7

ಮನೆ ಖರೀದಿಗೆ ಪೂರ್ವಸಿದ್ಧತೆ ಹೀಗಿರಲಿ...

Published:
Updated:
ಮನೆ ಖರೀದಿಗೆ ಪೂರ್ವಸಿದ್ಧತೆ ಹೀಗಿರಲಿ...

ಮನೆ ಖರೀದಿ ನಿರ್ಧಾರವು, ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಮಾಡುವ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇಂಥ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವಸಿದ್ಧತೆಗಳು ಬೇಕು. ಸರಿಯಾದ ಯೋಜನೆ ರೂಪಿಸಬೇಕು ಮತ್ತು ಅದನ್ನು ಅಷ್ಟೇ ಜಾಗರೂಕತೆಯಿಂದ ಜಾರಿ ಮಾಡಬೇಕು. ನೀವೂ ಮನೆ ಖರೀದಿಸಲು ನಿರ್ಧಾರ ಕೈಗೊಳ್ಳುವ ಹಂತದಲ್ಲಿದ್ದರೆ, ಇಲ್ಲಿ ಒಂದಿಷ್ಟು ಸಲಹೆಗಳಿವೆ.

ವಿಸ್ತೃತ ಅಧ್ಯಯನ

ಗೃಹ ನಿರ್ಮಾಣ ಉದ್ದಿಮೆಯಲ್ಲಿ ಈಚೆಗೆ ಏನೇನಾಗುತ್ತಿದೆ ಮತ್ತು ನಿಯಮಾವಳಿಗಳು ಏನು ಹೇಳುತ್ತವೆ ಎಂಬುದನ್ನು ಅರಿತುಕೊಳ್ಳಿ. ನಗರದ ಯಾವ ಭಾಗದಲ್ಲಿ ಮನೆಗಳ ದರ ಹೇಗಿದೆ ಎಂಬ ಬಗ್ಗೆ ಆನ್‌ಲೈನ್‌ ಹಾಗೂ ದಿನಪತ್ರಿಕೆಗಳಲ್ಲಿ ಬರುವ ಸುದ್ದಿ, ಜಾಹೀರಾತುಗಳ ಮೂಲಕ ಮಾಹಿತಿ ಸಂಗ್ರಹಿಸಿ. ಇದಾದ ನಂತರ ನಿಮ್ಮ ಆಸಕ್ತಿಯ ಮನೆಯೊಂದನ್ನು ಆಯ್ಕೆ ಮಾಡಿ, ಅದರ ಮೌಲ್ಯವೇನು, ಮಾರುಕಟ್ಟೆಯಲ್ಲಿ ಅದಕ್ಕೆ ಇರುವ ಬೇಡಿಕೆ ಹೇಗಿದೆ ಮುಂತಾದ ವಿಚಾರಗಳನ್ನು ವಿಶ್ವಾಸಾರ್ಹ ಮೂಲಗಳಿಂದ ವಿವರಗಳನ್ನು ಸಂಗ್ರಹಿಸಿದ ನಂತರವೇ ಒಂದು ನಿರ್ಧಾರಕ್ಕೆ ಬರಬೇಕು.

ಬಜೆಟ್‌ ನಿರ್ಧಾರ

ಮನೆ ಖರೀದಿಯ ಬಜೆಟ್‌ ನಿರ್ಧಾರಕ್ಕೂ ಮೊದಲು ನಿಮ್ಮ ಖರೀದಿ ಸಾಮರ್ಥ್ಯ ಮತ್ತು ನಿಮಗೆ ಲಭ್ಯವಾಗುವ ಗೃಹ ಸಾಲದ ಬಗ್ಗೆ ಮೊದಲೇ ಮಾಹಿತಿ ಹೊಂದುವುದು ಅಗತ್ಯ. ಸಾಮಾನ್ಯವಾಗಿ ಜನರು ತಮ್ಮ ಒಟ್ಟು ವಾರ್ಷಿಕ ಆದಾಯದ ಮೂರರಿಂದ ಐದು ಪಟ್ಟು ಬೆಲೆಯೊಳಗೆ ಲಭ್ಯವಾಗುವ ಮನೆ ಖರೀದಿಗೆ ಮುಂದಾಗುತ್ತಾರೆ. ಮನೆಯ ಬೆಲೆಯ ಶೇ 20ರಷ್ಟನ್ನು ತಾವೇ ಕೊಟ್ಟು, ಉಳಿದ ಮೊತ್ತವನ್ನು ಸಾಲದ ಮೂಲಕ ಹೊಂದಿಸುತ್ತಾರೆ. ಈ ಶೇ 20ರಷ್ಟು (ಡೌನ್‌ ಪೇಮೆಂಟ್‌) ಹಣ ಹೊಂದಿಸಲು ಅವಧಿ ಠೇವಣಿ, ಅಥವಾ ಬೇರೆ ಎಲ್ಲಾದರೂ ಮಾಡಿದ್ದ ಹೂಡಿಕೆ, ಬೇರೆ ಸ್ವತ್ತುಗಳ ಮಾರಾಟ ಹೀಗೆ ಯಾವ ರೀತಿಯಲ್ಲಾದರೂ ಹಣ ಹೊಂದಿಸಬಹುದು.

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ, ಸಾಲ ಮರುಪಾವತಿಗೆ ಪ್ರತಿ ತಿಂಗಳು ಎಷ್ಟು ಹಣ ತೆಗೆದಿಡಲು ಸಾಧ್ಯವಿದೆ ಎಂಬುದನ್ನು ಲೆಕ್ಕ ಹಾಕಲೇಬೇಕು. ಸಾಲ ಮರುಪಾವತಿಯ ಜೊತೆಯಲ್ಲೇ ನಿವೃತ್ತಿ ನಂತರದ ಜೀವನಕ್ಕಾಗಿ ಹೂಡಿಕೆ ಮಾಡುವುದು, ಮಕ್ಕಳ ಶಿಕ್ಷಣ, ಜೀವ ವಿಮೆ, ವೈದ್ಯಕೀಯ ವಿಮೆ ಮುಂತಾದವುಗಳಿಗೂ ನೀವು ವೆಚ್ಚ ಮಾಡಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಇದೆಲ್ಲದರ ನಡುವೆ ಸಾಲದ ಕಂತು ಪಾವತಿಗೆ ತಡೆಯೂ ಆಗಬಾರದು.

ಗೃಹಸಾಲ ಸಂಸ್ಥೆಗಳು ನಿಮ್ಮ ಇಚ್ಛೆಯ ಮನೆ ಮತ್ತು ಆರ್ಥಿಕ ಸಾಮರ್ಥ್ಯ ನಿರ್ಧಾರವಾದರೆ ಯಾವ ಸಂಸ್ಥೆಯಿಂದ ಸಾಲ ಪಡೆಯಬಹುದು ಎನ್ನುವುದರ ನಿಟ್ಟಿನಲ್ಲಿ ಮಾಹಿತಿ ಕಲೆಹಾಕಲು ಮುಂದಾಗಬೇಕು.

ಬೇರೆ ಬೇರೆ ಗೃಹಸಾಲ ಸಂಸ್ಥೆಗಳು ಕೊಡುವ ಸಾಲದ ಪ್ರಮಾಣ, ವಿಧಿಸುವ ಬಡ್ಡಿದರ ಮತ್ತಿತರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ. ಇಲ್ಲಿ ಬಡ್ಡಿದರ, ಸೇವಾ ಶುಲ್ಕ, ಅವಧಿಗೂ ಮೊದಲೇ ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವ ಅವಕಾಶ... ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದನ್ನು ಮರೆಯಬಾರದು. ಆ ಸಂಸ್ಥೆಯ ಸೇವೆಯ ಗುಣಮಟ್ಟ ಹೇಗಿದೆ ಎಂದು ತಿಳಿಯುವುದು ಕೂಡ ಎಲ್ಲದಕ್ಕಿಂತ ಮುಖ್ಯವಾದ ಸಂಗತಿಯಾಗಿರುತ್ತದೆ.

ಪೂರ್ವ ಮಂಜೂರಾತಿ ಪತ್ರ

ಸಾಲ ಪಡೆದು ಮನೆ ಖರೀದಿರುವುದು ಖಚಿತ ಎಂದಾದರೆ ನಿಮಗೆ ಸಾಲ ನೀಡುವ ಸಂಸ್ಥೆಯಿಂದ ಒಂದು ಪೂರ್ವ ಮಂಜೂರಾತಿ ಪತ್ರ ಪಡೆಯುವುದು ಹಲವು ರೀತಿಯಿಂದ ಅನುಕೂಲಕರ. ‘ಈ ವ್ಯಕ್ತಿ ನಮ್ಮ ಸಂಸ್ಥೆಯಿಂದ ಸಾಲದ ರೂಪದಲ್ಲಿ ಇಂತಿಷ್ಟು ಹಣ ಪಡೆಯಲು ಅರ್ಹತೆ ಹೊಂದಿದ್ದಾರೆ’ ಎಂದು ಗೃಹಸಾಲ ಸಂಸ್ಥೆಗಳು ಪೂರ್ವ ಮಂಜೂರಾತಿ ಪತ್ರ ನೀಡುತ್ತವೆ.

ಈ ಪತ್ರಕ್ಕೆ ಆರು ತಿಂಗಳ ಮಾನ್ಯತೆ ಇರುತ್ತದೆ. ಇದರಿಂದ ಖರೀದಿದಾರರಿಗೆ ಇಷ್ಟು ಸಾಲ ಲಭ್ಯವಿದೆ ಎಂಬ ಸ್ಪಷ್ಟತೆ ಲಭಿಸುತ್ತದೆ. ಮನೆ ಮಾರಾಟ ಮಾಡುವವರಲ್ಲೂ, ‘ಈ ವ್ಯಕ್ತಿ ನಿಜವಾಗಿ ಮನೆ ಖರೀದಿಯಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಇವರಿಗೆ ಶೀಘ್ರದಲ್ಲೇ ಸಾಲವೂ ಮಂಜೂರಾಗುತ್ತದೆ’ ಎಂಬ ಭರವಸೆ ಮೂಡಿಸುತ್ತದೆ.

ನಿಮ್ಮ ಆದಾಯದ ಆಧಾರದಲ್ಲಿ ನೀವು ಪ್ರಧಾನಮಂತ್ರಿ ಆವಾಸ್‌ ಯೋಜನಾ (ಪಿ.ಎಂ.ಎ.ವೈ) ಅಡಿ ಗೃಹಸಾಲದ ಮೇಲೆ ಸಬ್ಸಿಡಿಯನ್ನೂ ಪಡೆಯಬಹುದು.

ಮರುಪಾವತಿ ಅವಧಿ ಎಷ್ಟು?

ಸಾಲ ಮರುಪಾವತಿ ಅವಧಿ ಹೆಚ್ಚಿಸಬೇಕೇ ಅಥವಾ ಮಾಸಿಕ ಕಂತನ್ನು ಹೆಚ್ಚಿಸಬೇಕೇ ಎಂಬ ವಿಚಾರದಲ್ಲಿ ಸಾಮಾನ್ಯವಾಗಿ ಎಲ್ಲರೂ ಗೊಂದಲಕ್ಕೆ ಒಳಗಾಗುತ್ತಾರೆ. ಹಣದುಬ್ಬರ ಮತ್ತು ಬಡ್ಡಿ ದರ ಏರಿಳಿಕೆಯ ಆಧಾರದಲ್ಲಿ ಹೇಳುವುದಾದರೆ ಮರುಪಾವತಿಯ ಅವಧಿಯನ್ನು ಹೆಚ್ಚಿಸುವುದು ಲಾಭದಾಯಕ. ಇದರಿಂದ ಪ್ರತಿ ತಿಂಗಳು ನಿಮ್ಮ ಮೇಲೆ ಆಗುವ ಹೊರೆಯನ್ನೂ ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಹೆಚ್ಚಿನ ಗೃಹಸಾಲ ಸಂಸ್ಥೆಗಳು ಇದೇ ಸಲಹೆ ನೀಡುತ್ತವೆ. ಮಾಸಿಕ ಕಂತಿನ ಪ್ರಮಾಣ ಕಡಿಮೆ ಇದ್ದರೆ ಯಾವುದೇ ಸಂದರ್ಭದಲ್ಲಿ ಆರ್ಥಿಕ ತುರ್ತು ಸ್ಥಿತಿ ಎದುರಾದರೆ ಜೀವನ ಏರುಪೇರಾಗದಂತೆ ನೋಡಿಕೊಳ್ಳಲು ತೊಂದರೆ ಆಗುವುದಿಲ್ಲ.

ಆದರೆ, ನಿವೃತ್ತಿಯ ನಂತರ ವಯೋಸಹಜವಾಗಿ ಆರೋಗ್ಯ ಸಂಬಂಧಿ ಕೆಲವು ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಆಗ ಹೆಚ್ಚಿನ ಹಣದ ಅಗತ್ಯ ಬರಬಹುದು. ಆದ್ದರಿಂದ ಸಾಲದ ಅವಧಿ ನಿಮ್ಮ ನಿವೃತ್ತಿಯ ವಯಸ್ಸು ಮೀರಿ ಹೋಗದಂತೆ ನೋಡಿಕೊಳ್ಳುವುದು ಉತ್ತಮ.

ಈಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಇದಕ್ಕೆ ಪ್ರೋತ್ಸಾಹ ಕೊಡುತ್ತದೆ. ಗೃಹಸಾಲ ಸಂಸ್ಥೆಗಳೂ ತಂತ್ರಜ್ಞಾನವನ್ನು ಬಳಸಿಕೊಂಡು ಸಾಲ ಮಂಜೂರಾತಿ, ದಾಖಲೆಗಳ ಪರಿಶೀಲನೆ ಮುಂತಾದವುಗಳನ್ನು ಶೀಘ್ರವಾಗಿ ಮಾಡುತ್ತಿವೆ. ಇದರಿಂದ ಮನೆ ಖರೀದಿಸುವವರಿಗೂ, ಮಾರಾಟ ಮಾಡುವವರಿಗೂ ಅನುಕೂಲವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ.

(ಎಚ್‌ಡಿಎಫ್‌ಎಲ್‌ನ ಜೆಎಂಡಿ ಮತ್ತು ಸಿಇಒ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry