ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಸಂಚಾರಿ ಕ್ಯಾಂಟೀನ್‌ಗೆ ಪರಿಸರಸ್ನೇಹಿ ಸ್ಪರ್ಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 24 ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌
Last Updated 11 ಜನವರಿ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬಡವರಿಗೆ ಅಗ್ಗದ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲು ಸ್ಥಳಾವಕಾಶ ಸಿಗದ ಕಾರಣ 24 ವಾರ್ಡ್‌ಗಳಲ್ಲಿ ಸಂಚಾರಿ ಕ್ಯಾಂಟೀನ್‌ ಒದಗಿಸಲು ಬಿಬಿಎಂಪಿ ಮುಂದಾಗಿದೆ. ಫೋರ್ಸ್‌ ಕಂಪನಿಯ ಟೆಂಪೊ ಟ್ರಾವೆಲರ್‌ಗಳನ್ನು (ಟಿ.ಟಿ) ಸಂಚಾರಿ ಕ್ಯಾಂಟೀನ್‌ಗಳನ್ನಾಗಿ  ವಿನ್ಯಾಸಗೊಳಿಸಲಾಗುತ್ತಿದೆ.

ಒಟ್ಟು 24 ಟಿ.ಟಿ.ಗಳನ್ನು ಖರೀದಿಸುತ್ತಿದ್ದು, ವೀರೇಶ್‌ ಮೋಟರ್ಸ್‌ ಸಂಸ್ಥೆಗೆ ಇವುಗಳ ವಿನ್ಯಾಸ ಮಾರ್ಪಡಿಸುವ ಟೆಂಡರ್‌ ನೀಡಲಾಗಿದೆ. ಜಿಪಿಎಸ್‌ ವ್ಯವಸ್ಥೆ, ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಗೂ 40ವಿದ್ಯುದ್ದೀಪಗಳು ವಾಹನದಲ್ಲಿ ಇರಲಿವೆ. ಇವುಗಳಿಗೆ ಸೌರವಿದ್ಯುತ್‌ ಬಳಸುವ ಉದ್ದೇಶದಿಂದ ವಾಹನದ ಚಾವಣಿಯಲ್ಲಿ ಎರಡು ಸೌರಫಲಕಗಳನ್ನು ಅಳವಡಿಸಲಾಗುತ್ತದೆ.

ವಾಹನದ ಮುಂಭಾಗದಲ್ಲಿ ನಗದು ಸ್ವೀಕರಣಾ ಕೇಂದ್ರ, ಮಧ್ಯದಲ್ಲಿ ಎರಡು ಆಹಾರ ವಿತರಣಾ ಕೇಂದ್ರಗಳು, ಹಿಂಭಾಗದಲ್ಲಿ ಕೈತೊಳೆಯಲು ಎರಡು ತೊಟ್ಟಿಗಳು ಹಾಗೂ ತಟ್ಟೆಗಳನ್ನು ಇಡಲು ಟ್ರೇಗಳು ಇರಲಿವೆ. ಒಬ್ಬ ಕ್ಯಾಷಿಯರ್‌, ಇಬ್ಬರು ಆಹಾರ ವಿತರಕರು, ಒಬ್ಬರು ತಟ್ಟೆಗಳನ್ನು ಟ್ರೇನಲ್ಲಿ ಜೋಡಿಸುವವರು ಹಾಗೂ ಒಬ್ಬರು ಮೇಲ್ವಿಚಾರಕರು ಇರುತ್ತಾರೆ.

500 ಲೀಟರ್‌ ಸಾಮರ್ಥ್ಯದ ನೀರಿನ ತೊಟ್ಟಿಯನ್ನು  ವಾಹನದ ಚಾವಣಿ ಮೇಲೆ ಅಳವಡಿಸಲಾಗಿದೆ. ಕೈ ತೊಳೆದ ನೀರನ್ನು ಸಂಗ್ರಹಿಸಲು 600 ಲೀಟರ್‌ ಸಾಮರ್ಥ್ಯದ ಸಂಪ್‌ ಕೆಳಭಾಗದಲ್ಲಿ ಇರಲಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದ್ದು, ಇದಕ್ಕಾಗಿ 250 ಲೀಟರ್‌ ಸಾಮರ್ಥ್ಯದ ತೊಟ್ಟಿ ಇದೆ. ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ವಾಹನದ ಎರಡೂ ಕಡೆಗಳಲ್ಲಿ ಹೊದಿಕೆ ಹಾಕಲಾಗುತ್ತದೆ.

60 ಮಂದಿಗೆ ಟೇಬಲ್‌ ವ್ಯವಸ್ಥೆ:ವಾಹನದ ಸುತ್ತಲೂ ಮಡಚುವ ಬಾಗಿಲುಗಳಿದ್ದು, ಅವುಗಳನ್ನು ಊಟದ ಟೇಬಲ್‌ ಆಗಿಯೂ ಬಳಸಬಹುದು. ಇವುಗಳನ್ನು ಬಳಸಿ ಏಕಕಾಲದಲ್ಲಿ 20 ಮಂದಿ ಆಹಾರ ಸೇವಿಸಬಹುದು. ಇದಲ್ಲದೇ ಐದು ಪ್ರತ್ಯೇಕ ಟೇಬಲ್‌ಗಳನ್ನು ಹೊರಭಾಗದಲ್ಲಿ ಹಾಕಲಾಗುತ್ತದೆ. ಪ್ರತಿ ಟೇಬಲ್‌ನಲ್ಲಿ ಒಮ್ಮೆಲೆ 8 ಮಂದಿ ಊಟ ಮಾಡಬಹುದು.

ಮೊಬೈಲ್‌ ಕ್ಯಾಂಟೀನ್‌ಗಳಿಗೆಂದೇ ರೂಪಿಸಲಾಗಿರುವ ವಿಶ್ವದ ಅತ್ಯುತ್ತಮ ವಾಹನಗಳ ವಿನ್ಯಾಸವನ್ನು ಆಧರಿಸಿ ಈ ವಾಹನವನ್ನು ರೂಪಿಸಲಾಗಿದೆ. ವಾಹನದ ಒಳಗಿನ ರಚನೆಗಳನ್ನು ಎಸ್‌–304 ಶ್ರೇಣಿಯ ಉಕ್ಕು (ಸ್ಟೈನ್‌ಲೆಸ್‌ ಸ್ಟೀಲ್‌) ಬಳಸಿ ತಯಾರಿಸಲಾಗಿದೆ. ಇದಕ್ಕೆ ತುಕ್ಕು ಹಿಡಿಯುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಆರ್‌.ಮನೋಜ್‌ ರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕ್ಯಾಂಟೀನ್‌ಗೆ ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮೊಬೈಲ್‌ ಕ್ಯಾಂಟೀನ್‌ ದಿನಚರಿ

ವಾರ್ಡ್‌ನಲ್ಲಿ  ಮೊಬೈಲ್‌ ಕ್ಯಾಂಟೀನ್‌ ವಾಹನ ನಿಲ್ಲಿಸುವ ಸ್ಥಳವನ್ನು ಗುರುತಿಸಲಾಗುತ್ತಿದೆ. ಕೇಂದ್ರೀಕೃತ ಅಡುಗೆ ಮನೆಯಿಂದ ಆಹಾರ ತುಂಬಿಸಿಕೊಂಡು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊರಡುವ ವಾಹನ 7.30ಕ್ಕೆ ವಾರ್ಡ್‌ನ ನಿರ್ದಿಷ್ಟ ಜಾಗ ತಲುಪುತ್ತದೆ. ಗ್ರಾಹಕರಿಗೆ ತಿಂಡಿ ಅಥವಾ ಊಟ ಪೂರೈಸಿದ ಬಳಿಕ, ಅಲ್ಲಿಂದವಾಪಸ್‌ ಆಗಲಿದೆ ಎಂದು ಮನೋಜ್‌ ರಾಜನ್‌ ತಿಳಿಸಿದರು.

ವಾಹನವು ಕೇಂದ್ರೀಕೃತ ಅಡುಗೆ ಮನೆಗೆ ಮರಳಿದ ಬಳಿಕ, ಅದರಲ್ಲಿ ಶೇಖರಣೆಯಾಗಿರುವ ಕೈ ತೊಳೆಯಲು ಬಳಸಿದ ನೀರನ್ನು ಹೊರ ಹಾಕುತ್ತಾರೆ. ಬಳಸಿದ ತಟ್ಟೆಗಳನ್ನು ಹೊರತೆಗೆದು ಹೊಸ ತಟ್ಟೆಗಳನ್ನು ತುಂಬಿಸುತ್ತಾರೆ. ಕುಡಿಯುವ ಹಾಗೂ ಕೈ ತೊಳೆಯುವ ನೀರನ್ನು ಭರ್ತಿ ಮಾಡುತ್ತಾರೆ. ತಾಜಾ ಆಹಾರ ತುಂಬಿಸಿಕೊಂಡು ಮತ್ತೆ ಅದೇ ಸ್ಥಳಕ್ಕೆ ಹೊರಡುತ್ತಾರೆ. ಈ ವಾಹನದ ಮೂಲಕ ಒಂದೇ ಸ್ಥಳದಲ್ಲಿ ಮೂರು ಬಾರಿ (ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ) ಆಹಾರ ವಿತರಿಸಲಾಗುತ್ತದೆ. ಇದನ್ನು ಜಿಪಿಎಸ್‌ ವ್ಯವಸ್ಥೆ ಮೂಲಕ ನಿಗಾ ವಹಿಸಲಾಗುತ್ತದೆ ಎಂದರು.

ಮೊಬೈಲ್‌ ಕ್ಯಾಂಟೀನ್‌ ಮೂಲಕ ಸ್ವಚ್ಛ ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಹನ ನಿಲುಗಡೆ ಜಾಗದಲ್ಲಿ ಆಹಾರ ಹಾಗೂ ನೀರು ಕೆಳಗೆ ಬೀಳುವ, ವ್ಯರ್ಥವಾಗುವ ಪ್ರಮೇಯ ಬರುವುದಿಲ್ಲ. ಆ ರೀತಿಯಲ್ಲಿ ವಾಹನ ವಿನ್ಯಾಸ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT