ಇಂದು ಭಾರತ–ನ್ಯೂಜಿಲೆಂಡ್ ಹಣಾಹಣಿ

7

ಇಂದು ಭಾರತ–ನ್ಯೂಜಿಲೆಂಡ್ ಹಣಾಹಣಿ

Published:
Updated:
ಇಂದು ಭಾರತ–ನ್ಯೂಜಿಲೆಂಡ್ ಹಣಾಹಣಿ

ಹ್ಯಾಮಿಲ್ಟನ್‌, ನ್ಯೂಜಿಲೆಂಡ್‌: ಭಾರತ ಪುರುಷರ ತಂಡ ಎರಡನೇ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಬುಧವಾರ ನ್ಯೂಜಿಲೆಂಡ್ ಎದುರು ಉತ್ತಮ ಆರಂಭ ಪಡೆಯುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.

ಭಾನುವಾರ ನಡೆದ ಮೊದಲ ಹಂತದ ಫೈನಲ್ ಪಂದ್ಯದಲ್ಲಿ ಭಾರತ ತಂಡ 1–2 ಗೋಲುಗಳಿಂದ ಬೆಲ್ಜಿಯಂ ಎದುರು ಸೋತಿತ್ತು. ರೌಂಡ್ ರಾಬಿನ್ ಲೀಗ್ ಹಂತದ ಪಂದ್ಯದಲ್ಲೂ ಬೆಲ್ಜಿಯಂಗೆ ಮಣಿದಿತ್ತು. ಭಾರತ ತಂಡ ಈ ನಿರಾಸೆಯನ್ನು ಮರೆತು ಶುಭಾರಂಭದ ನಿರೀಕ್ಷೆಯಲ್ಲಿದೆ.

ಮೊದಲ ಹಂತದಲ್ಲಿ ಆಡಿದ್ದ ಆರಂಭಿಕ ಪಂದ್ಯದಲ್ಲಿ ಭಾರತ ತಂಡ 6–0 ಗೋಲುಗಳಿಂದ ಜಪಾನ್‌ ಎದುರು ಗೆದ್ದಿತ್ತು. ಎರಡನೇ ಪಂದ್ಯದಲ್ಲಿ 0–2 ಗೋಲುಗಳಿಂದ ಬೆಲ್ಜಿಯಂ ಎದುರು ಸೋಲು ಅನುಭವಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ 3–1 ಗೋಲುಗಳಿಂದ ನ್ಯೂಜಿಲೆಂಡ್‌ ಎದುರು ಗೆದ್ದಿತ್ತು.

ನ್ಯೂಜಿಲೆಂಡ್ ತಂಡ ಮೊದಲ ಲೆಗ್‌ನಲ್ಲಿ ಬೆಲ್ಜಿಯಂಗೆ 5–4ರಲ್ಲಿ ಸೋಲಿನ ರುಚಿ ತೋರಿಸಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ತಂಡ ಒಂಬತ್ತು ಗೋಲುಗಳಿಂದ ಅಗ್ರಸ್ಥಾನ ಪಡೆದಿತ್ತು.

ಮನ್‌ಪ್ರೀತ್‌ ಸಿಂಗ್ ನಾಯಕತ್ವದ ಭಾರತ ತಂಡಕ್ಕೆ ಬೆಲ್ಜಿಯಂ ಕಠಿಣ ಎದುರಾಳಿಯಾಗಿದೆ. ಈ ತಂಡದ ಎದುರು ಅಂತಿಮ ನಿಮಿಷಗಳಲ್ಲಿ ಭಾರತ ಗೋಲುಗಳನ್ನು ಬಿಟ್ಟುಕೊಡುತ್ತಿದೆ. ಆದರೆ ನ್ಯೂಜಿಲೆಂಡ್ ಎದುರು ವಿಶ್ವಾಸದಿಂದ ಆಡಿದೆ.

‘ಪಂದ್ಯದಿಂದ ಪಂದ್ಯಕ್ಕೆ ಭಾರತ ತಂಡದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಮೊದಲ ಲೆಗ್‌ನಲ್ಲಿ ಯುವ ಆಟಗಾರರು ಉತ್ತಮವಾಗಿ ಆಡಿದ್ದಾರೆ’ ಎಂದು ಕೋಚ್ ಶೊರ್ಡ್‌ ಮ್ಯಾರಿಜ್ ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಬೆಲ್ಜಿಯಂ ತಂಡವನ್ನು ಕೂಡ ಭಾರತದ ಆಟಗಾರರು ಸಮರ್ಥವಾಗಿ ಎದುರಿಸಿದ್ದಾರೆ. ಅನುಭವಿ ಆಟಗಾರರು ಇನ್ನಷ್ಟು ಚುರುಕಾಗಿ ಆಡಿದರೆ ಪಂದ್ಯ ಗೆಲ್ಲಬಹುದು’ ಎಂದು ಮ್ಯಾರಿಜ್ ಅಭಿಪ್ರಾಯಪಟ್ಟಿದ್ದಾರೆ.

‘ಬೆಲ್ಜಿಯಂ ವಿಶ್ವದ ಅತ್ಯುತ್ತಮ ತಂಡ. ಅವರ ಎದುರು ಆಡಬೇಕಾದರೆ ಸರಿಯಾದ ತಯಾರಿಯ ಅಗತ್ಯವಿದೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಯೋಚಿಸುವ ಗುಣ ನಮ್ಮಲ್ಲಿರಬೇಕು. ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವ ಜಾಣ್ಮೆ ನಮ್ಮಲ್ಲಿ ಕಡಿಮೆಯಾಗಿದೆ. ಇದು ತಂಡದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಬೆಲ್ಜಿಯಂಗೆ ಸೋಲುಣಿಸಿರುವ ನ್ಯೂಜಿಲೆಂಡ್ ತಂಡ ಕೂಡ ಪ್ರಬಲವಾಗಿದೆ. ನಾವು ಉತ್ತಮ ಪೈಪೋಟಿ ನೀಡಲು ಸಜ್ಜಾಗಿದ್ದೇವೆ’ ಎಂದು ನಾಯಕ ಮನ್‌ಪ್ರೀತ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry