ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊಗಾಗಿ 185 ಮರಗಳ ಸ್ಥಳಾಂತರ

ಐಐಎಂಬಿ ಆವರಣ, ಬಿಬಿಎಂಪಿಯ ಶಾಂತಿನಿಕೇತನ ಉದ್ಯಾನದಲ್ಲಿ ಮರುನಾಟಿ
Last Updated 10 ಜನವರಿ 2018, 9:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ– ನಾಗವಾರ ಮಾರ್ಗದ ಕಾಮಗಾರಿ ಸಲುವಾಗಿ ಬಲಿಯಾಗಬೇಕಿದ್ದ ಬನ್ನೇರುಘಟ್ಟ ರಸ್ತೆ ಪಕ್ಕದ 185 ಮರಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಮರಗಳ ಸ್ಥಳಾಂತರ ಕಾರ್ಯವೂ ಆರಂಭವಾಗಿದೆ.

ಈ ಮರಗಳ ಪೈಕಿ 51 ಮರಗಳನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಆವರಣಕ್ಕೆ ಹಾಗೂ ಉಳಿದ 134 ಮರಗಳನ್ನು ಬಿಬಿಎಂಪಿಯ ಶಾಂತಿನಿಕೇತನ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವೇ (ಬಿಎಂಆರ್‌ಸಿಎಲ್) ವಹಿಸಿಕೊಂಡಿದೆ.

ಕಾಮಗಾರಿಗಾಗಿ ಅವುಗಳನ್ನು ಕಡಿಯುವುದು ಅಥವಾ ಸ್ಥಳಾಂತರ ಮಾಡುವುದು ಅನಿವಾರ್ಯ. ಮರಗಳ ಹನನಕ್ಕೆ ಸ್ಥಳೀಯರೂ ವಿರೋಧಿಸಿದ್ದರು. ಹೀಗಾಗಿ, ಸ್ಥಳಾಂತರಕ್ಕೆ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರತಿ ಮರದ ಸ್ಥಳಾಂತರಕ್ಕೆ ₹10,750ರಂತೆ 185 ಮರಗಳ ಸ್ಥಳಾಂತರಕ್ಕೆ ಒಟ್ಟು ₹19,88,750 ಖರ್ಚಾಗಲಿದೆ. ಈಗಾಗಲೇ ಆ ಮರಗಳ ರೆಂಬೆ–ಕೊಂಬೆಗಳನ್ನು ಕಡಿಯುವ ಕೆಲಸವೂ ಆರಂಭವಾಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಐಎಂಬಿ ಬಳಿ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದೆ. ಅದಕ್ಕಾಗಿ ಈಗಾಗಲೇ ಜಾಗವನ್ನೂ ಗುರುತಿಸಿದ್ದೇವೆ. ಅಲ್ಲಿ ಒಟ್ಟು 51 ಮರಗಳಿದ್ದು, ಅವುಗಳನ್ನು ಐಐಎಂಬಿಯ ಆವರಣದಲ್ಲಿ ನೆಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಮರಗಳ ಸುತ್ತ ಗುಂಡಿ ತೋಡಿ ಅವುಗಳ ಬೇರಿಗೆ ಹಾನಿಯಾಗದಂತೆ ಹೊರ ತೆಗೆಯಲಾಗುತ್ತದೆ. ಬಳಿಕ ಅವುಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಇದಕ್ಕೆ ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ’ ಎಂದರು.

ಹೆಚ್ಚಿನ ಮರಗಳ ಸ್ಥಳಾಂತರಕ್ಕೆ ಅಭ್ಯಂತವಿಲ್ಲ: ‘35 ಮರಗಳ ಸ್ಥಳಾಂತರಕ್ಕೆ ಅನುಮತಿ ಕೋರಿ ಒಂದು ತಿಂಗಳ ಹಿಂದೆ ನಿಗಮದ ಅಧಿಕಾರಿಗಳು ಪತ್ರ ಬರೆದಿದ್ದರು. ಈ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಒಪ್ಪಿಗೆ ಸೂಚಿಸಿದ್ದೇವೆ’ ಎಂದು ಐಐಎಂಬಿಯ ಮುಖ್ಯ ಆಡಳಿತಾಧಿಕಾರಿ ನಿವೃತ್ತ ಕರ್ನಲ್ ರಗ್‌ಬೀರ್ ಸಿಂಗ್ ತಿಳಿಸಿದರು.

‘ಇಲ್ಲಿಯವರೆಗೆ ನಾವು 35 ಮರಗಳ ಸ್ಥಳಾಂತರಕ್ಕೆ ಮಾತ್ರ ಅನುಮತಿ ನೀಡಿದ್ದೇವೆ. 51 ಮರಗಳನ್ನು ಐಐಎಂಬಿಯ ಆವರಣದಲ್ಲಿ ನೆಡುವುದಾಗಿ ನಿಗಮದ ಅಧಿಕಾರಿಗಳು ಹೇಳಿರುವುದಾಗಿ ಗೊತ್ತಾಗಿದೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಇನ್ನೂ ಹೆಚ್ಚಿನ ಮರಗಳನ್ನು ನೆಡಲು ಅವಕಾಶ ಕಲ್ಪಿಸುತ್ತೇವೆ’ ಎಂದು ಹೇಳಿದರು.

‘ಸ್ಥಳಾಂತರ ಮಾಡುವ ಮರಗಳನ್ನು ಆವರಣದ ಯಾವ ಜಾಗದಲ್ಲಿ ನೆಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಅವುಗಳನ್ನು ನೆಟ್ಟು, ಪೋಷಣೆ ಮಾಡುವ ಜವಾಬ್ದಾರಿಯನ್ನು ನಿಗಮವೇ ಹೊತ್ತುಕೊಂಡಿದೆ’ ಎಂದರು.

ಟ್ವಿಟರ್‌ನಲ್ಲಿ ಮೆಚ್ಚುಗೆ: ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಮೆಟ್ರೊ ಕಾಮಗಾರಿಗಾಗಿ ಬಲಿಯಾಗಬೇಕಿದ್ದ ಮರಗಳನ್ನು ಸ್ಥಳಾಂತರ ಮಾಡುವುದಾಗಿ ನಿಗಮವು ಟ್ವಿಟರ್‌ನಲ್ಲಿ ತಿಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT