ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

7

ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

Published:
Updated:
ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

ವೀರ್ಯವು ಎಷ್ಟು ಕಾಲ ಬದುಕಬಲ್ಲದು?

ಇದಕ್ಕೆ ಉತ್ತರವು ಹಲವು ವಿಷಯದ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲಿ ಬಹುಮುಖ್ಯವಾಗಿ ವೀರ್ಯವು ಯಾವ ಸ್ಥಳದಲ್ಲಿದೆ ಎಂಬುದರ ಮೇಲೆ ಅದು ಎಷ್ಟು ಕಾಲ ಇರಬಲ್ಲದು ಎಂಬುದು ತಿಳಿಯುತ್ತದೆ. ಒಣ ಪ್ರದೇಶದಲ್ಲಿದ್ದರೆ, ಅಂದರೆ ಬಟ್ಟೆ ಮೇಲಿದ್ದರೆ ಅದು ಒಣಗಿಹೋಗಿ ನಿಷ್ಕ್ರಿಯವಾಗುತ್ತದೆ. ನೀರಿನಲ್ಲಿದ್ದರೆ, ಅಂದರೆ, ಬಿಸಿ ನೀರಿನಲ್ಲಿ ಅಥವಾ ಬಾತ್‌ ಟಬ್‌ನಲ್ಲಿದ್ದರೆ, ಹೆಚ್ಚು ಕಾಲ ಇರಬಹುದು. ಏಕೆಂದರೆ ತೇವದ ಪ್ರದೇಶದಲ್ಲಿ ಹೆಚ್ಚು ಕಾಲ ಜೀವಂತವಾಗಿರುತ್ತದೆ. ಮಹಿಳೆಯ ದೇಹಕ್ಕೆ ವೀರ್ಯ ಪ್ರವೇಶಿಸಿದ ನಂತರ ಐದು ದಿನಗಳವರೆಗೂ ಇರುತ್ತದೆ.

ಹಾಗಿದ್ದರೆ ದೇಹದಿಂದ ಸ್ಖಲನಗೊಳ್ಳದ ವೀರ್ಯ ಏನಾಗುತ್ತದೆ? ಎಲ್ಲಿಗೆ ಹೋಗುತ್ತದೆ? ಈ ಪ್ರಶ್ನೆಯೂ ಮೂಡುವುದು ಸಹಜ.

ಆರೋಗ್ಯಕರ ವೃಷಣವು ಸೆಕೆಂಡಿಗೆ 1000ದಿಂದ 5000 ವೀರ್ಯಾಣುಗಳನ್ನು ಉತ್ಪತ್ತಿ ಮಾಡುತ್ತದೆ. ಇವು ಎಪಿಡಿಡಿಮಿಸ್‌ನಲ್ಲಿ ಅವಶ್ಯವಿರುವವರೆಗೂ ಸಂಗ್ರಹಗೊಳ್ಳುತ್ತವೆ. ಎಪಿಡಿಡಿಮಿಸ್‌ ವೀರ್ಯಾಣುಗಳನ್ನು ಪೋಷಿಸುವ ಕೆಲಸವನ್ನು ಮಾಡುತ್ತದೆ. ಲೈಂಗಿಕ ಕ್ರಿಯೆ ನಡೆಯುವ ಸಮಯದಲ್ಲಿ ಇವು ಸ್ಖಲನಗೊಳ್ಳುತ್ತವೆ.

ವೀರ್ಯವು ಅಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯವಾದರೂ, ಕೆಲವು ವೀರ್ಯಾಣುಗಳು ಸ್ಳಲನಗೊಳ್ಳದೇ ಉಳಿದುಬಿಡುತ್ತವೆ. ಅವು ಹಳತಾಗಿ ತಂತಾನೇ ಕರಗಿಹೋಗುತ್ತವೆ. ಪುನರ್‌ಉತ್ಪತ್ತಿ ಪ್ರಕ್ರಿಯೆಯಾದ್ದರಿಂದ ರಕ್ತಕಣಗಳು ಹೇಗೆ ಕೊನೆಗೊಳ್ಳುತ್ತವೋ ಅದೇ ರೀತಿ ಇವು ಕೂಡ ಕಾಲಾವಧಿ ಮುಗಿದ ನಂತರ ಕೊನೆಯಾಗುತ್ತವೆ. ಹಾಗೆಯೇ ವೀರ್ಯದಲ್ಲಿನ ಅಂಶಗಳು ದೇಹದಲ್ಲಿ ಮತ್ತೆ ಮರುಬಳಕೆಗೊಳ್ಳುತ್ತವೆ. ವೀರ್ಯದ ಕೊರತೆಯನ್ನು ನೀಗಿಸಲು ಹೊಸ ವೀರ್ಯೋತ್ಪತ್ತಿ ನಡೆಯುತ್ತಲೇ ಇರುತ್ತದೆ.

ಹಾಗಿದ್ದರೆ ವೀರ್ಯೋತ್ಪತ್ತಿ ನಿರಂತರ ಹಾಗೂ ಬದಲಿ ಪ್ರಕ್ರಿಯೆ ಆಗಿರುತ್ತದೆಯೇ?

ಹೌದು. ದೇಹವನ್ನು ತ್ಯಜಿಸದ ವೀರ್ಯವು ಅಲ್ಲೇ ಕೊನೆಗೊಂಡು ಕ್ರಮೇಣ ಅದರ ಅಂಶ ಪುನರ್ ಬಳಕೆಯಾಗುತ್ತದೆ.

ವೀರ್ಯದ ಅಲರ್ಜಿ: ತಿಳಿಯುವುದು ಹೇಗೆ?

ಲೈಂಗಿಕವಾಗಿ ಹರಡಬಲ್ಲ ಸಮಸ್ಯೆಗಳಲ್ಲಿ ವೀರ್ಯದ ಸೋಂಕು ಕೂಡ ಒಂದು. ಅದನ್ನು ಅಲರ್ಜಿ ಎಂದು ಕರೆಯಲಾಗುತ್ತದೆ. ಜನನೇಂದ್ರಿಯದಲ್ಲಿ ಉರಿಯೂತ, ಕೆಂಪಾಗುವಿಕೆ, ತುರಿಕೆಯಿದ್ದರೆ, ಅದನ್ನು ಯೀಸ್ಟ್ ಸೋಂಕು ಎಂದುಕೊಳ್ಳುತ್ತೇವೆ. ಆದರೆ ತಜ್ಞರ ಪ್ರಕಾರ, ಇದು ವೀರ್ಯದ ಅಲರ್ಜಿಯ ಲಕ್ಷಣವೂ ಆಗಿರುತ್ತದೆ.

ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಸೆಕ್ಷುಯಲ್ ಮೆಡಿಸನ್ ಪ್ರಕಾರ, ವೀರ್ಯಾಣುವಿನ ಅಲರ್ಜಿ (ಇದನ್ನು ಸೆಮಿನಲ್ ಪ್ಲಾಸ್ಮಾ ಹೈಪರ್‌ಸೆನ್ಸಿಟಿವಿಟಿ) ಅತಿ ಅಪರೂಪದ್ದಾಗಿದ್ದು, ಇದು ವೀರ್ಯದ ಪ್ರೊಟೀನಿನ ಮೇಲೆ ಉಂಟಾಗುವ ಪ್ರತಿಕ್ರಿಯೆ ಆಗಿರುತ್ತದೆ. ಇದು ಪರಿಣಾಮ ಬೀರುವುದು ಮಹಿಳೆಯ ಜನನೇಂದ್ರಿಯದ ಮೇಲೆ.

ಕೆಂಪಗಾಗುವುದು, ಊತ, ನೋವು, ತುರಿಕೆ ಇವು ಸಾಮಾನ್ಯ ಲಕ್ಷಣಗಳು. ವೀರ್ಯಕ್ಕೆ ತೆರೆದುಕೊಂಡ ಹತ್ತರಿಂದ ಮೂವತ್ತು ನಿಮಿಷಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ. ಇದು ಕೇವಲ ಜನನೇಂದ್ರಿಯದ ಮೇಲಲ್ಲದೆ ದೇಹದ ಇನ್ನಿತರ ಯಾವುದೇ ಭಾಗದ ಮೇಲೂ ಹರಡಬಹುದು. ಇಡೀ ದೇಹದ ಮೇಲೂ ಪರಿಣಾಮ ಬೀರಬಲ್ಲದು. ಮಿತಿ ಮೀರಿದರೆ ಗುಳ್ಳೆಗಳು, ಊತವಾಗುವುದಲ್ಲದೇ ಉಸಿರಾಟಕ್ಕೂ ತೊಂದರೆಯಾಗುತ್ತದೆ.

ಗರ್ಭಧಾರಣೆಗೂ ಈ ಅಲರ್ಜಿ ತೊಡಕು ಉಂಟುಮಾಡುತ್ತದೆ. ಈ ಅಲರ್ಜಿ ಸಮಸ್ಯೆ ಹೊಂದಿರುವವರಿಗೆ ಕೃತಕ ಗರ್ಭಧಾರಣೆ ಮೂಲಕ ಗರ್ಭಧಾರಣೆಗೆ ಅನುವು ಮಾಡಿಕೊಡಲಾಗುತ್ತದೆ.

ಮರು ಉತ್ಪಾದನೆ: ಹೊಸದೊಂದು ಹೆಜ್ಜೆ

ಚೀನಾದ ವಿಜ್ಞಾನಿಗಳು ಇದೀಗ ಕೃತಕ ವೀರ್ಯವನ್ನು ಸೃಷ್ಟಿಸಿದ್ದಾರೆ. ಇದನ್ನು ಇಲಿಗಳ ಮೇಲೆ ಪ್ರಯೋಗಿಸಿ, ಅದರ ಅಂಡಾಣು ಫಲಿಸುವಂತೆ ಮಾಡಿ, ಅವು ಆರೋಗ್ಯಕರ ಮರಿಗಳನ್ನು ಪಡೆದಿದ್ದನ್ನೂ ಖಾತ್ರಿ ಪಡಿಸಿದ್ದಾರೆ. ಇದಕ್ಕೆ ಎಂಬ್ರೋನಿಕ್ ಸ್ಟೆಮ್‌ ಸೆಲ್‌ಗಳನ್ನು ಬಳಸಿಕೊಳ್ಳಲಾಗಿದೆ.

ಕೃತಕ ಅಪಕ್ವ ವೀರ್ಯಾಣುಗಳನ್ನು, ಅಂದರೆ ಬಾಲವಿಲ್ಲದ ವೀರ್ಯಾಣುಗಳನ್ನು, ಈ ವಿಜ್ಞಾನಿಗಳ ತಂಡ ಸೃಷ್ಟಿಸಿತ್ತು. ಅವು ಈಜಲು ಅಸಮರ್ಥವಾಗಿರುವ ಕಾರಣ, ಕೃತಕ ಅಳವಡಿಕೆ ಮೂಲಕ ಇಲಿಯ ಅಂಡಾಣುವಿಗೆ ಈ ವೀರ್ಯಗಳನ್ನು ಬಿಡಲಾಯಿತು.

ಇದರ ಪ್ರಭಾವವನ್ನು ಸಾಬೀತುಪಡಿಸಲು ತಂಡವು, ಈ ಕೋಶಗಳು ಸರಿಯಾದ ಸಂಖ್ಯೆಯ ಕ್ರೋಮೋಸೋಮುಗಳನ್ನು ಹಾಗೂ ಸರಿಯಾದ ಪ್ರಮಾಣದಲ್ಲಿ ಡೋನರ್ ಡಿಎನ್‌ಎಯಂಥ ವಿವಿಧ ಲಕ್ಷಣಗಳನ್ನು ಒಳಗೊಂಡಿದೆ ಎಂಬುದನ್ನು ತೋರಿಸುವ ಅವಶ್ಯಕತೆಯೂ ಇದೆ.

ಮಾನವನ ಮೇಲಿನ ಸಾಧ್ಯತೆ: ಇದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದರಿಂದ, ಮಾನವನ ಮೇಲಿನ ಸಾಧ್ಯತೆಯನ್ನೂ ಕಂಡುಕೊಳ್ಳುವ ಕುರಿತು ಪ್ರಶ್ನೆಗಳು ಇವೆ. ಸದ್ಯಕ್ಕೆ ಇದು ಸೈದ್ಧಾಂತಿಕವಾಗಿದ್ದು, ಪ್ರಾಯೋಗಿಕವಾಗಿ ಕಂಡುಕೊಳ್ಳುವುದು ಬಾಕಿ ಇದೆ.

ಇದೇ ಸಮಯದಲ್ಲಿ, ಲ್ಯಾಬೊರೇಟರಿಯಲ್ಲಿ ಸೃಷ್ಟಿಯಾಗುವ ಈ ವೀರ್ಯವು ನೈಸರ್ಗಿಕವಾಗಿ ಉತ್ಪತ್ತಿಯಾಗುವ ವೀರ್ಯಕ್ಕೆ ಸಮಯನಾಗಿ ನಿಲ್ಲಬಲ್ಲದೇ, ಅಷ್ಟೇ ಗುಣಮಟ್ಟವನ್ನು ಹೊಂದಿರುತ್ತದೆಯೇ ಎಂಬ ಬಗ್ಗೆಯೂ ಗೊಂದಲಗಳಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಈ ಸಾಧ್ಯತೆ ಫಲಿಸಿದರೆ, ಸಮಾಜ ಇದನ್ನು ಹೇಗೆ ಒಪ್ಪಿಕೊಳ್ಳುತ್ತದೆ ಎಂಬುದನ್ನೂ ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry