3
ಕರ್ನಾಟಕದಲ್ಲಿ ಬಿಜೆ‍ಪಿ ಜಾದೂ ನಡೆಯಲ್ಲ; ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಜನರೆದುರು ಬೆತ್ತಲಾಗಿರುವ ಮೋದಿ– ಷಾ

Published:
Updated:
ಜನರೆದುರು ಬೆತ್ತಲಾಗಿರುವ ಮೋದಿ– ಷಾ

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ದೇಶದ ಜನರೆದುರು ಬೆತ್ತಲಾಗಿದ್ದಾರೆ. ಅವರ ಜಾದೂ ಕರ್ನಾಟಕದಲ್ಲಿ ನಡೆಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಬಂಗಾರ ಪೇಟೆಯಲ್ಲಿ ಶನಿವಾರ ಸಾಧನಾ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರು. ಇಲ್ಲಿ ಕೋಮುವಾದಿಗಳ ಆಟ ನಡೆಯಲ್ಲ. ಬಿಜೆಪಿಯ ಮಿಷನ್‌ 150 ಠುಸ್‌ ಆಗಿ 50ಕ್ಕೆ ಬಂದು ನಿಂತಿದೆ ಎಂದು ಟೀಕಿಸಿದರು.

ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ಎರಡು ತಿಂಗಳಲ್ಲೇ ಗೋಲಿಬಾರ್‌ ಮಾಡಿಸಿ ಇಬ್ಬರು ರೈತರನ್ನು ಕೊಲ್ಲಿಸಿದರು. ಅವರದು ಎರಡು ನಾಲಿಗೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷಿ ಸಾಲ ಮನ್ನಾ ಮಾಡು ವಂತೆ ಒತ್ತಾಯಿಸಿದ್ದಕ್ಕೆ ಸರ್ಕಾರದಲ್ಲಿ ನೋಟು ಮುದ್ರಣದ ಯಂತ್ರ ಇಟ್ಟುಕೊಂಡಿಲ್ಲ ಎಂದು ಹೇಳಿದ್ದರು. ಈಗ ಸಾಲ ಮನ್ನಾ ವಿಚಾರದಲ್ಲಿ ವೀರಾವೇಷದಿಂದ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಯಡಿಯೂರಪ್ಪ ಬಡಾಯಿ ಕೊಚ್ಚಿದ್ದರು. ಆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೆಲ ಕಚ್ಚಿತು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯು ಜೈಲಿಗೆ ಹೋದ ಉದಾಹರಣೆಯಲ್ಲಿ. ಆದರೆ, ಯಡಿಯೂರಪ್ಪ ಜೈಲಿಗೆ ಹೋದರು. ಅವರನ್ನು ಹಿಂಬಾಲಿಸಿ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಬೀಗತನ ಮಾಡಲು ಜೈಲಿಗೆ ಹೋಗಿದ್ದರು ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿದ್ದ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಜನರಿಗೆ ಮುಖ ತೋರಿಸಬಾರದು. ಪರಿವರ್ತನಾ ರ‍್ಯಾಲಿ ಹೊರಟಿರುವ ಯಡಿ ಯೂರಪ್ಪ ಮತ್ತು ತಂಡವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಸಂಸತ್‌ಗೆ ಮುತ್ತಿಗೆ ಹಾಕಿ ಪ್ರಧಾನಿ ಮೋದಿಯ ಮೂಗು ಹಿಡಿದು ಒಪ್ಪಿಸಲಿ ಎಂದು

ಕುಟುಕಿದರು.

ಜನಪರ ರಾಜಕಾರಣವಲ್ಲ: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಸ್ಥಗಿತಗೊಳಿಸುವುದಾಗಿ ಹೇಳಿರುವ ಎಚ್‌.ಡಿ.ಕುಮಾರಸ್ವಾಮಿ ಬಯಲುಸೀಮೆಯ ಜನರ ವಿರೋಧಿ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಭಾಗದ ಜನರಿಗೆ ನೀರು ಕೊಡುವ ಪ್ರಯತ್ನ ಮಾಡಲಿಲ್ಲ. ಅವರದು ಜನಪರ ರಾಜಕಾರಣವಲ್ಲ ಎಂದು ಕಿಡಿ

ಕಾರಿದರು.

ಬಯಲುಸೀಮೆಯ ಏಳು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಕೊಡಲು ಸುಮಾರು ₹ 13 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ₹ 2,500 ಕೋಟಿ ಖರ್ಚು ಮಾಡಲಾಗಿದೆ. ಯೋಜನೆ ಬೇಕೇ ಅಥವಾ ಬೇಡವೇ ಎಂಬುದನ್ನು ಜನ ನಿರ್ಧರಿಸಬೇಕು. ಜನರ ದಿಕ್ಕು ತಪ್ಪಿಸಲು ಕುಮಾರಸ್ವಾಮಿ ಬೇಜಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ದೇವೇಗೌಡರು ಬಾಯಿ ಬಿಟ್ಟರೆ ತಾವು ಮಣ್ಣಿನ ಮಕ್ಕಳು ಎನ್ನುತ್ತಾರೆ. ಒಂದು ದಿನವೂ ನೇಗಿಲು ಹಿಡಿಯದ ಮತ್ತು ರೈತರ ಸಂಕಷ್ಟ ತಿಳಿಯದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜನ ಅವರ ಮೋಸದ ಕಣ್ಣೀರಿಗೆ ಮಾರು ಹೋಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಕನಸಿನ ಮಾತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry