ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನ..!

7

ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನ..!

Published:
Updated:
ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ವ್ಯಾಘ್ರ ದರ್ಶನ..!

ಗದಗ: ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ, ಇಲ್ಲಿನ ಬಿಂಕದಕಟ್ಟಿ ಮೃಗಾಲಯಕ್ಕೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ತರಲಾಗಿದ್ದ ಎರಡು ಹುಲಿಗಳನ್ನು ಜ.14ರಿಂದ ಪ್ರವಾಸಿಗರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಹುಲಿ ದರ್ಶನ ಭಾಗ್ಯ ಲಭಿಸಿದ ಬೆನ್ನಲ್ಲೇ, ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಮುಖ್ಯವಾಗಿ ಕಟುಂಬ ಸಮೇತ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಸರಾಸರಿ 450ರಿಂದ 500 ಪ್ರವಾಸಿಗರು ಭೇಟಿ ನಿಡುತ್ತಿದ್ದಾರೆ. ಶನಿವಾರ, ಭಾನುವಾರ ಈ ಸಂಖ್ಯೆ 700ದಾಟುತ್ತಿದೆ.

‘ಅನಸೂಯಾ’ ಹಾಗೂ ‘ಲಕ್ಷ್ಮಣ್‌’ ಹೆಸರಿನ ಈ ಹುಲಿಗಳನ್ನು ಡಿಸೆಂಬರ್‌ ಮೊದಲ ವಾರದಲ್ಲೇ ಇಲ್ಲಿಗೆ ತರಲಾಗಿತ್ತು. ಆದರೆ, ಅವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಮೈಸೂರು ಮೃಗಾಲಯದಲ್ಲಿ ಈ ಹುಲಿಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ, ಗದುಗಿಗೂ ಬಂದು ಎರಡು ವಾರಗಳ ಕಾಲ ಇಲ್ಲಿದ್ದು, ಹುಲಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ತನಕ ಅದರ ನಿರ್ವಹಣೆ ನೋಡಿಕೊಂಡಿದ್ದರು. ಈಗ ಇಲ್ಲಿನ ಮೃಗಾಲಯದ ಇಬ್ಬರು ಸಿಬ್ಬಂದಿ ಹೊಸ ಅತಿಥಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮೈಸೂರು ಮೃಗಾಲಯಕ್ಕೆ ಹೋಗಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದಾರೆ.

‘ಈ ಹುಲಿಗಳಿಗಾಗಿ ಮೃಗಾಲಯದಲ್ಲಿ ಕಾಡಿನ ಸಹಜ ಪರಿಸರ ಹೋಲುವ `ಟೈಗರ್ ಡೇಕ್ರಾಲ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಎರಡೂ ಹುಲಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸಂಕ್ರಾಂತಿ ದಿನದಿಂದ ಪ್ರವಾಸಿಗರಿಗೆ ಹುಲಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ’ ಎಂದು ಮೃಗಾಲಯ ಆರ್‍ಎಫ್‌ಒ ಮಹಾಂತೇಶ ಪೆಟ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೋನಿನಿಂದ ನೇರವಾಗಿ ಡೇಕ್ರಾಲ್‌ಗೆ ಬಿಡಲಾಗುತ್ತದೆ. ಡೇಕ್ರಾಲ್‌ನಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದಾಗಿದ್ದು, ಬಿಸಿಲಿನಿಂದ ಆಶ್ರಯ ಪಡೆಯಲು ಗಿಡ, ಮರಗಳು ಇಲ್ಲಿವೆ. ನಡುವೆ ಸಣ್ಣ ದಿಬ್ಬ, ನೀರಿಗಾಗಿ ಪುಟ್ಟ ಕೆರೆ ನಿರ್ಮಿಸಲಾಗಿದೆ. ಹುಲಿಗಳ ವಿಶ್ರಾಂತಿಗೆ ಬಿದಿರಿನ ಮನೆಯನ್ನೂ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಹುಲಿ ಪಂಜರದ ಬಳಿ ಒಬ್ಬರು ಕಾಯಂ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಅವರು ಹೇಳಿದರು.

40 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಇದುವರೆಗೆ ‘ಕಿರು’ ಮೃಗಾಲಯದ ಸ್ಥಾನ ಇತ್ತು. ಆದರೆ, ಎರಡು ತಿಂಗಳ ಹಿಂದಷ್ಟೇ ಇದಕ್ಕೆ ‘ಸಣ್ಣ’ ಮೃಗಾಲಯದ ಮಾನ್ಯತೆ ಲಭಿಸಿದೆ. ಈ ಸ್ಥಾನಮಾನ ಲಭಿಸಿರುವುದರಿಂದ ಮೃಗಾಲಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನವೂ ಲಭಿಸಲಿದೆ. ಈಗಾಗಲೇ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರವು ₨ 1 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಸ್ತಾವನೆಗೆ ತಾಂತ್ರಿಕ ಅನುಮೋದನೆ ನೀಡಿದೆ.

ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮೃಗಾಲಯದ ವರಮಾನ ಹೆಚ್ಚಳಕ್ಕೂ ಕ್ರಮ ವಹಿಸಲಾಗಿದೆ. ಸದ್ಯ ಮೃಗಾಲಯದಲ್ಲಿ 280ಕ್ಕೂ ಹೆಚ್ಚು ಸದಸ್ಯರಿದ್ದು, ಜಿಂಕೆ, ಕೃಷ್ಣಮೃಗ , ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆವೆು, ಹೆಬ್ಬಾವು ಮತ್ತು ಚಿರತೆಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇದರ ಜತೆಗೆ ಇತ್ತೀಚೆಗೆ ಪಕ್ಷಿಗಳ ನಡುವೆ ಪ್ರವಾಸಿಗರು ನಡೆದುಕೊಂಡು ಹೋಗಿ, ಅವುಗಳನ್ನು ಹತ್ತಿರದಿಂದ ನೋಡಲು ಅನುಕೂಲವಾಗುವಂತೆ ಮೃಗಾಲಯದ ಆವರಣದಲ್ಲಿ ವಿಶೇಷ ಪಂಜರ, ‘ಹಕ್ಕಿಕಾಪು’ ನಿರ್ಮಿಸಲಾಗಿದ್ದು, ಇದನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇಡೀ ರಾಜ್ಯದಲ್ಲೇ ಇಂಥ ಸೌಲಭ್ಯ ಇರುವುದು ಬಿಂಕದಕಟ್ಟಿ ಮೃಗಾಲಯದಲ್ಲಿ ಮಾತ್ರ ಎನ್ನುವುದು ಮತ್ತೊಂದು ವಿಶೇಷ.

* * 

ಸಂಕ್ರಾಂತಿ ದಿನದಿಂದ ಹುಲಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಮೃಗಾಲಯಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬರುತ್ತಿದೆ.

ಮಹಾಂತೇಶ ಪೆಟ್ಲೂರ, ಮೃಗಾಲಯದ ಆರ್‍ಎಫ್‌ಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry