ರೌಡಿ, ಮಾಫಿಯಾ ಹಿಡಿತದಲ್ಲಿ ಬೆಂಗಳೂರು: ಅಶೋಕ್‌

6

ರೌಡಿ, ಮಾಫಿಯಾ ಹಿಡಿತದಲ್ಲಿ ಬೆಂಗಳೂರು: ಅಶೋಕ್‌

Published:
Updated:

ಬೆಂಗಳೂರು: ಬೆಂಗಳೂರು ನಗರದಲ್ಲಿ ಪೊಲೀಸರಿಗೆ ರಕ್ಷಣೆಯೇ ಇಲ್ಲ. ರೌಡಿಗಳು ಮತ್ತು ಡ್ರಗ್‌ಮಾಫಿಯಾದವರು ನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಹೇಳಿದರು.

ಒಂದು ವಾರದ ಅವಧಿಯಲ್ಲಿ ನಗರದ ವಿವಿಧೆಡೆ ಪೊಲೀಸರ ಮೇಲೆ 13 ಹಲ್ಲೆಯ ಪ್ರಕರಣಗಳು ನಡೆದಿವೆ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಉದ್ಯಾನ ನಗರಿ, ಐ.ಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ನಗರ ಕ್ರೈಂ ಸಿಟಿಯಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರೇ ಕಾರಣ. ಪೊಲೀಸರಿಗೆ ರಕ್ಷಣೆ ಇಲ್ಲವೆಂದ ಮೇಲೆ ಸಾಮಾನ್ಯ ಜನರಿಗೆ ರಕ್ಷಣೆ ಹೇಗೆ ಸಿಗಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಹಿಂದೆಲ್ಲ ಬೆಂಗಳೂರು ಪೊಲೀಸರನ್ನು ಕಂಡರೆ ರೌಡಿಗಳು, ಸಮಾಜಘಾತುಕ ಶಕ್ತಿಗಳು ಹೆದರುತ್ತಿದ್ದರು. ಈಗ ಅವರು ಯಾರಿಗೂ ಹೆದರುತ್ತಿಲ್ಲ. ಇತ್ತೀಚೆಗೆ ಸರಗಳ್ಳರು ಪೊಲೀಸ್‌ ಅಧಿಕಾರಿ ಮನೆಗೆ ನುಗ್ಗಿ ಅವರ ಎದುರೇ ಪತ್ನಿಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಇನ್ನು ಮುಂದೆ ಮಹಿಳೆಯರು ಮುಂಜಾನೆ ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡುವುದಕ್ಕೆ ಮೊದಲೇ ಪೊಲೀಸರಿಗೆ ದೂರವಾಣಿ ಕರೆ ಮಾಡಿ ರಕ್ಷಣೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಗಾಂಜಾ ಮಾರುವವರೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಕಾಡುಗಳ್ಳ ವೀರಪ್ಪನ್‌ ರೀತಿಯಲ್ಲಿ ಬಂದು ಪೊಲೀಸರ ಬಂದೂಕು ಕಿತ್ತುಕೊಂಡು ಹೋಗುತ್ತಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗುತ್ತಿದೆ. ಕೆಲವರಿಗೆ ಒಂದು ವರ್ಷದಲ್ಲಿ ಮೂರರಿಂದ ಐದು ಬಾರಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಒಳ್ಳೆಯ ಅಧಿಕಾರಿಗಳನ್ನು ಬೆಂಗಳೂರು ನಗರದಿಂದ ತೆಗೆದು ತಮಗೆ ಬೇಕಾದವರನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಅಶೋಕ್‌ ತಿಳಿಸಿದರು.

ಬೆಂಗಳೂರು ನಗರದಲ್ಲಿ ಪೊಲೀಸರು ಮಲಗಿದ್ದಾರೆ. ರೌಡಿಗಳು ಆಳುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಕಾರಣ. ರಾಜಕೀಯ ವಿರೋಧಿಗಳು ಮತ್ತು ವಿರೋಧ ಪಕ್ಷದವರನ್ನು ಬಗ್ಗುಬಡಿಯಲು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಗೌರಿ ಹತ್ಯೆ ಮಾಡಿದವರು ಎಲ್ಲಿದ್ದಾರೆ?: ಗೌರಿ ಲಂಕೇಶ್‌ ಹತ್ಯೆ ಮಾಡಿದವರ ಸುಳಿವು ಸಿಕ್ಕಿದೆ, ಹಿಡಿದೇ ಬಿಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಐದಾರು ಬಾರಿ ಹೇಳಿದ್ದರು. ಸುಳಿವು ಇದ್ದರೆ ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ. ಆದಷ್ಟು ಬೇಗ ಹಿಡಿಯಲಿ ಎಂದು ಅಶೋಕ್ ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry