ಆನ್‌ಲೈನ್‌ ಅರ್ಜಿಯ ದೋಷ ಸರಿಪಡಿಸಲು ಶಿಕ್ಷಕರ ಸಂಘ ಮನವಿ

7
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ಅರ್ಜಿಯ ದೋಷ ಸರಿಪಡಿಸಲು ಶಿಕ್ಷಕರ ಸಂಘ ಮನವಿ

Published:
Updated:

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಆನ್‌ಲೈನ್‌ ಅರ್ಜಿಯ ದೋಷಗಳನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದೆ.

‘ವರ್ಗಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ಶಾಲೆಗೆ ಕರ್ತವ್ಯಕ್ಕೆ ಹಾಜರಾದ ದಿನಾಂಕ ಹಾಗೂ ಪ್ರೊಬೆಷನರಿ ಅವಧಿ ಮುಕ್ತಾಯಗೊಂಡ ದಿನಾಂಕಗಳನ್ನು ಸೂಕ್ತವಾಗಿ ನಮೂದಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಕ ದಂಪತಿ ವರ್ಗಾವಣೆ ಪ್ರಕರಣಗಳಲ್ಲಿ ಕಾಲಮಿತಿಯ ಅಗತ್ಯವಿಲ್ಲದಿದ್ದರೂ ಆನ್‌ಲೈನ್‌ ಅರ್ಜಿಯಲ್ಲಿ ಕಾಲಮಿತಿ ತೋರಿಸುತ್ತಿದೆ. ಪರಸ್ಪರ ವರ್ಗಾವಣೆಗಳಲ್ಲಿಯೂ ಹಲವು ಗೊಂದಲಗಳಿವೆ. ಆನ್‌ಲೈನ್‌ ಅರ್ಜಿಯ ಈ ಎಲ್ಲಾ ದೋಷಗಳನ್ನು ಸರಿಪಡಿಸುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇವೆ’ ಎಂದು ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ) ನಿರ್ದೇಶಕ ಬಿ.ಕೆ. ಬಸವರಾಜು, ‘ಆನ್‌ಲೈನ್‌ ಅರ್ಜಿಯ ದತ್ತಾಂಶ ಸಂಗ್ರಹದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆಯನ್ನು ಬಗೆಹರಿಸುವಂತೆ ತಾಂತ್ರಿಕ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಲಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry