ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?

7

ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?

Published:
Updated:
ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?

ಮಕ್ಕಳ ಬ್ಯಾಗಿನ ಹೊರೆ, ಹೊಸ ವಿಚಾರವೇನಲ್ಲ. ಶಾಲಾಬ್ಯಾಗಿನ ಹೊರೆಯ ವಿರುದ್ಧ ಅಲ್ಲಿ–ಇಲ್ಲಿ ಪ್ರತಿಭಟನೆಗಳು ನಡೆದಿವೆ. ಕೆಲವು ಪೋಷಕರು ಮೈಸೂರಿನ ಶಾಲೆಗಳ ಮುಂದೆ ಬ್ಯಾಗ್ ಮತ್ತು ಮಗುವಿನ ತೂಕ ಮಾಡಿ ಶಾಲೆಗಳಿಗೆ ಬಿಸಿ ಮುಟ್ಟಿಸಿದ್ದುಂಟು. ಶಾಲಾ ಬ್ಯಾಗ್ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿ ವರ್ಷ ಕಳೆದಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಒಂದು ಹೊಸ ಪ್ರಯೋಗ!

ತಿಂಗಳ ಕಡೆಯ ಶನಿವಾರ ಬ್ಯಾಗ್‌ರಹಿತ ಶಾಲಾ ದಿನವಾಗಿ ಪ್ರಯೋಗ ಮಾಡಿ ನೋಡಲು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆ ಮುಂದಾಗಿದೆ. ಈ ತಿಂಗಳ 23ರಂದು ಪುಸ್ತಕದ ಹೊರೆಯಿಲ್ಲದ ದಿನವನ್ನು ಮಕ್ಕಳು ಅನುಭವಿಸಿಯೇಬಿಟ್ಟರು. ಅವರಿಗೆ ಸಹಜವಾಗಿಯೇ ಸಂತಸವೂ ಆಗಿರುತ್ತದೆ. ಪುಸ್ತಕದ ಹೊರೆಯಿಲ್ಲದೆ ಶಾಲೆಗೆ ಬರುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಸೃಜನಾತ್ಮಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾದ ದಿನ, ಮಕ್ಕಳಿಗೆ ಹೊಸ ಅನುಭವ ತಂದುಕೊಟ್ಟಿತ್ತು.

ಮಕ್ಕಳ ಪರವಾಗಿ ಯೋಚಿಸುವವರಿಗೆ ಇಂತಹ ಯೋಜನೆಗಳು ಹೊಳೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕ ಹೊರುವ ಕಾರ್ಮಿಕರಂತೆ ಕಾಣಿಸಿಕೊಳ್ಳುತ್ತಾರೆ. ಶಾಲಾಬ್ಯಾಗನ್ನು ಹೊತ್ತುಕೊಂಡು ನಡೆಯಲು ಪೋಷಕರಿಗೇ ಕಷ್ಟವೆನಿಸುತ್ತದೆ. ಆದರೂ ಇದರ ವಿರುದ್ಧ ಬಹಿರಂಗವಾಗಿ ದನಿ ಎತ್ತುವ ಪೋಷಕರ ಸಂಖ್ಯೆ ಕಡಿಮೆ ಎನ್ನುವುದು ವಿರೋಧಾಭಾಸ. ಶಾಲಾಬ್ಯಾಗಿನ ತೂಕದಿಂದ ಕೆಳಗೆ ಬಿದ್ದು ಗಾಯಗೊಂಡ, ತಲೆ ಸುತ್ತಿ ಬಿದ್ದ, ಕಾಲು-ಕೈಗೆ ಪೆಟ್ಟು ಮಾಡಿಕೊಂಡ ಅನೇಕ ಮಕ್ಕಳಿದ್ದಾರೆ. ಇದರಿಂದಾಗುವ ಮಾನಸಿಕ ಸಮಸ್ಯೆಗಳು ಅಷ್ಟಿಷ್ಟಲ್ಲ. ಮಕ್ಕಳಲ್ಲಿ ಏಕತಾನತೆ, ಖಿನ್ನತೆ, ನಿರುತ್ಸಾಹ, ಪಠ್ಯದಲ್ಲಿ ಅನಾಸಕ್ತಿ, ಮುಂಗೋಪ, ಊಟದಲ್ಲಿ ನಿರಾಸಕ್ತಿ, ಶ್ರದ್ಧೆ ಇಲ್ಲದಿರುವುದು ಇತ್ಯಾದಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಬಗ್ಗೆ ಶಿಕ್ಷಣ ಇಲಾಖೆ ಎಂದಿಗಾದರೂ ಅಧ್ಯಯನ ನಡೆಸಿದೆಯೇ?

2006ರಲ್ಲಿ ಸಂಸತ್ತಿನಲ್ಲಿ ‘ಮಕ್ಕಳ ಶಾಲಾ ಬ್ಯಾಗ್ (ತೂಕದ ಮಿತಿ) ಮಸೂದೆ’ ಮಂಡಿಸಲಾಗಿತ್ತು. ಅಂತಹಪ್ರಯತ್ನ ಅದೇ ಮೊದಲು; ಅದೇ ಕೊನೆ. ಈ ಮಸೂದೆಪರವಾಗಿ ಕೆಲವು ಪ್ರಜ್ಞಾವಂತ ಸದಸ್ಯರು ಮಾತನಾಡಿದ್ದರು. ಆದರೆ, ಅದರಿಂದ ನಮ್ಮ ದೇಶದ ರಾಜಕಾರಣಿಗಳ ಮನಸ್ಸು ಕರಗಲಿಲ್ಲ. ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಈ ವಿಚಾರ ಸ್ಥಾನ ಪಡೆಯಲಿಲ್ಲ. ಒಂದು ದಶಕದ ದೂಳು ಆವರಿಸಿಕೊಂಡು ಈ ಮಸೂದೆ ಸಂಸತ್ತಿನ ಕಪಾಟಿನಲ್ಲಿ ಬಿದ್ದಿದೆ. ಶಾಲಾ ಮಕ್ಕಳು ಹೊರೆ ಹೊರುತ್ತಲೇ ಇದ್ದಾರೆ.

ಶಾಲಾ ಬ್ಯಾಗಿನ ತೂಕವು ಮಗುವಿನ ತೂಕದ ಶೇ 10ರಷ್ಟು ಮಾತ್ರ ಇರಬೇಕೆನ್ನುವುದು ಈ ಮಸೂದೆಯ ಮುಖ್ಯಾಂಶ. ಉಳಿದ ಪುಸ್ತಕಗಳಿಗೆ ಶಾಲಾ ಕೊಠಡಿಗಳಲ್ಲಿ ಕಪಾಟುಗಳನ್ನು ಮಾಡಿ ಓದಲು ವ್ಯವಸ್ಥೆ ಮಾಡಬೇಕು. ದೇಹಕ್ಕೆ ತೊಂದರೆಯಾಗದಂತೆ ಬ್ಯಾಗನ್ನು ಹೊರುವುದರ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಆದರೆ, ಈ ಮಸೂದೆಯನ್ನು ಕಡೆಗಣಿಸಲಾಗಿದೆ. ಮೈಸೂರಿನಲ್ಲಿ ಮಕ್ಕಳು ಮತ್ತು ಬ್ಯಾಗನ್ನು ತೂಕ ಮಾಡಿದಾಗ ಸಿಕ್ಕಿದ ಅಂಕಿಅಂಶಗಳು ನಮ್ಮನ್ನು ಗಾಬರಿಗೊಳಿಸಿದವು.

ಏಳನೇ ತರಗತಿಗೆ ಹೋಗುವ ಮಗುವಿನ ತೂಕ 24 ಕೆ.ಜಿ. ಇದ್ದರೆ ಆತನ ಬ್ಯಾಗಿನ ತೂಕ 11 ಕೆ.ಜಿ. ಇತ್ತು. ಅಂದರೆ ಬ್ಯಾಗಿನ ತೂಕವು ಮಗುವಿನ ತೂಕದ ಸುಮಾರು ಶೇ 50ರಷ್ಟಿತ್ತು. ಬಹುತೇಕ ಮಕ್ಕಳ ಸ್ಥಿತಿ ಇದೇ ಆಗಿತ್ತು.

‘ಮಕ್ಕಳು ನಮ್ಮ ದೇಶದ ಸಂಪತ್ತು’ ಎಂದು 1976ರ ಮಕ್ಕಳ ರಾಷ್ಟ್ರೀಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಪಾಲನೆ ಆಗುತ್ತಿಲ್ಲ ಎಂಬುದು ಪದೇ ಪದೇ ದೃಢಪಡುತ್ತಿದೆ. 2005ರಲ್ಲಿ ಜಾರಿಗೆ ಬಂದ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ (ಎನ್‌ಸಿಎಫ್‌), ‘ಹೊರೆಯಿಲ್ಲದ ಕಲಿಕೆ’ ಎನ್ನುವ ಪರಿಕಲ್ಪನೆಯನ್ನು ಮುಂದಿಟ್ಟಿತ್ತು. ಪ್ರೊ.ಯಶ್‍ಪಾಲ್ ಸಮಿತಿ ರಚಿಸಿದ ಎನ್‍ಸಿಎಫ್ ನಮ್ಮ ದೇಶದ ಶಿಕ್ಷಣದ ಹಾದಿ ರೂಪಿಸಿದರೂ ಮಕ್ಕಳ ಪಾಲಿಗೆ ಅದು ಗಗನಕುಸುಮವಾಗಿಯೇ ಉಳಿದಿದೆ. ನಮ್ಮ ದೇಶದ ನೀತಿತಜ್ಞರು, ಶಿಕ್ಷಣತಜ್ಞರು ಮತ್ತು ನಾಯಕರು ಮಕ್ಕಳ ಈ ಬವಣೆಯನ್ನು ಕಡೆಗಣಿಸುವುದೇಕೆ? ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವಂತ ಮಕ್ಕಳ ಪಾತ್ರ ಬಹುಮುಖ್ಯವಾದದ್ದು. ಏಕೆಂದರೆ ಅವರೇ ನಾಳೆ ಈ ದೇಶವನ್ನು ಮುನ್ನಡೆಸಬೇಕು. ಆದರೆ ಖಿನ್ನತೆ, ನಿರಾಸಕ್ತಿ, ಬೆನ್ನುಮೂಳೆ ಸಮಸ್ಯೆಗಳಿಂದ ನರಳುವ ಈ ಪೀಳಿಗೆಯಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ?

ಪುಸ್ತಕದ ಹೊರೆಯಿಲ್ಲದೆ ಪಠ್ಯಚಟುವಟಿಕೆಗಳನ್ನು ಆಯಾಸರಹಿತವಾಗಿ ನಡೆಸುವಂತಹ ಶಾಲೆಗಳು ನಮ್ಮ ರಾಜ್ಯದಲ್ಲೇ ಇವೆ. ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲದ ವಿಡಿಯಾ ಪೂರ್ಣಪ್ರಜ್ಞ ಶಾಲೆ ಒಂದು ಉದಾಹರಣೆ. ಪ್ರಾಥಮಿಕದಿಂದ ಪ್ರೌಢಶಾಲೆವರೆಗಿನ ಎಲ್ಲ ತರಗತಿಗಳಲ್ಲೂ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದೆ. ಪ್ರಾರಂಭದಲ್ಲಿ ಶಿಕ್ಷಕರಿಗೂ ಪೋಷಕರಿಗೂ ಇರಿಸುಮುರಿಸಾಯಿತು. ಆದರೆ, ಎರಡು– ಮೂರು ತಿಂಗಳಲ್ಲೇ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಹೊಸ ವ್ಯವಸ್ಥೆಗೆ ಒಗ್ಗಿಯೇಬಿಟ್ಟರು. ಈಗ ಬ್ಯಾಗಿನ ಹೊರೆಯಿಲ್ಲದೆ ಸುಲಲಿತವಾಗಿ ಮಕ್ಕಳು ತಮ್ಮ ಪಠ್ಯವನ್ನು ನಿಭಾಯಿಸುತ್ತಿದ್ದಾರೆ. ಪ್ರತಿದಿನ ಶಾಲೆಗೆ ಬರುವ ಮಕ್ಕಳು 8-10 ಹಾಳೆ ತರುತ್ತಾರೆ. ಅದರಲ್ಲೇ ನೋಟ್ಸ್ ಬರೆಯುತ್ತಾರೆ. ಮನೆಗೆ ಹಿಂದಿರುಗಿ ಆ ಹಾಳೆಗಳನ್ನು ವಿಷಯವಾರು ಕಡತಗಳಿಗೆ ಸೇರಿಸುತ್ತಾರೆ.

ಶಿಕ್ಷಕರು ಕೇಳಿದಾಗ ಮಾತ್ರ ಕಡತವನ್ನು ಶಾಲೆಗೆ ತರಬೇಕಷ್ಟೇ. ಈ ಯಶಸ್ವಿ ಪ್ರಯೋಗ 10 ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಮಕ್ಕಳಿಗೆ ಹೊರೆಯಿಲ್ಲದ ಶಿಕ್ಷಣ ನೀಡುವ ಮತ್ತು ಅವರ ಮಾನಸಿಕ ಆರೋಗ್ಯ ಕಾಪಾಡುವ ಬಗ್ಗೆ ಆಸಕ್ತಿ ಮತ್ತು ಕಾಳಜಿ ಇರುವಂತಹವರು ಶಿಕ್ಷಣ ಇಲಾಖೆಯಲ್ಲಿ ಉಳಿದಿದ್ದರೆ ಇದರ ಕುರಿತು ಅಧ್ಯಯನ ನಡೆಸಲಿ. ರಾಜ್ಯದ ಎಲ್ಲ ಮಕ್ಕಳಿಗೂ ಇದರ ಪ್ರಯೋಜನವಾಗುವಂತೆ ಮಾಡಲಿ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಯೋಗ ಖಂಡಿತ ಒಂದು ದಿಕ್ಸೂಚಿ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಅದು ತಿಂಗಳ ಒಂದು ದಿನಕ್ಕೆ ಸೀಮಿತವಾಗದೆ ಅದನ್ನು ಇಡೀ ತಿಂಗಳಿಗೆ ವಿಸ್ತರಿಸುವ ಪ್ರಯತ್ನ ಆಗಬೇಕಿದೆ. ಇದಕ್ಕಾಗಿ ಒಂದು ವಿಶೇಷ ಅಧ್ಯಯನ ತಂಡವನ್ನು ಶಿಕ್ಷಣ ಸಚಿವರು ರಚಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry