ಹಾಪ್‌ಕಾಮ್ಸ್‌: 100 ಕಡೆ ಹೊಸ ಮಳಿಗೆ

7

ಹಾಪ್‌ಕಾಮ್ಸ್‌: 100 ಕಡೆ ಹೊಸ ಮಳಿಗೆ

Published:
Updated:

ಬೆಂಗಳೂರು: ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದರಿಂದ ನಗರದಲ್ಲಿ ಇನ್ನೂ 100 ಕಡೆ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಇದೇ ವರ್ಷ ಆರಂಭಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

‘ನಗರ ಮತ್ತು ಹೊರ ವಲಯದ ಹೊಸ ಬಡಾವಣೆಗಳಲ್ಲಿ ಹಾಪ್‌ಕಾಮ್ಸ್‌ ಮಳಿಗೆ ಆರಂಭಿಸಲು ತೋಟಗಾರಿಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಳಿಗೆಗಳಿಗಾಗಿ ಸೂಕ್ತ ಜಾಗ ಒದಗಿಸುವಂತೆ ಬಿಬಿಎಂಪಿಗೂ ಕೋರಿಕೆ ಸಲ್ಲಿಸಿದ್ದೇವೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಸ್ಥೆಯ 325 ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರದಲ್ಲಿ 270 ಮಳಿಗೆಗಳಿವೆ. ಐದು ಜಿಲ್ಲೆಗಳಲ್ಲಿ ವಾರ್ಷಿಕ ₹100 ಕೋಟಿಯಿಂದ ₹110 ಕೋಟಿ ವಹಿವಾಟು ನಡೆಯುತ್ತಿದೆ. ಹೆಚ್ಚುವರಿ ಮಳಿಗೆ ಆರಂಭಿಸಿ ವಹಿವಾಟನ್ನು ₹150 ಕೋಟಿಗೆ ಹೆಚ್ಚಿಸಲು ಆಲೋಚಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯು ಸುಮಾರು 8,000 ರೈತ ಸದಸ್ಯರನ್ನು ಹೊಂದಿದೆ. ಸಂಸ್ಥೆಯ ಕಾರ್ಯವ್ಯಾಪ್ತಿಯ ಮಳಿಗೆಗಳಲ್ಲಿ ಗ್ರಾಹಕರಿಗೆ ತಾಜಾ ಹಣ್ಣು, ತರಕಾರಿಗಳನ್ನು ನಿಖರ ತೂಕ ಮತ್ತು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಎಪಿಎಂಸಿಯಲ್ಲಿ ತರಕಾರಿಗೆ ನಿಗದಿಯಾಗುವ ಬೆಲೆಗಿಂತಲೂ ಪ್ರತಿ ಕೆ.ಜಿ. ಮೇಲೆ ₹2ರಿಂದ ₹3ರವರೆಗೂ ಹೆಚ್ಚು ನೀಡಲಾಗುತ್ತಿದೆ. ಸಂಸ್ಥೆಯೂ ಲಾಭದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ರೈತರ ಅಲೆದಾಟ ತಪ್ಪಿಸಲು ಮತ್ತು ಗ್ರಾಹಕರಿಗೆ ತಾಜಾ ಹಣ್ಣು ತರಕಾರಿ ನೀಡಲು ನಗರದ ಮೂರು ಭಾಗಗಳಲ್ಲಿ ಹೈಟೆಕ್‌ ಖರೀದಿ ಕೇಂದ್ರಗಳನ್ನು ಆರಂಭಿಸಲು ಹಾಪ್‌ಕಾಮ್ಸ್‌ ನಿರ್ಧರಿಸಿದೆ.

ಯಲಹಂಕ, ಸರ್ಜಾಪುರ. ತಿಪ್ಪಸಂದ್ರ ಹಾಗೂ ಹೊಸಕೋಟೆಯಲ್ಲಿ ಸುಸಜ್ಜಿತ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ₹15 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎನ್ನುತ್ತಾರೆ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ.

20 ಕೋಟಿ ಯೋಜನೆ ಸಿದ್ಧ: ರೀಟೆಲ್‌ ಕಂಪನಿಗಳ ಮಾಲ್‌ಗಳಿಗೆ ಪೈಪೋಟಿ ನೀಡಲು ಸಂಸ್ಥೆ ಸಜ್ಜಾಗಿದೆ. ಇದಕ್ಕಾಗಿ ₹20 ಕೋಟಿಯ ಯೋಜನೆ ರೂಪಿಸಿ, ತೋಟಗಾರಿಕೆ ಇಲಾಖೆಗೆ ಸಲ್ಲಿಸಲಾಗಿದೆ. ಯಲಹಂಕದ ರೈತ ಸಂತೆ ಜಾಗದಲ್ಲಿ ಪ್ರಾಯೋಗಿಕವಾಗಿ ಹೈಟೆಕ್‌ ಖರೀದಿ ಕೇಂದ್ರ ಆರಂಭಿಸಲು ತೋಟಗಾರಿಕೆ ಇಲಾಖೆ ಉನ್ನತ ಅಧಿಕಾರಿಗಳು ಮೌಖಿಕ ಒಪ್ಪಿಗೆ  ನೀಡಿದ್ದಾರೆ ಎಂದು ಅವರು ತಿಳಿಸಿದರು.

325 -ರಾಜ್ಯದಲ್ಲಿರುವ ಹಾಪ್‌ಕಾಮ್ಸ್‌ ಮಾರಾಟ ಮಳಿಗೆಗಳು

 8,000- ಹಾಪ್‌ಕಾಮ್ಸ್‌ ಸದಸ್ಯತ್ವ ಹೊಂದಿರುವ ರೈತರು

₹100 ಕೋಟಿ-ಸಂಸ್ಥೆಯ ವಾರ್ಷಿಕ ವಹಿವಾಟು

ಲಾಲ್‌ಬಾಗ್‌ನಲ್ಲಿ ಪ್ರತಿ ವಾರ ಮೇಳ:

ಲಾಲ್‌ಬಾಗ್‌ನಲ್ಲಿ ಪ್ರತಿ ಭಾನುವಾರ ಹಾಪ್‌ಕಾಮ್ಸ್‌ ಮೇಳ ನಡೆಸಲು ಸಂಸ್ಥೆ ನಿರ್ಧರಿಸಿದೆ.

ಸಂಕ್ರಾಂತಿ ಪ್ರಯುಕ್ತ ಇತ್ತೀಚೆಗೆ ನಡೆಸಿದ ಎರಡು ದಿನಗಳ ಹಾಪ್‌ಕಾಮ್ಸ್‌ ಮೇಳದಲ್ಲಿ ₹8 ಲಕ್ಷ ವಹಿವಾಟು ನಡೆದಿದೆ. ಇದರಿಂದ ₹2 ಲಕ್ಷ ಲಾಭ ಬಂದಿದೆ. ಮೇಳಕ್ಕೆ ಸಂಸ್ಥೆ ನಯಾಪೈಸೆ ವೆಚ್ಚ ಮಾಡಿಲ್ಲ. ಕಬ್ಬನ್‌ಪಾರ್ಕ್‌ನಲ್ಲಿ ನಡೆಸಿದ್ದ ಒಂದು ದಿನದ ಮೇಳದಲ್ಲಿ ₹25,000 ಲಾಭ ಸಿಕ್ಕಿದೆ. ನಿವಾಸಿಗಳಿಂದ ಪ್ರತಿ ವಾರವೂ ಮೇಳ ನಡೆಸಲು ಬೇಡಿಕೆ ಬಂದಿರುವುದರಿಂದ ಲಾಲ್‌ಬಾಗ್‌ನಲ್ಲಿ ಕನಿಷ್ಠ ನಾಲ್ಕು ಮಳಿಗೆಗಳಲ್ಲಿ ತರಕಾರಿ ಮತ್ತು ಹಣ್ಣುಗಳ ಮಾರಾಟ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಚಂದ್ರೇಗೌಡ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry