ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಪ್ರವೇಶದಲ್ಲಿ ಶಾಸಕರ ಹಸ್ತಕ್ಷೇಪ: ಆರೋಪ

Last Updated 10 ಜನವರಿ 2018, 6:25 IST
ಅಕ್ಷರ ಗಾತ್ರ

ಕಾರವಾರ: ‘ಇಲ್ಲಿನ ಶಾಸಕರು ತಮ್ಮ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನ ಅನುಕೂಲಕ್ಕಾಗಿ ಸರ್ಕಾರಿ ಕಾಲೇಜಿನ ಸೀಟು ಹಂಚಿಕೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ನಾಗರಾಜ ನಾಯಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ  ಆರೋಪಿಸಿದರು.

‘ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 252 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಆದರೆ 2016ರಲ್ಲಿ 179 ಹಾಗೂ 2017ರಲ್ಲಿ 133 ಮಂದಿಗೆ ಮಾತ್ರ ಅಲ್ಲಿ ಅವಕಾಶ ನೀಡಲಾಗಿದೆ. ಈ ವರ್ಷದಲ್ಲಿ ಉಳಿದ 119 ಸೀಟ್‌ಗಳ ಭರ್ತಿಗೆ ಕೆಲವರು ಹಸ್ತಕ್ಷೇಪ ಮಾಡಿರುವುದರಿಂದ 2ನೇ ಹಂತದ ಹಂಚಿಕೆ ನಡೆದಿಲ್ಲ. ಅಂತಿಮ ಹಂತ ದವರೆಗೆ ಸೀಟು ಸಿಗಬಹುದೆಂದು ಕಾದಿದ್ದ ಸುಮಾರು 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾಜಾಳಿಯ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಹಂಚಿಕೆಯಾಗದಂತೆ ಇಲ್ಲಿನ ಶಾಸಕರು ಒತ್ತಡ ಹಾಕುತ್ತಿದ್ದಾರೆ’ ಎಂದರು.

‘ಸರ್ಕಾರಿ ಕಾಲೇಜುಗಳಲ್ಲಿ ಪ್ರಯೋಗಾಲಯ ಇಲ್ಲದಿದ್ದಲ್ಲಿ ಸಮೀಪದ ಖಾಸಗಿ ಕಾಲೇಜು ಪ್ರಯೋಗಾಲಯ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬುದು ಕಾಯಿದೆ ಅಲ್ಲಿದೆ. ಆದರೆ ಇಲ್ಲಿನ ಸರ್ಕಾರಿ ಕಾಲೇಜಿನ ಪ್ರತಿ ವಿದ್ಯಾ ರ್ಥಿಗಳಿಂದ ಸಾವಿರ ರೂ. ಪಡೆದು ಒಂದು ವರ್ಷದವರೆಗೆ ಪ್ರಯೋಗಾಲಯ ಕಲ್ಪಿಸಲಾಗಿದ್ದು, ನಂತರದ ವರ್ಷಗಳಲ್ಲಿ ಅವಕಾಶಗಳನ್ನು ನಿರಾಕರಿಸಲಾಗಿದೆ. ಪ್ರವೇಶಾತಿ ಮುಗಿದ ಬಳಿಕ ಪ್ರಯೋಗಾಲಯ ನೀಡುವ ಬಗ್ಗೆ ಪ್ರಸ್ತಾಪಿಸಿದೆ’ ಎಂದು ಹೇಳಿದರು.

‘ಸರ್ಕಾರಿ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಆರಂಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್‌ ಕೊಠಡಿಗಳಲ್ಲಿ ತರಗತಿ ಆರಂಭಿಸಲಾಗಿತ್ತು. ನಂತರ ವಿದ್ಯಾರ್ಥಿಗಳು ತರಗತಿಯನ್ನು ಕಾಲೇಜಿಗೆ ಸ್ಥಳಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದು ಕಾಲೇಜಿಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಸ್ಥಳೀಯ ಶಾಸಕರೇ ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ದೂರಿದರು. ರಾಮು ರಾಯ್ಕರ್, ರೂಪಾಲಿ ನಾಯ್ಕ, ಮನೋಜ್ ಭಟ್, ಗಂಗಾಧರ ಭಟ್, ಗಣಪತಿ ಉಳ್ವೇಕರ್, ಭಾಸ್ಕರ್ ನಾರ್ವೇಕರ್, ಜಗದೀಶ ಹಾಜರಿದ್ದರು.

ಆರಂಭದಲ್ಲಿಯೇ ತಿಳಿಸಲಾಗಿತ್ತು...

ಮಾಜಿ ಸಚಿವ ಆನಂದ್ ಅಸ್ನೋಟಿಕರ್‌ಗೆ ಚರ್ಚೆ ನಡೆಸಲು ಸ್ಥಳೀಯ ಮುಖಂಡರು ಅವಕಾಶ ನೀಡಿಲ್ಲವಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖಂಡ ನಾಗರಾಜ ನಾಯಕ, ಚುನಾವಣೆಯಲ್ಲಿ ಸೋತ ಬಳಿಕ ಪಕ್ಷಲ್ಲಿದ್ದವರ ನಡುವೆಯೇ ಹುಳಿ ಹಿಂಡಿ ಹೋದವರಿಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷರೆ ಸ್ಪಷ್ಟಪಡಿಸಿದ್ದಾರೆ. ಜತೆಗೆ ಆನಂದ್ ಅವರಿಗೆ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳದಂತೆ ಆರಂಭದಲ್ಲಿಯೇ ನೋಟಿಸ್ ನೀಡಲಾಗಿದೆ. ಆದರೆ ಈಗ ಬಂದು ಕೇಳಿದರೆ ಏನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT