ಚಹಾರ್ ದಾಳಿಗೆ ಕುಸಿದ ಕರ್ನಾಟಕ

7

ಚಹಾರ್ ದಾಳಿಗೆ ಕುಸಿದ ಕರ್ನಾಟಕ

Published:
Updated:
ಚಹಾರ್ ದಾಳಿಗೆ ಕುಸಿದ ಕರ್ನಾಟಕ

ಕೋಲ್ಕತ್ತ: ವೇಗದ ಬೌಲರ್ ದೀಪಕ್ ಚಹಾರ್‌ (15ಕ್ಕೆ5) ಅವರ  ಶ್ರೇಷ್ಠ ದಾಳಿಯ ನೆರವಿನಿಂದ ರಾಜಸ್ಥಾನ ತಂಡ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಮಂಗಳವಾರ 22 ರನ್‌ಗಳಿಂದ ಕರ್ನಾಟಕಕ್ಕೆ ಆಘಾತ ನೀಡಿತು. ಎರಡು ಪಂದ್ಯಗಳ ಸತತ ಸೋಲಿನಿಂದಾಗಿ ಕರ್ನಾಟಕ ತಂಡದ ಫೈನಲ್ ತಲುಪುವ ಹಾದಿ ಬಹುತೇಕ ಮುಚ್ಚಿದೆ.

ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160ರನ್‌ ಸೇರಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ 20 ಓವರ್‌ಗಳಲ್ಲಿ 138ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಗದುಗಿನ ಹುಡುಗ ಅನಿರುದ್ಧ ಜೋಶಿ (73; 45ಎ, 8ಬೌಂ, 3ಸಿ) ಅವರ ಅರ್ಧಶತಕ ವ್ಯರ್ಥವಾಯಿತು.

ಬ್ಯಾಟಿಂಗ್ ವೈಫಲ್ಯ: ಗುರಿ ಬೆನ್ನಟ್ಟಿದ ರಾಜ್ಯ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹಿಂಬಾಲಿಸಿದರು. ಮಯಂಕ್ ಅಗರವಾಲ್‌ (9), ಕರುಣ್ ನಾಯರ್ (0), ಆರ್‌.ಸಮರ್ಥ್‌ (6), ಅಭಿಮನ್ಯು ಮಿಥುನ್‌ (0), ಸಿ.ಎಮ್‌.ಗೌತಮ್‌ (2), ಸ್ಟುವರ್ಟ್ ಬಿನ್ನಿ (0) ರಾಜಸ್ಥಾನದ ಬೌಲಿಂಗ್ ದಾಳಿಗೆ ಶರಣಾದರು.

50ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದ ರಾಜ್ಯ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಈ ವೇಳೆ ಅನಿರುದ್ಧ ಜೋಶಿ ಜಯದ ವಿಶ್ವಾಸ ಮೂಡಿಸಿದ್ದರು. ಇವರ ಅರ್ಧಶತಕದ ಆಟದಿಂದ ಕರ್ನಾಟಕ ಆಲ್ಪಮೊತ್ತಕ್ಕೆ ಪತನವಾಗುವುದು ತಪ್ಪಿತು. 45 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ ರಾಜಸ್ಥಾನದ ಬೌಲರ್‌ಗಳನ್ನು ಕಾಡಿದರು. ಏಕಾಂಗಿ ಹೋರಾಟ ನಡೆಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಅವರಿಗೆ ನೆರವು ಸಿಗಲಿಲ್ಲ.

ಲಾಂಬಾ ಅರ್ಧಶತಕ: ರಾಜಸ್ಥಾನ ತಂಡ ಆರಂಭದಲ್ಲಿಯೇ ಆದಿತ್ಯಾ ಗರ್ವಾಲ್‌ (31) ಅವರ ವಿಕೆಟ್ ಕಳೆದುಕೊಂಡಿತು. ಎರಡನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಂಕಿತ್ ಲಾಂಬಾ (58, 47ಎ, 6ಬೌಂ, 1ಸಿ) ಅರ್ಧಶತಕ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಸಲ್ಮಾನ್ ಖಾನ್ (20), ಮಹಿಪಾಲ್ ಲೊಮೋರ್‌ (10) ತಂಡದ ಮೊತ್ತ ಹೆಚ್ಚಿಸಲು ಅಲ್ಪ ಕಾಣಿಕೆ ನೀಡಿದರು.

ಕರ್ನಾಟಕದ ಬೌಲರ್‌ ಶ್ರೀನಾಥ್ ಅರವಿಂದ್ 25ರನ್‌ಗಳನ್ನು ನೀಡಿ ಮೂರು ವಿಕೆಟ್ ಪಡೆದರು. ನಾಯಕ ವಿನಯ್ ಕುಮಾರ್ 29ರನ್‌ಗಳಿಗೆ ಎರಡು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ಆದಿತ್ಯ ಗರ್ವಾಲ್‌ 31, ಅಂಕಿತ್ ಲಾಂಬಾ 58; ಶ್ರೀನಾಥ್ ಅರವಿಂದ್ 25ಕ್ಕೆ3, ವಿನಯ್ ಕುಮಾರ್‌ 29ಕ್ಕೆ2). ಕರ್ನಾಟಕ: 20 ಓವರ್‌ಗಳಲ್ಲಿ 138 (ಅನಿರುದ್ಧ ಜೋಶಿ ಔಟಾಗದೆ 73, ದೀಪಕ್ ಚಹಾರ್‌ 15ಕ್ಕೆ3, ಚಂದ್ರಪಾಲ್‌ ಸಿಂಗ್‌ 31ಕ್ಕೆ2). ಫಲಿತಾಂಶ: ರಾಜಸ್ಥಾನ ತಂಡಕ್ಕೆ 22 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry