ಒಂದೇ ದಿನ ಮತದಾನ ಸಾಧ್ಯತೆ

7
ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ ಮುಖ್ಯ ಚುನಾವಣಾಧಿಕಾರಿ

ಒಂದೇ ದಿನ ಮತದಾನ ಸಾಧ್ಯತೆ

Published:
Updated:
ಒಂದೇ ದಿನ ಮತದಾನ ಸಾಧ್ಯತೆ

ಬೆಂಗಳೂರು: 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಒಂದೇ ದಿನ ಮತದಾನ ನಡೆಯುವ ಸಾಧ್ಯತೆ ಇದೆ.

‘ಈ ಸಂಬಂಧ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘2013ರಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ದಿನ ಮತದಾನ ನಡೆದಿತ್ತು. ಈ ಬಾರಿಯೂ ಅದನ್ನೇ ಪಾಲಿಸುವಂತೆ ಒಂದು ರಾಜಕೀಯ ಪಕ್ಷ ಮನವಿ ಸಲ್ಲಿಸಿದೆ’ ಎಂದು ಅವರು ಹೇಳಿದರು.

‘ಒಂದು ಅಥವಾ ಒಂದಕ್ಕಿಂತ ಹೆಚ್ಚು ದಿನ ಮತದಾನ ಪ್ರಕ್ರಿಯೆ ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಚುನಾವಣಾ ಆಯೋಗ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಅವರು ತಿಳಿಸಿದರು.

ಒಂದು ಅಥವಾ ಎರಡು ದಿನ ಮತದಾನ ನಡೆದರೆ ಅನುಕೂಲ, ಅನನುಕೂಲ ಎರಡೂ ಇವೆ. ಎರಡು ಹಂತದಲ್ಲಿ ಚುನಾವಣೆ ನಡೆದರೆ ದುಷ್ಕರ್ಮಿಗಳು ಅಥವಾ ರೌಡಿಗಳು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಹೋಗಿ ಎರಡು ಬಾರಿ ಮತದಾನ ಮಾಡುವ ಸಾಧ್ಯತೆ ಇರುತ್ತದೆ. ಹಿಂದೆ ಇಂತಹ ಘಟನೆಗಳು ನಡೆದಿವೆ. ಅದನ್ನು ತಪ್ಪಿಸಲು ಒಂದೇ ದಿನ ಮತದಾನ ಪ್ರಕ್ರಿಯೆ ನಡೆಸುವುದು ಸೂಕ್ತ ಎಂದರು.

ಇದರ ಜತೆಗೆ ಒಂದು ಪ್ರದೇಶದಲ್ಲಿ ಆಗುವ ಮತದಾನದ ಪ್ರಮಾಣ, ರಾಜಕೀಯಗಳು ಮತ್ತೊಂದು ಪ್ರದೇಶದ ಮೇಲೆ ಪ್ರಭಾವ ಬೀರುವ, ಗೊಂದಲ ಹುಟ್ಟಿಸುವ ಸಾಧ್ಯತೆಯೂ ಇರುತ್ತದೆ. ಒಂದೇ ದಿನ ಮತದಾನ ನಡೆದರೆ ಈ ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಹೇಳಿದರು.

ಒಂದಕ್ಕಿಂತ ಹೆಚ್ಚು ಹಂತದಲ್ಲಿ ನಡೆದರೆ ಭದ್ರತೆ ಸಮಸ್ಯೆಯಾಗುವುದಿಲ್ಲ. ಆದರೆ ಒಂದೇ ದಿನ ನಡೆದರೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು ಕಷ್ಟವಾಗಬಹುದು. 2013ರಲ್ಲಿ ಕೇಂದ್ರದ ವಿವಿಧ ಪಡೆಗಳ 44,000 ಸಿಬ್ಬಂದಿ ಇದ್ದ 55 ತುಕಡಿ, ರಾಜ್ಯದ 80,000 ಸಿಬ್ಬಂದಿಯನ್ನು ಬಂದೋಬಸ್ತ್‌ ನಿಯೋಜಿಸಲಾಗಿತ್ತು ಎಂದರು.

ಈ ವರ್ಷ ಮತದಾರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೂವರೆ ತಿಂಗಳು ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 12 ಲಕ್ಷ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 7.5 ಲಕ್ಷ ಮೊದಲ ಬಾರಿಗೆ ಮತದಾನ ಮಾಡುವವರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 56,000 ಮತಗಟ್ಟೆಗಳಿದ್ದು, ಸದ್ಯದ ಅಂದಾಜಿನಂತೆ ಈ ಬಾರಿ 2,800 ಹೊಸ ಮತಗಟ್ಟೆ ಸ್ಥಾಪಿಸಬೇಕಾಗುತ್ತದೆ ಎಂದು ಸಂಜೀವ್‌ ಕುಮಾರ್ ತಿಳಿಸಿದರು.

ಹೆಸರು ಸೇರಿಸಲು ಇದೇ 22ರವರೆಗೆ ಅವಕಾಶ

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇದೇ 22ರವರೆಗೆ ಅವಕಾಶ ಇದೆ.

ಇದೇ 12ರವರೆಗೆ ಅವಕಾಶ ನೀಡಲಾಗಿತ್ತು. ರಾಜಕೀಯ ಪಕ್ಷಗಳು, ಜಿಲ್ಲಾ ಚುನಾವಣಾಧಿಕಾರಿಗಳ ಮನವಿ ಮೇರೆಗೆ ಅವಧಿ ವಿಸ್ತರಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಈ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಅರ್ಜಿ ಸ್ವೀಕರಿಸಲಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಸಕ್ತಿ ಇರುವವರು ಹತ್ತಿರದ ಮತಗಟ್ಟೆ ಅಧಿಕಾರಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಎಂದೂ ಅವರು ಹೇಳಿದರು.

ಫೆಬ್ರುವರಿ 12ರವರೆಗೆ ಆಕ್ಷೇಪ ಸಲ್ಲಿಸಲು ಅವಕಾಶ ಇದೆ. ಫೆ.28ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry