ಸಿರಿಧಾನ್ಯಗಳ ಐಸಿರಿ

7

ಸಿರಿಧಾನ್ಯಗಳ ಐಸಿರಿ

Published:
Updated:
ಸಿರಿಧಾನ್ಯಗಳ ಐಸಿರಿ

‌ಸಿರಿಧಾನ್ಯಗಳಿಂದ ಏನೆಲ್ಲಾ ಲಾಭವಿದೆ? ಅವುಗಳಿಂದ ಎಷ್ಟೆಲ್ಲಾ ಉತ್ಪನ್ನಗಳನ್ನು ತಯಾರಿಸಬಹುದು? ಸಾವಯವ ಕೃಷಿಗೆ ಸಂಬಂಧಿಸಿದಂತೆ ಯಾವ ಯಾವ ಹೊಸ ತಂತ್ರಜ್ಞಾನ ಬಂದಿದೆ? ಸಾವಯವ, ಸಿರಿಧಾನ್ಯಗಳಿಂದ ಇನ್ನೂ ಏನೆಲ್ಲಾ ಸಾಧ್ಯತೆಗಳಿವೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಬೆಂಗಳೂರಿನಲ್ಲಿ ನಡೆಯುವ ಈ ಅಂತರರಾಷ್ಟ್ರೀಯ ಸಾವಯವ, ಸಿರಿಧಾನ್ಯಗಳ ವಾಣಿಜ್ಯ ಮೇಳಕ್ಕೆ ಭೇಟಿ ನೀಡಬೇಕು.

ಸಿರಿಧಾನ್ಯಗಳ ಕುರಿತು ಮತ್ತಷ್ಟು ಜಾಗೃತಿ ಮೂಡಿಸಲು ಬೃಹತ್ ವೇದಿಕೆ ಒದಗಿಸುವ ಉದ್ದೇಶದೊಂದಿಗೆ ಈ ಬಾರಿಯೂ ಅಂತರರಾಷ್ಟ್ರೀಯ ಸಾವಯವ, ಸಿರಿಧಾನ್ಯಗಳ ವಾಣಿಜ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಜನವರಿ 19ರಿಂದ 21ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಆವರಣದಲ್ಲಿ ಮೇಳ ನಡೆಯಲಿದೆ. ಕೃಷಿ ಇಲಾಖೆಯು, ಇಂಟರ್‌ನ್ಯಾಷನಲ್ ಕಾಂಪಿಟೆನ್ಸ್ ಸೆಂಟರ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್, ಐಸಿ ಆರ್‌ಐಎಸ್‌ಎಟಿ, ಐಐಎಂಆರ್ ಸಹಯೋಗದೊಂದಿಗೆ ಮೇಳ ಆಯೋಜಿಸಿದೆ.

ಸಾವಯವ ಹಾಗೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.

ಮೇಳದಲ್ಲಿ ಮುನ್ನೂರಕ್ಕೂ ಹೆಚ್ಚು ಸ್ಟಾಲ್‌ಗಳು, ಸಾವಯವ ಆಹಾರ ಮಳಿಗೆಗಳು, ಉತ್ಪಾದಕರ ಮತ್ತು ಮಾರುಕಟ್ಟೆ ದಾರರ ಸಭೆಗಳು, ಅಂತರ ರಾಷ್ಟ್ರೀಯ ಸಾವಯವ ಹಾಗೂ ಸಿರಿಧಾನ್ಯದ ಉತ್ಪನ್ನಗಳ ಪ್ರದರ್ಶನ, ಗ್ರಾಹಕ ಸಂಪರ್ಕ ವೇದಿಕೆ, ರೈತರಿಗೆ ಕಾರ್ಯಾಗಾರಗಳು ನಡೆಯಲಿವೆ. ಕಾರ್ಯಾಗಾರ ದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆ, ದೃಢೀಕರಣ, ಮೌಲ್ಯವರ್ಧನೆ, ಸಂಸ್ಕರಣೆ, ಮಾರುಕಟ್ಟೆ ಕುರಿತಾದ ವಿಷಯಗಳು ಮಂಡನೆಗೊಳ್ಳಲಿವೆ.

ಜೊತೆಗೆ ಸಾವಯವ ವಸ್ತ್ರಗಳು, ಬಯೋ ಫರ್ಟಿಲೈಸರ್‌ಗಳು, ಸಿರಿಧಾನ್ಯದ ಪ್ರಾಸೆಸಿಂಗ್ ಯಂತ್ರಗಳು, ಪರಿಸರಸ್ನೇಹಿ ಉತ್ಪನ್ನಗಳು ಬಹುಸಂಖ್ಯೆಯಲ್ಲಿ ಇರಲಿವೆ.

ಹೊಲದಿಂದ ಮಾರುಕಟ್ಟೆವರೆಗಿನ ಸಿರಿಧಾನ್ಯಗಳ ಪ್ರತಿ ಹಂತವನ್ನೂ ತಿಳಿಸುವುದರೊಂದಿಗೆ, ಅವುಗಳಿಗೆ ಮಾರುಕಟ್ಟೆ ವಿಸ್ತರಿಸಲು ರೈತರಿಗೆ ಅವಕಾಶವೂ ಆಗಿರಲಿದೆ. ಹಲವೆಡೆಯಿಂದ ಬಂದ ಸಾವಯವ ಕೃಷಿಕರು, ಪ್ರಾಂತೀಯ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಸದಸ್ಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಮಾರಾಟಗಾರರು, ಹಂಚಿಕೆದಾರರು, ವಿಜ್ಞಾನಿಗಳು, ಕಾರ್ಯಕರ್ತರನ್ನು ಮೇಳ ಒಳಗೊಂಡಿರುತ್ತದೆ. ‌

‘ಈಟ್ ಸ್ಮಾರ್ಟ್, ಗ್ರೋ ಸ್ಮಾರ್ಟ್, ಲಿವ್ ಸ್ಮಾರ್ಟ್’ ಪರಿಕಲ್ಪನೆಯೊಂದಿಗೆ ಮುಂದಿನ ಪೀಳಿಗೆಯ ಸ್ಮಾರ್ಟ್‌ಫುಡ್ ಆದ ಸಾವಯವ, ಸಿರಿಧಾನ್ಯಗಳ ಮಹತ್ವವನ್ನು ಸಾರುವ ಉದ್ದೇಶವೂ ಮೇಳದಲ್ಲಿ ಅಡಕವಾಗಿದೆ. ಹೆಚ್ಚಿನ ಮಾಹಿತಿಗೆ: www.organics-millets.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry