3

ಬದುಕಿಗೇನೂ ಕೊರತೆಯಿಲ್ಲ; ನಟನೆಯನ್ನು ಬಿಟ್ಟಿಲ್ಲ

Published:
Updated:
ಬದುಕಿಗೇನೂ ಕೊರತೆಯಿಲ್ಲ; ನಟನೆಯನ್ನು ಬಿಟ್ಟಿಲ್ಲ

ಇತ್ತೀಚಿನ ದಿನಗಳಲ್ಲಿ ಜನರೇಷನ್‌ ಗ್ಯಾಪ್‌ ಹೆಚ್ಚಾಗಿದೆ. ನಮ್ಮ ಸಿನಿಮಾರಂಗ, ಕಿರುತೆರೆ ವೇಗವಾಗಿ ಬೆಳೆಯುತ್ತಿವೆ. ಸಮಯ ಮತ್ತು ಹಣ ಈ ಎರಡಕ್ಕೇ ಹೆಚ್ಚಿನ ಪ್ರಾಮುಖ್ಯತೆ ಈಗ. ಆ ಸಮಯಕ್ಕೆ ಆ ಕೆಲಸ ಮುಗಿದುಬಿಡಬೇಕು. ನಾವು ಹೀಗೆ ಮಾಡು ಅಂತ ಹೇಳ್ತೀವಿ ಹಾಗೆಯೇ ಮಾಡಬೇಕು. ಇಷ್ಟು ಹಣಕ್ಕೇ ಮಾಡಬೇಕು ಎಂಬೆಲ್ಲ ಲೆಕ್ಕಾಚಾರಗಳು ಶುರುವಾಗಿವೆ. ಬಹಳ ಬಹಳ ವೇಗದಲ್ಲಿ ಚಿತ್ರರಂಗ ಎಲ್ಲಿಯೋ ಹೋಗುತ್ತಿದೆ ಏನೋ ಆಗುತ್ತಿದೆ. ಆದರೆ ಬೆಳೆಯುತ್ತಿದೆ. ಅಭಿವೃದ್ಧಿ ಇದ್ದೇ ಇದೆ. ಹೀಗಿದ್ದಾಗ ನಾವು ಹಿಂದಿನ ಜನರೇಷನ್‌ ನಟರು. ಬಹುಶಃ ಇದೇ ನಮಗೆ ಮೈನಸ್‌ ಆಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಹಾಗೆಂದು ನಮಗೆ ಅವಕಾಶವೇ ಸಿಕ್ತಿಲ್ಲ ಅಂತಲ್ಲ. ಆದರೆ ಈಗಿನ ಎಷ್ಟೋ ಸಿನಿಮಾಗಳು ನೋಡಿದಾಗ ಇಬ್ಬರು ಮೂರು ಜನ ನಾಯಕರನ್ನು ಬಿಟ್ಟರೆ ಹಳೆ ಮುಖಗಳನ್ನು ಎಷ್ಟು ಕಾಣುತ್ತೇವೆ? ಈ ಹೊಸ ಸಿನಿಮಾಗಳು ಬರ್ತಿವೆಯಲ್ಲ, ‘ಎಕ್ಸ್‌ ವಾಯ್‌ ಝೆಡ್‌’ ಅಂತಿಟ್ಕೊಳ್ಳೋಣ (ಯಾವ್ದಂತಾನೂ ನಾನು ನೋಡಿಲ್ಲ) ಅದರಲ್ಲಿ ಹಳೆ ಮುಖಗಳನ್ನು ನೋಡುವುದೇ ಅಪರೂಪ. ಹಾಗೊಮ್ಮೆ ನೋಡಿದರೂ ಅದು ಒಂದು ದೃಶ್ಯ ಎರಡು ದೃಶ್ಯಗಳಿಗೆ ಸೀಮಿತವಾಗಿರುತ್ತದೆ.

ಹಿಂದಿನ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಪೋಷಿಸುತ್ತಿದ್ದ ರೀತಿ ಇದೆಯಲ್ಲ, (ಚಾಮಯ್ಯ ಮೇಸ್ಟ್ರೇ ಆಗಿರಬೇಕು ಅಂತ ನಾನು ಹೇಳುತ್ತಿಲ್ಲ) ಆ ಪೋಷಣೆಯೇ ಕಡಿಮೆಯಾಗುತ್ತಿದೆ. ನಾಯಕ, ನಾಯಕಿ, ಅದೇನೋ ಇಂದಿನ ದೈನಂದಿನ ಬದುಕು, ಕಾಮಿಡಿ ಅಷ್ಟೇ ಇರುತ್ತದೆ. ಇಂದಿನ ಜನರೇಷನ್‌ಗೆ ಅದೇ ಬೇಕಿರಬಹುದು. ಅದು ತಪ್ಪು ಎಂದು ನಾನು ಹೇಳ್ತಿಲ್ಲ. ಆ ವಸ್ತುಗಳನ್ನೇ ಜನರಿಗೆ ಮನಮುಟ್ಟುವ ಹಾಗೆ ಇಂದಿನ ಸಿನಿಮಾಗಳು ತೋರಿಸುತ್ತಿರಬಹುದು. ಅದನ್ನೂ ಒಪ್ಪುತ್ತೇನೆ. ಆದರೆ ಎಲ್ಲೋ ಒಂದು ಕಡೆ ನಮ್ಮಂಥ ಹಿರಿಯ ನಟರಿಗೆ ಅವಕಾಶ ಸಿಗದ ಹಾಗಾಗಿದೆ. ಚಿತ್ರರಂಗದ ಗಾಡಿ ಮುಂದಕ್ಕೆ ಹೊರಟೋಯ್ತು. ನಾವು ಹಿಂದೆಯೇ ಉಳಿದುಕೊಂಡೆವು.

ಇಲ್ಲೇ ನಿಂತ್ಕೊಳ್ಳಕ್ಕಾಗಲ್ಲ, ಮುಂದಕ್ಕೆ ಹೋಗೋಕೂ ಆಗಲ್ಲ. ಏನ್ಮಾಡೋದು? ನಮ್ ಜೀವನ ಹೇಗೆ ನಡೆಯುವುದು? ಅವಕಾಶಕ್ಕಾಗಿ ಯಾರದೋ ಮನೆ ಬಾಗಿಲಿಗೆ ಹೋಗಿ ನಿಂತುಕೊಳ್ಳುವುದು ಅವಮಾನ. ನನಗೂ ಸ್ವಾಭಿಮಾನ ಇದೆ. ಅಂಗಲಾಚುವುದು ನನ್ನಿಂದ ಸಾಧ್ಯವಿಲ್ಲ.

ನಮ್ಮ ಪ್ರತಿಷ್ಠೆಯನ್ನು ಉಳಿಸಿಕೊಂಡು ಬದುಕುವ ಸರಿಯಾದ ಮಾರ್ಗ ಯಾವುದು? ಯಾವ ಕೆಲಸ ಮಾಡುವುದು?

ನಮ್ಮ ಸಮಸ್ಯೆ ಹೇಗಿರುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಹೇಳ್ತೀನಿ: ನಮ್ಮ ಚಿರಪರಿಚಿತರ ಕಂಪೆನಿಯೊಂದರಲ್ಲಿ ಒಬ್ಬರು ಒಂದು ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇದ್ದಕ್ಕಿದ್ದ ಹಾಗೆ ಕೆಲಸ ಬಿಟ್ಟುಬಿಟ್ಟರಂತೆ. ಆ ಸ್ನೇಹಿತರು ‘ಹೀಗೊಬ್ಬರು ಕೆಲಸ ಬಿಟ್ಟು ಬಿಟ್ಟರು ಸಾರ್‌’ ಎಂದು ನನ್ನಲ್ಲಿ ಹೇಳಿಕೊಂಡರು. ನಾನು ತಕ್ಷಣ ಹೇಳಿದೆ ‘ನಂಗೂ ಯಾವ್ದಾದ್ರೂ ಒಂದು ಕೆಲಸ ಕೊಡಪ್ಪಾ ನೀನು. ನೀನು ಏನು ಸಂಬಳ ಕೊಡ್ತಿಯೋ ಕೊಡು’ ಎಂದೆ. ಅವನು ‘ನಿಮಗೆ ಏನು ಕೆಲಸ ಕೊಡಲಿ ಸರ್‌?’ ಎಂದು ಕೇಳ್ತಾನೆ. ನಾನು ‘ಅಲ್ಲ ಕಣೋ ಆಫೀಸ್‌ ನಿರ್ವಹಣೆ, ಏನಾದ್ರೂ ಬರವಣಿಗೆ ಇರುವಂಥದ್ದಿದ್ರೆ ಕೊಡು’ ಅಂದೆ. ಅದಕ್ಕವನು ‘ಇಲ್ಲ ಸರ್‌, ನೀವು ತುಂಬ ದೊಡ್ಡವರು. ನಿಮಗೆ ಕೆಲಸ ಕೊಡುವುದು ನನಗೆ ಸಾಧ್ಯವಿಲ್ಲ’ ಎಂದ. ನಿಮಗೆ ದೈಹಿಕ ಶ್ರಮದ ಕೆಲಸ ಹೇಳಕ್ಕಾಗಲ್ಲ, ಸಣ್ಣಪುಟ್ಟ ಕೆಲಸ ಮಾಡುವುದು ಕಷ್ಟ. ಆದ್ದರಿಂದ ನೀವು ನಮಗೆ ಹೊರೆಯಾಗ್ತೀರಾ ಎಂದು ಪರೋಕ್ಷವಾಗಿ ಹೇಳಿದ. ‘ನಿಮಗೆ ಕೆಲಸ ಕೊಟ್ಟರೆ ನಮಗೆ ಅವಮಾನ ಆಗತ್ತೆ’ ಅಂದ. ‘ನಾನು ಕೆಲಸ ಮಾಡುವುದು ನಿನಗೆ ಅವಮಾನವಾ?’ ಎಂದು ಕೇಳಿದರೆ ‘ಅಲ್ಲಲ್ಲ, ನಿಮ್ಮಂಥ ಗಣ್ಯರನ್ನು ಕೆಲಸಕ್ಕಿಟ್ಟುಕೊಳ್ಳುವುದು ನಮಗೆ ಅವಮಾನಕರ’ ಎಂದ.

ಸಿನಿಮಾದವರು ಬೇರೆ ಏನೂ ಕೆಲಸ ಮಾಡಬಾರದು ಎಂಬ ದೃಷ್ಟಿಕೋನ ಜನರಲ್ಲಿ ಇರುತ್ತದೆ. ಸಿನಿಮಾದವರಿಗೂ ಅದು ಇರುತ್ತದೆ. ಆದರೆ ನನಗೆ ಆ ಥರ ಏನೂ ಅನಿಸಲಿಲ್ಲಪ್ಪಾ. ಯಾರಾದ್ರೂ ನೀವು ಏನು ಮಾಡ್ಕೊಂಡಿದ್ದೀರಾ ಎಂದು ಕೇಳಿದರೆ ‘ನಟ’ ಎಂದು ಹೇಳ್ತೀನಿ. ಅದರ ಹೊರತು ಯಾವ ವಿವರಗಳನ್ನೂ ನಾನು ನೀಡುವುದಕ್ಕೆ ಹೋಗುವುದಿಲ್ಲ. ಜನ ನನ್ನನ್ನು ಗುರ್ತಿಸಿಲ್ಲ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವ್ದೋ ಧಾರಾವಾಹಿ ನೋಡ್ತಾರೆ, ಇನ್ಯಾವುದೋ ಸಿನಿಮಾ ನೋಡ್ತಾರೆ. ಅದರಲ್ಲಿ ನನ್ನ ನಟನೆ ನೋಡಿ ಅವರಿಗೆ ಇಷ್ಟವಾದರೆ ಸರಿ. ಆಗದಿದ್ದರೆ ನನಗೆ ಯಾವ ಬೇಜಾರೂ ಇಲ್ಲ. ನಟನೆ ನನ್ನ ವೃತ್ತಿ. ಅದೇ ಮನೋಭಾವದಲ್ಲಿ ಬೆಳೆದುಕೊಂಡು ಬಂದವನು.

ಆದರೆ ಈಗ ಅವಕಾಶಗಳೇ ಸಿಗುತ್ತಿಲ್ಲ. ಕಳೆದ ಏಳೆಂಟು ತಿಂಗಳುಗಳಿಂದ ಮನೆಯಲ್ಲಿಯೇ ಅವಕಾಶ ಇಲ್ಲದೇ ಕೂತಿದ್ದೀನಲ್ಲಾ ಎಂದು ಯೋಚಿಸುತ್ತಿದ್ದಾಗ ಈ ಊಬರ್‌ ಕಂಪೆನಿಯ ಕೆಲಸ ನನಗೆ ಇಷ್ಟವಾಯ್ತು. ಪ್ರಾಕ್ಟಿಕಲ್‌ ಆಗಿ ಯೋಚಿಸಿ, ಊಬರ್‌ಗೆ ಸೇರಿಕೊಳ್ಳಲು ಕಾನೂನುರೀತ್ಯಾ ಏನೇನು ಮಾಡಬೇಕು ಮಾಡಿಕೊಂಡು, ಪೊಲೀಸ್‌ ದೃಢೀಕರಣ ಕೂಡ ಪಡೆದುಕೊಂಡು ಎಲ್ಲ ದಾಖಲೆಗಳನ್ನು ಸರಿಮಾಡಿಕೊಂಡು ಊಬರ್‌ಗೆ ಲಗತ್ತಿಸಿದ್ದಾಗಿತ್ತು. ವೈಟ್‌ಬೋರ್ಡ್‌ ಕಾರ್ಡ್‌ ಅನ್ನು ಯೆಲ್ಲೋ ಬೋರ್ಡ್‌ಗೆ ಬದಲಾಯಿಸಿ ಇನ್ಶೂರೆನ್ಸ್ ಅಂತೆಲ್ಲ ನಲ್ವತ್ತೈವತ್ತು ಸಾವಿರ ಕರ್ಚು ಮಾಡಿದ್ದಾಯ್ತು. ಕ್ಯಾಬ್‌ ಡ್ರೈವರ್‌ ಬ್ಯಾಡ್ಜ್‌ ಕೂಡ ಮಾಡಿಸಿಕೊಂಡಿದ್ದೆ. ಯಾವಾಗ ಶುರುಮಾಡುವುದು ಎಂದು ಕಾಯುತ್ತಿದ್ದೆ. 

ಒಂದು ದಿನ ಒಮ್ಮಿಂದೊಮ್ಮೆಲೇ ಜನವರಿ 19ರಂದು ನನ್ನ ತಂದೆಯ ಶ್ರಾದ್ಧ ಮಾಡಬೇಕು ಎನ್ನುವುದು ನೆನಪಾಯ್ತು. ಇದು ಸಾಲ ಸೋಲ ಮಾಡಿ ಮಾಡುವ ಕಾರ್ಯ ಅಲ್ಲ, ಚಿನ್ನಗಿನ್ನ ಮಾರಿಯೂ ಮಾಡುವಂಥದ್ದಲ್ಲ. ನಾನೇ ದುಡಿದ ಹಣದಲ್ಲಿ ಮಾಡಿದರೇನೇ ಫಲ ಸಿಗುವುದು ಎಂದು ಹಿರಿಯರು ಹೇಳ್ತಾರೆ. ಏನು ದುಡಿಯಲಿ ನನ್ನ ಪಿಂಡ? ನನ್ನ ಬಳಿ ಏನು ಮಾಡಕ್ಕಾಗತ್ತೆ ಎಂದು ಯೋಚಿಸುತ್ತಿದ್ದೆ. ಆಗ ಮತ್ತೆ ಊಬರ್‌ ನೆನಪಾಯ್ತು. ಊಬರ್‌ ಕಾರ್‌ ಡ್ರೈವಿಂಗ್‌ ಶುರು ಮಾಡಿಕೊಳ್ಳೋಣ. ತಂದೆಯ ಶ್ರಾದ್ಧವೇನೋ ಲಕ್ಷಾಂತರ ವೆಚ್ಚದ ಕಾರ್ಯ ಅಲ್ಲ. ಐದೋ ಹತ್ತೋ ಸಾವಿರ ಕರ್ಚಾಗಬಹುದು. ಆದರೆ ಅದು ಸ್ವಂತ ದುಡಿಮೆಯಿಂದ ಬರಲಿ. ಅದರರ್ಥ ಪಾಪ ಅವರಿಗೆ ಪಿತೃಕಾರ್ಯ ಮಾಡೋಕೂ ದುಡ್ಡಿರಲಿಲ್ಲ ಎಂದಲ್ಲ. ಸ್ವಂತ ಸಂಪಾದನೆಯಿಂದಲೇ ಪಿತೃಕಾರ್ಯ ಮಾಡಿದರೆ ಸಫಲತೆ ಹೆಚ್ಚು ಅನ್ನುವ ಉದ್ದೇಶದಿಂದ  ಊಬರ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಆರಂಭಿಸಿದೆ. ಇದಾಗಿದ್ದು ಎರಡು ತಿಂಗಳ ಹಿಂದೆ.

ನಾನು ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿರುವುದನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಎಷ್ಟು ದಿನ ನಮ್ಮ ಗುರ್ತನ್ನು ಮುಚ್ಚಿಕೊಳ್ಳಲಿಕ್ಕಾಗುತ್ತದೆ? ಎಷ್ಟೋ ಜನ ನನ್ನ ಗುರ್ತಿಸಿದರು. ಕೆಲವರು ಕಾಲಿಗೆ ನಮಸ್ಕಾರ ಮಾಡಿದರು. ಇನ್ನು ಕೆಲವರು ಕಾರೊಳಗೇ ನನ್ನ ಪರಿಸ್ಥಿತಿ ಕಂಡು ಅತ್ತರು. ಕೆಲವರು ನನ್ನ ಅಪ್ಪನ ಕೊಂಡಾಡಿ ಹೆಚ್ಚಿಗೆ ಹಣ ಕೊಟ್ಟರು. ಕೆಲವರು ತಾವೇ ಡ್ರೈವ್‌ ಮಾಡ್ತೀವಿ. ನೀವು ರಿಲ್ಯಾಕ್ಸ್‌ ಮಾಡ್ಕೊಳ್ಳಿ. ನೀವು ದೊಡ್ಡ ವ್ಯಕ್ತಿ, ದೊಡ್ಡ ಮನುಷ್ಯನ ಮಗ ನೀವು, ನಿಮ್ಮಿಂದ ನಾವು ಸೇವೆ ತಗೋಬಾರ್ದು ಎಂದು ಅವರೇ ಡ್ರೈವ್‌ ಮಾಡಿದರು.

ಉತ್ತರ ಭಾರತದವರು ‘ಯೂ ಡೋಂಟ್‌ ಲುಕ್‌ ಲೈಕ್‌ ಅ ಊಬರ್‌ ಡ್ರೈವರ್‌. ಹೌ ಕ್ಯಾನ್‌ ಯು ಬಿಕೆಮ್‌ ಅ ಊಬರ್‌ ಡ್ರೈವರ್‌?’ (ನೀವು ಊಬರ್‌ ಡ್ರೈವರ್‌ ಥರ ಕಾಣುವುದಿಲ್ಲ. ನೀವು ಹೇಗೆ ಡ್ರೈವರ್‌ ಆದಿರಿ?) ಎಂದೆಲ್ಲ  ಪ್ರಶ್ನಿಸಿದರು. ಕೆಲವರು ನನ್ನ ತಂದೆಯ ಚಿತ್ರ ನೋಡಿ ‘ನಾನು ಈ ಮನುಷ್ಯನನ್ನು ಎಲ್ಲಿಯೋ ನೋಡಿದ್ದೀನಿ. ಯಾರವರು?’ ಎಂದು ಪ್ರಶ್ನಿಸಿದರು. ಹೀಗೆ ನನ್ನ ಗುರ್ತು ಹಾಗೆಯೇ ಹೊರಬೀಳಲು ಶುರುವಾಯ್ತು. ಆದರೆ ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನನ್ನ ಕೆಲಸ ಮಾಡುತ್ತಲೇ ಇದ್ದೆ.

ಆದರೆ ಅದು ಹೇಗೋ ಮಾಧ್ಯಮದವರಿಗೆ ವಿಷಯ ಗೊತ್ತಾಯ್ತು. ಅವರು ವಿವಾದ ಸೃಷ್ಟಿಸುವಂಥ ಸುದ್ದಿ ಮಾಡಿದರು. ‘ಶಂಕರ್‌ ಅಶ್ವಥ್‌ ನಟನೆ ಬಿಟ್ಟು ಬಿಟ್ಟಿದ್ದಾರಂತೆ. ಊಬರ್‌ ಕ್ಯಾಬ್‌ ಓಡಿಸುತ್ತಿದ್ದಾರಂತೆ’ ಎಂದು ಬರೆದರು. ನಾನೆಲ್ಲಿ ಹೇಳಿದ್ದೀನಿ ಆ್ಯಕ್ಟಿಂಗ್‌ ಬಿಟ್ಟೆ ಎಂದು? ಇವ‍ರ‍್ಯಾಕೆ ಈ ರೀತಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ? ಏನೋ ಮಾಡಲು ಹೋಗಿ ಏನೋ ಆಯ್ತು ಎನ್ನುವ ಹಾಗೆ ಆಯ್ತು ನನ್ನ ಪರಿಸ್ಥಿತಿ. ನನ್ನ ಹೆಂಡ್ತಿ ‘ಏನೋ ಬದುಕಕ್ಕೆ ಒಂದು ಮಾರ್ಗ ಹುಡುಕಿಕೊಂಡರೆ ಅದಕ್ಕೂ ಕಲ್ಲು ಹಾಕ್ತಾರಲ್ಲಪ್ಪಾ ಜನ’ ಎಂದು ನೋಂದುಕೊಂಡಳು. ನಟನೆಯನ್ನು ಬಿಟ್ಟು ಕ್ಯಾಬ್‌ ಓಡಿಸ್ತಿದ್ದಾರೆ ಎಂದು ಸುದ್ದಿಹಬ್ಬಿಸಿದರೆ ನನಗೆ ಯಾರೂ ಅವಕಾಶ ಕೊಡುವುದಿಲ್ಲ. ನಾನು ಸಿಗುವ ಅವಕಾಶಗಳನ್ನೂ ಕಳೆದುಕೊಳ್ಳುತ್ತೇನೆ.

ಬದುಕಿಗೇನೂ ಕೊರತೆಯಿಲ್ಲ: ನಾನು ಕ್ಯಾಬ್‌ ಓಡಿಸ್ತಿದೀನಿ ಅಂದಾಕ್ಷಣ ನನ್ನ ಜೀವನವೇ ನಡೆಯದಂಥ ಪರಿಸ್ಥಿತಿ ಇದೆ ಅಂತಲ್ಲ. ನನ್ನ ಬಳಿ ಎರಡು ಕಾರುಗಳಿವೆ. ಒಂದನ್ನುಊಬರ್‌ಗೆ ಅಟ್ಯಾಚ್‌ ಮಾಡಿದ್ದೀನಿ. ಇನ್ನೊಂದನ್ನು ಸ್ವಂತ ತಿರುಗಾಟಕ್ಕೆ ಇಟ್ಟುಕೊಂಡಿದ್ದೀನಿ. ಹೊಟ್ಟೆಗಿಲ್ಲ ಅಂತಲ್ಲ, ಆದರೆ ನಾನು ಹೀಗೆ ಸ್ವಂತ ದುಡಿದು ಪಿತೃ ಕಾರ್ಯ ಮಾಡಿದರೆ ನನ್ನ ತಂದೆಯ ಆತ್ಮ ‘ನೋಡು ನನ್ನ ಮಗ ಕಷ್ಟಪಟ್ಟು ದುಡಿದು ತಂದು ನನ್ನ ಕಾರ್ಯ ಮಾಡಿದ್ದಾನೆ. ಅವನಿಗೆ ಶ್ರೇಯಸ್ಸು ಸಿಗಲಿ’ ಎಂಬ ಆಶೀರ್ವಾದ ಸಿಗತ್ತೆ ಎನ್ನುವುದು ನನ್ನ ನಂಬಿಕೆ.

ಐದತ್ತು ಸಾವಿರ ಏನೂ ದೊಡ್ಡ ಪ್ರಶ್ನೆ ಅಲ್ಲ, ನನ್ನ ಕೈಯಲ್ಲಿ ಎರಡು ಮೂರು ಚಿನ್ನದ ರಿಂಗ್‌ ಹಾಕಿಕೊಂಡಿದೀನಿ. ನನ್ನ ಹೆಂಡತಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಮನೆ ನಡೀತಾ ಇದೆ. ನಾವು ಚೆನ್ನಾಗಿಯೇ ಇದ್ದೀವಿ. ಆದರೆ ಒಮ್ಮಿಂದೊಮ್ಮೆಲೇ ಒಂದೆರಡು ಲಕ್ಷ ವೈದ್ಯಕೀಯಕ್ಕೆ ಕರ್ಚು ಮಾಡಬೇಕು ಎಂದರೆ ಆಗ ಯೋಚಿಸಬೇಕಾಗುತ್ತದೆ. ಆ ರೀತಿ ಪರಿಸ್ಥಿತಿ ಇದೆ. ಐದತ್ತು ಸಾವಿರಕ್ಕೆಲ್ಲ ಏನೂ ತೊಂದರೆ ಆಗಲ್ಲ. ನಾಳೆ ದೊಡ್ಡ ಕರ್ಚುಗಳು ಬಂದಾಗ ಹೇಗೆ ನಿಭಾಯಿಸುವುದು? ಅದಕ್ಕೇನಾದರೂ ಕೂಡಿ ಹಾಕಬೇಕಲ್ಲವೇ? ಅಲ್ಲದೇ ಇಂದು ಬ್ಯಾಂಕ್‌ ಬಡ್ಡಿದರ ಆರು ಪರ್ಸೆಂಟಿಗೆ ಬಂದಿದೆ. ಏನು ಸಿಗುತ್ತದೆ? ಹತ್ತು ಲಕ್ಷ ಹಣ ಇಟ್ಟರೆ ಆರು ಸಾವಿರ ಸಿಗುತ್ತದಷ್ಟೆ. ಹೇಗೆ ಬದುಕೋಣ ನಾವು? ವಯಸ್ಸಾದ ಕಾಲದಲ್ಲಿ ನಮಗೆ ಆಪದ್ಧನ ಎಂದು ಏನು ಸಿಗುತ್ತದೆ?

ಈವತ್ತು ಮೈಸೂರಿನ ಸರಸ್ವತಿಪುರದಲ್ಲಿ ಸ್ವಂತ ಮನೆ ಇದೆ. ಲೆಕ್ಕ ಹಾಕಿದರೆ ಮನೆ ಒಂದು ಕೋಟಿ ಬೆಲೆಬಾಳುತ್ತದೆ. ಆದರೆ ಮನೆ ಮಾರಿ ನಾವೇನೂ ಬೀದಿಯಲ್ಲಿ ಮಲಗೋದಾ? ಅಥವಾ ಒಂದು ಕೋಟಿಗೆ ಮನೆ ಮಾರಿ, ಇಪ್ಪೈತ್ತೈದು ಲಕ್ಷದ ಸಣ್ಣ ಮನೆ ತಗೊಂಡು ಬದುಕಿ ಎನ್ನಬಹುದು. ಆದರೆ ಅಪ್ಪ ಕೊಟ್ಟ ಮನೆ ಅದು. ಅಪ್ಪ ನನಗೆ ಮನೆ ಕೊಟ್ಟಿದ್ದು ಮಾರುವುದಕ್ಕಾ? ಬಾಳಕ್ಕಲ್ಲವಾ?

ಈ ಎಲ್ಲವನ್ನೂ ಯೋಚಿಸಿ ಬೇರೆಯವರ ಬಳಿ ಏನೂ ಬೇಡದೇ ನಾನು ಬದುಕಬೇಕು ಎಂಬ ಉದ್ದೇಶದಿಂದ ಕ್ಯಾಬ್‌ ಡ್ರೈವರ್‌ ಆಗಿ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದೆ.

ಧನ ಸಹಾಯ ಬೇಡ, ಅವಕಾಶ ಕೊಡಿ: ಈಗಾಗಲೇ ಹಲವರು ನಾವು ಸಹಾಯ ಮಾಡುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಸಹಾಯ ಅಂದ್ರೆ ಕೆಲಸ ಕೊಡಿ. ಅವಕಾಶ ಕೊಟ್ಟು ಸಹಾಯ ಮಾಡ್ತೀರಿ ಎಂದರೆ ತೆಗೆದುಕೊಳ್ತೀನಿ. ಪುಕ್ಸಟ್ಟೆ ಹತ್ತು ಸಾವಿರ, ಐವತ್ತು ಸಾವಿರ, ಒಂದು ಲಕ್ಷ ಕೊಡ್ತೀನಿ ಎಂದರೆ ನನಗೆ ಬೇಕಾಗಿಲ್ಲ ಅಂಥ ಸಹಾಯ. ಅದನ್ನು ನಾನು ದುಡಿದುಕೊಳ್ಳುತ್ತೀನಿ.

ನಟನೆ ಮಾಡ್ತೀನಿ, ಊಬರ್‌ ಓಡಿಸೋದು ಬಿಡಲ್ಲ: ಒಂದೊಮ್ಮೆ ನಟನೆಯ ಅವಕಾಶಗಳು ಸಿಕ್ಕು ಪರಿಸ್ಥಿತಿ ಸುಧಾರಿಸಿದರೂ ನಾನು ಊಬರ್‌ ಓಡಿಸುವುದನ್ನೇನೂ ನಿಲ್ಲಿಸುವುದಿಲ್ಲ. ಬಿಡುವಿದ್ದಾಗ ಓಡಿಸ್ತೀನಿ. ವರ್ಷದ ಎಲ್ಲ ದಿನವೂ ಎಲ್ಲಿ ದುಡಿಯಲಿಕ್ಕಾಗುತ್ತದೆ? ಪ್ರತಿದಿನ ಅನ್ನ ಸಾರು ತಿನ್ನಕ್ಕಾಗುತ್ತದೆಯೇ? ನಟನೆಯನ್ನೂ ಮಾಡ್ತೀನಿ, ಊಬರ್‌ ಕೂಡ ಓಡಿಸ್ತೀನಿ. ಅದೊಂದು ಉದ್ಯೋಗ ಇದೆ ನನಗೆ.

ನನ್ನ ಮನಸ್ಸಿಗೆ ಏನೋ ಒಂದು ನೆಮ್ಮದಿ ಕೊಟ್ಟಿದೆ ಈ ಉದ್ಯೋಗ. ಯಾರ ಹಂಗೂ ಇಲ್ಲ. ಏನೋ ಈಗಿನ ಹುಡುಗರ ಹಾಗೆ ಸಿಕ್ಕಾಪಟ್ಟೆ ಓಡಿಸಕ್ಕಾಗಲ್ಲ, ಸ್ವಲ್ಪ ಕಾಲು ನೋಯುತ್ತದೆ. ಆದರೆ ಜನರು ಕೊಡುವ ಮರ್ಯಾದೆ. ಒಬ್ಬ ರೈಡರ್‌ ಹಣವನ್ನೂ ಕೊಟ್ಟು ನಮಗೆ ಮರ್ಯಾದೆಯನ್ನೂ ಕೊಟ್ಟರೆ ಎಷ್ಟು ಸಂತೋಷವಾಗುತ್ತದೆ ಗೊತ್ತಾ? ಆ ಸುಖವನ್ನು ನಾನು ಈ ಉದ್ಯೋಗದಲ್ಲಿ ಕಂಡಿದ್ದೇನೆ. ಅದಕ್ಕಾಗಿಯೇ ಈ ಉದ್ಯೋಗವನ್ನು ಮುಂದುವರಿಸುತ್ತೇನೆ.

ನಾಟಕ ಮಾಡುವ ಆಸೆ: ಈಗೊಂದು ನಾಲ್ಕು ವರ್ಷಗಳ ಹಿಂದೆ ನನ್ನ ತಂದೆ ಅಶ್ವಥ್‌ ಅವರ ಹೆಸರಿನಲ್ಲಿ ಒಂದು ಟ್ರಸ್ಟ್‌ ಮಾಡಿದೆ. ಆವಗೇನೋ ಒಂದು ಹುರುಪಿನಲ್ಲಿ ಟ್ರಸ್ಟ್‌ ಮಾಡುವುದು ಮಾಡಿಬಿಟ್ಟೆ. ಆದರ ಮೂಲಕ ಏನೇನೋ ಮಾಡಬೇಕು ಅಂದುಕೊಂಡಿದ್ದೆ. ಆದರೆ ಏನೂ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಟ್ರಸ್ಟ್‌ ಅಂದರೆ ನಂಬಿಕೆ. ಆದರೆ ಈಗಿನ ಟ್ರಸ್ಟ್‌ಗಳು ಅದನ್ನೇ ಉಳಿಸಿಕೊಂಡಿಲ್ಲ. ದುಡ್ಡು ಹೊಡಿಯಲಿಕ್ಕೆ, ಸೈಟ್‌ ಮಾಡುವುದಕ್ಕೆ, ಬ್ಲ್ಯಾಕ್‌ ಮನಿ ವೈಟ್‌ ಮಾಡುವುದಕ್ಕೆ ಈ ರೀತಿಯ ಉದ್ದೇಶಗಳಿಗೆ ಟ್ರಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ನಾನು ಟ್ರಸ್ಟ್‌ ಮಾಡಿ ‘ರಾಮಾ’ ಎಂದರೆ ‘ಯಾವ ರಾಮ?’ ಎಂದು ಕೇಳ್ತಾರೆ. ಇದೆಲ್ಲ ಯೋಚಿಸಿ ಆ ಟ್ರಸ್ಟ್‌ನ ಕೆಲಸ ಅಲ್ಲಿಗೆ ನಿಲ್ಲಿಸಿಬಿಟ್ಟೆ.

ಬದಲಿಗೆ ನಾನೇ ಒಂದು ನಾಟಕ ತಂಡ ಕಟ್ಟಿ ತುಂಬ ಹೊಸ ರೀತಿಯ ನಾಟಕ ಮಾಡಬೇಕು ಎಂದು ಯೋಚಿಸಿದೆ.  ಒಂದು ಸಾಮಾಜಿಕ ಸಂದೇಶ ಇರುವ ಹಾಸ್ಯ ನಾಟಕ ಬರೆದುಕೊಂಡು ಸಿದ್ಧನಾದೆ. ಅದರಿಂದ ಬರುವ ಹಣದಿಂದ ಟ್ರಸ್ಟ್‌ನ ಕೆಲಸ ಮಾಡಿ ಬೆಳೆಸೋಣ ಎಂದು ಯೋಚಿಸಿದೆ. ಆದರೆ ಆ ನಾಟಕಕ್ಕೆ ಬಜೆಟ್‌ ಜಾಸ್ತಿ ಬೇಕಿತ್ತು. ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಯಾರನ್ನಾದರೂ ಪ್ರಾಯೋಜಕರನ್ನು ಕೇಳಿದರೆ ಬಂದ ಲಾಭದಲ್ಲಿ ಅರ್ಧ ಹಣವನ್ನು ಅವರೇ ಕೇಳುತ್ತಾರೆ. ಯಾರೋ ಅಪರಿಚಿತರಲ್ಲ, ನಮ್ಮವರೇ, ನಮಗೆ ಗೊತ್ತಿರುವವರೇ ಈ ರೀತಿ ಎಲ್ಲ ಮಾಡುವುದು. ಹೆಣನಾದ್ರೂ ಇಟ್ಟುಕೊಂಡಾದರೂ ಒಂದಿಷ್ಟು ದುಡ್ಡು ಮಾಡೋಣ ಎನ್ನುವ ಮನಸ್ಥಿತಿಯವರು. ಇಬ್ಬರು ಮೂರು ಜನ ಅದೇ ರೀತಿ ಮಾಡಿದರು. ಅದರಿಂದ ನಾಟಕ ಮಾಡುವ ಆಲೋಚನೆಯನ್ನೇ ಬಿಟ್ಟುಬಿಟ್ಟೆ.

ಈಗ ಊಬರ್‌ ಓಡಿಸುತ್ತಿರುವಾಗ ಯಾರೋ ನನ್ನ ಕಷ್ಟ ಕೇಳಿ ನಾಟಕಕ್ಕೆ ಪ್ರಾಯೋಜಕರಾಗಲು ಒಪ್ಪಿಕೊಳ್ಳಬಹುದು. ಯಾರಿಗೆ ಗೊತ್ತು? ಹಾಗೆ ಯಾರಾದರೂ ಸಿಕ್ಕಿ ನಾನು ನಾಟಕ ಮಾಡಲು ಸಾಧ್ಯವಾದರೆ ನನ್ನ ಜೀವನ ಇನ್ನಷ್ಟು ಸುಗಮ ಆಗುತ್ತದೆ. ಹಾಗೆಂದು ಜೀವನ ಸುಧಾರಿಸಿದ ಮೇಲೆ ಊಬರ್‌ ಓಡಿಸುವುದನ್ನು ಬಿಡುತ್ತೀನಿ ಎಂದು ಹೇಳುವುದಿಲ್ಲ. ಬೇಸರ ಆದಾಗ ಬರುತ್ತೀನಿ. ಬಿಡುವಿದ್ದಾಗ ಬರುತ್ತೀನಿ. ಬರಬೇಕು ಎಂಬ ಪರಿಸ್ಥಿತಿ ಬಂದಾಗ ಬರ್ತೀನಿ. ಏನೇ ಆದರೂ ಕೈಕಟ್ಟಿಕೊಂಡು ಕೆಲಸ ಕೊಡಿ ಎಂದು ಕೇಳುವುದು ನನ್ನ ಜಾಯಮಾನದಲ್ಲಿ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry