ಕುಕ್ಕುಟ ಉದ್ಯಮಕ್ಕೆ ಹಕ್ಕಿ ಜ್ವರದ ಬಿಸಿ

7

ಕುಕ್ಕುಟ ಉದ್ಯಮಕ್ಕೆ ಹಕ್ಕಿ ಜ್ವರದ ಬಿಸಿ

Published:
Updated:
ಕುಕ್ಕುಟ ಉದ್ಯಮಕ್ಕೆ ಹಕ್ಕಿ ಜ್ವರದ ಬಿಸಿ

ಚಿಕ್ಕಬಳ್ಳಾಪುರ: ರಾಜ್ಯ ರಾಜಧಾನಿಯಲ್ಲಿ ಹಕ್ಕಿ ಜ್ವರ (ಕೋಳಿ ಶೀತ ಜ್ವರ) ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಕುಕ್ಕುಟ ಉದ್ಯಮಕ್ಕೆ ಅದರ ಬಿಸಿ ತಟ್ಟಿದ್ದು, ಕೋಳಿ ಮಾಂಸ ಹಾಗೂ ಮೊಟ್ಟೆ ವಹಿವಾಟು ಕುಸಿದಿದೆ.

ಜಿಲ್ಲೆಯ ರೈತರು ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಕೃಷಿಗೆ ಪರ್ಯಾಯವಾಗಿ ಕುಕ್ಕುಟ ಉದ್ಯಮವು ರೈತರ ಜೀವನಕ್ಕೆ ಆಧಾರವಾಗಿದೆ. ಹಕ್ಕಿ ಜ್ವರದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಮೊಟ್ಟೆ ಹಾಗೂ ಮಾಂಸ ಪ್ರಿಯರು ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ 254 ನೋಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲೆಯ ಫಾರಂಗಳಲ್ಲಿ ಸುಮಾರು 23.59 ಲಕ್ಷ ಬ್ರಾಯ್ಲರ್‌ ಕೋಳಿ ಹಾಗೂ 7.93 ಲೇಯರ್‌ ಕೋಳಿಗಳಿವೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿ, ಗಿರಿರಾಜ ಕೋಳಿಗಳನ್ನು ಸಾಕಲಾಗಿದೆ.

‘ಜಿಲ್ಲೆಯಲ್ಲಿ ಲಕ್ಷಗಟ್ಟಲೇ ಮರಿಗಳನ್ನು ಬೆಳೆಸುವ ವಾಣಿಜ್ಯ ಉದ್ದೇಶದ 23 ದೊಡ್ಡ ಫಾರಂಗಳಿವೆ. ಉಳಿದಂತೆ ಬಹುಪಾಲು ಐದ್ಹತ್ತು ಸಾವಿರ ಮರಿಗಳನ್ನು ಸಾಕುವ ಫಾರಂಗಳಿವೆ. ಜಿಲ್ಲೆಗೆ ಬೆಂಗಳೂರು, ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಮರಿಗಳು ಮತ್ತು ಮೊಟ್ಟೆ ಆಮದು ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಪಾಂಡುರಂಗಪ್ಪ.

ಜಿಲ್ಲೆಯಲ್ಲಿ ಕಟ್ಟೆಚ್ಚರ

ಬೆಂಗಳೂರಿನ ಯಲಹಂಕ, ದಾಸರಹಳ್ಳಿ, ಭುವನೇಶ್ವರಿನಗರ ಸುತ್ತಮುತ್ತಲಿನ ಕೆಲ ಕೋಳಿ ಅಂಗಡಿಗಳಲ್ಲಿ ಕೋಳಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ.

ಜಿಲ್ಲೆಯಲ್ಲಿ ಈ ಹಿಂದೆ ಹಕ್ಕಿ ಜ್ವರ ಕಾಣಿಸಿಕೊಂಡ ಉದಾಹರಣೆ ಇಲ್ಲ. ಆದರೂ ಇಲಾಖೆಯು ಹಕ್ಕಿ ಜ್ವರವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸೋಂಕಿನ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕುಕ್ಕುಟ ಉದ್ಯಮಿಗಳಿಗೆ ಅರಿವು ಮೂಡಿಸಲು ಚಿಂತನೆ ನಡೆಸಿದೆ. ಪಶು ಪಾಲನಾ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಫಾರಂಗಳಿಗೆ ಭೇಟಿ ಕೊಟ್ಟು ಕೋಳಿಗಳ ರಕ್ತ, ಹಿಕ್ಕೆ ಮತ್ತು ಕೋಳಿ ಆಹಾರದ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ. ಜತೆಗೆ ಹೊರಗಿನಿಂದ ಆಹಾರ ಮತ್ತು ನೀರು ಹರಸಿ ಜಿಲ್ಲೆಗೆ ಬರುವ ಪಕ್ಷಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.

‘ಸದ್ಯ ಜಿಲ್ಲೆಯಲ್ಲಿ ಎಲ್ಲಿ ಕೂಡ ಹಕ್ಕಿ ಜ್ವರದ ವೈರಸ್ ಕಂಡುಬಂದಿಲ್ಲ. ಆದರೆ ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುವ ಮೊಟ್ಟೆ, ಮರಿಗಳಲ್ಲಿ ಆ ವೈರಸ್‌ ಇದ್ದರೆ ಅಂತಹ ಫಾರಂಗಳಲ್ಲಿ ಕೋಳಿಗಳ ಸಮೂಹವೇ ಮಾರಣಹೋಮವಾಗುತ್ತದೆ. ಹೀಗಾಗಿ ಪ್ರತಿ ಪಶುವೈದ್ಯರಿಗೂ ಅವರ ವ್ಯಾಪ್ತಿಯಲ್ಲಿರುವ ಕೋಳಿ ಫಾರಂ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ’ ಎಂದು ಪಾಂಡುರಂಗಪ್ಪ ತಿಳಿಸಿದರು.

‘ಜಿಲ್ಲೆಯ ಕೆರೆ, ಕುಂಟೆಗಳ ನೀರಿನ ಮಾದರಿ, ಪಕ್ಷಿಗಳ ಹಿಕ್ಕೆ, ಚಿಕನ್‌ ಮಳಿಗೆಗಳಲ್ಲಿ ಕತ್ತರಿಸಿದ ಕೋಳಿಗಳ ಅಂಗಾಂಗಳನ್ನು ಸಂಗ್ರಹಿಸಿ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡುತ್ತಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ ಹಕ್ಕಿ ಜ್ವರ ಕಾಣಿಸಿಕೊಂಡ ಉದಾಹರಣೆಯಿಲ್ಲ. ಹೀಗಾಗಿ ಕುಕ್ಕುಟ ಉದ್ಯಮಿಗಳು ಹಾಗೂ ಶಾಖಾಹಾರಿಗಳು ಆತಂಕಪಡುವ ಅಗತ್ಯವಿಲ್ಲ’ ಎನ್ನುತ್ತಾರೆ.

‘ಜನರು ಕೂಡ ಈ ವಿಚಾರದಲ್ಲಿ ಭಯಪಡುವ ಅಗತ್ಯವಿಲ್ಲ. ಕೋಳಿ ಫಾರಂಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಹೀಗಾಗಿ ಫಾರಂಗಳಲ್ಲಿ ಕೆಲಸ ಮಾಡುವವರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಹಕ್ಕಿ ಜ್ವರ ಸೋಂಕಿನ ನಿವಾರಣೆಗೆ ಯಾವುದೇ ಚುಚ್ಚುಮದ್ದು ಇಲ್ಲ. ಸೋಂಕು ಪೀಡಿತ ಕೋಳಿಗಳನ್ನು ಆರೋಗ್ಯವಂತ ಕೋಳಿಗಳಿಂದ ಪ್ರತ್ಯೇಕಿಸುವುದು ಅಥವಾ ಸಾಯಿಸುವುದೇ ಉತ್ತಮ ಮಾರ್ಗೋಪಾಯ’ ಎಂದರು.

‘ವಾರದ ಹಿಂದೆ ದಿನಕ್ಕೆ ಆರೇಳು ಸಾವಿರ ಕೋಳಿ ಮೊಟ್ಟೆ ಮಾರುತ್ತಿದೆ. ಹಕ್ಕಿ ಜ್ವರದ ಭೀತಿ ಹಬ್ಬಿದ ಮೇಲೆ ಈಗ ದಿನಕ್ಕೆ 4 ಸಾವಿರ ಮೊಟ್ಟೆಯಷ್ಟೇ ಮಾರಾಟವಾಗುತ್ತಿವೆ. ವಹಿವಾಟು ಅರ್ಧದಷ್ಟು ಕುಸಿದಿದೆ. ಅಧಿಕಾರಿಗಳು ಜನರಲ್ಲಿರುವ ತಪ್ಪು ಕಲ್ಪನೆ ಮತ್ತು ಭಯ ಹೋಗಲಾಡಿಸುವ ಕೆಲಸ ಮಾಡಬೇಕಿದೆ’ ಎಂದು ಚಿಂತಾಮಣಿಯ ಮೊಟ್ಟೆ ವ್ಯಾಪಾರಿ ಜಾವಿದ್ ತಿಳಿಸಿದರು.

‘ಹಕ್ಕಿ ಜ್ವರದ ಸುದ್ದಿ ತಿಳಿದ ನಂತರ ಗ್ರಾಹಕರು ಕೋಳಿ ಮಾಂಸ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋಳಿಗಳಿಗೆ ಹಕ್ಕಿ ಜ್ವರ ಬಂದಿಲ್ಲವೆಂದು ತಿಳಿ ಹೇಳಿದರೂ ಗ್ರಾಹಕರು ಮಾಂಸ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಸ್ವಲ್ಪ ಬೇಡಿಕೆ ಕುಸಿದಿದೆ. ಸದ್ಯ ಹೋಟೆಲ್‌ಗಳ ಕಬಾಬ್‌ಗೆ ಹೆಚ್ಚಾಗಿ ಚಿಕನ್ ಪೂರೈಸುತ್ತಿದ್ದೇವೆ’ ಎಂದು ಚಿಕ್ಕಬಳ್ಳಾಪುರದ ಬಿಎಂಕೆ ಚಿಕನ್ ಸೆಂಟರ್‌ ಮಾಲೀಕ ಮೆಹಬೂಬ್‌ ಹೇಳಿದರು.ಬೆಂಗಳೂರಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಗ್ರಾಹಕರು ಕೋಳಿ ಮಾಂಸ ಮತ್ತು ಮೊಟ್ಟೆ ಖರೀದಿಸಲು ಭಯಪಡುತ್ತಿದ್ದಾರೆ. ಹೀಗಾಗಿ ಒಂದು ವಾರದಿಂದ ವಹಿವಾಟು ಕುಸಿದಿದೆ. ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಸೋಂಕಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೆ ಅನುಕೂಲವಾಗುತ್ತದೆ ಎಂದು ಕೋಳಿ ಫಾರಂ ಹಾಗೂ ಅಂಗಡಿಗಳ ಮಾಲೀಕರು ಮನವಿ ಮಾಡಿದ್ದಾರೆ.

254 ನೋಂದಾಯಿತ ಕೋಳಿ ಫಾರಂ

31.52 ಲಕ್ಷ ಕೋಳಿಗಳ ಸಾಕಣೆ

23.59 ಲಕ್ಷ ಬ್ರಾಯ್ಲರ್‌ ಕೋಳಿ

7.93 ಲಕ್ಷ ಲೇಯರ್‌ ಕೋಳಿಗಳು

48 ಕ್ಷಿಪ್ರ ಕಾರ್ಯಪಡೆ ರಚನೆ

ಪಟ್ಟಿ......

ತಾಲ್ಲೂಕು ಫಾರಂಗಳ ಸಂಖ್ಯೆ ಬ್ರಾಯ್ಲರ್‌ ಕೋಳಿಗಳು ಲೇಯರ್ ಕೋಳಿಗಳು

ಬಾಗೇಪಲ್ಲಿ 23 1,05,000 2,19,500

ಚಿಕ್ಕಬಳ್ಳಾಪುರ 50 4,65,100 62,500

ಚಿಂತಾಮಣಿ 59 5,69,000 2,50,000

ಗೌರಿಬಿದನೂರು 50 4,92,400 70,000

ಗುಡಿಬಂಡೆ 32 3,43,500 22,000

ಶಿಡ್ಲಘಟ್ಟ 40 3,84,000 1,69,000

ಶೇ 10ರಷ್ಟು ವಹಿವಾಟು ಕುಸಿತ

‘ಜಿಲ್ಲೆಯಲ್ಲಿ ಕೋಳಿ ಮತ್ತು ಮೊಟ್ಟೆ ಪೂರೈಸುವ ಸುಮಾರು 10 ಪ್ರಮುಖ ಡೀಲರ್‌ಗಳಿದ್ದಾರೆ. ಸುಗುಣ, ವೆಂಕಾಬ್‌ ಸೇರಿದಂತೆ ಸುಮಾರು 15 ಕಂಪೆನಿಗಳು ಕೋಳಿಗಳನ್ನು ಪೂರೈಸುತ್ತವೆ. ಸದ್ಯ ಹಕ್ಕಿ ಜ್ವರದ ಭಯದಿಂದ ಶೇ10 ರಷ್ಟು ವಹಿವಾಟು ಕುಸಿದಿದೆ. ಶೀಘ್ರದಲ್ಲಿ ಕುಕ್ಕುಟ ಉದ್ಯಮ ಚೇತರಿಸಿಕೊಳ್ಳುವ ಭರವಸೆ ಇದೆ’ ಎನ್ನುತ್ತಾರೆ ಪ್ರಮುಖ ಡೀಲರ್‌ಗಳಲ್ಲಿ ಒಬ್ಬರಾದ ಬಿ.ಕೆ.ಮಂಜುನಾಥ್.

ಸೋಂಕಿನ ಲಕ್ಷಣ

ಆರ್ಥೋಮಿಕ್ಸೋ ವೈರಿಡೇ ಪ್ರಬೇಧಕ್ಕೆ ಸೇರಿದ ‘ಎ’ ಇನ್‌ಪ್ಲೊಯೆಂಜಾ ವೈರಸ್‌ನಿಂದ ಹಕ್ಕಿ ಜ್ವರ ಬರುತ್ತದೆ. ಈ ಸೋಂಕು ತಗುಲಿದ ಕೋಳಿಗಳು ಹೆಚ್ಚು ಚಟುವಟಿಕೆಯಿಂದ ಇರುವುದಿಲ್ಲ ಮತ್ತು ಕಡಿಮೆ ಆಹಾರ ಸೇವಿಸುತ್ತವೆ. ಜತೆಗೆ ಮೊಟ್ಟೆ ಉತ್ಪತ್ತಿ ಕಡಿಮೆಯಾಗುತ್ತದೆ. ಕಾಲು ಹಾಗೂ ಪುಕ್ಕರಹಿತ ಭಾಗದಲ್ಲಿ ಚರ್ಮ ನೀಲಿಗಟ್ಟುವುದು ಈ ಸೋಂಕಿನ ಲಕ್ಷಣಗಳು. ಮುಖ್ಯವಾಗಿ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಮೃತಪಡುವುದು ಸೋಂಕಿನ ಪ್ರಮುಖ ಲಕ್ಷಣವಾಗಿದೆ.

ಬೇಯಿಸಿ ತಿಂದರೆ ಭಯವಿಲ್ಲ

‘ಕೋಳಿ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ಮನುಷ್ಯರಿಗೆ ಹಕ್ಕಿ ಜ್ವರದ ಸೋಂಕು ತಗುಲುವುದಿಲ್ಲ. ಅಲ್ಲದೇ, ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ಬೇಯಿಸಿದಾಗ ಸೋಂಕಿನ ವೈರಸ್‌ ನಾಶವಾಗುತ್ತದೆ. ಹೀಗಾಗಿ ಜನ ಕೋಳಿ ಮಾಂಸ ಹಾಗೂ ಮೊಟ್ಟೆ ಸೇವಿಸಲು ಭಯಪಡಬೇಕಿಲ್ಲ’ ಎಂದು ಪಾಂಡುರಂಗಪ್ಪ ಹೇಳಿದರು.

ಕಾರ್ಯಪಡೆ ರಚನೆ

ಕುಕ್ಕುಟ ಉದ್ಯಮದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ 48 ಕ್ಷಿಪ್ರ ಕಾರ್ಯಪಡೆ (ಆರ್‌ಆರ್‌ಟಿ) ತಂಡಗಳನ್ನು ರಚಿಸಲಾಗಿದೆ. ಪ್ರತಿ ಆರ್‌ಆರ್‌ಟಿ ತಂಡದಲ್ಲಿ ಪಶು ವೈದ್ಯ, ಇಬ್ಬರು ಅರೆ ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ‘ಡಿ’ ದರ್ಜೆ ನೌಕರರಿದ್ದಾರೆ. ಆರ್‌ಆರ್‌ಟಿ ತಂಡದ ಸದಸ್ಯರು ತಮ್ಮ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೋಳಿ ಫಾರಂಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಹಕ್ಕಿ ಜ್ವರದ ಲಕ್ಷಣಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

* * 

ಹಕ್ಕಿ ಜ್ವರ ವರದಿಯಾಗಿರುವ ಕಾರಣಕ್ಕೆ ಜಿಲ್ಲೆಯ ಫಾರಂಗಳ ಮೇಲೆ ನಿಗಾ ಇಟ್ಟಿದ್ದೇವೆ. ಶೀಘ್ರದಲ್ಲಿಯೇ ಕರಪತ್ರಗಳನ್ನು ಹಂಚಿ ಅರಿವು ಮೂಡಿಸುತ್ತೇವೆ.

ಡಾ.ಪಾಂಡುರಂಗಪ್ಪ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry