ಸಡಗರದ ಮಕರ ಸಂಕ್ರಾಂತಿ ಆಚರಣೆ

7

ಸಡಗರದ ಮಕರ ಸಂಕ್ರಾಂತಿ ಆಚರಣೆ

Published:
Updated:

ಕೊಪ್ಪಳ: ವ‍ರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜಿಲ್ಲೆಯ ವಿವಿಧೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬಿತ್ತಿದ ಫಸಲು ಕೈಗೆ ಬರುವ ಈ ಸುಗ್ಗಿಕಾಲದಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಮೊದಲ ಬೆಳೆಯನ್ನು ಸೂರ್ಯದೇವನಿಗೆ ಅರ್ಪಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈ ಹಬ್ಬವನ್ನು ರೈತರು ಹೆಚ್ಚು ಸಂಭ್ರಮದಿಂದ ಆಚರಿಸಿದರು.

ಸೂರ್ಯ ತನ್ನ ಪಥ ಬದಲಿಸುವ ಸಮಯವನ್ನೇ ಹಬ್ಬವಾಗಿ ಆಚರಿಸುವ ಕಾರಣ ಸೋಮವಾರ ಜನ ಪವಿತ್ರ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ, ನದಿಯಲ್ಲಿ ಸ್ನಾನ ಮಾಡಿದರು. ಜಿಲ್ಲೆಯ ಪವಿತ್ರ ಸ್ಥಳಗಳಾದ ಗವಿಸಿದ್ದೇಶ್ವರ ಮಠ, ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ, ಆನೆಗೊಂದಿಯ ಅಂಜನಾದ್ರಿ ಬೆಟ್ಟ, ಮಾರ್ಕಂಡೇಶ್ವರ ಹೀಗೆ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವುದು ನಡೆಯಿತು.

ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಎತ್ತುಗಳಿಗೂ ಕೂಡ ಅಲಂಕಾರ ಮಾಡಲಾಗಿತ್ತು. ರಂಗೋಲಿ ಈ ಹಬ್ಬದ ಮತ್ತೊಂದು ವಿಶೇಷ. ನಗರದ ಹಲವಾರು ಮನೆಗಳ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಲಾಗಿತ್ತು. ಜನತೆ ಮನೆಯಲ್ಲಿ ಸಿಹಿ ಸವಿದು, ಬಳಿಕ ಸಂಜೆ ಸುತ್ತಮುತ್ತಲಿನ ಮನೆಯವರಿಗೆ ಎಳ್ಳು, ಸಕ್ಕರೆ, ಬೆಲ್ಲ ಹಾಗೂ ಕಬ್ಬನ್ನು ಪರಸ್ಪರ ವಿನಿಮಯ ಮಾಡಿಕೊಂಡು ಮಕರ ಸಂಕ್ರಾಂತಿ ಶುಭಾಶಯ ಕೋರಿದರು. ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ವ್ಯಾಪಾರ ಕೊಂಚ ಜೋರಾಗಿಯೇ ಇತ್ತು. ಹಬ್ಬದ ನಿಮಿತ್ತ ಉತ್ತಮ ವ್ಯಾಪಾರವಾದ ಖುಷಿಯಲ್ಲಿ ವ್ಯಾಪಾರಿಗಳು ಸಂಕ್ರಾಂತಿ ಆಚರಿಸಿದರು.

ನಗರದ ಗವಿಮಠದ ಆವರಣದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಮಹಿಳಾ ಭಕ್ತಾದಿಗಳು ಬೆಳಿಗ್ಗೆ ವಿವಿಧ ರೀತಿಯ ರಂಗೋಲಿ ಹಾಕಿದ್ದರು. ಮಠಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಠದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಜನರ ಸಂಖ್ಯೆ ಪ್ರತಿನಿತ್ಯಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. ಶನಿವಾರರಿಂದ ಸೋಮವಾರದವರೆಗೆ ಕ್ರಮವಾಗಿ ಮೂರು ರಜೆ ಲಭಿಸಿದ್ದರಿಂದ ಉದ್ಯೋಗಿಗಳು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುವುದು ಅಲ್ಲಲ್ಲಿ ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry