ವಿದ್ಯಾರ್ಥಿಗಳಿಗೆ ಪ್ರತಿಭಾಶೋಧ ಪ್ರಶಸ್ತಿ

7

ವಿದ್ಯಾರ್ಥಿಗಳಿಗೆ ಪ್ರತಿಭಾಶೋಧ ಪ್ರಶಸ್ತಿ

Published:
Updated:
ವಿದ್ಯಾರ್ಥಿಗಳಿಗೆ ಪ್ರತಿಭಾಶೋಧ ಪ್ರಶಸ್ತಿ

ಬೆಂಗಳೂರು: ಭಾರತೀಯ ಉನ್ನತ ಅಧ್ಯಯನ ಸಂಸ್ಥೆ (ನಿಯಾಸ್‌), ಮಯ್ಯಾಸ್‌ ಪ್ರಾಡಜಿ, ನ್ಯಾಷನಲ್‌ ಕಾಲೇಜು ಹಾಗೂ ಅಯ್ಯಂಗಾರ್‌ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸಿದ್ದ ಎರಡನೇ ವರ್ಷದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಫೆಲೋಶಿಪ್‌ಗೆ ಆಯ್ಕೆಯಾಗಿದ್ದ 15 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಒಳಗೊಂಡ ಪುರಸ್ಕಾರ ನೀಡಲಾಯಿತು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಶಿಕ್ಷಣ ಸಂಸ್ಥೆ ಇಡಿಎಕ್ಸ್‌ನ ಸಿಇಒ ಡಾ. ಅನಂತ್‌ ಅಗರವಾಲ್‌ ಮತ್ತು ಮಯ್ಯಾಸ್ ಫುಡ್‌ ವ್ಯವಸ್ಥಾಪಕ ನಿರ್ದೇಶಕ ಪಿ.ಸದಾನಂದ ಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ಎಸ್‌.ಭುವನ (ವಿಜಯ ಸಂಯುಕ್ತ ಪಿಯು ಕಾಲೇಜು), ಎ.ಚೈತ್ರಾ (ಮೌಂಟ್‌ ಕಾರ್ಮೆಲ್‌ ಪಿಯು ಕಾಲೇಜು), ದೀಪಿಕಾ ಬಸು (ಸೋಫಿಯಾ ಪ್ರೌಢಶಾಲೆ), ಎಚ್‌.ನೇಹಾ (ಸೇಂಟ್‌ ಮೇರಿಸ್‌ ಬಾಲಕಿಯರ ಪಿಯು ಕಾಲೇಜು), ರೇಷ್ಮಾ ರಾಮ್‌ (ವಿದ್ಯಾಮಂದಿರ ಪಿಯು ಕಾಲೇಜು), ಎಂ.ಸೋಮಶೇಖರ್‌ (ಜಯನಗರ ನ್ಯಾಷನಲ್‌ ಕಾಲೇಜು), ಸ್ಫೂರ್ತಿ ಡಿ.ನಾಡಿಗ್‌ (ಕ್ರೈಸ್ಟ್‌ ಜೂನಿಯರ್‌ ಕಾಲೇಜು), ಕಲಬುರ್ಗಿಯ ಋಷಭ್‌ ಪ್ರಕಾಶ್‌ ಕುಲಕರ್ಣಿ (ಎಸ್‌ಬಿಆರ್‌ ವಿಜ್ಞಾನ ಪಿಯು ಕಾಲೇಜು), ಉಡುಪಿಯ ಬಿ.ಪ್ರಾಚಿ ಶೆಣೈ (ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು), ಮೂಡುಬಿದರೆಯ ಪ್ರಮಥ ಗಜಾನನ ಭಟ್‌ (ಆಳ್ವಾಸ್‌ ಪಿಯು ಕಾಲೇಜು), ಕೋಲಾರದ ರವೀನಾ ಹೆಬ್ಬಾರ್‌ (ವಿದ್ಯಾಜ್ಯೋತಿ ಕಾಲೇಜು), ಉತ್ತರ ಕನ್ನಡ ಜಿಲ್ಲೆಯ ಮಹೇಶ್‌ ಭಾಸ್ಕರ್‌ ಹೆಗಡೆ ಹಾಗೂ ಸೌಖ್ಯ ರಾಜಾರಾಮ್‌ ಹೆಗಡೆ (ಎಂಇಎಸ್‌ ಚೈತನ್ಯ ಪಿಯು ಕಾಲೇಜು), ವರ್ಷಿತ್‌ ಗೋಪಾಲಕೃಷ್ಣ ಭಟ್‌ (ಶಿರಸಿ ಎಂಇಎಸ್‌ ಪಿಯು ಕಾಲೇಜು), ಕೋಯಿಕ್ಕೋಡ್‌ನ ಪಿ.ಎಸ್‌.ಅಭಿನಂದ್‌ (ಜಿಎಚ್ಎಸ್‌ ಶಾಲೆ, ಶಿವಪುರ) ಪ್ರಶಸ್ತಿ ಸ್ವೀಕರಿಸಿದರು.

ಡಾ. ಅನಂತ್‌ ಅಗರ್‌ವಾಲ್‌, ‘5 ಶತಮಾನಗಳಿಂದ ಶಿಕ್ಷಣ ಕಲಿಕೆಯ ಪದ್ಧತಿ ಬದಲಾಗಿಯೇ ಇಲ್ಲ. ಇಂದು ಶಿಕ್ಷಣ ಕಲಿಕೆಯ ಸ್ವರೂಪ ಬದಲಾಗಬೇಕಿದೆ. ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಹಲವು ವಿಷಯಗಳ ಕಲಿಕೆಯ ವಿಪುಲ ಅವಕಾಶಗಳನ್ನೇ ತೆರೆದಿಟ್ಟಿದೆ. ಇಂದಿನ ಡಿಜಿಟಲ್‌ ತಾಂತ್ರಿಕ ಯುಗಕ್ಕೆ ಬೇಕಾದ ಶಿಕ್ಷಣ ಕಲಿಕೆಗೂ ಇಡೀ ಪೀಳಿಗೆಯನ್ನು ಸಜ್ಜುಗೊಳಿಸಬೇಕಿದೆ’ ಎಂದರು.

ಪರೀಕ್ಷೆ ಬರೆದವರು 406 ವಿದ್ಯಾರ್ಥಿಗಳು

2017ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದ 406 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರಬಂಧ ಮಾದರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಗ್ರಹಿಕೆ ಮತ್ತು ಚಿಂತನಾಶಕ್ತಿಯನ್ನು ಅಳೆದು, 40 ಮಂದಿಯನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಆರು ತಜ್ಞರನ್ನು ಒಳಗೊಂಡ ಎರಡು ಸಮಿತಿಗಳು ಅಂತಿಮವಾಗಿ 15 ಪ್ರತಿಭೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದವು. ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಶಕ್ತಿ ಹೊಂದಿರುವ ಈ ಪ್ರತಿಭೆಗಳಿಗೆ ಅವರು ಬಯಸುವ ಹಂತದವರೆಗೂ ಭಾರತೀಯ ಉನ್ನತ ಅಧ್ಯಯನ ಸಂಸ್ಥೆ ಮಾರ್ಗದರ್ಶನ ಮತ್ತು ನೆರವು ನೀಡಲಿದೆ ಎಂದು ಸಂಸ್ಥೆಯ ಡಾ. ಅನಿತಾ ಕುರುಪ್‌ ತಿಳಿಸಿದರು.

‘ಆಳ ಅಧ್ಯಯನ ಸಾಧ್ಯ’

‘ಸಮಾಜಕ್ಕೆ, ದೇಶಕ್ಕೆ ಏನನ್ನಾದರೂ ಒಳಿತಾಗುವುದನ್ನು ಶೋಧಿಸುವ ಕನಸು ಮತ್ತು ಗುರಿ ಇಟ್ಟುಕೊಂಡಿರುವವರಿಗೆ ಫೆಲೋಶಿಪ್‌ ಖಂಡಿತಾ ಸ್ಫೂರ್ತಿ ನೀಡಲಿದೆ. ಈ ಪ್ರಶಸ್ತಿಗೆ ಆಯ್ಕೆಯಾದವರಿಗೆ ವಿಜ್ಞಾನಿಗಳು, ಸಂಶೋಧಕರ ಮಾರ್ಗದರ್ಶನ ಲಭಿಸುವುದರಿಂದ ಆಸಕ್ತಿಯ ಕ್ಷೇತ್ರಗಳಲ್ಲಿ ಆಳ ಅಧ್ಯಯನ ನಡೆಸಲು ಸಾಧ್ಯವಾಗಲಿದೆ. ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿನಿ ಸೋಫಿಯಾ ಪ್ರೌಢಶಾಲೆಯ ದೀಪಿಕಾ ಬಸು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry