‘ಕಸ ಗುಡಿಸುವ ಯಂತ್ರಗಳ ಅಧ್ಯಯನ ನಡೆಸಿ’

7
ಕಸ ವಿಲೇವಾರಿ, ಸಂಸ್ಕರಣೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಚಿವ ಜಾರ್ಜ್‌

‘ಕಸ ಗುಡಿಸುವ ಯಂತ್ರಗಳ ಅಧ್ಯಯನ ನಡೆಸಿ’

Published:
Updated:
‘ಕಸ ಗುಡಿಸುವ ಯಂತ್ರಗಳ ಅಧ್ಯಯನ ನಡೆಸಿ’

ಬೆಂಗಳೂರು: ದೇಶದ ಬೇರೆ ನಗರಗಳಲ್ಲಿ ಕಸ ಗುಡಿಸುವ ಯಂತ್ರಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಪಾಲಿಕೆಯ ಆಯುಕ್ತರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದರು.

ಕಸ ವಿಲೇವಾರಿ ಹಾಗೂ ಸಂಸ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.

ನಗರದಲ್ಲಿ ರಸ್ತೆಯ ದೂಳಿನಿಂದಶೇ 20ರಷ್ಟು ವಾಯುಮಾಲಿನ್ಯ ಉಂಟಾಗುತ್ತಿದೆ. ಪೌರಕಾರ್ಮಿಕರು ರಸ್ತೆ ಗುಡಿಸುವ ಸಂದರ್ಭದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ 34 ಕಸದ ಯಂತ್ರ ಹಾಗೂ ರೋಬೊಟಿಕ್‌ ಯಂತ್ರಗಳ ಖರೀದಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕಸ ಗುಡಿಸುವ ಯಂತ್ರಗಳನ್ನು ಯಾವ ನಗರಗಳಲ್ಲಿ ಬಳಸಲಾಗುತ್ತಿದೆ, ಯಂತ್ರಗಳ ವೆಚ್ಚ, ನಿರ್ವಹಣೆ ಹಾಗೂ ವಾಯುಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಾಗಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಬೇಕು. ಬಳಿಕ, ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಶಿಸ್ತುಕ್ರಮದ ಎಚ್ಚರಿಕೆ: ಕಸ ನಿರ್ವಹಣೆ, ವಿಲೇವಾರಿ ಹಾಗೂ ಪೌರಕಾರ್ಮಿಕರ ಕಾರ್ಯನಿರ್ವಹಣೆಯ ಬಗ್ಗೆ ನಿಗಾ ವಹಿಸುವಲ್ಲಿ ವಿಫಲರಾಗುವ ಜಂಟಿ ಆಯುಕ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕಸವನ್ನು ಮೂಲದಲ್ಲೇ ಬೇರ್ಪಡಿಸಬೇಕು. ಕಸ ಸಂಸ್ಕರಣಾ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

20 ಸಾವಿರ ಪೌರಕಾರ್ಮಿಕರು ಬಯೋಮೆಟ್ರಿಕ್‌ ವ್ಯವಸ್ಥೆಯ ಮೂಲಕ ಪ್ರತಿದಿನ ಮೂರು ಬಾರಿ ಬೆರಳಚ್ಚು ನೀಡುತ್ತಿದ್ದಾರೆ. ಇದಕ್ಕಾಗಿ 500 ಮಸ್ಟರಿಂಗ್‌ ಸ್ಥಳಗಳನ್ನು ಸ್ಥಾಪಿಸಲಾಗಿದೆ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಸಚಿವರ ಗಮನಕ್ಕೆ ತಂದರು.

ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್, ‘ನಗರದಲ್ಲಿ 7 ಕಸ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 1,700 ಟನ್ ಕಸವನ್ನು ಸಂಸ್ಕರಿಸಲಾಗುತ್ತಿದೆ. ಶೇ 53ರಷ್ಟು ಕಸವನ್ನು ಮೂಲದಲ್ಲೇ ಬೇರ್ಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry