7
ತೀರ್ಥಹಳ್ಳಿ: ನವಮಣಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ

ಗದ್ದಲ, ಸಭಾತ್ಯಾಗದ ನಡುವೆ ಮರಳಿನ ಗುದ್ದಾಟ

Published:
Updated:

ತೀರ್ಥಹಳ್ಳಿ: ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವ ಫಲಾನುಭವಿಗಳಿಗೆ ಮರಳು ಸಿಗುತ್ತಿಲ್ಲ ಎಂಬ ವಿಷಯದ ಮೇಲಿನ ಚರ್ಚೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಾರಕಕ್ಕೇರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಶನಿವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ನವಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯ ಚಂದವಳ್ಳಿ ಸೋಮಶೇಖರ್‌ ತಾಲ್ಲೂಕಿನ ಮರಳು ಸಮಸ್ಯೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸಾಮಾನ್ಯ ಜನರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ. ಪೊಲೀಸ್‌ ಇಲಾಖೆ ಬಡವರನ್ನು ಮರಳು ಕಳ್ಳರು ಎಂದು ಭಾವಿಸಿ ಮೊಕದ್ದಮೆ ದಾಖಲಿಸುತ್ತಿದೆ. ಬಡವರು ನಿದ್ದೆ ಮಾಡದ ವಾತಾವರಣವನ್ನು ಪೊಲೀಸ್‌ ಇಲಾಖೆ ಸೃಷ್ಟಿಸಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ

ಅಧಿಕಾರಿ ನೀಡಿದ ಮರಳು ಸಾಗಣೆ ಪರವಾನಗಿಯನ್ನು ಹರಿದು ಹಾಕುವ ಮೂಲಕ ಪೊಲೀಸ್‌ ಇಲಾಖೆ ದೌರ್ಜನ್ಯ ಎಸಗುತ್ತಿದೆ. ಸಭೆಗೆ ಪೊಲೀಸ್‌ ಅಧಿಕಾರಿಗಳನ್ನು ಕರೆಸಿ ಎಂದು ಬಿಜೆಪಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್‌, ಗುಡ್ಡೇಕೊಪ್ಪ ಮಂಜುನಾಥ್‌, ಬೇಗುವಳ್ಳಿ ಕವಿರಾಜ್‌, ಲಕ್ಷ್ಮಿ ಉಮೇಶ್‌ ಗೀತಾ ಶೆಟ್ಟಿ ಒತ್ತಾಯಿಸಿದರು.

ಪೊಲೀಸರು ರಾತ್ರಿ ವೇಳೆ ಮನೆಗೆ ನುಗ್ಗಿ ಹಿಂಸೆ ನೀಡುತ್ತಿದ್ದಾರೆ ಎಂದು ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌ ಸದಸ್ಯರ ಆರೋಪಕ್ಕೆ ದನಿಗೂಡಿಸಿದರು.

ಮರಳಿನ ವಿಷಯವಾಗಿ ವಿಶೇಷ ಸಭೆ ಕರೆದು ಚರ್ಚಿಸುವುದಾಗಿ ಅಧ್ಯಕ್ಷೆ ನವಮಣಿ ಉತ್ತರಿಸಿದರು. ಆಗ ಸಭೆಯಲ್ಲಿ ಗದ್ದಲ ಆರಂಭವಾಯಿತು. ಬಿಜೆಪಿ ಸದಸ್ಯರು ಏಕಕಾಲದಲ್ಲಿ ಎದ್ದು ನಿಂತು ಅಧ್ಯಕ್ಷರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಮರಳು ವಿತರಣೆಗೆ ಖಚಿತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದ ಮೇಲೆ ಸಭೆಯ ಅಗತ್ಯವೇನಿದೆ? ಮರಳಿನ ಅಭಾವಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಶಾಸಕ ಕಿಮ್ಮನೆ ರತ್ನಾಕರ ಅವರ ಆಡಳಿತ ವೈಫಲ್ಯ ಕಾರಣ ಎಂದು ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಸದಸ್ಯ ಕೆಳಕೆರೆ ದಿವಾಕರ್‌ ಆಕ್ಷೇಪ ವ್ಯಕ್ತಪಡಿಸಿ, ‘ರಾಜ್ಯ ಸರ್ಕಾರ ಹಾಗೂ ಕಿಮ್ಮನೆ ರತ್ನಾಕರ ಅವರ ವಿರುದ್ಧ ಧಿಕ್ಕಾರ ಕೂಗುವ ಅಗತ್ಯವಿಲ್ಲ. ಸಂಸದ ಯಡಿಯೂರಪ್ಪ ಅವರ ವಿರುದ್ಧ ದಿಕ್ಕಾರ ಕೂಗಿ. ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಸಂಸದ ಯಡಿಯೂರಪ್ಪ ಅವರ ತಪ್ಪೂ ಇದೆ’ ಎಂದು ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು.

ಬಿಜೆಪಿ ಸದಸ್ಯರು ಗದ್ದಲದ ನಡುವೆ ಸಭಾತ್ಯಾಗ ಮಾಡುತ್ತಿದ್ದಂತೆ ಆಕ್ರೋಶಗೊಂಡ ಕೆಳಗೆರೆ ದಿವಾಕರ್‌, ವೀಣಾ ಗಿರೀಶ್‌, ಸುಮಾ ಅವರು ಉದಯ್‌, ಧನರಾಜ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಮರಳಿನ ಸಮಸ್ಯೆಯನ್ನು ಅಧಿಕಾರಿಗಳ ಸಭೆಯಲ್ಲಿ ಬಗೆಹರಿಸದೇ ನಿರ್ಲಕ್ಷ್ಯ ತೋರಿದ್ದೀರಿ. ನಿಮ್ಮ ಬೇಜವಾಬ್ದಾರಿಯಿಂದಾಗಿ ಶಾಸಕ ಕಿಮ್ಮನೆ ರತ್ನಾಕರ ಅವರು ಆರೋಪ ಹೊರಬೇಕಾಗಿದೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲು ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.

‘ಹಿಂದಿನ ಸಭೆಗಳಲ್ಲಿ ಮರಳಿನ ಕುರಿತು ಚರ್ಚೆ ಆಗುತ್ತಿದ್ದರೂ ಇದುವರೆಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ರಾಜಕೀಯ ವಿವಾದ ಹುಟ್ಟುಹಾಕಲಿಕ್ಕೆ ಅವಕಾಶ ನೀಡಬೇಡಿ’ ಎಂದು ಆಗ್ರಹಿಸಿದರು.

ಹಣಗೆರೆ, ಮಂಡಗದ್ದೆ ಭಾಗದಲ್ಲಿ ಮನೆ ಕಟ್ಟಿಕೊಳ್ಳಲು ಬಳಸುತ್ತಿರುವ ಮರಳನ್ನು ಪೊಲೀಸ್‌ ಅಧಿಕಾರಿಗಳು ವಶಪಡಿಸಿಕೊಂಡು ದೂರು ದಾಖಲಿಸುತ್ತಿರುವುದು ನಾಚಿಕೆಗೇಡಿನ ಕೆಲಸ. ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಮರಳು ಪಕ್ಷಾತೀತ ಸಮಸ್ಯೆಯಾಗಿದೆ ಎಂದು ಹಣಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ ಸಭೆಯ ಗಮನ ಸೆಳೆದರು.

ಸಭೆಯ ವೇದಿಕೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry