‘ಸಿನಿಮಾ ನನ್ನ ಇಷ್ಟದ ಕ್ಷೇತ್ರ’

7

‘ಸಿನಿಮಾ ನನ್ನ ಇಷ್ಟದ ಕ್ಷೇತ್ರ’

Published:
Updated:
‘ಸಿನಿಮಾ ನನ್ನ ಇಷ್ಟದ ಕ್ಷೇತ್ರ’

ನಾನು ಹುಟ್ಟಿ–ಬೆಳೆದಿದ್ದು ಮೈಸೂರು ಜಿಲ್ಲೆಯ ಒಂದು ಸಣ್ಣಹಳ್ಳಿಯಲ್ಲಿ. ಸಿನಿಮಾ ಮಾಡಬೇಕು ಅನ್ನೋದು ನನ್ನ ಬಾಲ್ಯದ ಕನಸು. ಪಿಯುಸಿ ಓದುವಾಗಲೇ ನಿರ್ದೇಶಕ ಕಾಶೀನಾಥ್‌ ಅವರನ್ನು ಭೇಟಿ ಮಾಡಿದೆ. ಅವರು ‘ಮೊದಲು ಓದು ಮುಗಿಸು, ನಂತರ ಸಿನಿರಂಗಕ್ಕೆ ಬಾ’ ಎಂದರು. ಅವರ ಮಾತಿಗೆ ಓಗೊಟ್ಟು ಮೈಸೂರಿನ ಗಂಗೋತ್ರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಹೋದೆ.

ಮೈಸೂರಿನಲ್ಲಿ ಇರುವಾಗ ರಂಗಾಯಣದ ಪರಿಚಯವಾಯ್ತು. ಐದು ವರ್ಷ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಹಲವಾರು ತಂಡಗಳ ಮೂಲಕ ನಾಟಕ ಕ್ಷೇತ್ರದ ಅನುಭವ ಪಡೆದೆ. ಪ್ರೊಡಕ್ಷನ್‌ ಮ್ಯಾನೇಜ್‌ಮೆಂಟ್ ಅನುಭವಕ್ಕೆ ಬಂತು. ಆದರೆ ಹಣ ಸಂಪಾದಿಸಲು ಆಗಲಿಲ್ಲ.

ಸರ್ಕಾರ ರೂಪಿಸಿದ್ದ ‘ಸಕಾಲ’ ಯೋಜನೆಯನ್ನು ಸಾಮಾನ್ಯರಿಗೆ ಪರಿಚಯಿಸಲೆಂದು ಬೀದಿ ನಾಟಕ ತಂಡವೊಂದು ಶ್ರಮಿಸುತ್ತಿತ್ತು. ನಾನೂ ಆ ನಾಟಕ ತಂಡ ಸೇರಿಕೊಂಡೆ. ಈ ಪ್ರದರ್ಶನಗಳಿಗಾಗಿ ಹಾಸನದ ಹಳ್ಳಿಗಳನ್ನು ಸುತ್ತಿದೆವು. ಇಲ್ಲಿ ಸಿಕ್ಕ ಸಂಭಾವನೆಯಿಂದಲೇ ಸ್ನಾತಕೋತ್ತರ ಪದವಿಯ ಖರ್ಚುಗಳನ್ನು ನಿಭಾಯಿಸಿದೆ.

ಕಿರುಚಿತ್ರ ಮಾಡಬೇಕೆಂಬ ಆಸೆಯೇನೋ ಇತ್ತು. ಆದರೆ ಹಣದ ಕೊರತೆ ಕೈ ಕಟ್ಟಿಹಾಕಿತ್ತು. ಕೆಲ ಹಿತೈಷಿಗಳು ಕ್ಯಾಮೆರಾ ಕೊಡಿಸಿದರು. ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಕಥಾಹಂದರದ ‘ನಮ್ಮ ಇಸ್ಕೂಲು’ ಕಿರುಚಿತ್ರ ತಯಾರಿಸಿದೆ. ಮೆಚ್ಚುಗೆ ವ್ಯಕ್ತವಾಯಿತು. ಹಲವಾರು ಸ್ವಯಂಸೇವಾ ಸಂಸ್ಥೆಗಳು ತಮ್ಮ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. ಆಗ ಕೈಯಲ್ಲಿ ಸ್ವಲ್ಪ ಹಣ ಹರಿದಾಡಲು ಆರಂಭಿಸಿತು.

ಮನೋವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದೆನಲ್ಲ, ನಿಮ್ಹಾನ್ಸ್‌ನಲ್ಲಿ ಕೌನ್ಸಿಲರ್‌ ಕೆಲಸ ಸಿಕ್ಕಿತು. ಆದರೆ, ಮನಸ್ಸು ಸಿನಿಮಾದೆಡೆಗೆ ವಾಲಲು ಹಾತೊರೆಯುತ್ತಿತ್ತು. ಆಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ಪರಿಚಯ ಮಾಡಿಕೊಂಡೆ. ಅವರ ಟೆಂಟ್‌ ಸಿನಿಮಾ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತೆ. ಹೊಸ ಅನುಭವಗಳು ನನಗಾದವು. ಚಿತ್ರೀಕರಣದ ಕೌಶಲಗಳು ಕರಗತವಾದವು.

ಸಂಕಲನದ ಕೆಲಸವನ್ನೂ ಮಾಡುವಂತೆ ಹಲವರು ಒತ್ತಾಯಿಸಿದರು. ಏಕೋ, ನನಗದು ಒಗ್ಗಲಿಲ್ಲ. ಅಷ್ಟರಲ್ಲಾಗಲೇ ನಿರ್ದೇಶಕನಾಗುವ ಹಂಬಲ ಬೆಳೆದು ಹೆಮ್ಮರವಾಗುತ್ತಿತ್ತು. ಆದ್ದರಿಂದ ಸಹಾಯಕ ನಿರ್ದೇಶಕನಾಗಲು ಮುಂದಾದೆ.

ಮೊದಮೊದಲು ಅವಕಾಶಗಳು ಸಿಗಲಿಲ್ಲ, ಯಾರೂ ಪ್ರೋತ್ಸಾಹಿಸಲು ಇಲ್ಲ. ಆಗ ಜತೆಗಾದವರೆ ಸ್ನೇಹಿತರಾದ ರಾಹುಲ್‌ ಮತ್ತು ಪ್ರವೀಣ್‌. ಅವರಿಂದಾಗಿ ಶೆಲ್‌ ಕಂಪೆನಿಯ ಜಾಹೀರಾತು ತಯಾರಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ನಿರ್ದೇಶನದ ಯಾನ ಶುರುವಾಯಿತು. ಬಳಿಕ ಮೈಸೂರು ಸಿಲ್ಕ್‌, ಲೂನಾರ್ಸ್‌ ಜಾಹೀರಾತು ನಿರ್ಮಾಣದ ಕೆಲಸಗಳು ನನ್ನ ಕೈಹಿಡಿದವು.

‘ಕಡೆಮನೆ’ ಸಿನಿಮಾಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದೆ. ನನ್ನ ಛಾಯಾಗ್ರಹಣದ ಕೆಲಸದ ಎರಡನೆ ಚಿತ್ರ ‘ಫಾರ್ಚುನರ್‌’ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. ಸಿನಿಮಾ ನನ್ನ ಇಷ್ಟದ ಕ್ಷೇತ್ರ. ಅವಕಾಶಗಳು ಕರೆದಾಗ ನಾನು ಇಲ್ಲ ಎನ್ನದೆ ಕೆಲಸ ಮಾಡಲು ಸಿದ್ಧನಿದ್ದೇನೆ.(ನಿರೂಪಣೆ: ಹಿತೇಶ ವೈ.)

ಇಷ್ಟದ ವೃತ್ತಿ ಪಡೆಯಲು ನೀವೂ ಸಾಕಷ್ಟು ಕಷ್ಟ ಅನುಭವಿಸಿರಬಹುದು. ಅಂಥ ಕಥೆಗಳನ್ನು ಹಂಚಿಕೊಳ್ಳಲು ವೇದಿಕೆ ‘ನನ್ನ ಕಥೆ’. ನಿಮ್ಮ ಬದುಕಿನ ಕಥೆಯನ್ನು ‘ಮೆಟ್ರೊ’ ಪುರವಣಿಯೊಂದಿಗೆ ಹಂಚಿಕೊಳ್ಳಿ. ಇಮೇಲ್– metropv@prajavani.co.in, ವಾಟ್ಸ್ಯಾಪ್– 95133 22931

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry