11 ತಿಂಗಳ ಬಳಿಕ ಹಂತಕ ಸೆರೆ

7

11 ತಿಂಗಳ ಬಳಿಕ ಹಂತಕ ಸೆರೆ

Published:
Updated:
11 ತಿಂಗಳ ಬಳಿಕ ಹಂತಕ ಸೆರೆ

ಬೆಂಗಳೂರು: ಹನ್ನೊಂದು ತಿಂಗಳ ಹಿಂದೆ ನಡೆದಿದ್ದ ಸಮೋಸ ವ್ಯಾಪಾರಿ ವಿಪಿನ್ ಕುಮಾರ್ (18) ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿರುವ ಬೆಳ್ಳಂದೂರು ಪೊಲೀಸರು, ಮೃತನ ಸ್ನೇಹಿತ ವಿಕಾಸ್ ಕುಮಾರ್ ಯಾದವ್‌ (23) ಎಂಬಾತನನ್ನು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ.

2017ರ ಫೆ.5ರಂದು ದೊಣ್ಣೆಯಿಂದ ತಲೆಗೆ ಹೊಡೆದು ವಿಪಿನ್‌ನನ್ನು ಕೊಲೆಗೈದಿದ್ದ ಆರೋಪಿ, ಉತ್ತರಪ್ರದೇಶದಲ್ಲಿದ್ದ ಮೃತನ ತಾಯಿ ಸಂಜುದೇವಿ ಅವರಿಗೆ ಕರೆ ಮಾಡಿ ‘ನಿಮ್ಮ ಮಗ ಮೂರ್ಛೆ ರೋಗದಿಂದ ಸತ್ತು ಹೋಗಿದ್ದಾನೆ’ ಎಂದು ಹೇಳಿದ್ದ. ಪೊಲೀಸರಿಗೂ ಇದೇ ರೀತಿ ಸುಳ್ಳು ಮಾಹಿತಿ ನೀಡಿದ್ದ.

ಮರಣೋತ್ತರ ಪರೀಕ್ಷೆ ನಡೆಸಿದ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು, ‘ವಿಪಿನ್ ಮೂರ್ಛೆ ರೋಗದಿಂದ ಸತ್ತಿಲ್ಲ. ಯಾರೋ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ’ ಎಂದು ವರದಿ ಕೊಟ್ಟರು. ಅಷ್ಟರಲ್ಲಾಗಲೇ ವಿಕಾಸ್ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಆ ನಂತರ ಬೆಳ್ಳಂದೂರು ಪೊಲೀಸರು ಕೊಲೆ (302) ಪ್ರಕರಣ ದಾಖಲಿಸಿಕೊಂಡು ಹಂತಕನ ಬಂಧನಕ್ಕೆ ಬಲೆ ಬೀಸಿದ್ದರು.

‘ನಗರ ತೊರೆದ ಬಳಿಕ ಆರೋಪಿ ರಾಜಸ್ಥಾನ, ದೆಹಲಿ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ. ಸಿಬ್ಬಂದಿಯ ವಿಶೇಷ ತಂಡ ಆತನನ್ನು ಹುಡುಕಿಕೊಂಡು ಈ ಎಲ್ಲ ರಾಜ್ಯಗಳಿಗೂ ಹೋಗಿ ಬಂದರೂ ಪ್ರಯೋಜನವಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಉತ್ತರಪ್ರದೇಶದಲ್ಲಿನ ಆರೋಪಿಯ ಮನೆಯ ಅಕ್ಕಪಕ್ಕದ ನಿವಾಸಿಗಳನ್ನೇ ಮಾಹಿತಿದಾರರನ್ನಾಗಿ ಮಾಡಿಕೊಂಡೆವು. ಆತ ಜ.2ರಂದು ಮನೆಗೆ ಬಂದಿರುವ ಬಗ್ಗೆ ಅವರು ಸುಳಿವು ಕೊಟ್ಟರು. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿ, ಅವರ ಮೂಲಕ ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಹಣ ಸ್ವಂತಕ್ಕೆ ಬಳಸಿಕೊಂಡಿದ್ದ’

‘ನಾನು 2015ರಿಂದ ಬೆಂಗಳೂರಿನಲ್ಲಿ ಸಮೋಸ ಮಾರುತ್ತಿದ್ದೆ. ವಿಪಿನ್ ಕೂಡ ನನ್ನ ರಾಜ್ಯದವನೇ ಆಗಿದ್ದರಿಂದ ಆತನನ್ನು ಕೆಲಸಕ್ಕೆ ಇಟ್ಟುಕೊಂಡೆ. ಆರಂಭದಲ್ಲಿ ನಂಬಿಕಸ್ಥ ನೌಕರನಂತೆ ಇದ್ದ ಆತ, ಕ್ರಮೇಣ ವ್ಯಾಪಾರದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಲು ‌ಶುರು ಮಾಡಿದ್ದ. ಈ ವಿಚಾರವಾಗಿ ಫೆ.5ರ ರಾತ್ರಿ ನಮ್ಮಿಬ್ಬರ ನಡುವೆ ಗಲಾಟೆ ಆಗಿತ್ತು. ಕೋಪದ ಭರದಲ್ಲಿ ದೊಣ್ಣೆಯಿಂದ ಹೊಡೆದಿದ್ದೆ’ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry