ರಾಸುಗಳಿಗೆ ಹೊಸ ವಿಮೆ ಭಾಗ್ಯ

7

ರಾಸುಗಳಿಗೆ ಹೊಸ ವಿಮೆ ಭಾಗ್ಯ

Published:
Updated:
ರಾಸುಗಳಿಗೆ ಹೊಸ ವಿಮೆ ಭಾಗ್ಯ

ಕಾರವಾರ: ಹೈನುಗಾರರ ಜೇಬಿಗೆ ಹೊರೆಯಾಗದಂತೆ, ರಾಜ್ಯ ಸರ್ಕಾರವು ರಾಸುಗಳಿಗೆ ನೂತನ ವಿಮೆ ಯೋಜನೆ ಜಾರಿ ಮಾಡಿದೆ.

ಹಸು ಮತ್ತು ಎಮ್ಮೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಕಡಿಮೆ ಮೊತ್ತದ ವಾರ್ಷಿಕ ಕಂತು ಪಾವತಿಸುವ ಸೌಲಭ್ಯವಿದೆ. ಒಬ್ಬ ಹೈನುಗಾರ, ಗರಿಷ್ಠ 5 ರಾಸುಗಳಿಗೆ ವಿಮೆ ಮಾಡಿಸಬಹುದು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪಶು ಸಂಗೋಪನಾ ಇಲಾಖೆ ನಿರ್ದೇಶಕ ಸುಬ್ರಾಯ ಭಟ್,  'ಸಾಮಾನ್ಯವಾಗಿ ಜಾನುವಾರಿನ ಒಟ್ಟು ಬೆಲೆಯ ಶೇ 5ರಿಂದ ಶೇ 5.5 ರಷ್ಟು ವಾರ್ಷಿಕ ವಿಮಾ ಕಂತು ಪಾವತಿಸಬೇಕಾಗುತ್ತದೆ. ಆದರೆ, ಈ ಯೋಜನೆಯಲ್ಲಿ ಶೇ 2ರಷ್ಟು ಮೊತ್ತವನ್ನು ತುಂಬಿದರೆ ಸಾಕು. ಉದಾಹರಣೆಗೆ, ಹಸು ಅಥವಾ ಎಮ್ಮೆಯ ಮೌಲ್ಯ₹ 50 ಸಾವಿರವಿದ್ದರೆ,  ವಾರ್ಷಿಕ ವಿಮಾ ಕಂತು ₹ 1,000 ಆಗುತ್ತದೆ' ಎಂದರು.

‘ಹೈನುಗಾರರು, ಸಾಮಾನ್ಯ ವರ್ಗ ಹಾಗೂ ಬಡತನ ರೇಖೆಗಿಂತ ಮೇಲಿನವರಾಗಿದ್ದರೆ ಕಟ್ಟಬೇಕಾದ ಕಂತಿನ ಒಟ್ಟು ಮೊತ್ತದ ಶೇ 50ರಷ್ಟು ಭಾಗವನ್ನು ಸರ್ಕಾರವೇ ಭರಿಸಲಿದೆ. ರೈತರು ಇನ್ನುಳಿದ ಮೊತ್ತವನ್ನು ಅಂದರೆ ₹ 500 ಮಾತ್ರ ಪಾವತಿಸಿದರೆ ಸಾಕು. ಇದರೊಂದಿಗೆ, ವಿಮಾದಾರ ಕರ್ನಾಟಕ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯ ಕೂಡ ಆಗಿದ್ದಲ್ಲಿ ಈಗ ಕಟ್ಟಬೇಕಾದ ಕಂತಿನ ಅರ್ಧದಷ್ಟನ್ನು ಸಂಘ ಭರಿಸುತ್ತದೆ. ಅಲ್ಲಿಗೆ ಈ ವರ್ಗದ ಹೈನುಗಾರನೊಬ್ಬ ₹250 ಅಷ್ಟನ್ನೇ ಪಾವತಿಸಿದರಾಯಿತು’ ಎಂದು ಅವರು ವಿವರಿಸಿದರು.

‘ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೈನುಗಾರರು ಪಾವತಿಸಬೇಕಾದ ಮೊತ್ತದ ಶೇ 70ರಷ್ಟು ಭಾಗವನ್ನು ಸರ್ಕಾರ ನೀಡುತ್ತದೆ. ಇದರ ಅನ್ವಯ ಅವರು, ವಿಮಾ ಕಂತಾಗಿ ಕೇವಲ ₹ 300 ಕಟ್ಟಿದರೆ ಸಾಕು. ಇಲ್ಲಿಯೂ ವಿಮಾದಾರ ಕರ್ನಾಟಕ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯ ಆಗಿದ್ದಲ್ಲಿ, ಶೇ 50ರಷ್ಟು ಮೊತ್ತವನ್ನು (₹150) ಸಂಘವೇ ಪಾವತಿಸಲಿದೆ’ ಎಂದರು.

ಸಂಪೂರ್ಣ ಮೌಲ್ಯ ಪಾವತಿ: ‘ಕಂತು ಪಾವತಿಸಿದ 24 ಗಂಟೆಗಳಲ್ಲೇ ವಿಮೆ ಜಾರಿಯಾಗಲಿದೆ. ಸಾಮಾನ್ಯ ವಿಮೆಯಲ್ಲಿ 15 ದಿನ ಪರಿವೀಕ್ಷಣಾ ಅವಧಿ ಎಂದು ನಿಗದಿಯಾಗಿರುತ್ತದೆ. ಇದು ಮೂರು ವರ್ಷದ ವಿಮೆಯಾಗಿದ್ದು, ಈ ಅವಧಿಯಲ್ಲಿ ರಾಸು ಮೃತಪಟ್ಟರೆ ಅದರ ಸಂಪೂರ್ಣ ಮೌಲ್ಯವನ್ನು ಹೈನುಗಾರರಿಗೆ ಪಾವತಿಸಲಾಗುತ್ತದೆ’ ಎಂದು ಸುಬ್ರಾಯ ಭಟ್‌ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹೈನುಗಾರ ಖೂರ್ಸೆಯ ವೆಂಕಟ್ರಮಣ ಭಟ್, ‘ಸರ್ಕಾರದ ಈ ಯೋಜನೆಯಲ್ಲಿ ನಿಬಂಧನೆಗಳು ಕಡಿಮೆ ಇವೆ. ರೈತರಿಗೂ ಹೊರೆಯಾಗುವುದಿಲ್ಲ. ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ಜಾರಿಯಾಗುವಂತೆ ಇಲಾಖೆ ಎಚ್ಚರಿಕೆ ವಹಿಸಬೇಕು’ ಎಂದರು.

**

ಉತ್ತರ ಕನ್ನಡ ಜಿಲ್ಲೆಯಲ್ಲಿ 6,000 ರಾಸುಗಳನ್ನು ವಿಮೆಗೆ ಒಳಪಡಿಸಲು ಗುರಿ ಹೊಂದಲಾಗಿದೆ.

– ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry