ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರತಹಳ್ಳಿ: ಮತ್ತೆ ಚಿಗುರಿತು ಹಸಿರು

ಕೆಳಸೇತುವೆ ಬಳಿ ಜಾಹೀರಾತು ಫಲಕಕ್ಕೆ ಅಡ್ಡಿಯಾಗಿದ್ದ 24 ಮರಗಳನ್ನು ಕಡಿದಿದ್ದರು
Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾರತಹಳ್ಳಿ ಹೊರವರ್ತುಲ ರಸ್ತೆಯ ಕೆಳಸೇತುವೆ ಬಳಿ ಜಾಹೀರಾತು ಫಲಕಕ್ಕೆ ಅಡ್ಡಿ ಆಗುತ್ತಿದೆ ಎಂಬ ಕಾರಣಕ್ಕೆ ಕತ್ತರಿಸಿದ್ದ ಮರಗಳಲ್ಲಿ ಚಿಕಿತ್ಸೆ ಬಳಿಕ ಮತ್ತೆ ಹಸಿರು ಚಿಗುರಿದೆ.

ಅಕ್ಟೋಬರ್‌ನಲ್ಲಿ ಇಲ್ಲಿ ತಬೂಬಿಯ, ಅಶೋಕ, ಹೂ ಅರಸಿ ಜಾತಿಯವು ಸೇರಿ ಒಟ್ಟು 24 ಮರಗಳ ರೆಂಬೆ ಕೊಂಬೆಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದರು. ಕೆಲವು ಮರಗಳ ಬುಡವನ್ನೇ ಗರಗಸದಿಂದ ತುಂಡರಿಸಲಾಗಿತ್ತು. ಸ್ಥಳೀಯರು ಈ ಬಗ್ಗೆ ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ಗಮನಕ್ಕೆ ತಂದಿದ್ದರು. ಅವರು ಈ ಮರಗಳಿಗೆ ಸೋಂಕು ತಗಲದಂತೆ ಶಿಲೀಂಧ್ರನಾಶಕ ಮುಲಾಮು ಹಚ್ಚಿ ಚಿಕಿತ್ಸೆ ನೀಡಿದ್ದರು.

‘ಬುಡ ಕತ್ತರಿಸಿದ್ದ ಮರಗಳು ಮತ್ತೆ ಚಿಗುರುತ್ತವೋ, ಇಲ್ಲವೋ ಎಂಬ ಆತಂಕವಿತ್ತು. ಅವುಗಳೂ ಚಿಕಿತ್ಸೆಗೆ ಸ್ಪಂದಿಸಿವೆ. ರಸ್ತೆ ವಿಭಜಕದಲ್ಲಿದ್ದ ಈ ಮರಗಳಲ್ಲಿ ಮತ್ತೆ ಚಿಗುರು ಕಾಣಿಸಿಕೊಂಡಿದೆ. ಇನ್ನೊಂದು ತಿಂಗಳಲ್ಲಿ ಇವುಗಳು ಹಿಂದಿನಂತೆಯೇ ಹಸಿರಿನಿಂದ ಕಂಗೊಳಿಸಲಿವೆ’ ಎಂದು ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮರಗಳನ್ನು ಕಡಿದ ಬಗ್ಗೆ ಬಿಬಿಎಂಪಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಾಂತ ಕುಮಾರ್‌ ಅವರು  ಮಾರತಹಳ್ಳಿ ಠಾಣೆಗೆ ದೂರು ನೀಡಿದ್ದರು. ಸಂಗೀತ ಕಾರ್ಯಕ್ರಮವೊಂದರ ಜಾಹೀರಾತು ನೀಡಿದ್ದ ಸಂಸ್ಥೆ ಈ ಮರಗಳನ್ನು ಕಡಿಸಿತ್ತು ಎಂದು ತನಿಖೆಯಿಂದ ಪತ್ತೆಯಾಗಿತ್ತು.

ಪದೇ ಪದೇ ಕೃತ್ಯ: ಮಾರತಹಳ್ಳಿ ಪರಿಸರದಲ್ಲಿ ಜಾಹೀರಾತಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಮರಗಳನ್ನೇ ಸಾಯಿಯುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. 2017ರಲ್ಲಿ ವರ್ತುಲ ರಸ್ತೆಯ ಬಳಿ ಇಂತಹ ಮೂರು ಪ್ರಕರಣಗಳು ನಡೆದಿವೆ. ಈ ಪ್ರದೇಶದಲ್ಲಿ 17 ಮರಗಳ ಬುಡಕ್ಕೆ ಆ್ಯಸಿಡ್‌ ಸುರಿಯಲಾಗಿತ್ತು. ಈ ಪೈಕಿ 14 ಮರಗಳು ಸತ್ತಿದ್ದವು. ಚಿಕಿತ್ಸೆ ಬಳಿಕ 3 ಮರಗಳು ಬದುಕುಳಿದಿದ್ದವು. ಈ ಘಟನೆ ನಡೆದ ಕೆಲವೇ ತಿಂಗಳಲ್ಲಿ ಮತ್ತೆ ನಾಲ್ಕು ಮರಗಳ ಕೊಂಬೆಗಳನ್ನು ಕತ್ತರಿಸಲಾಗಿತ್ತು.

‘ಮರಗಳನ್ನು ಕೊಲ್ಲುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಇಂತಹ ಕೃತ್ಯ ತಡೆಯಲು ಪಾಲಿಕೆಯ ಜಾಹೀರಾತು ವಿಭಾಗದ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ತಪ್ಪೆಸಗುವ ಜಾಹೀರಾತು ಕಂಪನಿ ಪರವಾನಗಿಯನ್ನು ರದ್ದುಪಡಿಸಬೇಕು’ ಎಂದು ವಿಜಯ್‌ ನಿಶಾಂತ್‌ ಒತ್ತಾಯಿಸಿದರು.

‘ಆರ್ಥಿಕ ಲಾಭಕ್ಕಾಗಿ ಮರಗಳನ್ನು ಕೊಲ್ಲುವವರು ಕೆಲವರಾದರೆ, ಅವುಗಳನ್ನು ಬದುಕಿಸುವವರು ಹಲವರಿದ್ದಾರೆ. ಸಮುದಾಯದ ಪ್ರಯತ್ನದಿಂದಾಗಿ ನಾವು ನಗರದಲ್ಲಿ ಅನೇಕ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT