‘ಧೂಮಪಾನವನ್ನು ಬಿಡಲು ಏನು ಮಾಡಬೇಕು?’

5

‘ಧೂಮಪಾನವನ್ನು ಬಿಡಲು ಏನು ಮಾಡಬೇಕು?’

Published:
Updated:
‘ಧೂಮಪಾನವನ್ನು ಬಿಡಲು ಏನು ಮಾಡಬೇಕು?’

1. ನಾನು ಎಂಜಿನಿಯರಿಂಗ್ ಓದುತ್ತಿದ್ದೇನೆ, ನನ್ನ ಗೆಳೆಯನೊಬ್ಬ ತುಂಬಾ ಧೂಮಪಾನ ಮಾಡುತ್ತಾನೆ. ಆಗಾಗ ಮದ್ಯಪಾನವನ್ನೂ ಮಾಡುತ್ತಾನೆ. ಅವನನ್ನು ಈ ಕೆಟ್ಟ ಚಟಗಳಿಂದ ದೂರ ಮಾಡಬೇಕು ಎಂಬ ಆಸೆ ಇದೆ. ಆದರೆ ಅವನಿಗೆ ಹಲವು ಬಾರಿ ಹೇಳಿದಾಗ ಬಿಡುತ್ತೇನೆ ಎನ್ನುತ್ತಾನೆ; ಆದರೆ ಬಿಡುವುದಿಲ್ಲ. ಅವನಿಗೆ ಕೌನ್ಸಿಲಿಂಗ್‌ನ ಅಗತ್ಯ ಇದೆಯೇ?

–ಪರಶುರಾಮ, ಊರು ಬೇಡ.

ನಿಮಗೆ ನಿಮ್ಮ ಸ್ನೇಹಿತನ ಬಗ್ಗೆ ಕಾಳಜಿ ಇದೆ. ಅದು ತುಂಬಾ ಒಳ್ಳೆಯದು. ಅವರು ಸೀಗರೇಟು ಬಿಡುವಂತೆ ಸಹಾಯ ಮಾಡಲು ಕೌನ್ಸಿಲಿಂಗ್ ಒಂದರಿಂದ ಮಾತ್ರವೇ ಸಾಧ್ಯವಿಲ್ಲ. ನೀವು ಅವರನ್ನು ‘ಡಿ–ಅಡಿಕ್ಷನ್‌ ಸೆಂಟರ್‌’ಗೆ ಕರೆದುಕೊಂಡು ಹೋಗಬೇಕು. ಎಲ್ಲ ಒಳ್ಳೆಯ ಆಸ್ಪತ್ರೆಗಳಲ್ಲೂ ಈ ಕೇಂದ್ರಗಳಿರುತ್ತವೆ. ಅವರು ಪರೀಕ್ಷೆ ನಡೆಸಿ, ಅವರ ಸ್ಥಿತಿಯನ್ನು ಪರಿಗಣಿಸಿ ಒಂದು ಥೆರಪಿಯನ್ನು ರೂಪಿಸುತ್ತಾರೆ. ಥೆರಪಿಯ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಿ ಪ್ರತಿದಿನದ ಬದಲಾವಣೆಯನ್ನು ಗುರುತಿಸುತ್ತಿರುತ್ತಾರೆ.

ಅದರ ಜೊತೆಗೆ ನೀವು ನಿಮ್ಮ ಸ್ನೇಹಿತರಿಗೆ ಪ್ರೇರೆಪಣೆಯನ್ನು ನೀಡುತ್ತಿರಬೇಕು. ಅವರ ಜೊತೆ ಹೆಚ್ಚು ಸಮಯ ಕಳೆಯಬೇಕು. ಸಿಗರೇಟ್ ಬಿಡುವ ಭಾವನೆ ಬಂದಾಗ ಅವರಲ್ಲಿ ಕೆಲವು ’ವಿತ್‌ಡ್ರಾವಲ್’ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ ಕಾರಣ ಅವರು ಒಂಟಿಯಾಗಿರುವುದು ಸರಿಯಾಗದು. ಆದರೆ ಖಂಡಿತ ನಿಮ್ಮ ಸ್ನೇಹಿತ ಸಿಗರೇಟ್ ಬಿಡಲು ಸಾಧ್ಯ. ಅವರು ಮುಂದೆ ಆರೋಗ್ಯಕರ ಜೀವನವನ್ನೂ ನಡೆಸಬಹುದು.

2. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ವಯಸ್ಸು 34. ಇಪ್ಪತ್ತೊಂದು ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಕಳೆದ ಎರಡು ವರ್ಷದಿಂದ ನಮ್ಮ ಪ್ರೀತಿ ಮುಂದುವರೆದಿದೆ. ಈಗ ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ನನ್ನ ಪ್ರಶ್ನೆ ಎಂದರೆ ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರ ಜಾಸ್ತಿ ಇದೆ. ಇದರಿಂದ ಏನಾದರೂ ಸಮಸ್ಯೆ ಉಂಟಾಗಬಹುದೇ? ನಾನು ಕಳೆದ ಮೂರು ತಿಂಗಳಿಂದ ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೇನೆ. ಇದರಿಂದ ಕೆಲಸದಲ್ಲಿ ಆಸಕ್ತಿ ಕೂಡ ಕಡಿಮೆ ಆಗಿದೆ.

–ವಿ ಸಿ., ಊರು ಬೇಡ.

ಪ್ರೀತಿಸುವಾಗ ಅಥವಾ ಪ್ರೀತಿಸಿ ಮದುವೆಯಾಗುವ ವಿಚಾರಕ್ಕೆ ಬಂದಾಗ ಯಾವುದೂ ಮುಖ್ಯ ಎನ್ನಿಸುವುದಿಲ್ಲ! ನೀವು ಇದನ್ನು ಮೊದಲೇ ಯೋಚಿಸಬೇಕಿತ್ತು. ಯಾವಾಗ ನೀವಿಬ್ಬರೂ ಒಬ್ಬರಿಗೊಬ್ಬರು ಅಪರಿಚತರಂತಿದ್ದರೋ ಆಗಲೇ ಇದರ ಬಗ್ಗೆ ಯೋಚಿಸಬೇಕಾಗಿತ್ತು. ಆದರೆ ಎರಡು ವರ್ಷ ಕಳೆದ ಮೇಲೆ ನೀವು ಯೋಚಿಸುತ್ತಿದ್ದೀರಿ! ಮನಸ್ಸಿನ ನಡುವೆ ಹೊಂದಾಣಿಕೆಯಾಗುವುದು ಮುಖ್ಯ; ವಯಸ್ಸು ಇಲ್ಲಿ ಮುಖ್ಯ ಎನಿಸುವುದಿಲ್ಲ. ಈಗ ನಿಮ್ಮಿಬ್ಬರ ಬಗ್ಗೆ ನಿಮಗೇ ಚೆನ್ನಾಗಿ ಗೊತ್ತು. ನಿಮ್ಮ ಮಧ್ಯೆ ವಯಸ್ಸಿನ ಅಂತರವಿರುವ ಬಗ್ಗೆ ಚಿಂತಿಸಬೇಡಿ. ಅದರ ಬದಲು ನೀವಿಬ್ಬರೂ ಇದರ ಬಗ್ಗೆ ಕುಳಿತು ಮಾತನಾಡಿ, ಒಂದು ನಿರ್ಧಾರಕ್ಕೆ ಬನ್ನಿ. ನೀವು ಈ ಎಲ್ಲ ಬಂಧನಗಳೊಂದಿಗೆ ಜೀವನವನ್ನು ಒಟ್ಟಿಗೆ ಸಾಗಿಸಲು ಇಷ್ಟಪಡುತ್ತಿದ್ದೀರಾ? – ಎಂಬುದನ್ನು ಕಂಡುಕೊಳ್ಳಿ. ಇದಕ್ಕೆ ಯಾವಾಗಲೂ ಪ್ರಬುದ್ಧ ಚಿಂತನೆ ಬೇಕಾಗುತ್ತದೆ; ಇದು ಪರಸ್ಪರ ಇಬ್ಬರ ನಿರ್ಧಾರವೂ ಆಗಬೇಕು.

3. ನಾನು ಬಿ.ಎಸ್ಸಿ. ಓದುತ್ತಿದ್ದೇನೆ. ದ್ವಿತೀಯ ವರ್ಷದಲ್ಲೇ ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದೇನೆ. ನನಗೆ ಓದಿನಲ್ಲೂ ಆಸಕ್ತಿ ಕಡಿಮೆಯಾಗಿದೆ. ಯಾವಾಗಲೂ ‘ನಾಳೆ, ನಾಳೆ’ ಎಂದು ಎಲ್ಲ ಕೆಲಸಗಳನ್ನು ಮುಂದೂಡುತ್ತೇನೆ. ನನಗೆ ಕೆಲವರು ಅಪಹ್ಯಾಸ ಮಾಡುತ್ತಾರೆ. ಇದರಿಂದ ನನ್ನ ಮನಸ್ಸಿಗೆ ನೋವಾಗುತ್ತದೆ. ನನ್ನಿಂದ ಯಾವ ಕೆಲಸವನ್ನೂ ಮಾಡಲಾಗುತ್ತಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತಿರುತ್ತೇನೆ. ಪರಿಹಾರವೇನು?

–ಇಂದ್ರಕುಮಾರ್, ಊರು ಬೇಡ.

ಯಾವುದೇ ಕೆಲಸವನ್ನಾಗಲಿ ಮಾಡಲು ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ ಅದು ದಿನ ಕಳೆದಂತೆ ಇನ್ನಷ್ಟು ಕಠಿಣವಾಗುತ್ತದೆ. ನೀವು ಸಾಧಿಸಬೇಕು ಎಂದುಕೊಂಡಿರುವ ಎಲ್ಲ ಟಾಸ್ಕ್‌ಗಳ ರೆರ್ಕಾಡ್ ಅನ್ನು ಸಿದ್ಧಪಡಿಸಿಕೊಳ್ಳಿ. ಈ ಪಟ್ಟಿ ನೀವು ಪ್ರತಿದಿನ ಅಥವಾ ವಾರದಲ್ಲಿ ಮಾಡುವ ಟಾಸ್ಕ್‌ಗಳನ್ನು ಒಳಗೊಂಡಿರಲಿ. ಅದರೊಂದಿಗೆ ದೀರ್ಘಕಾಲದ ಗುರಿಗಳನ್ನು ಸಾಧಿಸಲು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಅವೆಲ್ಲವನ್ನು ನೋಡಿ ಬರೆದುಕೊಳ್ಳಿ. ಆಗ ನಿಮಗೆ ಗುರಿ ಮುಟ್ಟಲು ಬೇಕಾಗುವ ಭಿನ್ನ ದಾರಿಗಳ ಪರಿಚಯವಾಗುತ್ತದೆ. ಪ್ರಾಶಸ್ತ್ಯಕ್ಕೆ ತಕ್ಕಂತೆ ಕೆಲಸ ಮಾಡಿ; ಒಂದು ಆಧಾರದ ಮೇಲೆ ಒಂದೊಂದೇ ಟಾಸ್ಕ್‌ಗಳನ್ನು ನಿರ್ವಹಿಸಿ. ಈಗ ನಿಮ್ಮ ಪ್ರಾಶಸ್ತ್ಯ ಏನಿದ್ದರೂ ನಿಮ್ಮ ಓದು ಮತ್ತು ಫೇಲ್ ಆದ ಎಲ್ಲಾ ವಿಷಯಗಳನ್ನೂ ಪೂರ್ಣಗೊಳಿಸಿಕೊಳ್ಳುವುದು.

ನೀವು ಓದಿನ ಮೇಲೆ ಗಮನ ಕಳೆದುಕೊಳ್ಳುವಂತೆ ಮಾಡುವ ವಿಷಯಗಳು ಏನು ಎಂಬುದನ್ನು ತಿಳಿದುಕೊಳ್ಳಿ. ವಿಷಯ ನಿಮಗೆ ಅರ್ಥವಾಗದೇ ಹೀಗಾಗುತ್ತಿದೆಯೇ ಅಥವಾ ಇನ್ನು ಬೇರೆ ಯಾವುದೋ ವಿಷಯ ನಿಮ್ಮ ಗಮನವನ್ನು ಕೆಡಿಸುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳಿ. ಅದರ ಬಗ್ಗೆ ಯೋಚಿಸಿ ಮತ್ತು ಅಲ್ಲಿಯವರೆಗೂ ನೀವು ಒತ್ತಡಕ್ಕೆ ಒಳಗಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನೀವು ಹೆಚ್ಚು ಹೆಚ್ಚು ಒತ್ತಡದಿಂದ ಹೊರಬಂದಷ್ಟು ನಿಮ್ಮ ಕೆಲಸವನ್ನು ಛಲ ಬಿಡದೇ ಮಾಡಲು ಪ್ರಯ್ನತಿಸುತ್ತೀರಿ. ನಿಮಗೆ ನೀವೇ ಹುಚ್ಚರಾಗಬೇಡಿ. ಮುಂದೆ ಸಾಗಿ ಮತ್ತು ಇದೆಲ್ಲವನ್ನೂ ಹೊರತು ಪಡಿಸಿ ನೀವೇನು ಮಾಡಬೇಕು ಎಂಬುದರ ಮೇಲೆ ಗಮನ ಹರಿಸಿ. ಪಾಪಪ್ರಜ್ಞೆ ಮತ್ತು ಪಶ್ಚಾತ್ತಾಪ ನಮ್ಮ ಭಾವನೆಗಳನ್ನು ಒಣಗುವಂತೆ ಮಾಡುತ್ತವೆ. ಹಾಗಾಗಿ ನಿಮ್ಮ ಬಗ್ಗೆ ನೀವೇ ಕೀಳರಿಮೆ ಪಡಬೇಡಿ. ನಿಮ್ಮನ್ನು ನೀವೆ ಪ್ರೇರೆಪಿಸಿಕೊಳ್ಳುವ ಬದಲು ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದರಿಂದ ಶಾಂತರಾಗಿರಬಹುದು. ಗಮನ ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಗುರಿಯನ್ನು ತಲುಪಿ.

ಸುತ್ತಲಿನ ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದನ್ನು ನಿಮಗೆ ನೀವೇ ಚಾಲೆಂಜ್ ಆಗಿ ಸ್ವೀಕರಿಸಿ, ಅದರ ಬದಲು ವೈಯಕ್ತಿಕವಾಗಿ ಪರಿಗಣಿಸಬೇಡಿ. ನಿಮ್ಮಿಂದ ಎಲ್ಲವನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿ. ದೈಹಿಕ–ಮಾನಸಿಕ ವ್ಯಾಯಾಮ ಹಾಗೂ ಸಮತೋಲಿತ ಡಯೆಟ್‌ನಿಂದ ನಿಮ್ಮನ್ನು ನೀವು ಸದೃಢರಾಗಿರುವಂತೆ ನೋಡಿಕೊಳ್ಳಿ ಎಂದು ನಾನು ಯಾವಾಗಲೂ ಯುವಜನತೆಗೆ ಹೇಳುತ್ತಿರುತ್ತೇನೆ. ಇದನ್ನು ನೀವೂ ಪಾಲಿಸುತ್ತೀರಿ ಎಂದು ಭಾವಿಸುತ್ತೇನೆ. ಆಗ ನಿಮ್ಮಲ್ಲೇ ನೀವು ಬದಲಾವಣೆಯನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಗುರಿಯ ಮೇಲೆ ಹೆಚ್ಚು ಗಮನ ನೀಡುತ್ತೀರಿ.

*

(ಸುನೀತಾ ರಾವ್‌, ಆಪ್ತ ಸಮಾಲೋಚಕಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry