ಮಂಗಳವಾರ, ಆಗಸ್ಟ್ 4, 2020
22 °C

ದೀಪಕ್‌ ಹತ್ಯೆಯ ಬಳಿಕ: ಗೊತ್ತಿಲ್ಲದ ಕೆಲವು ಸಂಗತಿಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಕ್‌ ಹತ್ಯೆಯ ಬಳಿಕ: ಗೊತ್ತಿಲ್ಲದ ಕೆಲವು ಸಂಗತಿಗಳು...

ಬೆಂಗಳೂರು: ದೀಪಕ್‌ ರಾವ್‌ ಹತ್ಯೆ ಬಳಿಕ ನಡೆದ ಕೆಲವು ಘಟನೆಗಳ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಸುರತ್ಕಲ್ ಸಮೀಪದ ಕಾಟಿಪಳ್ಳ ಕೈಕಂಬದಲ್ಲಿ ಬಿಜೆಪಿ ಕಾರ್ಯಕರ್ತನಾಗಿದ್ದ ದೀಪಕ್‌ ರಾವ್‌ನನ್ನು ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಬುಧವಾರ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದರು.

ಮುಸ್ಲಿಂರ ಜೊತೆ ಅನ್ಯೋನ್ಯವಾಗಿದ್ದ ದೀಪಕ್...ದೀಪಕ್ ಅಬ್ದುಲ್‌ ಮಜೀದ್‌ ಅವರ ಮೊಬೈಲ್‌ ಮತ್ತು ಸಿಮ್‌ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ದೀ‍ಪಕ್ ಬಿಜೆಪಿಯ ಕಾರ್ಯಕರ್ತನಾಗಿದ್ದರೂ ಮುಸ್ಲಿಂ ಸಮುದಾಯದವರ ಜತೆ ಅನ್ಯೋನ್ಯವಾಗಿದ್ದ ಹಾಗೂ ಸಾಕಷ್ಟು ಮುಸ್ಲಿಂ ಸಮುದಾಯದ ಗೆಳೆಯರನ್ನು ಹೊಂದಿದ್ದ ಎಂದು ಮಜೀದ್ ಹೇಳಿದ್ದಾರೆ.

ಮಜೀದ್ ಹೇಳಿದ್ದೇನು?

‘ದೀಪಕ್ ಒಳ್ಳೆಯ ಹುಡುಗನಾಗಿದ್ದ. ಆತನ ಸಾವನ್ನು ಊಹಿಸಲು ಸಾಧ್ಯವಿಲ್ಲ ಹತ್ಯೆಗೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದಿದ್ದಾರೆ.

‘ನಮ್ಮ ನಡುವೆ ಯಾವುದೇ ಜಾತಿ ಭೇದಬಾವ ಇರಲಿಲ್ಲ. ಪ್ರಮಾಣಿಕತೆಗೆ ಮತ್ತೊಂದು ಹೆಸರೇ ದೀಪಕ್‌, ನಮ್ಮ ನಡುವೆ ಯಾವತ್ತೂ ಧರ್ಮ ಆಚಾರ ವಿಚಾರ ಅಡ್ಡ ಬರಲಿಲ್ಲ. ಸಂಸ್ಕಾರ, ಸಂಸ್ಕೃತಿ ಅಡ್ಡ ಬರಲಿಲ್ಲ. ಮಾನವೀಯತೆಯಿಂದ ನಾವು ಕೆಲಸ ಮಾಡುತ್ತಿದ್ದೆವು. 7 ವರ್ಷದಲ್ಲಿ ಒಂದು ದಿನವೂ ಕೂಡ ನಾನು ಮುಸ್ಲಿಂ, ನೀನು ಹಿಂದೂ ಎಂದೂ ಭೇದಭಾವ ಮಾಡಿರಲಿಲ್ಲ’ ಎಂದು ತಿಳಿಸಿದ್ದಾರೆ.

ಅಂಗಡಿಯಲ್ಲಿ ನಮ್ಮ ಭಾಷೆ(ಬ್ಯಾರಿ) ಭಾಷೆಯಲ್ಲೇ ವ್ಯವಹರಿಸುತ್ತಿದ್ದ. ಎಲ್ಲರ ಜೊತೆ ಸ್ನೇಹ ಮನೋಭಾವ ಹೊಂದಿದ್ದ,  ‘ಯಾರ ಮೇಲೂ ದೀಪಕ್ ದ್ವೇಷ ಹೊಂದಿರಲಿಲ್ಲ.  ದೀಪಕ್ ಕುಟುಂಬದ ಆಧಾರ ಸ್ತಂಭವಾಗಿದ್ದ, ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಆತ ಭಾಗಿಯಾಗಿರಲಿಲ್ಲ ಎಂದು ಹೇಳಿ ಮಜೀದ್ ಕಣ್ಣೀರಿಟ್ಟಿದ್ದಾರೆ.

ಸ್ಥಳೀಯ ಮುಸ್ಲಿಮರ ನೆರವು...

ಬುಧವಾರ ಮಧ್ಯಾಹ್ನ ಮಜೀದ್‌ ಅವರ ಮನೆಗೆ ಹೋಗಿ ಸಿಮ್‌ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮರಳುತ್ತಿರುವಾಗ ಕಾರಿನಲ್ಲಿ ಬಂದ ಹಂತಕರು ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಘಟನೆ ಸ್ಥಳದಲ್ಲಿ ಕೊಲೆಯನ್ನು ತಡೆಯಲು ಸ್ಥಳೀಯ ಮುಸ್ಲಿಮರು ಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಕೊಲೆ ನಡೆದು ಹೊಗಿತ್ತು. ಸ್ಥಳೀಯ ಮುಸ್ಲಿಮರೇ ಕೊಲೆಗಾರರು ಬಂದ ಕಾರ್‌ ನಂಬರ್‌ಅನ್ನು ಬರೆದುಕೊಂಡು ಪೊಲೀಸರಿಗೆ  ಕೊಟ್ಟು ಆರೋಪಿಗಳನ್ನು ಹಿಡಿಯುವಲ್ಲಿ ಸಹಕರಿಸಿದ್ದಾರೆ ಎಂಬ ಮಾಹಿತಿ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ಹಂತಕರು ಬಂದ ಸ್ವಿಫ್ಟ್‌ ಕಾರಿನ ನಂಬರು ಮತ್ತು ಆ ಕಾರು ಯಾವ ದಿಕ್ಕಿಗೆ ಸಾಗಿತು ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹಿಡಿಯಲು ಸಾಧ್ಯವಾಯಿತು ಎಂದು ಸ್ಥಳೀಯ ಮುಸ್ಲಿಮರು ಹೇಳಿದ್ದಾರೆ.

ವಿದೇಶಕ್ಕೆ ಹೋಗಿದ್ದರೆ ಬದುಕಿರುತ್ತಿದ್ದ: ತಾಯಿ ಪ್ರೇಮಲತಾ...

‘ನನ್ನ ಮಗ ನಿತ್ಯ ಮಧ್ಯಾಹ್ನ 1.30ಕ್ಕೆ ಊಟಕ್ಕೆ ಬರುತ್ತಿದ್ದ. ಬುಧವಾರವೂ ಆತನಿಗಾಗಿ ಕಾಯುತ್ತಿದ್ದೆ. ಮಧ್ಯಾಹ್ನ 3 ಗಂಟೆಯವರೆಗೂ ಕಾದೆ, ಮೊಬೈಲ್‌ಗೆ ಕರೆ ಮಾಡಿದೆ. ಸ್ವಿಚ್ ಆಫ್‌ ಆಗಿತ್ತು. ಊಟಕ್ಕೆ ಬರಬೇಕಾದ ನನ್ನ ಮಗ ಇನ್ನೆಲ್ಲಿ’ ಎಂದು ದೀಪಕ್ ತಾಯಿ ಪ್ರೇಮಲತಾ ಕಣ್ಣೀರಿಟ್ಟಿದ್ದಾರೆ.

‘ನನ್ನ ಮಗ ಪಾಪದವ, ಅವ ಕೆಲಸಕ್ಕೆ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದ, ನಾನೇ ಬೇಡ ಎಂದು ತಪ್ಪು ಮಾಡಿದೆ. ಹೋಗಿದ್ದರೆ ನನ್ನ ಮಗ ಬದುಕಿರುತ್ತಿದ್ದ’ ಎಂದು ಪ್ರೇಮಲತಾ ಗೋಳಿಟ್ಟರು.

ತಿಂಗಳಿಗೆ ₹11 ಸಾವಿರ ಸಂಬಳ ಪಡೆಯುತ್ತಿದ್ದ ದೀಪಕ್‌, ₹6 ಸಾವಿರ ಮನೆಯ ಸಾಲದ ಕಂತಿಗೆ ಕಟ್ಟುತ್ತಿದ್ದರೆ, ₹1,500 ಬೈಕ್‌ ಸಾಲದ ಕಂತಿಗೆ ಹೋಗುತ್ತಿತ್ತು. ಮನೆಯ ಖರ್ಚಿಗಾಗಿ ₹2,500 ತಾಯಿಗೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

ಕುಟುಂಬಕ್ಕೆ ಯಾರು ದಿಕ್ಕು?

ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ದೀಪಕ್‌ ರಾವ್‌ ಅವರೇ ಮನೆಗೆ ಆಧಾರವಾಗಿದ್ದರು. ತಮ್ಮನಿಗೆ ಮಾತು ಬರುವುದಿಲ್ಲ. ಕುಟುಂಬ ನಿರ್ವಹಣೆಗಾಗಿ ಮಜೀದ್‌ ಎನ್ನುವವರ ಮೊಬೈಲ್‌ ಅಂಗಡಿಯಲ್ಲಿ ಸಿಮ್‌ ಕಾರ್ಡ್‌ ಮಾರುವ ಕೆಲಸ ಮಾಡಿಕೊಂಡಿದ್ದರು. ದೀಪಕ್‌ ಹತ್ಯೆಯಿಂದಾಗಿ ಅವರ ಕುಟುಂಬ ಅನಾಥವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.