ಕಾಂಗ್ರೆಸ್‌ ಸಮಾವೇಶ: ಫ್ಲೆಕ್ಸ್‌ಗಳನ್ನು ಹೊತ್ತೊಯ್ದ ಜನರು

7

ಕಾಂಗ್ರೆಸ್‌ ಸಮಾವೇಶ: ಫ್ಲೆಕ್ಸ್‌ಗಳನ್ನು ಹೊತ್ತೊಯ್ದ ಜನರು

Published:
Updated:
ಕಾಂಗ್ರೆಸ್‌ ಸಮಾವೇಶ: ಫ್ಲೆಕ್ಸ್‌ಗಳನ್ನು ಹೊತ್ತೊಯ್ದ ಜನರು

ಚಾಮರಾಜನಗರ: ಸಮಾವೇಶ ಆರಂಭವಾಗುವ ಹೊತ್ತಿಗೇ ಊಟಕ್ಕಾಗಿ ನಿಗದಿಪಡಿಸಿದ್ದ ಜಾಗದಲ್ಲಿ ಉದ್ದನೆಯ ಸಾಲು ಸೃಷ್ಟಿಯಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಜನರು ಊಟಕ್ಕಾಗಿ ಮುಗಿಬಿದ್ದರು.

ಇನ್ನು ಕೆಲವರು ಸಮಾವೇಶ ಮುಗಿಯುವುದನ್ನೇ ಕಾದಿದ್ದವರಂತೆ, ವೇದಿಕೆ ಸುತ್ತಮುತ್ತ ಮತ್ತು ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಫ್ಲೆಕ್ಸ್‌ಗಳನ್ನು ಹೊತ್ತೊಯ್ಯತೊಡಗಿದರು. ಕೆಲವರು ಫ್ಲೆಕ್ಸ್‌ಗೆ ಅಂಟಿಸಿದ್ದ ಬ್ಯಾನರ್‌ಗಳನ್ನು ಸ್ಥಳದಲ್ಲಿಯೇ ಕಿತ್ತು ಮರದ ರೀಪ್‌ಗಳನ್ನು ಮನೆಗೆ ಕೊಂಡೊಯ್ದರು. ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಇದರಲ್ಲಿ ಹಿಂದೆ ಬೀಳಲಿಲ್ಲ.

‘ನಮ್ಮೂರಿಗೂ ಹೆಲಿಕಾಪ್ಟರ್‌ ಬಂತು’!

ನಾಗವಳ್ಳಿ ಗ್ರಾಮಕ್ಕೆ ಇದುವರೆಗೂ ಅನೇಕ ಸಚಿವರು ಭೇಟಿ ನೀಡಿದ್ದರೂ, ಮುಖ್ಯಮಂತ್ರಿಯೊಬ್ಬರು ಬಂದಿದ್ದು ಇದೇ ಮೊದಲು. ಅಲ್ಲದೆ, ಇಲ್ಲಿನ ನೆಲದಲ್ಲಿ ಹೆಲಿಕಾಪ್ಟರ್‌ ಇಳಿದಿದ್ದು ಸಹ ಇದೇ ಪ್ರಥಮ.

ಸಿದ್ದರಾಮಯ್ಯ ಅವರನ್ನು ಮತ್ತು ಹೆಲಿಕಾಪ್ಟರ್‌ ನೋಡಲು ಗ್ರಾಮಸ್ಥರು ಮುಗಿಬಿದ್ದರು. ಮುಖ್ಯಮಂತ್ರಿ ಬರುವ ವೇಳೆಗೆ ಹೆಲಿಪ್ಯಾಡ್‌ ಸುತ್ತಲೂ ತುಂಬಿಕೊಂಡಿದ್ದ ಜನರು, ಹೊರಡುವಾಗಲೂ ಮುತ್ತಿಕೊಂಡರು. ಮುಖ್ಯಮಂತ್ರಿಯತ್ತ ಕೈಬೀಸಿ, ಅವರ ಫೋಟೊ ತೆಗೆದು ಸಂತಸಪಟ್ಟರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

‘ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಚಂದಕವಾಡಿ ಗ್ರಾಮಕ್ಕೆ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಬಂದಿದ್ದರು. ಆಗ ನಾನು 9ನೇ ತರಗತಿ ಓದುತ್ತಿದ್ದೆ. ಹಿಂದಿನ ದಿನ ಮಳೆ ಬಂದಿದ್ದರಿಂದ ಮೈದಾನದಲ್ಲಿ ಇಳಿಸಿದ್ದ ಹೆಲಿಕಾಪ್ಟರ್‌ ಅಲ್ಲಿಯೇ ಹೂತುಹೋಗಿತ್ತು. ಗುಂಡೂರಾವ್‌ ಅವರು ಕಾರಿನಲ್ಲಿ ಬಿ.ಆರ್. ಹಿಲ್ಸ್‌ಗೆ ಹೋಗಿಬಂದಿದ್ದರು. ಮೂರು ದಿನದ ಬಳಿಕ ಹೆಲಿಕಾಪ್ಟರ್‌ಅನ್ನು ತೆಗೆಯಲಾಗಿತ್ತು’ ಎಂದು ಸ್ಥಳೀಯರಾದ ರೇವಣ್ಣ ನೆನಪು ಹಂಚಿಕೊಂಡರು.

‘ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪಕ್ಕದ ಹಳ್ಳಿಗೆ ಬಂದಿದ್ದರು. ಆಗ ನಾನು ಕೂಲಿಗೆ ಹೋಗಿದ್ದರಿಂದ ನೋಡಲು ಆಗಿರಲಿಲ್ಲ. ಈಗ ಸಿದ್ದರಾಮಯ್ಯ ಅವರನ್ನು ನೋಡಲೇಬೇಕು ಎಂದು ಕೂಲಿಗೆ ತೆರಳದೆ ಬಂದಿದ್ದೇನೆ’ ಎಂದು ಹಿರಿಯರಾದ ಚನ್ನಂಜಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry