7

ತಂತ್ರಜ್ಞಾನ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ

Published:
Updated:
ತಂತ್ರಜ್ಞಾನ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ

`ತಂತ್ರಜ್ಞಾನದ ಆವಿಷ್ಕಾರ ಮಾತ್ರ ನಮ್ಮ ಕೆಲಸ, ಅದನ್ನು ಜನ ಹೇಗೆ ಬಳಸುತ್ತಾರೆ ಎಂಬುದು ಬೇರೆಯದೇ ಕತೆ' ಎನ್ನುತ್ತಿದ್ದ ತಂತ್ರಜ್ಞಾನ ಕಂಪನಿಗಳು ತಮ್ಮ ಜವಾಬ್ದಾರಿಯ ಬಗ್ಗೆಯೂ ಯೋಚಿಸಲು ಮುಂದಾದ ವರ್ಷ 2017.

ಹೊಸ ತಂತ್ರಜ್ಞಾನವು ಜಗತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಂತ್ರಜ್ಞಾನ ಕಂಪನಿಗಳು ಈಗ ಯೋಚಿಸಲು ಆರಂಭಿಸಿವೆ. ಫೇಸ್‍‍ಬುಕ್‍‍, ಆ್ಯಪಲ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಜವಾಬ್ದಾರಿಯ ಬಗ್ಗೆ ಈಗ ಮೌನ ಮುರಿದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ತಪ್ಪು ಮಾಹಿತಿ, ದ್ವೇಷ ಬಿತ್ತುವ ವಿಷಯಗಳನ್ನು ಹಬ್ಬುವುದನ್ನು ನಿಯಂತ್ರಿಸುವ ಬಗ್ಗೆ ಫೇಸ್‍‍ಬುಕ್‍‍, ಯೂಟ್ಯೂಬ್‍‍ ಕಾರ್ಯಪ್ರವೃತ್ತವಾಗಿವೆ.

ಉದಾಹರಣೆಗೆ ಮಕ್ಕಳನ್ನು ಪೋಷಕರು ಹಿಂಸಿಸುವ ಸಾಕಷ್ಟು ವಿಡಿಯೊಗಳನ್ನು ಯೂಟ್ಯೂಬ್‍‍ ತೆಗೆದುಹಾಕಿದೆ. ಹಾಗೆಯೇ ತಪ್ಪು ಮಾಹಿತಿಯ ನ್ಯೂಸ್‍‍ ಫೀಡ್‍ಗೆ ಕಡಿವಾಣ ಹಾಕಲು ಫೇಸ್‍‍ಬುಕ್‍‍ ಮುಂದಾಗಿದೆ. ಬಹುತೇಕ  ಮಾಹಿತಿ ಶೋಧ ತಾಣಗಳು (ಸರ್ಚ್‌ ಎಂಜಿನ್‍‍) ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹಬ್ಬುವ ಜಾಲತಾಣಗಳನ್ನು ನಿರ್ಬಂಧಿಸಲು ಮುಂದಾಗಿವೆ.

`ಸಾಮಾಜಿಕ ಜಾಲತಾಣಗಳು ಜಗತ್ತಿನ ವಿವಿಧ ದೇಶಗಳ ಚುನಾವಣೆಗಳ ಮೇಲೂ ಈಗ ಪರಿಣಾಮ ಬೀರುತ್ತಿವೆ. ಹೀಗಾಗಿ ಚುನಾವಣೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ನಮ್ಮ ತಂತ್ರಜ್ಞರ ತಂಡ ಶ್ರಮಿಸುತ್ತಿದೆ' ಎಂದಿದ್ದಾರೆ ಫೇಸ್‍‍ಬುಕ್‍‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‍ ಜ್ಯೂಕರ್‍‍ಬರ್ಗ್.

`ಹೆಚ್ಚು ಲಾಭ ಗಳಿಸಬೇಕೆನ್ನುವುದಕ್ಕಿಂತ ನಮ್ಮ ಸಮಾಜವನ್ನು ರಕ್ಷಿಸಿಕೊಳ್ಳಬೇಕಾದ್ದು ಈಗ ಮುಖ್ಯ' ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ ಜ್ಯೂಕರ್‍‍ಬರ್ಗ್.

`ಸುಳ್ಳು ಸುದ್ದಿ, ತಪ್ಪು ಮಾಹಿತಿ ಮತ್ತು ದ್ವೇಷ ಹಬ್ಬುವ ವಿಷಯಗಳನ್ನು ನಿಯಂತ್ರಿಸಿ ಅರ್ಥಪೂರ್ಣ ಸಾಮಾಜಿಕ ಬೆಸುಗೆ ಸಾಧ್ಯವಾಗಿಸುವುದು ಫೇಸ್‍‍ಬುಕ್‍‍ನ ಜಬಾಬ್ದಾರಿ. ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಕೈಗಳು ಯಾವಾಗಲೂ ಇದ್ದೇ ಇರುತ್ತವೆ. ಅವನ್ನು ನಿಯಂತ್ರಿಸುವುದು ಸವಾಲು' ಎಂದು ಅವರು ಹೇಳುತ್ತಾರೆ.

ಇದಕ್ಕಾಗಿ ನಕಲಿ ಖಾತೆಗಳನ್ನು ರದ್ದುಗೊಳಿಸುವುದು, ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುವವರ ಖಾತೆಗಳನ್ನು ಅಮಾನತಿನಲ್ಲಿಡುವುದು ಸೇರಿದಂತೆ ಹಲವು ರೀತಿಯ ಕ್ರಮಗಳಿಗೆ ಫೇಸ್‍‍ಬುಕ್‍‍ ಮುಂದಾಗಿದೆ.

ಇದೇ ಬಗೆಯ ಆಶಯವನ್ನು ಹಲವು ಪ್ರಮುಖ ತಂತ್ರಜ್ಞಾನ ಕಂಪೆನಿಗಳೂ ವ್ಯಕ್ತಪಡಿಸಿವೆ. `ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಅಂತರ್ಜಾಲ ಚಟುವಟಿಕೆಗಳನ್ನು ನಿಯಂತ್ರಿಸುವುದು ಎಲ್ಲಾ ತಂತ್ರಜ್ಞಾನ ಕಂಪನಿಗಳ ನೈತಿಕ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲಾ ತಂತ್ರಜ್ಞಾನ ಕಂಪನಿಗಳೂ ಪೂರಕವಾಗಿ ಕೆಲಸ ಮಾಡಬೇಕು' ಎನ್ನುತ್ತಾರೆ ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್‍‍.

ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry