ಭಾರತಕ್ಕೆ ಜಯದ ‘ಹ್ಯಾಟ್ರಿಕ್‌’ ಕನಸು

7
19 ವರ್ಷದೊಳಗಿನವರ ವಿಶ್ವಕಪ್‌: ಇಂದು ಜಿಂಬಾಬ್ವೆ ವಿರುದ್ಧ ಪಂದ್ಯ

ಭಾರತಕ್ಕೆ ಜಯದ ‘ಹ್ಯಾಟ್ರಿಕ್‌’ ಕನಸು

Published:
Updated:
ಭಾರತಕ್ಕೆ ಜಯದ ‘ಹ್ಯಾಟ್ರಿಕ್‌’ ಕನಸು

ಮೌಂಟ್‌ ಮೌಂಗಾನುಯಿ: ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಭಾರತ ತಂಡ ಈಗ ಜಯದ ‘ಹ್ಯಾಟ್ರಿಕ್‌’ ಸಾಧನೆಯ ಕನವರಿಕೆಯಲ್ಲಿದೆ.

ಶುಕ್ರವಾರ ನಡೆಯುವ ‘ಬಿ’ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಪೃಥ್ವಿ ಶಾ ಪಡೆ ಜಿಂಬಾಬ್ವೆ ಸವಾಲು ಎದುರಿಸಲಿದೆ. ಉಭಯ ತಂಡಗಳ ನಡುವಣ ಈ ಹೋರಾಟ ಬೇ ಓವಲ್‌ ಕ್ರೀಡಾಂಗಣದಲ್ಲಿ ಜರುಗಲಿದೆ.

ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಭಾರತ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಪಪುವಾ ನ್ಯೂಗಿನಿ ವಿರುದ್ಧ ಜಯಭೇರಿ ಮೊಳಗಿಸಿತ್ತು.

ಹಿಂದಿನ ಪಂದ್ಯಗಳಲ್ಲಿ ನಾಯಕ ಪೃಥ್ವಿ, ಅರ್ಧಶತಕ ಸಿಡಿಸಿ ಮಿಂಚಿದ್ದರು. ಎರಡು ಪಂದ್ಯಗಳಿಂದ 151ರನ್‌ ಕಲೆಹಾಕಿರುವ ಅವರು ಬ್ಯಾಟಿಂಗ್‌ನಲ್ಲಿ ತಂಡದ ಆಧಾರ ಸ್ತಂಭವಾಗಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿಯುವ ಪೃಥ್ವಿ ಮತ್ತು ಮಂಜೋತ್‌ ಕಾಲ್ರಾ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 180ರನ್‌ಗಳ ಜೊತೆಯಾಟ ಆಡಿದ್ದ ಇವರು ನ್ಯೂ ಗಿನಿ ಎದುರೂ ಅಬ್ಬರಿಸಿದ್ದರು. ಕೇವಲ 8 ಓವರ್‌ಗಳಲ್ಲಿ  67 ರನ್‌ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಅಮೋಘ ಲಯದಲ್ಲಿರುವ ಈ ಜೋಡಿ ಜಿಂಬಾಬ್ವೆ ವಿರುದ್ಧವೂ ಅಬ್ಬರಿಸುವ ವಿಶ್ವಾಸ ಹೊಂದಿದೆ.

ಶುಭಮನ್‌ ಗಿಲ್‌, ಹಿಮಾಂಶು ರಾಣಾ, ಅನುಕೂಲ್‌ ರಾಯ್‌ ಮತ್ತು ಅಭಿಷೇಕ್‌ ಶರ್ಮಾ ಅವರು ಸ್ಫೋಟಕ ಆಟ ಆಡಿ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲೂ ಭಾರತ ಬಲಿಷ್ಠವಾಗಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಕಮಲೇಶ್‌ ನಾಗರಕೋಟಿ ಮತ್ತು ಶಿವಂ ಮಾವಿ ಆರಂಭದಲ್ಲೆ ವಿಕೆಟ್‌ ಪಡೆದು ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲರು. ಇಶಾನ್ ಪೋರೆಲ್‌ ಮೇಲೂ ಭರವಸೆ ಇಡಬಹುದು.

ಅನುಕೂಲ್ ರಾಯ್‌ ಮತ್ತು ಅಭಿಷೇಕ್‌ ಶರ್ಮಾ ತಮ್ಮ ಬತ್ತಳಿಕೆಯಲ್ಲಿರುವ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಸಜ್ಜಾಗಿದ್ದಾರೆ.

ಕ್ವಾರ್ಟರ್‌ ಮೇಲೆ ಜಿಂಬಾಬ್ವೆ ಕಣ್ಣು: ಜಿಂಬಾಬ್ವೆ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶದ ಮೇಲೆ ಕಣ್ಣು ನೆಟ್ಟಿದೆ.

ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಈ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ. ಎಂಟರ ಘಟ್ಟ ಪ್ರವೇಶಿಸಬೇಕಾದರೆ ಭಾರತದ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸುವುದು ಅಗತ್ಯ.

ತಂಡಗಳು ಇಂತಿವೆ

ಭಾರತ: ಪೃಥ್ವಿ ಶಾ (ನಾಯಕ), ಮಂಜೋತ್‌ ಕಾಲ್ರಾ, ಶುಭಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಹಿಮಾಂಶು ರಾಣಾ, ಆರ್ಯನ್‌ ಜುಯಾಲ್‌ (ವಿಕೆಟ್‌ ಕೀಪರ್‌), ಅನುಕೂಲ್‌ ರಾಯ್‌, ಕಮಲೇಶ್‌ ನಾಗರಕೋಟಿ, ಶಿವಂ ಮಾವಿ, ಶಿವ ಸಿಂಗ್‌, ಅರ್ಷದೀಪ್‌ ಸಿಂಗ್‌, ಪಂಕಜ್‌ ಯಾದವ್‌, ಆದಿತ್ಯ ಠಾಕರೆ, ಇಶಾನ್‌ ಪೋರೆಲ್‌, ಹಾರ್ವಿಕ್‌ ದೇಸಾಯಿ ಮತ್ತು ರಿಯಾನ್‌ ಪರಾಗ್‌.

ಜಿಂಬಾಬ್ವೆ: ಗ್ರೆಗೊರಿ ಡಾಲರ್‌ (ವಿಕೆಟ್‌ ಕೀಪರ್‌), ಜೇಡನ್‌ ಶಾಡೆನ್‌ಡೊರ್ಫ್‌, ಡಿಯಾನ್‌ ಮೇಯರ್ಸ್‌, ಮಿಲ್ಟನ್‌ ಶುಂಭಾ, ವೆಸ್ಲಿ ಮ್ಯಾಧವೆರೆ,  ಲಿಯಾಮ್‌ ನಿಕೊಲಸ್‌ ರೊಚೆ (ನಾಯಕ), ಅಲಸ್ಟೇರ್‌ ಫ್ರೊಸ್ಟ್‌, ರಾಬರ್ಟ್‌ ಚಿಮ್ಹಿನ್ಯಾ, ತೌನ್‌ ಹ್ಯಾರಿಸನ್‌, ತಿನಾಶೆ ನೆನ್‌ಹುಂಜಿ, ಜೊನಾಥನ್‌ ಕಾನ್ನೊಲಿ, ಕೀರನ್‌ ರಾಬಿನ್‌ಸನ್‌, ಡೊನಾಲ್ಡ್‌ ಲಾಂಬೊ, ಕೊಶಿಲಾಟು ನುನು ಮತ್ತು ತನುನುರ್ವಾ ಮಕೊನಿ.

ಆರಂಭ: ಬೆಳಿಗ್ಗೆ 6.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry