ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆವ ಬಿಸಿಲೂರ ಜಲಧಾರೆಗಳು

ಅಕ್ಷರ ಗಾತ್ರ

ಗುರುಮಠಕಲ್: ಗುರುಮಠಕಲ್ ಭಾಗದಲ್ಲಿ ವರ್ಷವಿಡೀ ರಭಸದ ನೀರಿನ ಹರಿವಿಲ್ಲದಿದ್ದರೂ ಬತ್ತದೆ ಹರಿವ ಜಲಧಾರೆಗಳಿಂದಾಗಿ ಬಿಸಿಲೂರಿನಲ್ಲಿ ಮಲೆನಾಡ ಅನುಭವವನ್ನು ನೀಡುತ್ತಿವೆ. ಸಮೀಪದ ಧಬ್ ಧಬಿ, ಗವಿಸಿದ್ದಲಿಂಗೇಶ್ವರ ಹಾಗೂ ಬಂಡಲೋಗು ಜಲಪಾತಗಳು ಸದಾ ತಂಪು ನೀಡುತ್ತವೆ.

‘ಸುತ್ತಲೂ ದಟ್ಟ ಮತ್ತು ಎತ್ತರದ ಗುಡ್ಡಗಳು, ಮರಗಳು, ದೊಡ್ಡ ಕಲ್ಲು ಬಂಡೆಗಳ ನಡುವೆ ಬಳುಕುತ್ತ ಹರಿವ ತೊರೆಗಳಿಂದ ಪ್ರವಾಸಿಗರನ್ನು ಕೈಬೀಸಿ ಸೆಳೆಯುವ ಈ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾದರೆ ನಮ್ಮ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇತರೆ ಭಾಗದ ಜನರಿಗೂ ಪ್ರಕೃತಿಯ ಸೊಬಗನ್ನು ಸವಿಯುವ ಅವಕಾಶವನ್ನು ನೀಡಿದಂತಾಗುತ್ತದೆ. ಈ ನಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡರೆ ಚೆನ್ನ’ ಎನ್ನುತ್ತಾರೆ ಸ್ಥಳೀಯರಾದ ನರಸಿಂಹುಲು, ವಿಜಯ, ಮಾಶಪ್ಪ ಹಾಗೂ ಸಂತೋಷ.

‘ಹಸಿರು ಕಾನನದ ನಡುವೆ ಧುಮ್ಮಿಕ್ಕುವ ಜಲರಾಶಿ ಹಾಗು ಪಕ್ಷಿಗಳ ಚಿಲಿಪಿಲಿ ನಾದದಿಂದಾಗಿ ಬಂದ ಪ್ರವಾಸಿಗರನ್ನು ಮಂತ್ರಮುಗ್ದ ಗೊಳಿಸುತ್ತದೆ. ಈ ಜಲಧಾರೆಗಳ ಹತ್ತಿರದಲ್ಲಿ ಯಾವುದೇ ಮೊಬೈಲ್‌ ಸಂಪರ್ಕ ಸಿಗದಿರುವುದು ಸಂತಸದ ಕ್ಷಣಗಳನ್ನು ಆಸ್ವಾದಿಸಲು ಅನುಕೂಲ ಕರವಾಗಿದೆ. ಇಲ್ಲಿಗೆ ಬಂದು ಸಮಯ ಕಳೆದರೆ ಯಾಂತ್ರಿಕ ಬದುಕಿನ ಜಂಜಾಟಗಳಿಂದಾದ ಬೇಸರವನ್ನು ಒಂದಿಷ್ಟು ಕಡಿಮೆಗೊಳಿಸಿಕೊಂಡಂತಾ ಗುತ್ತದೆ’ ಎನ್ನುವುದು ಪ್ರವಾಸಿಗರಾದ ಪ್ರೇಮಕುಮಾರ ಬೀದರ್‌, ವಿಶ್ವನಾಥ, ಜಯನಾಥ ಅವರ ಮಾತುಗಳು.

ಗವಿಸಿದ್ದಲಿಂಗೇಶ್ವರ ಜಲಪಾತದಲ್ಲಿ ಧುಮ್ಮಿಕ್ಕುವ ಜಲಧಾರೆಯ ಕೆಳಗಿರುವ ‘ಗವಿ’ಯಲ್ಲಿ ಹೋಗುವುದು ಒಂದು ಬಗೆಯ ಸಂತೋಷವಾದರೆ, ಧಬ್ ಧಬಿ ಹತ್ತಿರ ಸುತ್ತಲಿನ ಬೆಟ್ಟಗಳನ್ನು, ಹಸಿರನ್ನು ಆಸ್ವಾದಿಸುವುದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಇನ್ನುಳಿ ದಂತೆ ಪಟ್ಟಣದ ಹೊರ ವಲಯದ ಮಲ್ಲಾ ಕಾಡಿನಲ್ಲಿರುವ ಬಂಡಲೋಗು ಜಲಪಾತದ್ದು ಒಂದಿಷ್ಟು ಭಿನ್ನವಾದ ಅನುಭವ. ಸುಮಾರು 2 ಕಿ.ಮೀ ಕಾಡಿನಲ್ಲಿ ಕಾಲುನಡಿಗೆಯಲ್ಲಿ ಕೇವಲ ಕಲ್ಲುಗುಂಡುಗಳೇ ತುಂಬಿದ ಹಳ್ಳದ ಮೂಲಕ ಇಲ್ಲಿಗೆ ಹೋಗಬೇಕು. ಇದು ಚಾರಣ ಪ್ರಿಯರಿಗೆ ಮುದ ನೀಡುತ್ತದೆ.

‘ಸ್ಥಳೀಯರ ಸಹಕಾರದಿಂದ ಮಾತ್ರ ಬಂಡಲೋಗು ಜಲಪಾತಕ್ಕೆ ಹೋಗುವುದು ಉತ್ತಮ. ಇಲ್ಲವಾದರೆ ಕಾಡಿನಲ್ಲಿ ಸರಿಯಾದ ದಾರಿ ಸಿಗದೆ ಕಷ್ಟವಾಗುತ್ತದೆ. ಯಾವುದೇ ರೀತಿಯ ಸೂಚನಾ ಫಲಕಗಳಾಗಲಿ, ಸರಿಯಾದ ದಾರಿಯಾಗಲಿ ಇಲ್ಲದಿರುವುದರಿಂದ ಕೆಲವರು ಮಾತ್ರ ಹೋಗುತ್ತಾರೆ. ಇಲ್ಲಿ ಕನಿಷ್ಠ ಮುಖ್ಯರಸ್ತೆಯಿಂದ ಸೂಚನಾ ಫಲಕಗಳನ್ನು ಅಳವಡಿಸಿದರೆ ಇಂತಹ ನೈಸರ್ಗಿಕ ದೃಶ್ಯಕಾವ್ಯವನ್ನು ಸವಿಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ರವಿ, ಮಲ್ಲಣ್ಣ, ಸಾಬಪ್ಪ ಹಾಗೂ ಮಹೇಶ.

ಅಭಿವೃದ್ಧಿಯ ಕನಸಲ್ಲಿ ಜನ: ‘ಜಲಧಾರೆಗಳಲ್ಲಿ ಮಳೆಗಾಲವನ್ನು ಬಿಟ್ಟರೆ ನೀರಿನ ಹರಿವು ತುಂಬಾ ಕಡಿಮೆ. ಆದರೂ ವರ್ಷವಿಡೀ ನೀರಿನ ಹರಿವನ್ನು ಹೊಂದಿರುವ ಇಂತಹ ಜಲಪಾತಗಳ ಹತ್ತಿರ ಶೌಚಾಲಯ, ಮಹಿಳೆಯರಿಗೆ ಉಡುಪು ಧರಿಸುವ ಕೊಠಡಿ, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿದರೆ ನಮ್ಮಲ್ಲಿಯೂ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸಿಗರಿಗೂ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿ ನಿಧಿಗಳು ಈ ಕುರಿತು ಚಿಂತಿಸಬೇಕು’ ಎನ್ನುವುದು ಸ್ಥಳೀಯರ ಮನವಿ.

ಹೀಗೆ ಬನ್ನಿ..

ಯಾದಗಿರಿ, ಸೇಡಂ, ಕಲಬುರ್ಗಿ ನಗರಗಳಿಂದ ನೇರವಾಗಿ ಗುರುಮಠಕಲ್ ಪಟ್ಟಣಕ್ಕೆ ಬಸ್ ವ್ಯವಸ್ಥೆಯಿದೆ. ಪಟ್ಟಣದಿಂದ ಸುತ್ತಲು 10 ಕಿ.ಮೀ ವ್ಯಾಪ್ತಿಯ ಒಳಗಡೆ ಈ ಜಲಪಾತಗಳು ಇವೆ. ಖಾಸಗಿ ವಾಹನವಿದ್ದರೆ ಅನುಕೂಲ.

* * 

ವರ್ಷದಲ್ಲಿ ನಾಲ್ಕೈದು ಬಾರಿ ಗವಿಗೆ ಬರುತ್ತೇವೆ. ಎಂತಹ ಬೇಸಿಗೆಯಲ್ಲಿಯೂ ತಂಪು ಮತ್ತು ನೀರಿನ ಹರಿವು ಇರುತ್ತದೆ. ಇಲ್ಲಿನ ಉದ್ಯಾನ ಮಕ್ಕಳಿಗೆ ಇಷ್ಟವಾಗುತ್ತದೆ.
ಮಹೇಂದ್ರ ನಾಟಿಕರ್
ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT