ವಿಶೇಷ ಮಕ್ಕಳಿಗೆ ‘ಸ್ವರಕ್ಷೇಮ’ ಚಿಕಿತ್ಸೆ

7

ವಿಶೇಷ ಮಕ್ಕಳಿಗೆ ‘ಸ್ವರಕ್ಷೇಮ’ ಚಿಕಿತ್ಸೆ

Published:
Updated:
ವಿಶೇಷ ಮಕ್ಕಳಿಗೆ ‘ಸ್ವರಕ್ಷೇಮ’ ಚಿಕಿತ್ಸೆ

ಬೆಂಗಳೂರು: ಎಲ್ಲರನ್ನು ತನ್ನತ್ತ ಸೆಳೆಯುವ ಅದಮ್ಯ ಶಕ್ತಿ ಸಂಗೀತಕ್ಕಿದೆ. ಕೇವಲ ಮನರಂಜನೆಗೆ ಮಾತ್ರವಲ್ಲ ಚಿಕಿತ್ಸಾ ವಿಧಾನದಲ್ಲೂ ಸಂಗೀತ ಬಳಸಿ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಸನಕ್ ಕುಮಾರ್ ಆತ್ರೇಯ.

ಬೆಂಗಳೂರಿನ ಟಾಟಾ ನಗರದಲ್ಲಿ ‘ಸ್ವರಕ್ಷೇಮ’ ಸಂಸ್ಥೆಯನ್ನು ಸ್ಥಾಪಿಸಿ, ಐದು ವರ್ಷಗಳಿಂದ ವಿಶೇಷ ಮಕ್ಕಳಿಗೆ ಉಚಿತವಾಗಿ ಸಂಗೀತ ಚಿಕಿತ್ಸೆಯನ್ನು ಅವರು ನೀಡುತ್ತಿದ್ದಾರೆ. ‘ಈ ವಿಧಾನ ಬಳಸಿ ನೀಡಿದ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಲಭಿಸಿದೆ’ ಎನ್ನುವುದು ಅವರ ಅಭಿಪ್ರಾಯ.

‘ಸಂಗೀತದ ಮಹತ್ವ ಅರಿತು ಚಿಕಿತ್ಸೆ ನೀಡಿದರೆ ಅದರಿಂದ ಹಲವು ರೋಗಗಳನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಇಂದು ಸಂಗೀತ ಚಿಕಿತ್ಸೆಯ ಬಗ್ಗೆ ತಪ್ಪು ಕಲ್ಪನೆಗಳು ವ್ಯಾಪಕವಾಗಿವೆ, ಅಪಪ್ರಚಾರಗಳೂ ನಡೆಯುತ್ತಿವೆ. ಜನರು ವಿವೇಚನೆಯಿಂದ ವರ್ತಿಸಬೇಕು’ ಎನ್ನುತ್ತಾರೆ ಅವರು.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಸನಕ್ ಅವರಿಗೆ ಮೊದಲಿಂದಲೂ ಸಂಗೀತದ ಒಲವು ಇತ್ತು. ಮೃದಂಗ ಕಲಾವಿದರೂ ಆಗಿರುವ ಅವರು ಉದ್ಯೋಗ ಬಿಟ್ಟು ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತ ಚಿಕಿತ್ಸೆ ನೀಡಲು ತಮ್ಮನ್ನು ತೊಡಗಿಸಿಕೊಂಡರು. ಇವರ ಪತ್ನಿ ಸೌಮ್ಯ ಸನಕ್ ಅವರು ಸೂಕ್ಷ್ಮಜೀವಶಾಸ್ತ್ರದಲ್ಲಿ ಎಂ.ಎಸ್ಸಿ, ಸಂಗೀತದಲ್ಲಿ ಎಂ.ಎ ಹಾಗೂ ಸಂಗೀತ ಚಿಕಿತ್ಸಾ ವಿಷಯದಲ್ಲಿ ಪಿಎಚ್.ಡಿ ಮಾಡಿದ್ದಾರೆ. ಪತಿಯ ಜೊತೆಗೂಡಿ 270ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಚಿಕಿತ್ಸೆ ನೀಡುತ್ತಿದ್ದಾರೆ.

‘ಸಂಗೀತ ಚಿಕಿತ್ಸೆಗೆ ಶಾಸ್ತ್ರೀಯ ಸಂಗೀತದ ಪ್ರಕಾರವಾದ ಕೊನಗೋಲನ್ನು ಮುಖ್ಯವಾಗಿ ಬಳಸುತ್ತೇವೆ. ಇದು ವಿಶೇಷ ಮಕ್ಕಳಲ್ಲಿ ತುಂಬಾ ಪರಿಣಾಮ ಉಂಟು ಮಾಡಿದೆ. ಅಂತಹ ಶಕ್ತಿ ಈ ಪ್ರಕಾರಕ್ಕಿದೆ’ ಎಂಬುದು ಸನಕ್ ಅವರ ನುಡಿ.

'ಬುದ್ಧಿಮಾಂದ್ಯ ಮಕ್ಕಳಲ್ಲಿ ಕೈಗಳ ಚಲನೆ ಕಡಿಮೆ ಇರುತ್ತದೆ. ಅಂತಹ ಮಕ್ಕಳಿಗೆ ಮೃದಂಗ, ತಬಲಾ ಕಲಿಸುವ ಮೂಲಕ ಕೈಗಳನ್ನು ಸರಾಗವಾಗಿ ಚಲಿಸುವಂತೆ ಮಾಡಿದ್ದೇವೆ. ಮಗುವಿಗೆ ಸಂಗೀತದ ಯಾವ ಪ್ರಕಾರದಿಂದ ಚಿಕಿತ್ಸೆ ಅಗತ್ಯ ಎಂಬುದನ್ನು ಮನಗಂಡು ಅದರ ಮೂಲಕ ಚಿಕಿತ್ಸೆ ನೀಡುತ್ತೇವೆ. ಅನೇಕ ಮಕ್ಕಳಲ್ಲಿ ಬದಲಾವಣೆಗಳು ಕಂಡುಬಂದಿವೆ. ಮಾತು ಬಾರದ ಮಕ್ಕಳ ವಾಕ್ ಚಿಕಿತ್ಸೆಗೂ ಕೊನಗೋಲು ಬಳಸುತ್ತೇವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ’ ಎಂಬುದು ಅವರ ಅನುಭವದ ಮಾತು.

ಬೆಂಗಳೂರು, ತಮಿಳುನಾಡು ಮಾತ್ರವಲ್ಲ ಆಸ್ಟ್ರೇಲಿಯಾ, ಮಲೇಷ್ಯಾದ ಕೆಲವರೂ ಇವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೈಪ್ ವಿಡಿಯೊ ಕರೆಯ ಮೂಲಕ ಅವರಿಗೆ ಸಂಗೀತ ಚಿಕಿತ್ಸೆ ನೀಡಲಾಗುತ್ತಿದೆ. ಮರೆವು (ಅಲ್ಜೀಮರ್ಸ್), ಪಾರ್ಕಿನ್ಸನ್ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದಾರೆ.

'ಕೊನಗೋಲು ಪ್ರಕಾರದ ಮೂಲಕ ಚಿಕಿತ್ಸೆ ನೀಡುವ ಏಕೈಕ ಸಂಸ್ಥೆ ನಮ್ಮದು. ಶ್ರುತಿ, ಸ್ವರಜ್ಞಾನ ಇಲ್ಲದವರೂ ಇದನ್ನು ಕಲಿಯಬಹುದು. ಮೂಢನಂಬಿಕೆಯಿಂದ ದೂರವಿದ್ದು, ವೈಜ್ಞಾನಿಕವಾಗಿ ಸಂಗೀತ ಚಿಕಿತ್ಸೆ ನೀಡಿದರೆ, ಉತ್ತಮ ಫಲಿತಾಂಶ ಸಿಗುತ್ತದೆ. ಸಂಗೀತದ ಮೂಲಕ ರೋಗವನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ' ಎನ್ನುವುದು ಸನಕ್ ಅವರ ವಿಶ್ವಾಸ.

ಸನಕ್ ಕುಮಾರ್ ಅವರ ಸಂಪರ್ಕಕ್ಕೆ: 98454 61864

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry