್ದ ನಾನಿಗೆ ಅಣ್ಣ ಕರೆ ಮಾಡಿ ಮನೆಗೆ ಬರಲು ಹೇಳುತ್ತಾನೆ. ಅತ್ತಿಗೆಗೆ ವಾರಂಗಲ್‌ಗೆ ವರ್ಗಾವಣೆಯಾದ ವಿಷಯವನ್ನು ಕೇಳಿ ಮತ್ತೆ ತನ್ನ ಹಳೇ ಜೀವನ ಮರುಕಳಿಸುತ್ತದೆ ಎಂದು ಸಂತಸ ಪಡುತ್ತಾನೆ. ಆದರೆ ಅಣ್ಣ ನಾನಿಯನ್ನು ಅತ್ತಿಗೆಯೊಂದಿಗೆ ವಾರಂಗಲ್‌ಗೆ ಕಳುಹಿಸಿ ತಾನು ಟ್ರೈನಿಂಗ್‌ಗೆಂದು ದೆಹಲಿಗೆ ಹೋಗುತ್ತಾನೆ.

ಅಣ್ಣನ ಭಾವನೆಗಳಿಗೆ ಬೆಲೆ ನೀಡಿ ಅತ್ತಿಗೆಯೊಂದಿಗೆ ವಾರಂಗಲ್‌ಗೆ ಹೋಗುವ ನಾನಿಗೆ ಮನೆಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನಾನಿ ಮೇಲೆ ಹೇರುತ್ತಾಳೆ ಅತ್ತಿಗೆ ಜ್ಯೋತಿ. ಈ ನಡುವೆ ಜ್ಯೋತಿ ಶಿವ ಎಂಬ ರೌಡಿಗೆ ಸೇರಿದ ಗಾಡಿಯೊಂದನ್ನು ಸೀಸ್ ಮಾಡುತ್ತಾಳೆ. ಅಲ್ಲಿಂದ ಕತೆಗೆ ಹೊಸ ತಿರುವು ಸಿಗುತ್ತದೆ. ಈ ನಡುವೆ ನಾಯಕಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ.

‌‌‘ನಾನು ಯಾರಿಗೂ ಪ್ರಪೋಸ್ ಮಾಡುವುದಿಲ್ಲ, ಯಾವುದಾದರೂ ಹುಡುಗಿ ನನ್ನ ಬಳಿ ಬಂದು ಪ್ರೀತಿ ವ್ಯಕ್ತಿಪಡಿಸುವವರೆಗೂ ಕಾಯುತ್ತೇನೆ’ ಎನ್ನುವ ನಾನಿಗೆ ಯಾರೂ, ಏನು ಎಂದು ತಿಳಿಯದ ಪಲ್ಲವಿ ಬಸ್‌ಸ್ಟಾಪ್‌ ಬಳಿ ಗುಲಾಬಿ ನೀಡಿ ‘ಮದುವೆ ಆಗೋಣ್ವಾ’ ಎಂದು ಕೇಳುತ್ತಾಳೆ. ಅಲ್ಲಿಂದ ಪ್ರೀತಿ–ಪ್ರೇಮ–ಪ್ರಣಯ ಆರಂಭ.

ಅತ್ತಿಗೆಯನ್ನು ದ್ವೇಷಿಯಂತೆ ನೋಡುತ್ತಿದ್ದ ನಾನಿಗೆ ಚಿಕ್ಕಪ್ಪನ ರೈಲು ನಿಲ್ದಾಣದಲ್ಲಿ ಅತ್ತಿಗೆಯ ಒಳನೋಟದ ಅರಿವು ಮಾಡಿಸುತ್ತಾನೆ. ಅದರಿಂದ ಅವನ ಮನಸ್ಸು ಬದಲಾಗುತ್ತದೆ. ಅತ್ತಿಗೆಯನ್ನು ನೋಡಲು ಅಲ್ಲಿಂದ ನೇರವಾಗಿ ಅತ್ತಿಗೆಯ ಆಫೀಸ್‌ಗೆ ಬಂದಾಗ ರೌಡಿ ಶಿವ ಅತ್ತಿಗೆಯ ಮೇಲೆ ನೆತ್ತಿಗೆ ಪಿಸ್ತೂಲ್‌ನಿಂದ ಗುರಿ ಇರಿಸಿಕೊಂಡಿರುತ್ತಾನೆ, ರೌಡಿಗಳೊಂದಿಗೆ ಹೋರಾಡಿ ಅತ್ತಿಗೆಯನ್ನು ಕಾಪಾಡಿಕೊಳ್ಳುವ ನಾನಿ ರೌಡಿಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಅಲ್ಲಿಂದ ಅವನಿಗೆ ಅತ್ತಿಗೆಯೇ ಸರ್ವಸ್ವವಾಗುತ್ತಾಳೆ.

ಶಿವ ಅತ್ತಿಗೆಯನ್ನು ಕಾಪಾಡಿಕೊಳ್ಳಲು ನಾನಿಗೆ 10 ದಿನಗಳ ಗಡುವು ನೀಡಿರುತ್ತಾನೆ. ಆ ಹತ್ತು ದಿನದಲ್ಲಿ ಅತ್ತಿಗೆಯನ್ನು ಕಾಪಾಡಿಕೊಂಡರೆ ನಿನ್ನ ಅತ್ತಿಗೆಯ ತಂಟೆಗೆ ಬರುವುದಿಲ್ಲ ಎಂಬ ಸವಾಲನ್ನು ಹಾಕಿರುತ್ತಾನೆ. ಜ್ಯೋತಿ ಮೈದುನನ ಭವಿಷ್ಯ ರೂಪಿಸುವ ಸಲುವಾಗಿ ಜಮೀನು ಮಾರಿ ಬಂದ ಹಣದಲ್ಲಿ ಕೆಲಸಕ್ಕೆ ಸೇರಿಸುತ್ತಾಳೆ. ಆದರೆ ನಾನಿಗೆ ಶಿವನ ಸವಾಲನ್ನು ಎದುರಿಸುವ ಕೆಲಸ. ಇದರಿಂದ ಹಗಲು ರಾತ್ರಿ ನಿದ್ದೆ ಬಿಟ್ಟು ಅತ್ತಿಗೆಯನ್ನು ಕಾಯುತ್ತಾನೆ, ಆದರೂ 10 ದಿನದ ಗಡುವಿನಲ್ಲಿ ಶಿವ ನಾನಿಯ ಅತ್ತಿಗೆಯನ್ನು ಕಿಡ್ನಾಪ್ ಮಾಡಿ ಅಜ್ಞಾತಜಾಗದಲ್ಲಿ ಇರಿಸಿ ಆ ಜಾಗದ ವಿವರವನ್ನು ಯಾರಿಗೂ ತಿಳಿಸುವುದಿಲ್ಲ. ನಾನಿಗೆ ಇರುವ ವಿಶೇಷ ನೆನಪಿನ ಸಾಮರ್ಥ್ಯವನ್ನು ಪಲ್ಲವಿ ನೆನಪಿಸುತ್ತಾಳೆ. ಆ ಮೂಲಕ ಅತ್ತಿಗೆಯನ್ನು ಹುಡುಕಿ ಬದುಕಿಸುತ್ತಾನೆ.

ಚಿತ್ರದ ನಡುವೆ ತಾನು ಪ್ರೀತಿಸಿದ ಹುಡುಗಿ ಅತ್ತಿಗೆಯ ತಂಗಿಯೇ ಎಂಬುದು ತಿಳಿಯುತ್ತದೆ. ಆದರೆ ಅತ್ತಿಗೆಯನ್ನು ಉಳಿಸಿಕೊಳ್ಳುವ ನಡುವೆ ಪ್ರೀತಿಯಲ್ಲಿ ಚಿಕ್ಕ ಮನಸ್ತಾಪ, ಒಂದಷ್ಟು ಹಾಡು, ಫ್ಯಾಮಿಲಿ ಸೆಂಟಿಮೆಂಟ್, ಸ್ನೇಹಿತರು ಈ ಚಿತ್ರದ ಹೈಲೈಟ್‌.

ಚಿತ್ರದಲ್ಲಿ ಪ್ರೇಮಪಕ್ಷಿಗಳಿಗಾಗಿ ಒಂದಿಷ್ಟು ಹಾಡುಗಳಿವೆ. ದೇವಿಶ್ರಿ ಪ್ರಸಾದ್‌ ಸಂಗೀತವಿರುವ ಚಿತ್ರದಲ್ಲಿ ಒಂದೆರಡು ಹಾಡುಗಳು ತುಂಬಾ ಇಷ್ಟವಾದರೆ ಉಳಿದವು ಒಮ್ಮೆ ಕೇಳಬಹುದು ಎಂಬಂತಿದೆ. ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸಾಯಿಪಲ್ಲವಿಯ ನೃತ್ಯದ ಝಲಕ್ ಎದ್ದು ಕಾಣುವುದು ‘ಫ್ಯಾಮಿಲಿ ಪಾರ್ಟಿ’ ಎಂಬ ಫ್ಯಾಮಿಲಿ ಹಾಡಿನಲ್ಲಿ ಮಾತ್ರ. ಆ ಹಾಡಿನ ಸಾಲು, ಸಂಗೀತ ಎಲ್ಲವೂ ಹೆಚ್ಚು ಇಷ್ಟವಾಗುತ್ತದೆ.

ಕುಟುಂಬ ಪ್ರಧಾನವಾದ ಚಿತ್ರದಲ್ಲಿ ಮನಮುಟ್ಟುವ ಸಂಭಾಷಣೆಯ ಕೊರತೆ ಎದ್ದು ಕಾಣುತ್ತಿತ್ತು. ತೆಲುಗಿನ ಅನೇಕ ಚಿತ್ರಗಳಲ್ಲಿ ಸಂಭಾಷಣೆಯೇ ಹೈಲೈಟ್‌. ಎಷ್ಟೋ ಚಿತ್ರಗಳಲ್ಲಿ ಸಂಭಾಷಣೆಯೇ ಜೀವಾಳ. ಆದರೆ ಈ ಚಿತ್ರದಲ್ಲಿ ತಕ್ಕಮಟ್ಟಿನ ಸಂಭಾಷಣೆ, ಕೆಲವೊಂದು ಕಡೆ ಹಾಸ್ಯನಟ ದರ್ಶಿಯ ಪಂಚಿಂಗ್ ಡೈಲಾಗ್‌ಗಳು ಕೇಳುಗರಿಗೆ ಕಚಗುಳಿ ನೀಡುತ್ತವೆ.

ನಟ ನಾನಿ ಹಾಗೂ ನಟಿ ಸಾಯಿ ಪಲ್ಲವಿ ಯಾವುದೇ ಸ್ಟಾರ್‌ಡಮ್ ಇಲ್ಲದೇ ಅಭಿಮಾನಿ ಬಳಗವನ್ನು ಹುಟ್ಟುಹಾಕಿಕೊಂಡವರು. ಆದರೆ ಚಿತ್ರದಲ್ಲಿ ಈ ಇಬ್ಬರ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಂಡಿತ. ನಾನಿ ಎಂದಿನಂತೆ ನಟನೆಯಿಂದ ಇಷ್ಟವಾಗುತ್ತಾರೆ. ಆದರೆ ಸಾಯಿಪಲ್ಲವಿ ಪಾತ್ರಕ್ಕೆ ಚಿತ್ರದಲ್ಲಿ ವರ್ಚಸ್ಸು ಕಡಿಮೆ ಎಂದೆ ಹೇಳಬಹುದು. ತಮ್ಮ ಸರಳ ಸೌಂದರ್ಯದಿಂದಲೇ ಅಭಿಮಾನಗಳನ್ನು ಬಳಗವನ್ನೇ ಹುಟ್ಟಿಹಾಕಿಕೊಂಡ ಇವರಿಗೆ ಚಿತ್ರದಲ್ಲಿ ಅಷ್ಟೊಂದು ಬೇಡಿಕೆ ಇಲ್ಲ. ‌ಚಿತ್ರದಲ್ಲಿ ಲವ್‌ಸ್ಟೋರಿ ಒಂದು ಇರಲಿ ಎನ್ನುವ ಕಾರಣಕ್ಕೆ ನಿರ್ದೇಶಕರು ಈ ಪಾತ್ರವನ್ನು ಹುಟ್ಟುಹಾಕಿದ್ದಾರೆ ಎಂದೆನಿಸುತ್ತದೆ. ಬಿ.ಟೆಕ್ ಓದುವ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಸಾಯಿ ಅವರ ನಟನೆ ಮನಸ್ಸಿಗೆ ತಾಕಿದರೂ ಅವರಿಗೆ ಇನ್ನಷ್ಟು ಅವಕಾಶ ನೀಡಬೇಕಿತ್ತು ಎಂನಿಸುವುದು ಸುಳ್ಳಲ್ಲ.

ಮಧ್ಯಮ ವರ್ಗದ ಜನರ ಮನೋಭಾವ, ಫ್ಯಾಮಿಲಿ ಸೆಂಟಿಮೆಂಟ್, ಈ ಬಗ್ಗೆಲ್ಲಾ ಅತಿಯಾಗಿ ನಿರೀಕ್ಷೆ ಇಟ್ಟುಕೊಂಡು ಹೋದರೆ ನಿರಾಸೆ ಖಂಡಿತಾ. ಅತ್ತಿಗೆ ಎಂಬ ಸಾಮಾನ್ಯ ಎಳೆಯನ್ನೇ ಇರಿಸಿಕೊಂಡು ಚಿತ್ರವನ್ನು ಹೆಣೆಯಲಾಗಿದೆ. ಬೇಜವಾಬ್ದಾರಿ ಮೈದುನನ್ನು ಸರಿದಾರಿಗೆ ಶ್ರಮಿಸುವ ಅತ್ತಿಗೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ನಿಷ್ಠಾವಂತ ಸರ್ಕಾರಿ ಅಧಿಕಾರಿಯಾಗಿ ಭೂಮಿಕಾ ಚಾವ್ಲಾ ಹೆಚ್ಚು ಇಷ್ಟವಾಗುತ್ತಾರೆ. ನಿರ್ದೇಶಕ ದಿಲ್‌ ರಾಜಾ ಅವರು ನಾನಿ ಹಾಗೂ ಸಾಯಿ ಪಲ್ಲವಿಗಾಗಿಯೇ ಕೆಲವೊಂದು ಸೀನ್‌ಗಳನ್ನು ಹುಟ್ಟುಹಾಕಿದ್ದರೇನು ಎನ್ನುವಷ್ಟರ ಮಟ್ಟಿಗೆ ಅವರ ಪಾತ್ರಗಳಿಗೆ ಜೀವವಿಲ್ಲದಂತಾಗಿತ್ತು ಸಿನಿಮಾ.

ಹಾಸ್ಯದ ಕಾರಣಕ್ಕೆ ಚಿತ್ರದ ಮೊದಲ ಇಷ್ಟವಾದರೆ ದ್ವಿತಿಯಾರ್ಧ ಪ್ರೇಕ್ಷಕರಲ್ಲಿ ಹಿಡಿದಿಡುವಲ್ಲಿ ಸೋಲು ಕಂಡಿದೆ. ಕ್ಯಾಮೆರಾ ವರ್ಕ್ ಕೂಡ ಹೊಸತೇನು ಇಲ್ಲದೇ ಕತೆಯೂ ಸಾಮಾನ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry