ಬಹುರೂಪಿ ಅಮ್ಮ

7

ಬಹುರೂಪಿ ಅಮ್ಮ

Published:
Updated:
ಬಹುರೂಪಿ ಅಮ್ಮ

* ತೆರೆಯ ಮೇಲೆ ನಿಮಗೆ ಅಮ್ಮನ ಪಾತ್ರವೇ ಹುಡುಕಿಕೊಂಡು ಬರುತ್ತಿದೆಯಲ್ಲಾ?

ತಾಯಿ ಪಾತ್ರದಲ್ಲಿ ನಟಿಸುವುದು ನನಗೆ ಖುಷಿ. ‘ಬಜಾರ್‌’ ಚಿತ್ರದಲ್ಲೂ ನಾನು ನಾಯಕನ ತಾಯಿ. ಇಲ್ಲಿನ ಪಾತ್ರಕ್ಕೆ ಪೋಷಣೆಯಿದೆ. ಈ ಸಿನಿಮಾದಲ್ಲಿ ಮಗನಿಗೆ ಪಾರಿವಾಳದ ಬೆಟ್ಟಿಂಗ್‌ ಹುಚ್ಚು. ನನ್ನದು ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚು ಇರುವ ಕಾಮಿಡಿ ಪಾತ್ರ. ಇಲ್ಲಿ ನಾನು ಮಧ್ಯಮ ವರ್ಗ ಪ್ರತಿನಿಧಿಸುವ ಅಮ್ಮ. ‘ಆಪರೇಷನ್‌ ಅಲಮೇಲಮ್ಮ’ ಚಿತ್ರದಲ್ಲಿ ನಾಯಕಿಯ ಅಮ್ಮನಾಗಿದ್ದೆ. ಅದೊಂದು ಭಿನ್ನ ಪಾತ್ರ. ಅಲ್ಲಿ ನಾಯಕನ ಜೊತೆಗೆ ದೃಶ್ಯಾವಳಿಗಳು ಹೆಚ್ಚಿದ್ದವು. ಚಿತ್ರದಲ್ಲಿ ಅಭಿನಯಿಸುವ ಮೊದಲ ಪಾತ್ರದ ಬಗ್ಗೆ ಆತಂಕ ಇದ್ದಿದ್ದು ಸತ್ಯ. ಕೊನೆಗೆ, ಸಿನಿಮಾ ತೆರೆಕಂಡಾಗ ನನ್ನ ಪಾತ್ರ ಖುಷಿ ಕೊಟ್ಟಿತು.

* ಇತ್ತೀಚೆಗೆ ಧಾರಾವಾಹಿಯಲ್ಲಿ ನಟಿಸುವುದು ಕಡಿಮೆಯಾಗುತ್ತಿದೆಯೇ?

ಕಿರುತೆರೆಯೇ ನನ್ನ ಮೊದಲ ಆದ್ಯತೆ. ಈಗಲೂ ‘ಪದ್ಮಾವತಿ’ ಧಾರಾವಾಹಿಯಲ್ಲಿ ತುಳಸಿಯ ಅಮ್ಮನ ಪಾತ್ರ ನಿರ್ವಹಿಸುತ್ತೇನೆ. ಈಗ ಅಲ್ಲಿ ನನ್ನ ಟ್ರ್ಯಾಕ್‌ ಇಲ್ಲ. ಹಾಗಾಗಿ, ಕಾಣಿಸಿಕೊಳ್ಳುತ್ತಿಲ್ಲ. ನಿರ್ದೇಶಕರು ಸಮರ್ಥವಾಗಿ ತಾಯಿ ಪಾತ್ರದ ಬಗ್ಗೆ ಬರೆಯಬೇಕು. ಪರಭಾಷಿಕರಿಗೆ ಮಣೆ ಹಾಕುವುದು ನಿಲ್ಲಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ನೀಡಬೇಕು. ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸಮಯದ ಹೊಂದಾಣಿಕೆ ಸಮಸ್ಯೆಯಾಗಿದೆ. ಹಾಗಾಗಿ, ಧಾರಾವಾಹಿಯಲ್ಲಿ ಅವಕಾಶ ಬಂದರೂ ನಟಿಸಲು ಸಾಧ್ಯವಾಗುತ್ತಿಲ್ಲ. 

* ನಿಮಗೆ ಖುಷಿ ನೀಡಿದ ಧಾರಾವಾಹಿ ಯಾವುದು?

ಬಹುತೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವುದು ಅಮ್ಮನಾಗಿಯೇ. ‘ಪುಣ್ಯಕೋಟಿ’ಯಲ್ಲಿ ಸಮಾಜ ಸೇವಕಿಯಾಗಿ ಅಭಿನಯಿಸಿದೆ. ಇದು ವಿಭಿನ್ನವಾದ ಪಾತ್ರವಾಗಿತ್ತು. ನನಗೂ ಖುಷಿ ಕೊಟ್ಟಿತು. ‘ಮಹಾನದಿ’ಯಲ್ಲಿ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ಅಭಿನಯಿಸಿದೆ.

* ಅತ್ತೆ– ಸೊಸೆ ಜಗಳ ಧಾರಾವಾಹಿಯ ಸಿದ್ಧಸೂತ್ರವಾಗಿದೆಯಲ್ಲಾ?

ಬಹುತೇಕ ಧಾರಾವಾಹಿಗಳಲ್ಲಿ ಈ ಸೂತ್ರ ಪಾಲನೆಯಾಗುತ್ತಿದೆ. ಇದು ಆಗಬಾರದು. ಕಲಾವಿದರು ಎದುರಿಗೆ ಸಿಕ್ಕಿದಾಗ ಪ್ರೇಕ್ಷಕರು ಕೂಡ ಈ ಪ್ರಶ್ನೆ ಕೇಳುತ್ತಾರೆ. ಆದರೆ, ಟಿ.ವಿ.ಯಲ್ಲಿ ಈ ಮಾದರಿಯ ಧಾರಾವಾಹಿ ಬಂದಾಗ ನೋಡುತ್ತಾರೆ. ವಿಭಿನ್ನವಾದ ಕಥೆ ಹೇಳಿದರೆ ಜನರು ಇಷ್ಟಪಡುತ್ತಾರೆ.

* ನಿಮ್ಮ ಮುಂದಿನ ಯೋಜನೆಗಳೇನು?

‘ಅಯೋಗ್ಯ’ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಯೂ ತಾಯಿ ಪಾತ್ರ. ನಟ ದಿಗಂತ್‌ ಅಭಿನಯದ ‘ಕಥೆಯೊಂದು ಶುರುವಾಗಿದೆ’ ಚಿತ್ರದ ಶೂಟಿಂಗ್‌ ಮುಗಿದಿದೆ. ಈ ಚಿತ್ರದಲ್ಲಿ ಮೂರು ವರ್ಗದ ಪ್ರೇಮಕಥೆ ಇದೆ.  

* ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ?

ಕುಟುಂಬದ ಸದಸ್ಯರಿಗೆ ಸಮಯ ಮೀಸಲಿಡುತ್ತೇನೆ. ಕನ್ನಡದ ಕಾದಂಬರಿಗಳನ್ನು ಓದುವುದು ನನ್ನ ಹವ್ಯಾಸ. ತ್ರಿವೇಣಿ ನನ್ನ ಮೆಚ್ಚಿನ ಲೇಖಕಿ. ಕನ್ನಡದಲ್ಲಿ ಕಾದಂಬರಿ ಆಧಾರಿತ ಸಿನಿಮಾ, ಧಾರಾವಾಹಿಗಳು ಬರುತ್ತಿಲ್ಲ. ಇದು ನೋವಿನ ಸಂಗತಿ. ನಿರ್ಮಾಪಕರು ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕಿದೆ. ಪ್ರೇಕ್ಷಕರು ಕೂಡ ಇಷ್ಟಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry