ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕೊಡದಿದ್ದರೆ ಮೆಣಸು ಹಾನಿ!

Last Updated 7 ಜನವರಿ 2018, 5:58 IST
ಅಕ್ಷರ ಗಾತ್ರ

ರಾಯಚೂರು: ‘ಎರಡು ತಿಂಗಳಿನಿಂದ ಹುಲುಸಾಗಿ ಬೆಳೆದಿರುವ ಮೆಣಸಿನಕಾಯಿ ಗಿಡಗಳು ಹೂವು ಬಿಟ್ಟಿವೆ. ಈಗ ಅವುಗಳಿಗೆ ನೀರು ಕೊಡದಿದ್ದರೆ ಒಣಗಿ ಸಾಯುತ್ತವೆ. ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಿದ್ದರೆ ತುಂಬಾ ನಷ್ಟವಾಗುತ್ತದೆ’ ಎನ್ನುವ ಆತಂಕದ ಮಾತುಗಳನ್ನು ಸಿರವಾರ ಪಕ್ಕದ ಗ್ರಾಮಗಳ ರೈತರು ಹೇಳುತ್ತಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) 92/1 ಭಾಗದಲ್ಲಿ ಸುಮಾರು 300 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುವೆಯ ಅಂತಿಮ ಭಾಗಕ್ಕೆ ನೀರು ಬರುವುದು ಸ್ಥಗಿತವಾಗಿದ್ದು, ಹೇಗಾದರೂ ಮಾಡಿ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಬೇಕು ಎನ್ನುವ ಧಾವಂತಕ್ಕೆ ರೈತರು ಒಳಗಾಗಿದ್ದಾರೆ. ನೀರಾವರಿ ಇಲಾಖೆಯ ಎಂಜಿನಿಯರುಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದಾರೆ. ಶನಿವಾರ ಜಿಲ್ಲಾಧಿಕಾರಿಯವರಿಗೆ ಮನವಿ ಕೊಟ್ಟು ಸಂಕಷ್ಟ ಹೇಳಿಕೊಂಡಿದ್ದಾರೆ.

‘ಕಾಲುವೆಗೆ 2000 ಕ್ಯುಸೆಕ್‌ ನೀರು ಬರುತ್ತಿದೆ. ಇಷ್ಟು ಪ್ರಮಾಣದ ನೀರನ್ನು ಕಾಲುವೆ ಅಂತಿಮ ಭಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ನೆಲ್ಲು ಬೆಳೆಯಬಾರದು ಎಂದು ಹೇಳಿದರೂ ಮೇಲ್ಭಾಗದ ರೈತರು ಕೇಳುತ್ತಿಲ್ಲ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ರಾಮಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎನ್‌ಆರ್‌ಬಿಸಿಯಲ್ಲಿ ಮೇಲ್ಭಾಗದ ರೈತರಿಗೆ 10 ದಿನ ನೀರು ಮತ್ತು ಕೊನೆಯ ಭಾಗದ ರೈತರಿಗೆ 10 ದಿನ ನೀರು ಹಂಚಿಕೆ ಮಾಡಿದ್ದಾರೆ. ಅದೇ ರೀತಿ ಟಿಎಲ್‌ಬಿಸಿಯಲ್ಲಿ ಮಾಡಿದರೆ ಮಾತ್ರ ಸಿರವಾರ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದೇವೆ. ಇನ್ನು ಸ್ವಲ್ಪ ದಿನ ನೀರು ಪೂರೈಸಿದರೆ ಸಾಕಾಗುತ್ತದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಮಾತ್ರ ಕಾಲುವೆ ಕೊನೆಯ ಭಾಗದ ರೈತರಿಗೆ ನ್ಯಾಯ ದೊರಕಿಸುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಜಕ್ಕಣಕಿ ಗ್ರಾಮದ ರೈತರು ಅಳಲು ತೋಡಿಕೊಂಡರು.

ನೀರು ಸಾಕಾಗುತ್ತಿಲ್ಲ

ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ ಎಂಬುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ನಿಗಮದಲ್ಲಿ ಗುತ್ತಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ವೇತನ ನೀಡುವುದು ಸಾಧ್ಯವಾಗುತ್ತಿಲ್ಲ. ಅನುದಾನವಿಲ್ಲದೆ ನಿಗಮದಲ್ಲಿ ಹೊಸ ಸಿಬ್ಬಂದಿ ನೇಮಿಸಿಕೊಳ್ಳುವುದು ಕಷ್ಟ. ಬಹಳಷ್ಟು ಎಂಜಿನಿಯರುಗಳು ಕೆಲಸ ಬಿಟ್ಟು ಹೋಗಿದ್ದಾರೆ. ಸಿಬ್ಬಂದಿ ಕೊರತೆ ಬಹಳ ಇದೆ ಎಂದು ಟಿಎಲ್‌ಬಿಸಿ ಯರಮರಸ್‌ ವಲಯ ಕಚೇರಿಯ ಸುಪರ್‌ಟಿಡೆಂಟ್‌ ಅಫ್‌ ಎಂಜಿನಿಯರ್‌ ರಾಮಪ್ರಸಾದ್‌ ಹೇಳಿದರು.

ನೆಲ್ಲು ಎರಡನೇ ಬೆಳೆ ಬೆಳೆಯಬಾರದು. ಅದಕ್ಕೆ ಸಮರ್ಪಕವಾಗಿ ನೀರು ಸಿಗುವುದಿಲ್ಲ ಎಂಬುದನ್ನು ರೈತರಿಗೆ ಹೇಳಲಾಗಿದೆ. ಆದರೂ ಮೇಲ್ಭಾಗದ ರೈತರು ನೆಲ್ಲಿಗೆ ನೀರು ಬಿಟ್ಟುಕೊಳ್ಳುತ್ತಿದ್ದಾರೆ. ಕಾಲುವೆ ನೀರು ನಿರ್ವಹಣೆಗೆ ಸಿಬ್ಬಂದಿ ಬೇಕಾಗುತ್ತಾರೆ ಎಂದರು.

* * 

ನೀರು ಬಿಡುವಂತೆ ಅಧಿಕಾರಿ ಗಳನ್ನು ಕೇಳುತ್ತಿದ್ದೇವೆ. ಭರವಸೆ ಕೊಟ್ಟು ಹೋಗುತ್ತಿದ್ದಾರೆ ವಿನಾ ಬೇಡಿಕೆ ಈಡೇರಿಸುತ್ತಿಲ್ಲ. ಶೀಘ್ರದಲ್ಲೆ ಹೋರಾಟ ಆರಂಭಿಸುತ್ತೇವೆ.
ದೇವರಾಜಗೌಡ
ಜಕ್ಕಲದಿನ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT