7

ತಂಬಾಕಿನ ಹೊಗೆಯಲ್ಲಿ ಕಾನೂನು

Published:
Updated:

ದೇಶದ ಅನೇಕ ಪಂಚತಾರ ಹೋಟೆಲ್ ಮತ್ತು ರೆಸಾರ್ಟ್‌ಗಳು ಸಿರಿವಂತ ಯುವಕರನ್ನು ಅಲ್ಲಿನ ಕ್ಲಬ್ ಪಾರ್ಟಿಗೆ ಆಹ್ವಾನಿಸಿ, ಪುಕ್ಕಟೆಯಾಗಿ ಸಿಗರೇಟ್ ಮತ್ತು ಸಿಗಾರ್ ಅನ್ನು ಹಂಚುವ ವ್ಯವಸ್ಥಿತ ಜಾಲವಿದೆ. ಅದರ ಜೊತೆಗೆ ಪುಕ್ಕಟೆಯಾಗಿ ಎನರ್ಜಿ ಡ್ರಿಂಗ್ಸ್, ಹೆಂಡ ಸಾರಾಯಿ ಹಂಚುವ ವ್ಯವಸ್ಥೆಯೂ ಇದೆ. ಅಷ್ಟೇ ಏಕೆ? ಇಲ್ಲಿನ ಅನೇಕ ಸೂಪರ್ ಮಾರ್ಕೆಟ್‌ಗಳಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ನ ವಿಸ್ಕಿ ತುಂಬಿರುವ ಸಿಹಿ ಚಾಕಲೇಟ್‌ಗಳು ಈಗಲೂ ಲಭ್ಯವಿದೆ.

ಸಿಹಿ ಚಾಕಲೇಟ್ ಕೇವಲ ಗಾಳವಷ್ಟೆ. ಯುವಪೀಳಿಗೆಯನ್ನು ಹೆಂಡಕ್ಕೆ ದಾಸರನ್ನಾಗಿಸುವ ಹುನ್ನಾರ ಅಲ್ಲಿನ ಒಳ ಲೆಕ್ಕಾಚಾರ. ಕಾರ್ಲ್ ಮಾರ್ಕ್ಸ್ ’ಧರ್ಮ ಜನರ ಅಫೀಮು’ ಎಂದರೆ, ಚೀನಾದಲ್ಲಿ ಒಂದು ಕಾಲದಲ್ಲಿ ಅಫೀಮೇ ಜನರ ಧರ್ಮವಾಗಿತ್ತು ಎನ್ನುವುದುಂಟು. ಅಫೀಮನ್ನು ಹಂಚಿ ಚೀನಾವನ್ನು ದಾಸರನ್ನಾಗಿ ಮಾಡಿ, ಅಲ್ಲಿಂದ ಅವರ ಬೆಲೆಬಾಳುವ ವಸ್ತುಗಳನ್ನು ಕೊಂಡರೂ ಅವರ ಮೇಲೆಯೇ ಸಾಲದ ಹೊರೆ ಹೊರಿಸಿದ ಇಂಗ್ಲಿಷರ ಐತಿಹಾಸಿಕ ದಬ್ಬಾಳಿಕೆ ತಿಳಿದಿರುವ ವಿಷಯ.

ಈ ಇಂಗ್ಲೆಂಡ್‌ನಂತಹ ’ನಾಗರಿಕ’ ಸಮಾಜ ಇಂತಹ ಕೃತ್ಯದಲ್ಲಿ ತೊಡಗಿದ್ದನ್ನು ಮರೆಯುವಂತಿಲ್ಲ. ಇಂದು ಇದೇ ಕೃತ್ಯವನ್ನು ತಂಬಾಕು ಕಂಪನಿಗಳು ಒಂದು ದೇಶಕ್ಕೂ ಮೀರಿ ಬೆಳೆದು, ಅಂತಹದ್ದೇ ಕೆಲಸಗಳಲ್ಲಿ ತೊಡಗಿರುತ್ತವೆ. ವಿಪರ್ಯಾಸವೆಂದರೆ, ಭಾರತ ಸರ್ಕಾರವೂ ಜನಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆಯನ್ನು ಇಂತಹ ಕಂಪನಿಗಳಲ್ಲಿ ಹೂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಸತತವಾಗಿ ತಂಬಾಕಿನ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ, ವಿಶ್ವದಾದ್ಯಂತ ತಂಬಾಕು ಕಂಪನಿಗೆ ಮೂಗುದಾರ ಹಾಕುವಲ್ಲಿ ಇನ್ನೂ ಯಶಸ್ಸು ಕಂಡಿಲ್ಲ ಎನ್ನುವುದು ವಾಸ್ತವ.

ತಂಬಾಕಿನಿಂದಲೇ ಭಾರತದಲ್ಲಿ ಉಂಟಾಗುವ ಆಸ್ಪತ್ರೆಯ ಖರ್ಚು ಸುಮಾರು ಒಂದು ಲಕ್ಷ ಕೋಟಿ ಎಂದು 2011ರಲ್ಲಿ ಅದೇ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಹೇಳಿತ್ತು. ತಂಬಾಕು ಕಂಪನಿಯ ಮಾರಾಟ ಮತ್ತು ಜಾಹಿರಾತಿನ ದಂಧೆಗೆ ಕಡಿವಾಣ ಹಾಕುವಲ್ಲಿ ಭಾರತ 2014ರಲ್ಲಿ ಕಾನೂನೊಂದನ್ನು ತಂದು ಸಿಗರೇಟ್ ಪ್ಯಾಕಿನ ಶೇ.85ರಷ್ಟು ಭಾಗವನ್ನು ಎಚ್ಚರಿಕೆಯ ಸೂಚನೆಗೆ ಮೀಸಲಿರಿಸಲಾಯಿತು. ರಾಜಸ್ಥಾನ ಹೈಕೋರ್ಟ್ ಇದರ ಪರವಾಗಿ 2015ರಲ್ಲಿ ತನ್ನ ಆದೇಶವನ್ನು ಕೂಡ ಹೊರಡಿಸಿತ್ತು. ಅದಾದ ನಂತರ ಇಡೀ ದೇಶದಲ್ಲಿ ಕ್ಯಾನ್ಸರ್ ರೋಗದ ಚಿಹ್ನೆಗಳನ್ನು ಎದ್ದುಕಾಣುವಂತೆ ಮುದ್ರಿಸಲಾಯಿತು. ಆದರೆ ದುರಾದೃಷ್ಟವಶಾತ್ ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಹಿಂದೆ ಇದಕ್ಕೆ ತಡೆಯಾಜ್ಞೆ ತಂದಿತು. ಸದ್ಯ ದೇಶದ ಸರ್ವೋಚ್ಚ ನ್ಯಾಯಾಲಯ ಇದರ ವಿರುದ್ಧ ಅಹವಾಲನ್ನು ಸ್ವೀಕರಿಸಿದೆ.

ಆಸ್ಟ್ರೇಲಿಯದ ಸಿಗರೇಟ್ ಬ್ರ್ಯಾಂಡ್ ಇಮೇಜ್ ಬರದಂತೆ ನೋಡಿಕೊಳ್ಳಲು ಬ್ರ್ಯಾಂಡ್ ಮುದ್ರಿತವಲ್ಲದ ಖಾಲಿ ಪ್ಯಾಕ್‌ನಲ್ಲಿ ಮಾತ್ರ ಸಿಗರೇಟ್ ಅನ್ನು ತುಂಬಿ ಮಾರಬೇಕು. ಇದರಿಂದ ಅಲ್ಲಿ ತಂಬಾಕು ಸೇವನೆಯ ಮೇಲೆ ಸಾಕಷ್ಟು ಹಿಡಿತ ಕಂಡುಬಂದಿದೆ ಎನ್ನಲಾಗುತ್ತಿದೆ. ಮಾರ್ಲಬಾರೋ ಸಿಗರೇಟ್‌ಗೆ ಜಾಹೀರಾತು ಕೊಟ್ಟ ಸಿನಿಮಾನಟ ಕ್ಯಾನ್ಸರ್‌ನಿಂದ ಸತ್ತದ್ದನ್ನು ಮರೆಯುವಂತಿಲ್ಲ! ನಮ್ಮ ದೇಶದಲ್ಲಿ ಈ ಕಾನೂನು ಬರುವ ಮುನ್ನ ಸಂಸದೀಯರ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿ ಕೂಡ ತಂಬಾಕು ಕಂಪನಿಯ ಪರವಾಗಿ ವಾಲಿದ್ದನ್ನು ನೆನಪಿಸಿಕೊಳ್ಳಬಹುದು. ಕರ್ನಾಟಕದ ಕೆಲವು ಸಂಸದೀಯರು ನಾವು ರೈತಪರ ಎಂದು ತಂಬಾಕು ಬೆಳೆಗಾರರ ಹೆಸರಿನಲ್ಲಿ ಸಿಗರೇಟ್ ಕಂಪನಿಗಳ ಪರವಾಗಿ ಪ್ರಧಾನ ಮಂತ್ರಿಗಳಿಗೆ ನಿಯೋಗವೊಂದನ್ನು ಕೊಂಡೊಯ್ದಿದ್ದರು. ಇನ್ನೊಬ್ಬ ಕರ್ನಾಟಕದ ಲೋಕಸಭಾ ಸದಸ್ಯರು, ’ತಂಬಾಕಿಗೂ ಕ್ಯಾನ್ಸರ್‌ಗೂ ಸಂಬಂಧಗಳ ಬಗ್ಗೆ ಇನ್ನೂ ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ’ ಎಂದು ಸೂಚಿಸಿದ್ದರು.

ಈ ರೀತಿ ತಂಬಾಕು ಕಂಪನಿಗಳು ತಮ್ಮ ಹಣಬಲದಿಂದ ಲಾಬಿ ಮಾಡುವುದು ಹೊಸತೇನಲ್ಲ. ಅಮೆರಿಕದಲ್ಲಿ ಅನೇಕ ವರ್ಷ ಲಕ್ಷಾಂತರ ಪುಟಗಳಷ್ಟು ದುಡ್ಡು ಕೊಟ್ಟು ವೈಜ್ಞಾನಿಕ ಸಂಶೋಧನೆ ನಡೆಸಿ, ತಮ್ಮ ಪರ ವರದಿ ಪಡೆದುಕೊಂಡು, ಅಲ್ಲಿನ ಆರೋಗ್ಯ ಇಲಾಖೆಗೆ ಕೊಡಲಾಗುತ್ತಿತ್ತು. ಇಂದಿಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಪ್ರಭಾವವನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಲೇ ಬಂದಿವೆ. ತಂಬಾಕನ್ನು ನಿಯಂತ್ರಿಸದೆ ಕ್ಯಾನ್ಸರ್‌ನ ಹೊಸ ಔಷಧಗಳ ಹುಡುಕಾಟಗಳಲ್ಲಿ ಮತ್ತು ಆಸ್ಪತ್ರೆಗಳನ್ನು ಕಟ್ಟುವುದರಿಂದ ಪ್ರಯೋಜನವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry