ಕಲಬುರ್ಗಿಗೂ ಬಂದ ಮಣ್ಣಿನ ಕುಕ್ಕರ್‌, ಫ್ರಿಡ್ಜ್‌, ಲೋಟ..

7

ಕಲಬುರ್ಗಿಗೂ ಬಂದ ಮಣ್ಣಿನ ಕುಕ್ಕರ್‌, ಫ್ರಿಡ್ಜ್‌, ಲೋಟ..

Published:
Updated:
ಕಲಬುರ್ಗಿಗೂ ಬಂದ ಮಣ್ಣಿನ ಕುಕ್ಕರ್‌, ಫ್ರಿಡ್ಜ್‌, ಲೋಟ..

ಕಲಬುರ್ಗಿ: ಮಣ್ಣಿನಲ್ಲಿ ತಯಾರಿಸಿದ ಅಡುಗೆ ಪರಿಕರಗಳನ್ನು ಗುಜರಾತ್‌ನಿಂದ ತರಿಸಿ ನಗರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇಲ್ಲಿನ ಶರಣಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಕುಂಬಾರ ಗಲ್ಲಿಯಲ್ಲಿ ಗ್ರಾಮ ಸ್ವರಾಜ್ಯ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ. ಅಲ್ಲಿ ಮಣ್ಣಿನಿಂದ ತಯಾರಿಸಿದ ವಾಟರ್ ಫಿಲ್ಟರ್, ಫ್ರಿಡ್ಜ್, ವಾಟರ್ ಪಾಟ್, ಕುಕ್ಕರ್, ವಾಟರ್ ಕ್ಯಾನ್‌, ನಾನ್‌ ಸ್ಟಿಕ್ ತವಾ, ಕಂದೀಲು (ಲ್ಯಾಂಪ್), ಲೋಟ, ತಟ್ಟೆ, ಮಡಕೆ ಸೇರಿ ಅಡುಗೆ ಮನೆಯಲ್ಲಿ ಬಳಸುವ ಬಹುತೇಕ ಪರಿಕರಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

ಗುಜರಾತ್‌ನ ಮಿಟ್ಟು ಕೂಲ್ ಎಂಬ ಕಂಪೆನಿಯು ಪರಿಸರಸ್ನೇಹಿ ಅಡುಗೆ ಪರಿಕರಗಳನ್ನು ತಯಾರಿಸುತ್ತಿದೆ. ಕಲಬುರ್ಗಿಯ ಎಂಬಿಎ ಪದವೀಧರ ಸಂಗಮೇಶ ಅವರು ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಮಾರು ಹೋಗಿ ಮಣ್ಣಿನ ಪರಿಕರಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮಳಿಗೆಯನ್ನು ಆರಂಭಿಸಿದ್ದಾರೆ.

‘ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಪರಿಕರಗಳನ್ನು ಬಳಸುವುದು ಹೆಚ್ಚು ಸೂಕ್ತ. ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರನ್ನು ಕುಡಿದರೆ ಶೀತವಾಗುತ್ತದೆ. ಆದರೆ ಮಣ್ಣಿನ ಮಡಿಕೆ, ವಾಟರ್ ಫಿಲ್ಟರ್, ಬಾಟಲ್‌ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಈ ಕಾರಣಕ್ಕಾಗಿಯೇ ನಾನು ಎಂಬಿಎ ಓದಿದ್ದರೂ ಉದ್ಯೋಗಕ್ಕೆ ಸೇರದೆ ಮಣ್ಣಿನ ಪರಿಕರಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಆಗುತ್ತದೆ’ ಎಂದು ಗ್ರಾಮ ಸ್ವರಾಜ್ಯ ಮಳಿಗೆಯ ಮಾಲೀಕ ಸಂಗಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳಿಗೆ ಹೋಲಿಕೆ ಮಾಡಿದರೆ ಮಣ್ಣಿನ ಪರಿಕರಗಳ ಬೆಲೆ ಹೆಚ್ಚೇನಿಲ್ಲ. ಆದರೆ ಬಾಳಿಕೆ ದೃಷ್ಟಿಯಿಂದ ಖರೀದಿಗೆ ಜನರು ಹಿಂಜರಿಯುತ್ತಾರೆ. ಮನೆಯಲ್ಲಿ ಮಕ್ಕಳು ಇದ್ದರೆ ಒಡೆದು ಹಾಕಬಹುದು ಎಂದು ಯೋಚಿಸುತ್ತಾರೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಅಂತಹ ಗ್ರಾಹಕರಿಗೆ ರಿಯಾಯಿತಿ ಕೂಡ ಕೊಡಲಾಗುತ್ತಿದೆ. ಕುಂಬಾರರು ತಯಾರಿಸುತ್ತಿದ್ದ ಮಡಿಕೆಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಹಾಗಂತ ಭಯಪಡುವ ಅಗತ್ಯವಿಲ್ಲ. ಆಧುನಿಕತೆಗೆ ತಕ್ಕಂತೆ ಬದಲಾಗುತ್ತ ಹೋದರೆ ಮಣ್ಣಿನ ಪರಿಕರಗಳು ಜನರಿಗೆ ಖಂಡಿತವಾಗಿಯೂ ಇಷ್ಟವಾಗುತ್ತವೆ’ ಎಂದು ಅವರು ಹೇಳಿದರು.

ಫೇಸ್‌ಬುಕ್‌ನಲ್ಲಿ ಮಾಹಿತಿ

ಸಂಗಮೇಶ ಅವರು ತಮ್ಮ ಮಳಿಗೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ. ಗ್ರಾಮ ಸ್ವರಾಜ್ಯ.ಸ್ಟೋರ್ ಎಂಬ ಪೇಜ್‌ಗೆ ಭೇಟಿ ನೀಡಿದರೆ ಇವರ ಮಳಿಗೆಯಲ್ಲಿ ಲಭ್ಯವಿರುವ ಪರಿಕರಗಳು, ಅವುಗಳ ದರವನ್ನು ತಿಳಿದುಕೊಳ್ಳಬಹುದು. ಅಲ್ಲದೆ ವಿಡಿಯೊ ಕೂಡ ನೋಡಬಹುದಾಗಿದೆ.

* * 

ಗುಜರಾತ್ ರಾಜ್ಯದಿಂದ ಮಣ್ಣಿನ ಅಡುಗೆ ಪರಿಕರಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ತಯಾರಿಸುವ ಬಗ್ಗೆ ಚಿಂತನೆ ನಡೆದಿದೆ

ಸಂಗಮೇಶ

ಗ್ರಾಮ ಸ್ವರಾಜ್ಯ ಮಳಿಗೆ ಮಾಲೀಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry