ಸಿ.ಎಂ ಹೇಳಿಕೆ ಖಂಡಿಸಿ ಪ್ರತಿಭಟನೆ

7

ಸಿ.ಎಂ ಹೇಳಿಕೆ ಖಂಡಿಸಿ ಪ್ರತಿಭಟನೆ

Published:
Updated:

ಚಾಮರಾಜನಗರ: ಆರ್‌ಎಸ್‌ಎಸ್‌ ಮತ್ತು ಬಜರಂಗದಳಗಳನ್ನು ಉಗ್ರಗಾಮಿಗಳೆಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲೆಯ ವಿವಿಧೆಡೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ದೊಡ್ಡ ಅಂಗಡಿಬೀದಿ, ಗುಂಡ್ಲುಪೇಟೆ ವೃತ್ತದ ಮೂಲಕ ಸಾಗಿ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಸತ್ಯಮಂಗಲ ರಸ್ತೆಯ ಬಳಿ ಇರುವ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜು ಮುಂಭಾಗ ಅವರನ್ನು ಪೊಲೀಸರು ತಡೆದು ಬಂಧಿಸಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶಾಂತಮೂರ್ತಿ, ನಾಗೇಂದ್ರಸ್ವಾಮಿ, ಟೌನ್‌ ಘಟಕದ ಅಧ್ಯಕ್ಷ ಸುಂದರ್‌ರಾಜು, ಮಹಿಳಾ ಘಟಕದ ನಾಗಶ್ರೀ ಪ್ರತಾಪ್, ಉಷಾರಾಣಿ, ಕವಿತಾ, ದಾಕ್ಷಾಯಿಣಿ, ವನಜಾಕ್ಷಿ, ಮುಖಂಡರಾದ ಜಿ.ಎಂ. ಗಾಡ್ಕರ್‌, ಜಿ. ನಿಜಗುಣರಾಜು, ಮಲ್ಲೇಶ್‌ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.

ಪೂರ್ವಗ್ರಹ ಪೀಡಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಉಗ್ರಗಾಮಿಗಳು ಎಂದು ಕರೆದಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಷೇಧಕ್ಕೆ ಒಳಪಡಿಸಬೇಕಾದ ಭಯೋತ್ಪಾದಕ ಸಂಘಟನೆಗಳಾದ ಪಿಎಫ್‌ಐ, ಕೆಎಫ್‌ಡಿ ಮತ್ತು ಎಸ್‌ಡಿಪಿಐಗೆ ಬೆಂಬಲ ಕೊಡುತ್ತಿರುವ ಸಿದ್ದರಾಮಯ್ಯ ಮತಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಹಿಂದೂಪರ ಸಂಘಟನೆಗಳ 22 ಕಾರ್ಯಕರ್ತರನ್ನು ಬಲಿತೆಗೆದುಕೊಂಡಿದ್ದಾರೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿರುವ ಸಿದ್ದರಾಮಯ್ಯ ದೇಶದ ಸಂಸ್ಕೃತಿ ರಕ್ಷಣೆ ಹಾಗೂ ಸಮಾಜದ ಸೇವೆಯಲ್ಲಿ ತೊಡಗಿರುವ ಸಂಘಟನೆಗಳನ್ನು ಭಯೋತ್ಪಾದಕರು ಎಂದು ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾ ಚಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಡಿವೈಎಸ್‌ಪಿ ಜಯಕುಮಾರ್‌ ಅವರನ್ನು ಕೂಡಲೇ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಆರ್‌. ಪುರುಷೋತ್ತಮ್‌, ಎಸ್‌. ಬಾಲಸುಬ್ರಮಣ್ಯಂ, ಎನ್‌. ಮಂಜುನಾಥ್‌, ಶಿವರುದ್ರಸ್ವಾಮಿ, ಮಹೇಶ್‌, ಸುರೇಶ್‌, ಬಿ. ಮಹದೇವಪ್ಪ, ಡಿ.ಎಂ. ಪರಶಿವಮೂರ್ತಿ, ಬಸವಣ್ಣ, ಸುರೇಶ್‌, ನಾಗರಾಜುಶೆಟ್ಟಿ ಪಾಲ್ಗೊಂಡಿದ್ದರು.

ರಸ್ತೆ ತಡೆದು ಆಕ್ರೋಶ

ಯಳಂದೂರು : ‌ಆರ್ಎಸ್ಎಸ್ ಮತ್ತು ಬಜರಂಗದಳದವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಾಂಬಳ್ಳಿ ನಂಜುಂಡಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಿಂಗಾಯಿತ, ವೀರಶೈವರ ನಡುವೆಯೇ ಗೊಂದಲ ಮೂಡಿಸಿ ಎರಡು ಭಾಗಗಳಾಗಿ ವಿಭಜಿಸಿದ್ದಾರೆ. ದಲಿತ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿರಿಸಿ ಆಡಳಿತ ನಡೆಸುತ್ತಿದ್ದಾರೆ. ಅವರು ದಲಿತ ನಾಯಕರ ಬೆಳೆವಣಿಗೆಯನ್ನು ಸಹಿಸುತ್ತಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸರ್ವೇಶ್ ಬಸವಯ್ಯ ಮಾತನಾಡಿ, ‘ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಸಿದ್ದರಾಮಯ್ಯ ಅವರು ಮನ ಬಂದಂತೆ ಮಾತನಾಡಬಾರದು, ಬಿಜೆಪಿ ಹಾಗೂ ಸಂಘ ಪರಿವಾರದ ಬಗ್ಗೆ ಅನ್ಯತಾ ದೂರುವುದು ತರವಲ್ಲ. ದೇಶವಾಸಿಗಳಿಗೆ ಬಿಜೆಪಿ ರಾಷ್ಟ್ರಪ್ರೇಮ ಹಾಗೂ ಅಭಿಮಾನವನ್ನು ಬೆಳೆಸುತ್ತಿದೆ. ಭಾರತ ಕಾಂಗ್ರೆಸ್ ಮುಕ್ತವಾಗುತ್ತಿದೆ. ಇದನ್ನು ಸಹಿಸದೆ ಸುಳ್ಳು ಆರೋಪ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದರು.

ಕೊಳ್ಳೇಗಾಲ ಗ್ರಾಮಾಂತರ ಅಧ್ಯಕ್ಷ ಮಲ್ಲೇಶ್, ಯಳಂದೂರು ಮಂಡಲದ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ, ಜಿ.ಪಂ. ಸದಸ್ಯ ಕಮಲ್, ಮಾಜಿ ಜಿ.ಪಂ, ಸದಸ್ಯ ಚಂದ್ರಕಲಾಬಾಯಿ, ತಾ.ಪಂ. ಸದಸ್ಯೆ ಸುಧಾಮಲ್ಲಣ್ಣ, ಪಪಂ ಉಪಾಧ್ಯಕ್ಷ ಭೀಮಪ್ಪ, ಮುಖಂಡರಾದ ಹೊನ್ನೂರು ಸತೀಶ್, ಅನಿಲ್, ಮಹೇಶ್, ರವೀಶ್, ರಾಘವೇಂದ್ರ, ಚಂದ್ರಶೇಖರ್, ಜಯಣ್ಣ ಹಾಗೂ ಅಗರ ರಾಜು ಸೇರಿದಂತೆ ಇತರರು ಹಾಜರಿದ್ದರು.

‘ಆರೋಪಿಗಳನ್ನು ಬಂಧಿಸಿ ತಾಕತ್ತು ತೋರಿಸಿ’

ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ಕಾಂಗ್ರೆಸ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಅಧಿಕಾರಿಗಳು ಹಾಗೂ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಅಮಾಯಕ ಹಿಂದೂ ಯುವಕರನ್ನು ಹೀನಾಯವಾಗಿ ಕೊಲ್ಲಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೊಡುಗೆಯನ್ನು ಮಾತ್ರ ನೀಡಿದೆ. ಸಂಪುಟದ ಭ್ರಷ್ಟ ಸಚಿವರ ರಕ್ಷಣೆಯಲ್ಲಿ ತೊಡಗುವ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಆರ್ಎಸ್ಎಸ್ ಮತ್ತು ಬಿಜೆಪಿಯಲ್ಲಿ ಸಣ್ಣ ಸಮುದಾಯದಿಂದ ಬಂದ ಕಾರ್ಯಕರ್ತರು ದುಡಿದು ಇಂದು ಪಕ್ಷದ ಉನ್ನತ ಹುದ್ದೆ ಪಡೆದಿದ್ದಾರೆ. ಆದರೆ ಕಾಂಗ್ರೆಸ್ ದೇಶವನ್ನು ಬಲಿಕೊಟ್ಟು ಕುಟುಂಬದವರ ಉದ್ಧಾರಕ್ಕಾಗಿ ಕುಟುಂಬ ರಾಜಕಾರಣ ಮಾಡಿಕೊಂಡು ಹಗಲಿರುಳು ಶ್ರಮಿಸುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಿ.ಎಸ್. ನಿರಂಜನಕುಮಾರ, ಮಂಡಲ ಅಧ್ಯಕ್ಷ ಎಲ್. ಸುರೇಶ್, ಜಿಲ್ಲಾ ಯುವ ಮೋರ್ಚಾ ಘಟಕದ ಅಧ್ಯಕ್ಷ ಪ್ರಣಯ್, ತಾಲ್ಲೂಕು ಘಟಕದ ಅಧ್ಯಕ್ಷ ನಂದೀಶ್, ಗ್ರಾ.ಪಂ. ಸದಸ್ಯ ಬಸವರಾಜಸ್ವಾಮಿ, ಅಗತಗೌಡನಹಳ್ಳಿ ಬಸವರಾಜು, ಶಿಂಡನಪುರ ಮಂಜು ಸೇರಿದಂತೆ ಹಲವು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry