ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ನಿಲ್ಲಿಸಿ

Last Updated 9 ಜನವರಿ 2018, 9:11 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದುಡಿಯುವ ವರ್ಗಗಳ ಮೇಲಿನ ದಬ್ಬಾಳಿಕೆ ನಿಲ್ಲಿಸಬೇಕು. ಈ ದೇಶ ಕಾರ್ಮಿಕರ ಮತ್ತು ರೈತರ ಕೈಯಲ್ಲಿದೆಯೇ ಹೊರತು ಬಂಡವಾಳಶಾಹಿ ಮತ್ತು ಅಧಿಕಾರಿಶಾಹಿ ಕೈಯಲ್ಲಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಅನಂತಸುಬ್ಬರಾವ್ ಹೇಳಿದರು.

ಇಲ್ಲಿನ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಷನ್‌ ವತಿಯಿಂದ ಸೋಮವಾರ ಏರ್ಪಡಿಸಿದ್ದ ಈಶಾನ್ಯ ಕರ್ನಾಟಕ ಸಾರಿಗೆ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ಆ ಭರವಸೆ ಇದುವರೆಗೂ ಈಡೇರಿಲ್ಲ. ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತಂದು ಬಂಡವಾಳ ಶಾಹಿ ಮತ್ತು ಅಧಿಕಾರ ಶಾಹಿ ವರ್ಗಕ್ಕೆ ಅನುಕೂಲಮಾಡಿಕೊಟ್ಟಿದೆಯೇ ಹೊರತು ದುಡಿಯುವ ವರ್ಗಕ್ಕೆ
ಅಲ್ಲ’ ಎಂದು ಆರೋಪಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಸ ಆರ್ಥಿಕ ನೀತಿ ಜಾರಿಗೆ ತಂದು ದೇಶದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಆದರೆ ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ರೈತರ ಆತ್ಮಹತ್ಯೆ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಮಾಜಿ ಸಚಿವ ಎಸ್‌.ಕೆ.ಕಾಂತ ಮಾತನಾಡಿ, ‘ಸಾರಿಗೆ ಸಂಸ್ಥೆ ನೌಕರರ ಕೆಲಸ ತುಂಬಾ ಕಷ್ಟದಾಯಕ. ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಇವರ ಕಷ್ಟ ಸುಖಗಳಿಗೆ ಸರ್ಕಾರ ಸ್ಪಂದಿಸಬೇಕು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅವರು ಒತ್ತಾಯಿಸಿದರು.

ವಕೀಲ ಪಿ.ವಿಲಾಸಕುಮಾರ್ ಮಾತನಾಡಿ, ‘ಎನ್‌ಇಕೆಆರ್‌ಟಿಸಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದೇ ರೀತಿ ಮುಂಬರುವ ದಿನಗಳಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಹೆಚ್ಚು ಜನರು ಭಾಗವಹಿಸಬೇಕು.ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕು’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ಟಿ.ಚನ್ನಪ್ಪ, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್‌ ಡಿ.ಎ., ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ವಕೀಲ ಬಿ.ಆರ್‌.ಪಾಟೀಲ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಪತಕಿ, ಭಾರತೀಯ ಮಹಿಳಾ ಒಕ್ಕೂಟದ ಸಂಚಾಲಕಿ ಪದ್ಮಾವತಿ ಮಾಲಿಪಾಟೀಲ, ಸಂಘಟನೆ ಜಂಟಿ ಕಾರ್ಯದರ್ಶಿ ಎಚ್‌.ಎ.ಆದಿಮೂರ್ತಿ, ಸಂಘಟನಾ ಕಾರ್ಯದರ್ಶಿ ರತ್ನಪ್ಪ
ಜೈನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT