ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ | ಫೆಡರೇಷನ್‌ ಕಪ್‌: ಮೂರು ವರ್ಷಗಳ ನಂತರ ತವರಿನಲ್ಲಿ ನೀರಜ್ ಕಣಕ್ಕೆ

Published 8 ಮೇ 2024, 11:35 IST
Last Updated 8 ಮೇ 2024, 11:35 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ ಮತ್ತು ವಿಶ್ವ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್‌ ಚೋಪ್ರಾ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ತವರಿನಲ್ಲಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ. ಭುವನೇಶ್ವರದಲ್ಲಿ ಇದೇ 12 ರಿಂದ 15ರವರೆಗೆ ನಡೆಯಲಿರುವ ರಾಷ್ಟ್ರೀಯ ಫೆಡರೇಷನ್ ಕಪ್ ಕೂಟದಲ್ಲಿ ಭಾಗವಹಿಸುವುದನ್ನು ಅವರು ಖಚಿತಪಡಿಸಿದ್ದಾರೆ.

ಮೇ 10ರಂದು ದೋಹಾದಲ್ಲಿ ಪ್ರತಿಷ್ಠಿತ ಡೈಮಂಡ್‌ ಲೀಗ್‌ನ ಮೊದಲ ಲೆಗ್‌ನಲ್ಲಿ ಭಾಗವಹಿಸಿದ ನಂತರ, 26 ವರ್ಷದ ಸೂಪರ್‌ ಸ್ಟಾರ್ ಅಥ್ಲೀಟ್‌ ಅವರು ತವರಿಗೆ ಮರಳುವ ನಿರೀಕ್ಷೆಯಿದೆ.

‘ಪ್ರವೇಶ ಪಟ್ಟಿಯ ಪ್ರಕಾರ ನೀರಜ್ ಚೋಪ್ರಾ ಮತ್ತು ಕಿಶೋರ್ ಕುಮಾರ್ ಜೇನಾ ಅವರು ಮೇ 12ರಂದು ಭುವನೇಶ್ವರದಲ್ಲಿ ನಡೆಯುವ ದೇಶಿಯ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಅಥ್ಲೆಟಿಕ್‌ ಫೆಡರೇಷನ್‌ ಆಫ್‌ ಇಂಡಿಯಾ ಟ್ವೀಟ್‌ನಲ್ಲಿ ತಿಳಿಸಿದೆ.

ಚೋಪ್ರಾ ಅವರ ಕೋಚ್‌ ಕ್ಲಾಸ್‌ ಬಾರ್ಟೊನೀಟ್ಜ್ ಅವರೂ ಸಹ ಭುವನೇಶ್ವರದ ಫೆಡರೇಷನ್‌ ಕಪ್‌ನಲ್ಲಿ ಚೋಪ್ರಾ ಪಾಲ್ಗೊಳ್ಳುವಿಕೆಯನ್ನು ಪಿಟಿಐಗೆ ಖಚಿತಪಡಿಸಿದ್ದಾರೆ.

ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ 28 ವರ್ಷದ ಕಿಶೋರ್ ಜೇನಾ ಅವರೂ ದೋಹಾದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಹಾಂಗ್‌ಝೌ ಕೂಟದಲ್ಲಿ ನೀರಜ್ ಚಿನ್ನ ಗೆದ್ದಿದ್ದರು.

ಚೋಪ್ರಾ 2021ರ ಮಾರ್ಚ್‌ 17ರಂದು ಕೊನೆಯ ಬಾರಿ ದೇಶಿ ಟೂರ್ನಿಯಲ್ಲಿ– ಫೆಡರೇಷನ್‌ ಕಪ್ ಅಥ್ಲೆಟಿಕ್ ಕೂಟದಲ್ಲಿ– ಪಾಲ್ಗೊಂಡಿದ್ದರು. ಆಗ ಅವರು ಜಾವೆಲಿನ್‌ಅನ್ನು 87.80 ಮೀ. ದೂರ ಎಸೆದು ಚಿನ್ನ ಗೆದ್ದಿದ್ದರು.

ನಂತರ ಅವರು 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ, 2022ರಲ್ಲಿ ಡೈಮಂಡ್‌ ಲೀಗ್‌ ಚಾಂಪಿಯನ್‌, 2023ರಲ್ಲಿ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ಸಾಧನೆಯ ಶಿಖರವನ್ನೇರಿದ್ದಾರೆ.

ಆದರೆ ಚೋಪ್ರಾ ಅವರಿಗೆ 90 ಮೀ. ಗುರಿಯನ್ನು ತಲುಪಲು ಇನ್ನೂ ಆಗಿಲ್ಲ. ಅವರ ಈವರೆಗಿನ ವೈಯಕ್ತಿಕ ಶ್ರೇಷ್ಠ ಎಸೆತ 89.94 ಮೀ. ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT