ಸೋಮವಾರ, ಜೂಲೈ 6, 2020
21 °C

ಶಬರಿಮಲೆ: ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಶಬರಿಮಲೆ: ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರು ಇನ್ನು ಮುಂದೆ ವಯಸ್ಸಿನ ಅಧಿಕೃತ ದಾಖಲೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಈ ದೇವಾಲಯದಲ್ಲಿ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿಸಿ ಕೆಲವು ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಯಸ್ಸಿನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ.

‘ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಮಹಿಳೆಯರು ನೀಡಬೇಕು. ಅಧಿಕೃತ ದಾಖಲೆಗಳನ್ನು ತೋರಿಸಿದರೆ ಭಕ್ತಾದಿಗಳು, ಪೊಲೀಸರು ಮತ್ತು ದೇವಸ್ಥಾನದ ಅಧಿಕಾರಿಗಳ ನಡುವಣ ವಾಗ್ವಾದವನ್ನು ತಪ್ಪಿಸಬಹುದು’ ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್‌ ತಿಳಿಸಿದ್ದಾರೆ.

‘ಈಗಾಗಲೇ ಜಾರಿಯಲ್ಲಿರುವ ಸಂಪ್ರದಾಯಗಳ ಜತೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ. ಈಚೆಗೆ ತಮಿಳುನಾಡಿನ ಬಾಲಕಿಯೊಬ್ಬಳು ತನ್ನ ತಂದೆ ಮತ್ತು ಸಂಬಂಧಿಕರ ಜತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಳು. ಬಾಲಕಿಯ ವಯಸ್ಸಿನ ಬಗ್ಗೆ ಅನುಮಾನ ಬಂದಿದ್ದರಿಂದ ಭದ್ರತಾ ಸಿಬ್ಬಂದಿ ಪ್ರವೇಶ ನೀಡಲು ನಿರಾಕರಿಸಿದರು. ಇದರಿಂದ ವಾಗ್ವಾದ ನಡೆಯಿತು. ಬಳಿಕ ಗುರುತಿನ ಚೀಟಿಯನ್ನು ಹಾಜರುಪಡಿಸಿದಾಗ ಆಕೆಗೆ 11 ವರ್ಷ ಎನ್ನುವುದು ತಿಳಿಯಿತು. ಇಂತಹ ಪ್ರಸಂಗಗಳು ಹೆಚ್ಚುತ್ತಿರುವುದರಿಂದ ಮಂಡಳಿ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದೆ’ ಎಂದು ಸಮರ್ಥಿಸಿಕೊಂಡರು.

‘ಪಂಪಾದಲ್ಲೇ ಮಹಿಳಾ ಪೊಲೀಸರು ಮತ್ತು ಟಿಡಿಬಿ ಮಹಿಳಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ತಪಾಸಣೆಯ ಬಳಿಕವೇ ಬೆಟ್ಟ ಏರಲು ಅನುಮತಿ ನೀಡಲಾಗುವುದು. ಈ ಬಾರಿ, ನವೆಂಬರ್‌ 15ರಿಂದ ಇಲ್ಲಿಯವರೆಗೆ ಕನಿಷ್ಠ 260 ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಯಿತು. ಇವರೆಲ್ಲರೂ 10ರಿಂದ 50 ವರ್ಷ ಒಳಗಿನವರಾಗಿದ್ದರು. ಈ ವಯೋಮಾನದವರಿಗೆ ನಿಷೇಧ ವಿಧಿಸಿರುವ ಬಗ್ಗೆ ಕೆಲವರಿಗೆ ಮಾಹಿತಿಯೇ ಇರಲಿಲ್ಲ. ಇವರಲ್ಲಿ ಬಹುತೇಕರು ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದವರಾಗಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.