ಬಾತುಕೋಳಿಗಳ ವಿಹಾರ

7

ಬಾತುಕೋಳಿಗಳ ವಿಹಾರ

Published:
Updated:
ಬಾತುಕೋಳಿಗಳ ವಿಹಾರ

ಶುದ್ಧ ತಿಳಿನೀರಿನ ಮೇಲೆ ಅಲೆದಾಡುವ ಚೊಕ್ಕ ಮೈಯ ಬಾತುಕೋಳಿಗಳನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎನಿಸುವುದು ಸುಳ್ಳಲ್ಲ. ಈ ಜಾತಿಯ ಪಕ್ಷಿಗಳಲ್ಲಿ ಬೊಚ್ಚಾದ ಕೊಕ್ಕಿನ ಮೇಲೆ ದೊಡ್ಡ ಕುಂಕುಮವಿಟ್ಟಂತೆ ಕೆಂಪು ಬಣ್ಣ ರಾರಾಜಿಸುತ್ತದೆ. ಈ ಚಿತ್ರದಲ್ಲಿರುವುದು ಕಡು ಕಂದುಬಣ್ಣದ ಕೊಕ್ಕಿನತುದಿಗೆ ಅರಿಸಿಣ ಲೇಪಿಸಿಕೊಂಡಂತೆ ಕಾಣುವ ‘ಇಂಡಿಯನ್ ಸ್ಪಾಟ್ ಬಿಲ್ಡ್‌ ಡಕ್’.

ಬಿಳಿಯ ರೆಕ್ಕೆಪುಕ್ಕಗಳ ಮೇಲೆಲ್ಲಾ ರಂಗೋಲಿ ತರಹದ ಚುಕ್ಕೆ. ಪಟ್ಟೆ ಎಳೆದು ಸಿಂಗರಿಸಿದ ಸಂಕ್ರಾಂತಿಯ ಆಕಳು ಹೋರಿಯಂತೆ ರೊಯ್ಯನೆ ನೀರ ತಟದಿಂದ ಜಿಗಿಯುತ್ತದೆ. ನೀರಲ್ಲಿ ತೇಲುತ್ತಿರುವ ಸಂಗಾತಿಯೆಡೆಗೆ ಹಾರಿ ಸಾಹಸ ಮಾಡುವ ಇದರ ಆಟ ನೋಡುವುದು ಕಣ್ಣಿಗೆ ಹಬ್ಬ.

ತಕ್ಕಮಟ್ಟಿಗೆ ಚೊಕ್ಕವಾಗಿರುವ ನೀರಿನ ಹಳ್ಳ, ಕೆರೆ, ಸರೋವರಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ನೀರಮೇಲಣ ಗಿಡಗಂಟಿಗಳು, ಹಣ್ಣು, ಕಾಯಿ, ಬೀಜ, ಪುಟ್ಟಪುಟ್ಟ ನೀರಜೀವಿಗಳು, ಮೊಟ್ಟೆ, ಸಣ್ಣ ಮೀನು, ಕಪ್ಪೆ ಇತ್ಯಾದಿ ಜಲಚರಗಳು ಇವುಗಳ ಆಹಾರ. ದಡದ ಮೇಲಣ ಪೊದೆಗಳ ಸಂದಿಯಲ್ಲಿ 10–15 ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ವಲಸೆ ಜಾತಿಗೆ ಸೇರದ ಹಕ್ಕಿಗಳಿವು. ನಗರೀಕರಣದ ಒತ್ತಡದಿಂದಾಗಿ ಸ್ವಚ್ಛ ನೀರು ಸಿಗದೆ ಈ ಹಕ್ಕಿಗಳು ಅನಾಥವಾಗುತ್ತಿವೆ.

ರಾಜಾಜಿನಗರದ ಯುವ ಛಾಯಾಗ್ರಾಹಕಿ ಪ್ರಕೃತಿ ಪಿ. ಕುಮಾರ್ ಕೆಂಗೇರಿ ಕೆರೆಯ ಬಳಿ ಒಂದು ಮುಂಜಾನೆ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಬಹು ದೂರದಿಂದಲೇ ಕ್ಯಾಮೆರಾದಲ್ಲಿ ಸೆರೆಹಿಡಿದಿದ ದೃಶ್ಯ ಇಲ್ಲಿದೆ. ಏಳು ವರ್ಷಗಳಿಂದ ವನ್ಯಪಕ್ಷಿಗಳು ಮತ್ತು ಸ್ಟ್ರೀಟ್ ಫೋಟೊಗ್ರಫಿ ಹವ್ಯಾಸ ಬೆಳೆಸಿಕೊಂಡಿರುವ ಪ್ರಕೃತಿ ಅವರು ಈ ಚಿತ್ರ ತೆಗೆಯಲು ಬಳಸಿದ ಕ್ಯಾಮೆರಾ ನಿಕಾನ್ ಡಿ700. 300–800 ಎಂ.ಎಂ. ಫೋಕಲ್ ಲೆಂಗ್ತ್‌ನ ಜೂಂ ಲೆನ್ಸ್.

ಪ್ರಕೃತಿ

ಎಕ್ಸ್‌ಪೋಷರ್ ವಿವರ ಇಂತಿದೆ. 800 ಎಂ.ಎಂ. ಜೂಮ್, ಅಪರ್ಚರ್ ಜಿ 8, ಶಟರ್ ವೇಗ 1/1000 ಸೆಕೆಂಡ್, ಐ.ಎಸ್.ಒ 500, ಎಕ್ಸ್‌ಪೋಷರ್ ಕಾಂಪನ್ಸೇಷನ್ (–) 0.33 ಮತ್ತು ಟ್ರೈಪಾಡ್ ಬಳಕೆಯಾಗಿದೆ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆಯನ್ನು ಹೀಗೆ ಮಾಡಬಹುದು...

* ಈ ಬಗೆಯ ಬಹುದೂರದ ವನ್ಯಪಕ್ಷಿ ಛಾಯಾಗ್ರಹಣದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಮರ್ಪಕ ತರಬೇತಿ, ಪೂರ್ವಾಭ್ಯಾಸ ಮತ್ತು ಆ ಕ್ಷಣಕ್ಕೆ ಸ್ಪಂದಿಸುವ ಚಾಕಚಕ್ಯತೆ ಅಗತ್ಯ.

* ವಸ್ತುವಿನ ಸಂಪೂರ್ಣ ಫೋಕಸ್‌ಗೆ ಬೇಕಾದಷ್ಟು ಅಪರ್ಚರ್, ಚಲನೆಯನ್ನು ಸ್ಥಿರಗೊಳಿಸಲು ಬೇಕಾದಷ್ಟು ಷಟರ್ ವೇಗ, ವರ್ಣ ಛಾಯಾಂತರಕ್ಕೆ ಸರಿಹೊಂದುವ ಐಎಸ್ಒ ಸೆನ್ಸಿಟಿವಿಟಿ ಮತ್ತು ಒಟ್ಟಾರೆ ಕಾಂಟ್ರಾಸ್ಟ್ ಬಿಗಿಪಡಿಸಲು ಬೇಕಾದಷ್ಟು (ಕ್ರಿಸ್ಪ್) ಎಕ್ಸ್‌ಪೋಷರ್ ಕಾಂಪನ್ಸೇಶನ್ ಕಡಿತಗೊಳಿಸಿರುವುದು ಗಮನಾರ್ಹ.

* ಕ್ಯಾಮೆರಾ ಶೇಕ್‌ ತಡೆಯಬಲ್ಲ ಟ್ರೈಪಾಡ್ ಬಳಸಿರುವುದು ಅವರ ತಾಂತ್ರಿಕ ಜ್ಞಾನ ಮತ್ತು ಪರಿಣಿತಿಗೆ ಸಾಕ್ಷಿಯಾಗಿವೆ.

* ಒಂದು ಛಾಯಾಚಿತ್ರ ಭೇಷ್ ಎನ್ನಿಸಿಕೊಳ್ಳಲು ತಾಂತ್ರಿಕವಾಗಿ ಸರಿ ಇದ್ದರಷ್ಟೇ ಸಾಲದು. ನೋಡುಗನ ಕಣ್ಣು ಮತ್ತು ಮನಸ್ಸನ್ನು ಒಮ್ಮೆಲೇ ತನ್ನೆಡೆ ಸೆಳೆಯಬಲ್ಲ ಮತ್ತು ಪ್ರಭಾವ ಬೀರಬಲ್ಲ ಗುಣವನ್ನು ಹೊಂದಿರಬೇಕು. ಈ ಚಿತ್ರದಲ್ಲಿ ಎರಡೂ ಪಕ್ಷಿಗಳು ಯಾವುದೋ ಅನನ್ಯ ಭಾವಗಳನ್ನು ಉದ್ದೀಪಿಸುತ್ತಾ, ಸಹಜವಾಗಿ ಕಾಣಿಸದ ಅಚ್ಚರಿಯ ಆ್ಯಕ್ಷನ್ ಒಂದನ್ನು ಸ್ಫುಟವಾಗಿ ನೋಡುಗನ ಕಣ್ಣಿಗೆ ಕಟ್ಟಿಕೊಡುತ್ತವೆ.

* ಹಾರಾಟದ ಪಕ್ಷಿಯ ಕಣ್ಣು, ಸ್ಫುಟವಾಗಿ ಫೋಕಸ್ ಆಗಿರುವುದು ನೋಡುಗನ ಕಣ್ಣಿಗೆ ಛಾಯಾಚಿತ್ರದ ಪ್ರವೇಶ ಬಿಂದುವಾಗಿ (ಎಂಟ್ರಿ ಪಾಯಿಂಟ್) ಚೌಕಟ್ಟಿನ ಒಂದು ಮೂರಂಶದಲ್ಲಿ ರೂಪಿತವಾಗಿದೆ.

* ಚೌಕಟ್ಟಿನ ಎಡಭಾಗದ ಮೇಲ್ತುದಿಯಿಂದ ನೀರಿನ ಮೇಲಣ ಅಲೆಗಳು ಎಳೆಎಳೆಯಾಗಿ ಮಾರ್ಗದರ್ಶಿ ಗೆರೆಗಳಾಗಿ ಪರಿವರ್ತನೆಗೊಂಡಿವೆ (ಲೀಡಿಂಗ್ ಲೈನ್ಸ್). ಬಲಭಾಗದಲ್ಲಿ ರೆಕ್ಕೆ ಬಿಚ್ಚಿ ಬಂದಿಳಿಯುತ್ತಿರುವ ಆ ಪಕ್ಷಿಯ ಕಣ್ಣು ಹಾಗೆ ರೆಕ್ಕೆಗಳ ಮಾಟಕ್ಕೆ ತಾಗುತ್ತಿರುವುದು ಛಾಯಾಚಿತ್ರದ ಪ್ರವೇಶ ಬಿಂದುವಿನ ಮೌಲ್ಯವನ್ನು ಇಮ್ಮಡಿಗೊಳಿಸಿದೆ.

* ನೋಡುಗನ ಕಣ್ಣು ಬಿಚ್ಚಿದ ರೆಕ್ಕೆಯ ರೇಖೆಗಳಿಗೆ ಅನುಗುಣವಾಗಿ ಎಡಕ್ಕೆ ಚಲಿಸಿ ನೀರಿನ ಮೇಲಿರುವ ಬಾತುಕೋಳಿಯೆಡೆ ಸಾಗುತ್ತದೆ. ಆ ಪಕ್ಷಿಯ ಕಣ್ಣು ಮತ್ತು ಮುಖಭಾವಗಳನ್ನು ನಾವು ದಾಟಿ, ಅಲ್ಲಿಂದ ಮತ್ತೊಮ್ಮೆ ಬಲಗಡೆಯ ಹಾರಾಟದ ಹಕ್ಕಿಯ ಕಣ್ಣಿನೆಡೆಗೇ ಸೆಳೆಯುವ ಸಾಧ್ಯತೆಯೂ ಇದೆ.

* ನೋಡುಗನ ಕಣ್ಣು ಮತ್ತು ಭಾವನೆಗಳು ಚಿತ್ರದ ಚೌಕಟ್ಟಿನೊಳಗೇ ಮತ್ತೆಮತ್ತೆ ಸುತ್ತುಹೊಡೆಯುವುದು ಪರಿಣಾಮಕಾರಿಯಾಗಿ ಅನುಭವಕ್ಕೆ ಬರದಿರದು. ಈ ಅನನ್ಯ ಭಾವವೇ ಚಿತ್ರದ ಕಲಾತ್ಮಕ ಅಂಶಗಳಿಗೆ ಹಿಡಿದ ಕನ್ನಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry