7

ಪ್ರಗತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ

Published:
Updated:
ಪ್ರಗತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ

ನರಸಿಂಹರಾಜಪುರ: ತಾಲ್ಲೂಕಿನ ಮೆಣಸೂರು ಗ್ರಾಮದ ಬಳಿ ಎನ್.ಆರ್.ಪುರ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ವ್ಯಾಪ್ತಿಯಲ್ಲಿ ಪ್ರಸ್ತುತ ವಿಸ್ತರಣೆ ಕಾರ್ಯದ ಕಾಮಗಾರಿ ಕೈಗೊಳ್ಳಲಾಗಿದೆ.

1949ರಲ್ಲಿ ಭದ್ರಾ ಅಣೆಕಟ್ಟನ್ನು ನಿರ್ಮಿಸಿದಾಗ ಈ ಹಿಂದೆ ನರಸಿಂಹರಾಜಪುರದಿಂದ ಬೇರೆ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಐತಿಹಾಸಿಕ ತಡಸ ಸೇತುವೆ ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ನಂತರ ಶಿವಮೊಗ್ಗ , ಮಂಡಗದ್ದೆ ಊರುಗಳಿಗೆ ತಾಲ್ಲೂಕು ಕೇಂದ್ರದಿಂದ ಹಾದು ಹೋಗುವ ರಸ್ತೆಯ ಮಧ್ಯದಲ್ಲಿ ಹರಿಯುವ ಬಕ್ರಿಹಳ್ಳಕ್ಕೆ 1950 ರ ದಶಕದಲ್ಲಿ ಚಿಕ್ಕಮಗಳೂರು ಡಿಸ್ಟ್ರಿಕ್ ಬೋರ್ಡ್ ವತಿಯಿಂದ ಸೇತುವೆ ನಿರ್ಮಿಸಿ ಇದಕ್ಕೆ ಬಕ್ರಿಹಳ್ಳ ಸೇತುವೆ ಎಂದು ನಾಮಕರಣ ಮಾಡಲಾಯಿತು.

ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು 1953ರ ಜೂನ್ 16ರಂದು ಉದ್ಘಾಟಿಸಿದ್ದರು. ಈ ಸೇತುವೆಯ ಮೂಲಕವೇ ಹಲವು ವರ್ಷಗಳ ವಾಹನ ಸಂಚಾರ ನಡೆಯಿತು. ಆದರೆ ಈ ಸೇತುವೆಯು ಸಹ ನಂತರದ ದಿನಗಳಲ್ಲಿ ಭದ್ರಾ ಹಿನ್ನೀರಿನಲ್ಲಿ ಮುಳುಗಿದ ಕಾರಣ ಹಾಗೂ ಸೇತುವೆಯು ಕಿರಿದ್ದಾಗಿದ್ದರಿಂದ ಸಂಚಾರ ಸ್ಥಗಿತಗೊಳಿಸಿ ತಾಲ್ಲೂಕಿನ ಮೆಣಸೂರು ಗ್ರಾಮದ ಬಳಿ 1970ರ ದಶಕದಲ್ಲಿ ರಾಜ್ಯರಸ್ತೆ ನಿಧಿಯಿಂದ ಭದ್ರಾನ್ನೀರಿಗೆ ಅಡ್ಡಲಾಗಿ 127.96 ಮೀಟರ್ ಸೇತುವೆ ನಿರ್ಮಿಸಿ ಇದಕ್ಕೆ ಹೊಸ ಸೇತುವೆ ಎಂದು ಕರೆದು ಇಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸೇತುವೆಯ ವ್ಯಾಪ್ತಿ ಕಿರಿದಾಗಿದ್ದುದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ಪ್ರಸ್ತುತ ಪ್ರಾಸ್ಸಿ ಎಂಬ ಸಂಸ್ಥೆಯು ಅಪಘಾತಗಳು ಸಂಭವಿಸುವ ಸ್ಥಳಗಳೆಂದು ಗುರುತಿಸಿದ (ಬ್ಲಾಕ್ ಸ್ಪಾಟ್) ತಿರುವು ಮುರುವಾಗಿರುವ ರಸ್ತೆಗಳನ್ನು, ಕಿರಿದಾಗಿರುವ ರಸ್ತೆಗಳನ್ನು ವಿಸ್ತರಿಸುವ ಕಾರ್ಯ ಮಾಡುತ್ತಿದ್ದು ಇದರಂತೆ ಇಲ್ಲಿನ ಸೇತುವೆಯ ವ್ಯಾಪ್ತಿಯಲ್ಲೂ ರಸ್ತೆಯನ್ನು 7 ಮೀಟರ್ ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸೇತುವೆಯು ನಿರ್ಮಿಸಿ ಸಾಕಷ್ಟು ವರ್ಷಗಳಾಗಿರುವುದರಿಂದ ಪ್ರಸ್ತುತ ಸೇತುವೆಯು ಕುಸಿಯುವ ಭೀತಿಯಿದೆ. ಈ ಬಗ್ಗೆ ಇಲಾಖೆ ಯವರು ಗಮನಿಸಿ ಪರ್ಯಾಯ ಸೇತುವೆ ನಿರ್ಮಿಸುವತ್ತ ಗಮನಹರಿಸ ಬೇಕೆಂದು ಗ್ರಾಮಸ್ಥ ಜೋಸೆಫ್ ಆಗ್ರಹಿಸುತ್ತಾರೆ.

ಸೇತುವೆಯ ವ್ಯಾಪ್ತಿಯಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಿರುವುದು ಸಂತಸದ ವಿಷಯ. ಆದರೆ ಸೇತುವೆ ನಿರ್ಮಿಸಿ ಹಲವು ದಶಕಗಳು ಸಂದಿರುವುದರಿಂದ ನಿರ್ಮಿಸಲು ಬಳಸಿದ ಕಾಂಕ್ರಿಟ್ ಹಾಗೂ ಕಬ್ಬಿಣದ ಸಲಾಕೆಗಳು ಮೇಲ್ಪದರ ಕುಸಿದು ಕಾಣಿಸಿ ಕೊಳ್ಳತೊಡಗಿದೆ. ಅಲ್ಲದೆ ಕಲ್ಲಿನಿಂದ ನಿರ್ಮಿಸಿರುವ ಗೋಡೆಯ ಕೆಲವು ಭಾಗಗಳಲ್ಲಿ ಬಿರುಕು ಕಾಣಿಸಿ ಕೊಂಡಿದೆ. ಹಾಗಾಗಿ ನೂತನ ಸೇತುವೆ ನಿರ್ಮಿಸಲು ಮುಂದಾಬೇಕಾಗಿದೆ ಎಂಬುದು ವಾಹನ ಸವಾರರು ಅಭಿಪ್ರಾಯಪಡುತ್ತಾರೆ.

* * 

ಎನ್.ಆರ್.ಪುರ–ಶಿವಮೊಗ್ಗ ಸಂಪರ್ಕ ಸೇತುವೆ ನಿರ್ಮಾಣ ಮಾಡಿ ಸಾಕಷ್ಟು ವರ್ಷಗಳು ಸಂದಿದ್ದು, ಶಿಥಿಲಾವಸ್ಥೆಗೆ ತಲುಪಿರುವುದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ರವಿಚಂದ್ರ

ಲೋಕೋಪಯೋಗಿ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry