ಕರ್ನಾಟಕಕ್ಕೆ ಸಿಗುವುದೇ ಜಯದ ‘ಸಂತೋಷ’

7
ಇಂದು ತೆಲಂಗಾಣ ವಿರುದ್ಧ ಹಣಾಹಣಿ

ಕರ್ನಾಟಕಕ್ಕೆ ಸಿಗುವುದೇ ಜಯದ ‘ಸಂತೋಷ’

Published:
Updated:
ಕರ್ನಾಟಕಕ್ಕೆ ಸಿಗುವುದೇ ಜಯದ ‘ಸಂತೋಷ’

ಬೆಂಗಳೂರು: ಸಂಕ್ರಾಂತಿ ಹಬ್ಬದ ಸಡಗರ ಆಚರಿಸಿರುವ ಉದ್ಯಾನನಗರಿಯಲ್ಲಿ ಈಗ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಚಾಂಪಿ ಯನ್‌ಷಿಪ್‌ನ ಸಂಭ್ರಮ ಗರಿಗೆದರಿದೆ.

ಐದು ದಶಕಗಳ ನಂತರ ಬೆಂಗಳೂರಿ ನಲ್ಲಿ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದ್ದು  ದಕ್ಷಿಣ ವಲಯದ ಏಳು ಬಲಿಷ್ಠ ತಂಡಗಳು ಪೈಪೋಟಿ ನಡೆಸಲಿವೆ. ಹೀಗಾಗಿ ಆರು ದಿನಗಳ ಕಾಲ ಫುಟ್‌ಬಾಲ್‌ ಪ್ರಿಯರಿಗೆ ಕಾಲ್ಚೆಂಡಿನಾಟದ ರಸದೌತಣ ಸವಿಯುವ ಅವಕಾಶವಿದೆ.

1968–69ರಲ್ಲಿ ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ಪಂದ್ಯಗಳು ನಡೆದಿದ್ದವು. ಆ ವರ್ಷ ಮೈಸೂರು ತಂಡ ಕಿರೀಟ ಮುಡಿಗೇರಿಸಿಕೊಂಡಿತ್ತು. ಜಲಂಧರ್‌ನಲ್ಲಿ 1970–71 ಹಾಗೂ ಕೋಯಿಕ್ಕೊಡ್‌ನಲ್ಲಿ 1975–76ರಲ್ಲಿ ರಾಜ್ಯ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಕ್ರಮವಾಗಿ ಪಂಜಾಬ್‌ ಮತ್ತು ಬಂಗಾಳದ ವಿರುದ್ಧ ಮುಗ್ಗರಿಸಿತ್ತು.

ಮೈಸೂರು ರಾಜ್ಯವಾಗಿದ್ದ ಅವಧಿಯಲ್ಲಿ ತಂಡ ನಾಲ್ಕು ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದ ನಂತರ ಟ್ರೋಫಿ ಜಯಿಸಿಲ್ಲ. ಒಮ್ಮೆ ರನ್ನರ್ಸ್‌ ಅಪ್‌ ಆಗಿದ್ದೇ ತಂಡದ ಶ್ರೇಷ್ಠ ಸಾಧನೆ. ದಶಕಗಳಿಂದ ಕಾಡುತ್ತಿರುವ ಪ್ರಶಸ್ತಿಯ ಕೊರಗನ್ನು ವಿಘ್ನೇಶ್‌ ಪಡೆ ಈ ಬಾರಿ ದೂರ ಮಾಡುವ ನಿರೀಕ್ಷೆ ಇದೆ.

ಬುಧವಾರ ನಡೆಯುವ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ, ತೆಲಂಗಾಣದ ಸವಾಲು ಎದುರಿಸಲಿದ್ದು, ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ವಿಶ್ವಾಸ ಹೊಂದಿದೆ. ಪಿ.ಮುರಳೀಧರನ್‌ ಮತ್ತು ವಿ.ಕೆ.ಹರೀಶ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಆತಿಥೇಯ ಆಟಗಾರರು ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಪ್ರಾಬಲ್ಯ ಮೆರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಬೆಂಗಳೂರು ಎಫ್‌ಸಿ, ಓಜೋನ್‌ ಎಫ್‌ಸಿ, ಸ್ಟೂಡೆಂಟ್‌ ಯೂನಿಯನ್‌, ಸೌತ್‌ ಯುನೈಟೆಡ್‌, ಎಂಇಜಿ, ಆರ್‌ಡಬ್ಲ್ಯುಎಫ್‌  ಮತ್ತು ಬೆಂಗಳೂರು ಇಂಡಿಪೆಂಡೆಂಟ್ಸ್‌ ಕ್ಲಬ್‌ ಗಳ ಪರ ಆಡಿರುವ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ. ಡಿವಿಷನ್‌ ಲೀಗ್‌ಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ಇವರು ಸುಲಭವಾಗಿ ತೆಲಂಗಾಣದ ರಕ್ಷಣಾಕೋಟೆ ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ.

ಶಾಯನ್ ಖಾನ್‌, ಅಭಿಷೇಕ್‌ ದಾಸ್‌, ಸುನಿಲ್‌ ಕುಮಾರ್‌, ರಮೇಶ್‌, ಶಹಬಾಜ್‌ ಖಾನ್‌ ಅವರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಶಶಿಕುಮಾರ್‌, ಕೀತ್ ರೇಮಂಡ್‌ ಸ್ಟೀಫನ್‌ ಮತ್ತು ಅಜರುದ್ದೀನ್‌ ಅವರ ಮೇಲೂ ಭರವಸೆ ಇಡಬಹುದು.

ತೆಲಂಗಾಣ ಕೂಡ ಬಲಿಷ್ಠವಾಗಿದೆ. ಈ ತಂಡ ಗುಣಮಟ್ಟದ ಆಟ ಆಡಿ ಕರ್ನಾಟಕವನ್ನು ಮಣಿಸಲು ಕಾಯುತ್ತಿದೆ.

ಅಂಡಮಾನ್ ಇಲ್ಲ

ಅಂಡಮಾನ್‌ ಮತ್ತು ನಿಕೋಬಾರ್‌ ತಂಡ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದೆ.

ಆಟಗಾರರ ಪ್ರಯಾಣ ವೆಚ್ಚ ಭರಿಸಲು ಹಣ ಇಲ್ಲದಿರುವುದರಿಂದ ಅಂಡಮಾನ್‌ ಮತ್ತು ನಿಕೋಬಾರ್‌ ಫುಟ್‌ಬಾಲ್‌ ಸಂಸ್ಥೆ ಟೂರ್ನಿಗೆ ತಂಡ ಕಳುಹಿಸದಿರಲು ನಿರ್ಧರಿಸಿದೆ.  ತಂಡ 2014ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ಬಾರಿ ಆಡಿತ್ತು.

ಅಂಡಮಾನ್‌ ತಂಡ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿತ್ತು. ತಂಡ ಹಿಂದೆ ಸರಿದಿರುವುದರಿಂದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಮಾತ್ರ ಗುಂಪಿನಲ್ಲಿ ಉಳಿದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry