ಮಿತ್ತಮಜಲು: ಕೂಂಬಿಂಗ್ ಆರಂಭ

7
ನಕ್ಸಲರ ಭೇಟಿ ದೃಢ: ಎರಡು ತಂಡಗಳಿಂದ ಕಾರ್ಯಾಚರಣೆ

ಮಿತ್ತಮಜಲು: ಕೂಂಬಿಂಗ್ ಆರಂಭ

Published:
Updated:
ಮಿತ್ತಮಜಲು: ಕೂಂಬಿಂಗ್ ಆರಂಭ

ಉಪ್ಪಿನಂಗಡಿ: ಶಂಕಿತ ನಕ್ಸಲರು ಭಾನುವಾರ ಭೇಟಿ ನೀಡಿದ ಶಿರಾಡಿ ಗ್ರಾಮದ ಮಿತ್ತಮಜಲಿಗೆ ಮಂಗಳವಾರ ಮಧ್ಯಾಹ್ನ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಬಂದಿದ್ದು, ಶಿರಾಡಿ ಮತ್ತು ಶಿಶಿಲ ರಕ್ಷಿತಾರಣ್ಯದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ಆರಂಭಿಸಿದೆ.

ಹೆಬ್ರಿ ಎಎನ್‌ಎಫ್‌ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಎಸ್‌ಐ ಅಮರೇಶ್ ನೇತೃತ್ವದಲ್ಲಿ 24 ಸಿಬ್ಬಂದಿಯನ್ನು ಒಳಗೊಂಡ ಎರಡು ಪ್ರತ್ಯೇಕ ತಂಡ

ಗಳು ಮಧ್ಯಾಹ್ನ 2.30ರಿಂದ ಮಿತ್ತಮಜಲಿನಿಂದ ಕೂಂಬಿಂಗ್‌ ಆರಂಭಿಸಿದವು.

ಪುತ್ತೂರು ಡಿವೈಎಸ್‌ಪಿ ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದ ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಶಿಶಿಲ ರಕ್ಷಿತ ಅರಣ್ಯ ಪ್ರದೇಶದೊಳಗೆ ಪ್ರವೇಶ ಮಾಡಿತು. ಅಮರೇಶ್ ನೇತೃತ್ವದ ತಂಡ ಶಿರಾಡಿ ರಕ್ಷಿತಾರಣ್ಯದ ಮೂಲಕ ಕಬ್ಬಿನಾಲೆ ಕಡೆಗೆ ನಕ್ಸಲರ ಬೇಟೆಗೆ ಕಾರ್ಯಾಚರಣೆ ಆರಂಭಿಸಿತು.

3 ದಿನ ಬೇಟೆ: ನಕ್ಸಲ್ ನಿಗ್ರಹ ಪಡೆ 3 ದಿನ ಕಾಡಿನಲ್ಲಿ ಕಾರ್ಯಾಚರಣೆ ನಡೆಸಲಿದೆ. ಕೈಯಲ್ಲಿ ಎಕೆ-47 ಬಂದೂಕು, ಬಗಲಿನಲ್ಲಿ ಚೀಲ, 3 ದಿನಗಳ ಆಹಾರ ಪದಾರ್ಥದೊಂದಿಗೆ ನಕ್ಸಲ್ ನಿಗ್ರಹ ಪಡೆ ಕಾಡಿನೊಳಗೆ ಹೆಜ್ಜೆ ಹಾಕಿತು.

ಮಂಗಳವಾರ ಬೆಳಿಗ್ಗೆಯಿಂದಲೇ ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ಇನ್‌ಸ್ಪೆಕ್ಟರ್‌ ಗೋಪಾಲ ನಾಯ್ಕ, ಉಪ್ಪಿನಂಗಡಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನಂದಕುಮಾರ್ ಸೇರಿದಂತೆ ಹತ್ತಾರು ಪೊಲೀಸರು, ಅಧಿಕಾರಿಗಳು ಮಿತ್ತಮಜಲಿನಲ್ಲಿ ಬೀಡು ಬಿಟ್ಟಿದ್ದರು. ಮನೆಯವರನ್ನು, ಪರಿಸರದವರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದುದು ಕಂಡು ಬಂತು.

ಮಿತ್ತಮಜಲು ಪರಿಸರದಲ್ಲಿ ಒಟ್ಟು 40 ಮನೆಗಳಿವೆ. ಆದರೆ ಈ 3 ಮನೆಗಳು ಅರಣ್ಯದ ಅಂಚಿನಲ್ಲಿದೆ. ಸೋಮವಾರ ರಾತ್ರಿ 3 ಮನೆಗಳಿಗೆ ನಕ್ಸಲ್ ತಂಡ ಭೇಟಿ ನೀಡಿತ್ತು. ಆದರೆ ಈ ವಿಷಯ ಸೋಮವಾರ ಸಂಜೆಯ ತನಕವೂ ಗೋಪ್ಯವಾಗಿತ್ತು. ಸೋಮವಾರ ಸಂಜೆಯ ಹೊತ್ತಿಗೆ ಶಾಲಾ ಮಕ್ಕಳ ಮೂಲಕ ಊರಿನಲ್ಲಿ ಸುದ್ದಿ ಹರಡಿ ಪೊಲೀಸರಿಗೆ ಮಾಹಿತಿ ರವಾನೆ ಆಗಿತ್ತು.

ಶ್ರೀಮಂತರ ಮನೆ ವಿಚಾರಿಸಿದರು: ‘ನಾವು ನಕ್ಸಲರು, ನೀವು ಹೆದರಬೇಡಿ. ಯಾರಿಗೂ ಫೋನ್ ಮಾಡಬೇಡಿ, ನಾವು ನಿಮ್ಮನ್ನು ಏನೂ ಮಾಡುವುದಿಲ್ಲ, ಇಲ್ಲಿ ಶ್ರೀಮಂತರ ಮನೆ ಇದೆಯಾ? ಎಲ್ಲಿದೆ’ ಎಂದು ಮಾತು ಆರಂಭಿಸಿದರು. ಆದರೆ ನಮ್ಮನ್ನು ಅವರು ಹೆದರಿಸಿಲ್ಲ, ಬೆದರಿಸಿಲ್ಲ’ ಎಂದು ಮನೆಯ ಒಡತಿಯೊಬ್ಬರು ತಿಳಿಸಿದರು.

‘ಇಲ್ಲಿನ ಬಿಜು ಎಲ್ಲಿದ್ದಾನೆ? ಅವನು ಕಳೆದ ಬಾರಿ ನಾವು ಸುಬ್ರಹ್ಮಣ್ಯಕ್ಕೆ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ, ಹೀಗಾಗಿ ನಮ್ಮ ಸಹಪಾಠಿ ಯಲ್ಲಪ್ಪ ಸಾಯುವಂತಾಯಿತು. ಅದಕ್ಕಾಗಿ ನಮಗೆ ಬಿಜು ಬೇಕಾಗಿದ್ದಾನೆ’ ಎಂದು ಕೇಳಿರುವುದಾಗಿ ಪಕ್ಕದ ಮನೆಯ ವ್ಯಕ್ತಿ ಮಾಹಿತಿ ನೀಡಿದರು.

‘ತಂದೆ, ತಾಯಿ, ತಮ್ಮ ಎಲ್ಲರೂ ಸಂಕ್ರಾಂತಿ ಸಲುವಾಗಿ ದೇವಸ್ಥಾನಕ್ಕೆ ಹೋಗಿದ್ದರು. ಮನೆಯ ಹಿಂಭಾಗದಿಂದ ನಾಯಿ ಬೊಗಳುತ್ತಿತ್ತು. ಮನೆ ಹೊರಗೆ ಬಂದು ನೋಡುತ್ತಿದ್ದಂತೆ 3 ಮಂದಿ ನೇರವಾಗಿ ಅಂಗಳಕ್ಕೆ ಬಂದರು. ಶಸ್ತ್ರಸಜ್ಜಿತರಾಗಿದ್ದರು. ನಾವು ನಕ್ಸಲರು ಎಂದು ಹೇಳುತ್ತಿದ್ದಂತೆ, ನನಗೆ ಹೆದರಿಕೆ ಆಯಿತು. ಅವರೊಂದಿಗೆ ಮರು ಮಾತನಾಡದೆ ನೇರವಾಗಿ ಚಿಕ್ಕಪ್ಪ ಸುರೇಶ್ ಅವರ ಮನೆಗೆ ಓಡಿ ಹೋದೆ’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.

ಬಂದವರು ರಾಜೇಶ್, ಲತಾ, ಪುರುಷೋತ್ತಮ

ಮಿತ್ತಮಜಲಿಗೆ ಬಂದಿದ್ದವರು ನಕ್ಸಲ್‌ ರಾಜೇಶ್‌, ಲತಾ ಮತ್ತು ಪುರುಷೋತ್ತಮ ಎಂಬುದನ್ನು ಸ್ಥಳೀಯರು ಖಚಿತಪಡಿಸಿದರು.

ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಇಬ್ಬರು ನಕ್ಸಲರ ಭಾವಚಿತ್ರಗಳನ್ನು ಮನೆಯವರಿಗೆ ತೋರಿಸಿದರು. ಇದನ್ನು ನೋಡಿದ ಅವರು, ರಾಜೇಶ್ ಹಾಗೂ ಲತಾ ಎಂದು ಹೆಸರು ಹೇಳಿಕೊಂಡವರು ಇವರೇ ಎಂಬುದನ್ನು ಖಚಿತಪಡಿಸಿದರು.

ಮಿತ್ತಮಜಲಿಗೆ 3 ಮಂದಿ ನಕ್ಸಲರು ಬಂದಿದ್ದುದನ್ನು ದೃಢಪಡಿಸಲಾಗಿದೆ. ಎಎನ್‌ಎಫ್‌ನ 2 ತಂಡಗಳು ಕಾಡಿನಲ್ಲಿ ಕೂಂಬಿಂಗ್ ಆರಂಭಿಸಿವೆ.

-ಶ್ರೀನಿವಾಸ್, ಪುತ್ತೂರು ಡಿವೈಎಸ್ಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry